1. ಸುದ್ದಿಗಳು

ಆಹಾರದ ಮಹತ್ವ ನಾವೆಷ್ಟು ಬಲ್ಲೆವು? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರತಿ ವರ್ಷ ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ.  ಆದರೆ ಈ ದಿನ ಎಲ್ಲಾ ದಿನಗಳಂತೆ ಸಂಭ್ರಮಿಸುವುದಕ್ಕಾಗಿ ಅಲ್ಲ,  ಹಸಿವಿನ ವಿರುದ್ಧ ಹೋರಾಡಲು ಇರುವ ದಿನವಾಗಿದೆ.ಹಸಿವು ಮತ್ತು ಬಡತನದಿಂದ ನರಳುತ್ತಿರುವ ಜನರಿಗೆ ಸೂಕ್ತ ಆಹಾರ ನೀಡಬೇಕು. ನಮ್ಮಲ್ಲಿ ಯಾರೂ ಹಸಿವಿನಿಂದ ಸಾಯಬಾರದು ಎಂಬ ಉದ್ದೇಶದಿಂದ ಕೂಡ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ.

ಜಗತ್ತು ಎಷ್ಟೇ ಮುಂದುವರೆದಿದ್ದರೂ ಸಹ ಇನ್ನೂ ಹಲವಾರು ದೇಶಗಳಲ್ಲಿ ಜನರು ಆಹಾರವಿಲ್ಲದೇ ಜೀವನ್ಮರಣಗಳ ಮಧ್ಯ ಹೋರಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.ನಾವು ಸೇವಿಸುವ ಆಹಾರ ಪೋಲಾಗದಂತೆ ತಡೆಯುವುದು ಒಂದು ಕ್ರಮ.  ವಿಶ್ವ ಆಹಾರ ದಿನಾಚರಣೆಯ ಈ ಸಂದರ್ಭದಲ್ಲಿ ಆಹಾರದ ಮಹತ್ವ, ಗುಣಮಟ್ಟದ ಆಹಾರ, ಪೌಷ್ಛಿಕ ಆಹಾರ ಸೇರಿದಂತೆ ಇನ್ನಿತರ ಮಹತ್ವದ ಮಾಹಿತಿ ಇಲ್ಲಿದೆ.

1945 ರಲ್ಲಿ ಸಂಯುಕ್ತ ರಾಷ್ಟ್ರಗಳ ಸಂಸ್ಥೆಯಾಗಿ “ವಿಶ್ವಆಹಾರ ಸಂಸ್ಥೆ” (ಎಫ್.ಎ.ಒ) ರೋಮ್ ನಗರದಲ್ಲಿ ಜನ್ಮ ತಳೆದ ದಿನದಂದು“ ವಿಶ್ವಆಹಾರ ದಿನ ” ಪ್ರತಿ ವರ್ಷ ಆಚರಿಸಲಾಗುತ್ತದೆ.

ಇಂದು ವಿಶ್ವದ 150 ದೇಶಗಳಲ್ಲಿನ ಹಸಿವಿನಿಂದ ಬಳಲುತ್ತಿರುವವರಿಗೆ ಜಾಗೃತಿ ಮೂಡಿಸಲು ಮತ್ತು ತ್ವರಿತ ಕ್ರಮ ಕೈಗೊಳ್ಳಲು ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಹೊಂದುವಂತೆ ಎಲ್ಲ ಜನರ ಸಾಮರ್ಥ್ಯವನ್ನು ಬೆಂಬಲಿಸುವುದು ಈ ದಿನದ ಉದ್ದೇಶ. ಅಪೌಷ್ಟಿಕತೆ ಎನ್ನುವುದು ಒಂದು ಅಥವಾ ಹೆಚ್ಚಿನ ಪೋಷಕಾಂಶಗಳು ದೇಹದ ಅಗತ್ಯಗಳಿಗೆ ಸಾಕಾಗುವುದಿಲ್ಲ ಅಥವಾ ಅತಿಯಾಗಿರುತ್ತವೆ, ಅಂದರೆ ಆಹಾರವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಸೂಕ್ತವಾದ ಕ್ಯಾಲೊರಿಗಳು, ಪ್ರೋಟೀನ್, ಕಾರ್ಬೋಹೈಡ್ರೇಟಗಳು, ಕೊಬ್ಬು, ಜೀವಸತ್ವಗಳು ಅಥವಾ ಖನಿಜಗಳ ಸೇವನೆ ಅಥವಾ ಲಭ್ಯತೆಯ ಸಮಸ್ಯೆಗಳಿಂದಾಗಿರಬಹುದು. 2014 ರಿಂದ ಹಸಿವಿನ ಪ್ರಮಾಣ ಏರುವಿಕೆಯೋಂದಿಗೆ ಸ್ಥೂಲಕಾಯತೆಯೂ ಕೂಡ ಏರಿಕೆಯಾಗುತ್ತಿರುವದು ಆಹಾರ ವ್ಯವಸ್ಥೆಗಳನ್ನು ಬಲಪಡಿಸಲು ಮತ್ತು ಜನರ ಜೀವನೋಪಾಯವನ್ನು ರಕ್ಷಿಸಲು ಕ್ರಮಗಳನ್ನು ಚುರುಕುಗೊಳಿಸುವ ಮತ್ತು ಹೆಚ್ಚಿಸುವ ಅಗತ್ಯವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಎಫ್‌ಎಒ ಪ್ರಕಾರ, 2 ಶತಕೋಟಿಗೂ ಹೆಚ್ಚು ಜನರಿಗೆ ಸುರಕ್ಷಿತ, ಪೌಷ್ಟಿಕ ಮತ್ತು ಸಾಕಷ್ಟು ಆಹಾರ ನಿಯಮಿತವಾಗಿ ದೊರಕುತ್ತಿಲ್ಲ.

ಕೋವಿಡ್-19 ರ ಮಧ್ಯೆ, ವಿಶ್ವ ಆಹಾರ ದಿನಾಚರಣೆಯ ಅಗತ್ಯವು ಇನ್ನಷ್ಟು ಮಹತ್ವದ್ದಾಗಿದೆ. ಈಗಾಗಲೇ, ಸುಮಾರು 690 ದಶಲಕ್ಷ ಜನರು ಹಸಿವಿನಿಂದ ಬಳಲುತ್ತಿದ್ದಾರೆ, ಇದು 2019 ರಿಂದ 10 ದಶಲಕ್ಷ ಹೆಚ್ಚಾಗಿದೆ. ಆದರೆ, ಎಫ್‌ಎಒ ಅಂದಾಜಿನ ಪ್ರಕಾರ ಸಾಂಕ್ರಾಮಿಕ ರೋಗವು ಆರ್ಥಿಕ ಬೆಳವಣಿಗೆಯ ಸನ್ನಿವೇಶವನ್ನು ಅವಲಂಬಿಸಿ ಈ ಸಂಖ್ಯೆಗೆ 83 ದಶಲಕ್ಷ ನಿಂದ 132 ದಶಲಕ್ಷ ಜನರನ್ನು ಸೇರಿಸಬಹುದು.

ಪ್ರತಿ ದಿನ 9 ಜನರಲ್ಲಿ ಒಬ್ಬರು ಅಂದರೆ ಜಗತ್ತಿನಲ್ಲಿ ಒಟ್ಟು 800 ದಶಲಕ್ಷಕ್ಕೂ ಹೆಚ್ಚು ಜನರು ಹಸಿವಿನಿಂದ ಮಲಗುತ್ತಾರೆ. ಭಾರತವು ವಿಶ್ವದ ಅತಿದೊಡ್ಡ ಅಪೌಷ್ಟಿಕ ಜನಸಂಖ್ಯೆಗೆ ನೆಲೆಯಾಗಿದೆ. ಅಂದರೆ ನಮ್ಮ ಜನಸಂಖ್ಯೆಯ ಶೇ.14 (189.2 ದಶಲಕ್ಷ ಜನರು) ರಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 5 ವರ್ಷದೊಳಗಿನ ಶೇ.20ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ. 5 ವರ್ಷದೊಳಗಿನ ಶೇ.34.7 ಮಕ್ಕಳು ಕಡಿಮೆ ಎತ್ತರ ಹೊಂದಿದ್ದು ಕುಬ್ಜರಾಗಿದ್ದಾರೆ. ಸಂತಾನೋತ್ಪತ್ತಿ ವಯೋಮಿತಿಯಲ್ಲಿರುವ (15-49 ವರ್ಷ) ಶೇ.51.4 ಮಹಿಳೆಯರು ರಕ್ತಹೀನತೆ ಹೊಂದಿದ್ದಾರೆ. ಎಲ್ಲರಿಗೂ ಆಹಾರವನ್ನು ನೀಡಲು ಈಗಾಗಲೇ ಜಗತ್ತಿನಲ್ಲಿ ಸಾಕಷ್ಟು ಆಹಾರವನ್ನು ಉತ್ಪಾದನೆಯಾಗುತ್ತಿದೆ. ಆದರೆ ಇನ್ನೂ ಹಸಿದಿರುವ ಜನರು ಇದ್ದಾರೆ. ಅನೇಕ ಕಾರಣಗಳಿಂದ ಹಸಿವು ಇನ್ನೂ ಅಸ್ತಿತ್ವದಲ್ಲಿದೆ. ಬಡವರಿಗೆ ಆಹಾರವನ್ನು ಖರೀದಿಸಲು ಹಣವಿಲ್ಲದಿರಬಹುದು, ಯುದ್ಧವು ಜನರಿಗೆ ಆಹಾರವನ್ನು ಒದಗಿಸುವಿಕೆಯನ್ನು ತಡೆಯುತ್ತದೆ. ನೈಸರ್ಗಿಕ ವಿಪತ್ತುಗಳು ಹಸಿವನ್ನು ಉಂಟುಮಾಡಬಹುದು.  ಮತ್ತು ಹೆಚ್ಚು ಆಹಾರ ವ್ಯರ್ಥವಾಗುತ್ತದೆ. ಆದರೆ ವಿಶ್ವದಾದ್ಯಂತ ಎಲ್ಲರೂ ಹಸಿವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಒಟ್ಟಾರೆ 2030 ರ ವೇಳೆಗೆ ಹಸಿವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ. ಆದರೆ ಕೇವಲ ನಾಯಕರು ಮಾತ್ರ ಇದನ್ನು ಮಾಡಲು ಸಾಧ್ಯವಿಲ್ಲ. ಪ್ರತಿಯೋಬ್ಬರ ಸಹಕಾರ ಮತ್ತು ತಮ್ಮನ್ನು ತಾವು ತೊಡಗಿಸಿಕೊಳ್ಳುವದು ಅತೀ ಅವಶ್ಯವಿದೆ.

ನಾವು ಒಟ್ಟಿಗೆ ಕೆಲಸ ಮಾಡಿದರೆ ಈ ವಿಶ್ವವನ್ನು ಹಸಿವಿನಿಂದ ಮುಕ್ತ ಮಾಡಬಹುದು. ಹಸಿವನ್ನು ಕೊನೆಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನಮ್ಮ ಸರಳವಾದ ದಿನನಿತ್ಯದ ಕ್ರಮಗಳು ಮತ್ತು ನಮ್ಮೆಲ್ಲರ ನಿರ್ಧಾರಗಳನ್ನು ಬದಲಾಯಿಸುವ ಮೂಲಕ ಸಾದ್ಯವಾಗಿಸಬಹುದು.

ಈ ವರ್ಷದ ವಿಶ್ವ ಆಹಾರ ದಿನದ ದೇಯ್ಯ ವಾಕ್ಯವೇಂದರೆ “ಒಟ್ಟಿಗೆ ಬೆಳೆಸಿ, ಪೋಷಿಸಿ ಹಾಗೂ ಸುಸ್ಥಿರಗೊಳಿಸಿ”. ಬೆಳೆಯುತ್ತಿರುವ ಜನಸಂಖ್ಯೆಯನ್ನು ಪೋಷಿಸಲು ಮತ್ತು ಈ ವಿಶ್ವವನ್ನು ಉಳಿಸಿಕೊಳ್ಳಲು ನಮ್ಮ ಆಹಾರ ವ್ಯವಸ್ಥೆಗಳು ಹಾಗೂ ನಾವು ಬೆಳೆಯುವ ಮತ್ತು ಸೇವಿಸುವ ಆಹಾರ ಪದ್ದತಿಗಳಲ್ಲಿ ಬದಲಾವಣೆ ಬೇಕಾಗಿದೆ.

ಗುಣಮಟ್ಟದ ಆಹಾರ ಬೆಳೆಯಿರಿ : ಈ ವರ್ಷದ ದೇಯ್ಯ ವಾಕ್ಯದಂತೆ ಉತ್ತಮ ಗುಣಮಟ್ಟದ ಆಹಾರವನ್ನು ಬೆಳೆಯುವದು ಅತೀ ಅವಶ್ಯಕ. ಕನಿಷ್ಠ 30 000 ಸೇವಿಸಲು ಯೋಗ್ಯ ಸಸ್ಯಗಳಿದ್ದರೂ ಸಹ, ಒಟ್ಟು ಬೆಳೆ ಉತ್ಪಾದನೆಯಲ್ಲಿ 66% ನಷ್ಟು ಭಾಗವನ್ನು ಕೇವಲ ಒಂಬತ್ತು ಸಸ್ಯ ಪ್ರಭೇದಗಳನ್ನು ಮಾತ್ರ ಹೊಂದಿವೆ. ಜನರನ್ನು ಪೋಷಿಸಲು ಮತ್ತು ಈ ವಿಶ್ವವನ್ನು ಉಳಿಸಿಕೊಳ್ಳಲು ನಾವು ವಿವಿಧ ರೀತಿಯ ಆಹಾರವನ್ನು ಬೆಳೆಸಬೇಕಾಗಿದೆ. ಹಾಗೂ ಮನೆಯ ತೋಟದಲ್ಲಿ ಆಹಾರವನ್ನು ಬೆಳೆಯುವುದರಿಂದ ಸುಧಾರಿತ ಆರೋಗ್ಯ, ಉತ್ತಮ ಆಹಾರ ಮತ್ತು ಆರೋಗ್ಯಕರ ಆಹಾರಗಳ ಪ್ರಮಾಣ ಉತ್ಪಾದನೆಯಾಗುತ್ತದೆ. ಆದ್ದರಿಂದ ಸಾದ್ಯವಾದಷ್ಟು ವೈವಿದ್ಯಮಯ ಪೌಷ್ಟಿಕ ಆಹಾರಗಳನ್ನು ಬೆಳೆಯಬೇಕು.

ಪ್ರೋಟಿನ್ ಇರುವ ಆಹಾರ ಪೋಷಿಸಿ : ಪೌಷ್ಡಿಕಾಂಶವುಳ್ಳ ಆಹಾರಗಳ ಸೇವನೆಯಿಂದ ಉತ್ತಮ ಗುಣಮಟ್ಟದ ಆರೋಗ್ಯ ಪಡೆಯಲು ಸಾಧ್ಯ. ಪೋಷಣೆಗೆ ಒತ್ತು ನೀಡಬೇಕು. ಆರೋಗ್ಯಕರ, ವೈವಿಧ್ಯಮಯ ಮತ್ತು ಕಾಲ ಕಾಲಕ್ಕೆ ದೊರೆಯುವ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆರೋಗ್ಯಕರ ಆಹಾರವು ಮಿತವಾಗಿ, ವೈವಿಧ್ಯತೆ ಮತ್ತು ಸಮತೋಲನವನ್ನು ಒಳಗೊಂಡಿದೆ. ಆರೋಗ್ಯಕರ ಆಹಾರದ ಮಾದರಿಯು ಹಣ್ಣುಗಳು, ತರಕಾರಿಗಳು, ಧಾನ್ಯಗಳಂತಹ ಸಾಕಷ್ಟು ಸಸ್ಯ ಆಧಾರಿತ ಆಹಾರಗಳನ್ನು ಒಳಗೊಂಡಿರಬೇಕು. ಮಾಂಸ ಮತ್ತು ಅದರ ಸಸ್ಯ ಆಧಾರಿತ ಪರ್ಯಾಯಗಳು (ದ್ವಿದಳ ಧಾನ್ಯಗಳು, ಇಡೀ ಕಾಳುಗಳು ಮತ್ತು ಸೋಯಾ) ಸೇರಿದಂತೆ ವಿವಿಧ ಪ್ರೋಟೀನ್ ಆಹಾರಗಳು, ಮತ್ತು ಹಾಲಿನ ಉತ್ಪನ್ನಗಳು ಅಥವಾ ಅವುಗಳ ಕ್ಯಾಲ್ಸಿಯಂ-ಬಲವರ್ಧಿತ ಸಸ್ಯ-ಆಧಾರಿತ ಪರ್ಯಾಯಗಳನ್ನು ಸೇವನೆ ಮಾಡಬೇಕು.

ಸ್ಥಳೀಯ ಆಹಾರಗಳನ್ನು ಆಯ್ಕೆ ಮಾಡಿ

 ಇದರಿಂದ ರೈತರ ಮಾರುಕಟ್ಟೆಗಳಲ್ಲಿ ಖರೀದಿ ಮಾಡುವ ಮೂಲಕ ಸ್ಥಳೀಯ ಆಹಾರ ವ್ಯವಸ್ಥೆಯನ್ನು ಬಲಪಡಿಸಲು ಸಹಾಯವಾಗುತದೆ. ಅಲ್ಲಿ ರೈತರು ಮತ್ತು ಸ್ಥಳೀಯ ಮಾರಾಟಗಾರರು ತಾವು ಬೆಳೆದ ತಾಜಾ, ಉತ್ತಮ-ಗುಣಮಟ್ಟದ ಆಹಾರವನ್ನು ನ್ಯಾಯಯುತ ಬೆಲೆಗೆ ಮಾರಾಟ ಮಾಡುತ್ತಾರೆ ಮತ್ತು ಗ್ರಾಹಕರಿಗೆ ರುಚಿಕರವಾದ, ಪೌಷ್ಟಿಕ ಆಹಾರ ಲಬ್ಯವಾಗುತ್ತದೆ.

ಸುಸ್ಥಿರಗೊಳ್ಳಿ: ಈ 2030ಕ್ಕೆ ಹಸಿವುಮುಕ್ತ ವಿಶ್ವ ನಿರ್ಮಾಣಕ್ಕಾಗಿ ಎಲ್ಲರೂ ಪಾಲ್ಗೊಳ್ಳಬೇಕು. ರೈತರು ಉತ್ತಮ ಬೇಸಾಯಕಮವನ್ನು ಅನುಸರಿಸಿ ಉತ್ತಮ ಇಳುವರಿಯೋಂದಿಗೆ ಗುಣಮಟ್ಟದ ಫಸಲನ್ನು ಬೆಳೆಯಬೇಕು. ಅವರಿಗೆ ಅಗತ್ಯವಾದ ತಾಂತ್ರಿಕತೆ, ಪರಿಕರ ಮತ್ತು ಹಣಕಾಸಿನ ವ್ಯವಸ್ಥೆ ಕಲ್ಪಿಸಬೇಕು. ವಿಶ್ವದ 3 ಕೋಟಿ ಜನರಿಗೆ ಇಂಟರ್ನೆಟ್ /ಅಂತರ್ಜಾಲದ ಸೌಲಬ್ಯವಿಲ್ಲ. ಮತ್ತು ಅವರಲ್ಲಿ ಹೆಚ್ಚಿನವರು ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಸಣ್ಣ ಹಿಡುವಳಿ ಹೊಂದಿದ ರೈತರು ತಮ್ಮ ಜೀವನೋಪಾಯವನ್ನು ಸುಧಾರಿಸಲು ಹಣಕಾಸು, ತರಬೇತಿ, ನಾವೀನ್ಯತೆ ಮತ್ತು ತಂತ್ರಜ್ಞಾನಕ ಬಳಕೆಗೆ ಹೆಚ್ಚಿನ ಅವಕಾಶಗಳ ಅಗತ್ಯವಿದೆ. ಪ್ರತಿ ವರ್ಷ ಮಾನವ ಬಳಕೆಗಾಗಿ ಬೆಳೆದ ಆಹಾರದ ಸರಿಸುಮಾರು ಶೇ.14ರಷ್ಟು ಬೆಳೆ ಬೆಳೆದ ಸ್ಥಳದಿಂದ ಸಗಟು ಮಾರುಕಟ್ಟೆಯನ್ನು ತಲುಪುವವರೆಗೆ ನಷ್ಟವಾಗುತ್ತದೆ. ಹೆಚ್ಚಿನ ಆಹಾರವನ್ನು ಚಿಲ್ಲರೆ ವ್ಯಾಪಾರಸ್ಥರಲ್ಲಿ ಮತ್ತು ಗ್ರಾಹಕರ ಹಂತಗಳಲ್ಲಿ ವ್ಯರ್ಥ ಮಾಡಲಾಗುತ್ತದೆ. ಇದನ್ನು ಸೂಕ್ತ ಸಾಗಾಣಿಕೆ ವ್ಯವಸ್ಥೆ, ಶೇಖರಣೆ ಮತ್ತು ಮೌಲ್ಯವರ್ಧನೆಯಿಂದ ನಷ್ಟವನ್ನು ತಡೆಗಟ್ಟಿ ಅಗತ್ಯ ಆಹಾರವನ್ನು ಲಬ್ಯವಾಗುವಂತೆ ಮಾಡಬೇಕು. ಬೆಳೆಯುತ್ತಿರುವ ಜನಸಂಖ್ಯೆಯನ್ನು ಪೋಷಿಸಲು ಮತ್ತು ವಿಶ್ವವನ್ನು ಸುಸ್ಥಿರವಾಗಿ ಉಳಿಸಿಕೊಳ್ಳಲು ಎಲ್ಲಾ ದೇಶಗಳು, ಖಾಸಗಿ ವಲಯ ಮತ್ತು ನಾಗರಿಕ ಸಮಾಜವು ನಮ್ಮ ಆಹಾರ ವ್ಯವಸ್ಥೆಗಳಲ್ಲಿ ವಿವಿಧ ರೀತಿಯ ಆಹಾರವನ್ನು ಬೆಳೆಯುವಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರೂ ಆಹಾರದ ಬಗ್ಗೆ ಅಗತ್ಯ ಮಾಹಿತಿಯನ್ನು ಪಡೆದುಕೊಂಡು, ದಿನನಿತ್ಯದ ಆಹಾರದಲ್ಲಿ ಅಳವಡಿಸಿ ಉತ್ತಮ ಆರೋಗ್ಯವನ್ನು ಪಡೆದು ಸಶಕ್ತ ದೇಶ ಮತ್ತು ರಾಷ್ಟ್ರ ನಿಮಾರ್ಣಕ್ಕಾಗಿ ಎಲ್ಲರೂ ಕೈಜೋಡಿಸಬೇಕು.

ಲೇಖಕರು: ಡಾ. ಲತಾ ಆರ್ ಕುಲಕರ್ಣಿ, ಡಾ. ಸವಿತಾ ಎಸ್ ಮಂಗಾನವರ ಮತ್ತು ಚೈತ್ರ ಶ್ರೀ ಹೆಚ್. ಎಂ

ಕೃಷಿ ವಿಜ್ಞಾನ ಕೇಂದ್ರ, ಚಂದೂರಾಯನಹಳ್ಳಿ, ಮಾಗಡಿ

Published On: 15 October 2020, 09:42 PM English Summary: impotent of world Food day

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.