ರೈತ ದೇಶದ ಬೆನ್ನೆಲುಬಾದರೆ ಎತ್ತುಗಳು ರೈತನ ಬೆನ್ನೆಲುಬು. ಎತ್ತುಗಳೆಂದರೆ ರೈತನಿಗೆ ಪರಮಾಪ್ತ ಮಿತ್ರರು. ಈ ಮೂಕ ಪ್ರಾಣಿಗಳು ತನ್ನ ಒಡೆಯ ರೈತನ ಮೇಲಿರಿಸಿರುವ ಪ್ರೀತಿ, ರೈತ ತನ್ನ ಜೋಡೆತ್ತುಗಳ ಬಗ್ಗೆ ತೋರಿಸುವ ಅಕ್ಕರೆ, ಕಾಳಜಿ, ಮುತುವರ್ಜಿ ಎಲ್ಲವನ್ನೂ ನೋಡುತ್ತಿದ್ದರೆ ಭಾವುಕರ ಕಣ್ಣುಗಳು ತೇವ ಗೊಳ್ಳುತ್ತವೆ. ರೈತ-ಮಣ್ಣು-ಎತ್ತುಗಳು ಈ ಮೂರರ ಬಂಧವನ್ನು ಯಾರಿಂದಲೂ ಬಿಡಿಸಲಾಗದು. ಎಷ್ಟೋ ರೈತರು ಇಂದಿಗೂ ಬೆಳಗ್ಗೆ ಎದ್ದ ಕೂಡಲೆ ಎತ್ತುಗಳ ಮುಖ ನೋಡುವ ಅಭ್ಯಾಸ ಹೊಂದಿದ್ದಾರೆ. ಹಗಲಿರುಳು ತನ್ನ ಏಳಿಗೆಗೆ ಶ್ರಮಿಸುವ ಎತ್ತುಗಳನ್ನು ರೈತರು ದೇವರಂತೆ ಕಾಣುವುದು ಇದಕ್ಕೆ ಕಾರಣ.
ಅಂದಹಾಗೆ ಇಂದು ಸ್ನೇಹಿತರ ದಿನ (ಫ್ರೆಂಡ್ಶಿಪ್ ಡೇ) ಅನ್ನದಾತನ ಬೆಸ್ಟ್ ಫ್ರೆಂಡ್ ಎನಿಸಿರುವ ಎತ್ತುಗಳ ಬಗ್ಗೆ, ರೈತ-ಎತ್ತುಗಳ ಗೆಳೆತನದ ಬಗ್ಗೆ ನಿಮಗೆ ಎಲ್ಲೂ ಮಾಹಿತಿ ಸಿಗುವುದಿಲ್ಲ. ಅದರ ಬಗ್ಗೆ ತಿಳಿದುಕೊಳ್ಳಬೇಕೆಂದರೆ ರೈತರನ್ನೇ ಹೇಳಬೇಕು. ಆದರೆ, ಈಗಿಗ ಕೃಷಿ ಭೂಮಿಯಲ್ಲಿ ಯಂತ್ರೋಪಕರಣಗಳ ಭರಾಟೆ ಜೋರಾಗಿದೆ. ಎತ್ತುಗಳ ಬಗ್ಗೆ ಮಾತನಾಡುವಾಗ ಈ ಯಂತ್ರಗಳ ಸದ್ದು ಬೇಡ. ಹೀಗಾಗಿ ನೇರ ವಿಷಯಕ್ಕೆ ಬರೋಣ. ಇತ್ತೀಚೆಗೆ ಎತ್ತುಗಳ ಬಳಕೆ ಕಡಿಮೆ ಆಗಿದೆಯಾದರೂ, ಅವುಗಳ ಮಹತ್ವವೇನು ಕಡಿಮೆ ಆಗಿಲ್ಲ. ಬಹಳಷ್ಟು ರೈತ ಕುಟುಂಬಗಳಲ್ಲಿ ಈಗಲೂ ಎತ್ತುಗಳನ್ನು ಸಾಕಿ ಬೆಳೆಸುತ್ತಾರೆ. ಮೊದಲಿನಂತೆ ಪೂರ್ತಿ ಜಮೀನನ್ನು ಎತ್ತುಗಳ ಮೂಲಕವೇ ಉಳಿಮೆ ಮಾಡದಿದ್ದರೂ, ಮೊದಲ ಬೇಸಯ ಎತ್ತುಗಳಿಂದಲೇ ಆಗಬೇಕು. ಎಂಬ ಸಂಪ್ರದಾಯ ಜಾರಿಯಲ್ಲಿದೆ.
ಎತ್ತುಗಳು ಹೊಲದೊಳಗೆ ಕಾಲಿಟ್ಟರೆ ಅಲ್ಲಿ ಹೊನ್ನು ಕೂಡ ಬೆಳೆಯಬಹುದು ಎಂಬುದು ರೈತರ ನಂಬಿಕೆ. ಅದಕ್ಕಾಗಿಯೇ ಎತ್ತುಗಳಿಗೆ ಪೂಜನೀಯ ಸ್ಥಾನವಿದೆ. ರೈತ ಮನೆಗಳಲ್ಲಿ ಅವುಗಳನ್ನು ಬಸವಣ್ಣ ಎಂದು ಕರೆಯುತ್ತರೆ (ಜಗಜ್ಯೋತಿ ಬಸವಣ್ಣನವರಲ್ಲ). ಇಂತಹ ಎತ್ತುಗಳು ಎಂದರೆ ರೈತರಿಗೆ ಪ್ರಾಣ. ಹೋರಿಗಳು ಅವನಿಗೆ ಮನೆಯ ಮಗನ ಸಮಾನ. ಎತ್ತಿಗೆ ಸಣ್ಣ ಗಾಯವಾದರೂ ತನ್ನ ರಕ್ತ ಹಂಚಿಕೊAಡು ಹುಟ್ಟಿದ ಕಂದನಿಗೆ ಏನೋ ಆಗಿದೆ ಎನ್ನುವಷ್ಟರ ಮಟ್ಟಿಗೆ ರೈತ ಕಾಳಜಿ ವಹಿಸುತ್ತಾನೆ. ಅವುಗಳೇನಾದರೂ ಹಟ ಮಾಡಿದರೆ ಬಾರಿಕೋಲಿನಿಂದ ಬಾರಿಸುವ ಯಜಮಾನ, ಕೊನೆಗೆ ತಾನೇ ಹೋಗಿ ಅವುಗಳನ್ನು ಮುದ್ದಾಡಿ ಸಮಾಧಾನ ಮಾಡುತ್ತಾನೆ. ಇವರಿಬ್ಬರ ನಡುವಿನ ಗೆಳೆತನ ಅಷ್ಟೊಂದು ಗಾಢ.
ಜನಪದದಲ್ಲಿ ಎತ್ತುಗಳ ವರ್ಣನೆ
ಕೃಷಿಕರ ಜನಪದವಾಗಿರುವ ಹಂತಿಯ ಪದಗಳಲ್ಲಿ ಎತ್ತುಗಳನ್ನು ವರ್ಣಿಸುವ ಪದಗಳು (ಹಾಡುಗಳು) ಸಾಕಷ್ಟಿವೆ. ತನ್ನ ಎತ್ತುಗಳ ಬಗ್ಗೆ ಅನ್ನದಾತನಿಗೆ ಅದೆಷ್ಟು ಹೆಮ್ಮೆ, ಅದೆಷ್ಟು ಅಕ್ಕರೆ ಎಂದರೆ; ತನ್ನ ಎತ್ತುಗಳು ನಡೆದು ಬರುತ್ತಿದ್ದರೆ ಸರ್ಕಾರವೇ ನಡುಗುತ್ತದೆ ಎಂದು ಪದವೊಂದರಲ್ಲಿ ರೈತ ಬಣ್ಣಿಸುತ್ತಾನೆ.
‘ಕರಿ ಎತ್ತು ಕಾಳಿಂಗ ಬಿಳಿ ಎತ್ತು ಮಾಲಿಂಗ ಸರದಾರ ನನ್ನೆತ್ತು ಸಾರಂಗ/ ಬರುವಾಗ ಸರಕಾರವೆಲ್ಲ ನಡುಗ್ಯಾವೊ’ ಎಂಬ ಜಾನಪದ ಹಾಡನ್ನು ನೀವು ಕೇಳಿರಬಹುದು. ನೀವು ೧೯೯೦ಕ್ಕೂ ಮೊದಲು ಹುಟ್ಟಿದವರಾದರೆ ಆಕಾಶವಾಣಿಯಲ್ಲಿ (ರೇಡಿಯೋ) ‘ಕರಿ ಎತ್ತು ಕಾಳಿಂಗ, ಬಿಳಿ ಎತ್ತು ಮಾಲಿಂಗ’ ಎಂಬ ಹಾಡನ್ನು ಕೇಳಿರಲೇಬೇಕು. ಈ ಜಾನಪದ ನುಡಿಪದ ರೈತ ತನ್ನ ಎತ್ತುಗಳ ಮೇಲಿರಿಸಿರುವ ಪ್ರೀತಿ, ಅದಕ್ಕೆ ಪ್ರತಿಯಾಗಿ ಎತ್ತುಗಳು ಆತನನ್ನು ಪ್ರೀತಿಸುವ ಪರಿಯನ್ನು ಬಣ್ಣಿಸುತ್ತದೆ.
ಹಂತಿಯ ಹೂಡಿ ನಾಳಿಗೆ ತಿಂಗಳಾತು
ಆನೆ ತುಳಿದರು ಸವೆದಿಲ್ಲ /ನಮ್ಮ ಬಸವ
ಪಾದ ಇಟ್ಟರೆ ನುರುದಾವೋ
ಇಲ್ಲಿ ತನ್ನ ಎತ್ತು ಆನೆಗಿಂತಲೂ ಬಲಶಾಲಿ ಎಂದು ಹೊಗಳುವ ರೈತ, ಆನೆಯಿಂದ ಆಗದ ಕೆಲಸವನ್ನು ತನ್ನ ಎತ್ತು ಮಾಡುತ್ತದೆ ಎನ್ನುತ್ತಾನೆ. ಜೊತೆಗೆ, ತಾನೇ ಸಿಂಗರಿಸಿದ ತನ್ನ ಬಸವಣ್ಣನ ಅಂದ, ಆತ ಮಾಡುವ ಕೆಲಸವನ್ನು ವರ್ಣಿಸುವ ಪರಿಯೂ ಅತ್ಯದ್ಭುತ;
ಬಸವಣ್ಣನ ಕಾಲೊಳಗೆ ಕುಶಲಾದ ಕಾಲ್ ಕಡಗ
ಮೂಲೋಕದ ಗೆಜ್ಜೆ ಕಟ್ಟಿಕೊಂಡು/ಎಂಟೆತ್ತಿನ
ರಂಟಿಯ ಹೊಡೆಯುವ ನಮ್ಮಣ್ಣ
ಕಾಲಿಗೆ ಅಂದವಾದ ಕಡಗ, ಮೂರೂ ಲೋಕಗಳಿಗೆ ಕೇಳುವಂತೆ ಸದ್ದು ಆಡುವ ಕಾಲ್ಗೆಜ್ಜೆ ಕಟ್ಟಿಕೊಂಡ ತನ್ನ ಒಂದು ಜೋಡಿ ಎತ್ತು, ಎಂಟು ಎತ್ತುಗಳಿಗೆ ಸಮನಾಗಿ ದುಡಿಯುತ್ತವೆ ಎನ್ನುತ್ತಾನೆ.
ಬೆಳ್ಳನೆಯ ಎರಡೆತ್ತುಗಳ ಹೆಗಲಿಗೆ ನೊಗ ಏರಿ, ಎಡಗೈಲಿ ಬಾರಿ ಕೋಲು ಹಿಡಿದು, ಬಲಗೈಲಿ ಸೆಡ್ಡೆ ಹಿಡಿದು ಹೊಲಗಳನ್ನು ಆಳುವ ರೈತ, ತನ್ನ ಎತ್ತುಗಳೊಂದಿಗೆ ಹೊನ್ನನ್ನು ಬಿತ್ತುವುದಾಗಿ ಈ ಕೆಳಗಿನ ಪದದಲ್ಲಿ ಬಣ್ಣಿಸಲಾಗಿದೆ;
ಬೆಳ್ಳಾನ ಬಿಳಿ ಎತ್ತು ಬೆಳ್ಳಿಯ ಬಾರಿ ಕೋಲು
ಬಂಗಾರದ ಸೆಡ್ಡೆ ಬಲಗೈಲಿ ಹಿಡಕೊಂಡು
ಹೊನ್ನ ಬಿತ್ಯಾರೋ ಹೊಳಿಸಾಲ
ಜನಪದರು ಹೇಳುವ ಕಥೆ ಒಂದರಲ್ಲಿ, ಒಮ್ಮೆ ಎತ್ತು ಹೊಲದಲ್ಲಿ ಬೆಳೆದ ಪೈರನ್ನು ತಿನ್ನುತ್ತಿರುತ್ತದೆ. ಆಗ ಅದನ್ನು ನೋಡುವ ರೈತ, ಬರ್ರನೆ ಓಡಿ ಬಂದು ಬಾರಿ ಕೋಲು ತೆಗೆದುಕೊಂಡು ಅದರ ಮೈಮೇಲೆ ಬಸುಂಡಿ ಬರುವಂತೆ ಹೊಡೆಯುತ್ತಾನೆ, ಆಗ, ಕಣ್ಣೀರು ಹಾಕುವ ಎತ್ತು, ‘ನನ್ನ ಕೈಲಿ ಅಷ್ಟೆಲ್ಲ ಕೆಲಸ ಮಾಡಿಸಿಕೊಳ್ಳುವೆ. ಈ ಪೈರನ್ನೆಲ್ಲಾ ನನ್ನಿಂದಲೇ ಬಿತ್ತಿಸಿದೆ. ಈಗ ಅದರಲ್ಲಿ ಬೆಳೆದ ಒಂದು ತೆನೆ ದಂಟು ತಿಂದರೆ ಹೊಡೆಯುತ್ತೀ... ನೀ ಹಿಂಗಾ ಹೊಡೆದರೆ ನಾ ಕೈಲಾಸ ಸೇರುತ್ತೇನೆ ಎಂದು ಹೇಳುತ್ತದಂತೆ. ಎತ್ತಿನ ಕಣ್ಣೀರು ಕಂಡ ರೈತ, ಅದರ ಮುಂದೆ ನಿಂತು ಕೈಮುಗಿದು, ದೀರ್ಘ ದಂಡ ಹಾಕಿ ಕಾಲುಗಳನ್ನು ಹಿಡಿದು ತನ್ನನ್ನು ಕ್ಷಮಿಸುವಂತೆ ಕೋರುತ್ತಾನೆ. ಜೊತೆಗೆ, ತಾನೂ ಕಣ್ಣೀರು ಹಾಕುತ್ತಾನೆ.
ರೈತರಿಗೆ ತಮ್ಮ ಎತ್ತುಗಳೆಂದರೆ ಅದೆಷ್ಟು ಪ್ರೀತಿ ಎಂದರೆ, ಪ್ರತಿ ದಿನ ಅವುಗಳ ಮೈತೊಳೆದು, ಮಾಲೀಶು ಮಾಡಿ ಮುತ್ತಿಕ್ಕದಿದ್ದರೆ ಅವರಿಗೆ ಸಮಾಧಾನವೇ ಆಗುವುದಿಲ್ಲ. ಅದರಲ್ಲೂ ಉಳುಮೆಗೆ ರಜೆ ಮಾಡುವ ಸೋಮವಾರದಂದು ಬಸವಣ್ಣನ ಬಗ್ಗೆ ಮನೆಯವರೆಲ್ಲಾ ಅತೀವ ಕಾಳಜಿ ತೋರುತ್ತಾರೆ. ತನ್ನ ಹಲದಲ್ಲಿ ಹೊನ್ನು ಬೆಳೆಯಲು ನೆರವಾಗುವ ಆಪ್ತ ಗೆಳೆಯ ಎತ್ತನ್ನು ಪೂಜಿಸುವ, ಗೌರವಿಸುವ ದೃಷ್ಟಿಯಿಂದಲೇ ‘ಕಾರ ಹುಣ್ಣಿಮೆ’, ‘ಮಣ್ಣೆತ್ತಿನ ಅಮಾವಾಸ್ಯೆ’ ರೀತಿಯ ಹಬ್ಬಗಳನ್ನು ರೈತರು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಹಬ್ಬಗಳಂದು ಎತ್ತುಗಳನ್ನು ವಿಶೇಷವಾಗಿ ಸಿಂಗರಿಸಿ, ತರಹೇವಾರಿ ಅಡುಗೆ ತಯಾರಿಸಿ ಉಣಬಡಿಸುತ್ತಾರೆ.
Share your comments