ಆತ್ಮನಿರ್ಭರ ಭಾರತ್ ಯೋಜನೆಯಡಿ ಕೇಂದ್ರ ಸರ್ಕಾರ ಘೋಷಿಸಿದ್ದ ತುರ್ತು ಸಾಲ ಖಾತ್ರೆ ಯೋಜನೆ (ಇ.ಸಿ.ಎಲ್.ಜಿ.ಎಸ್)ಯನ್ನು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.
ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ (ಎಂಎಸ್‌ಎಂಇ) ಘೋಷಿಸಿರುವ ತುರ್ತು ಸಾಲ ಖಾತರಿ ಯೋಜನೆ ಇದಾಗಿದೆ. ಮೊದಲ ಹಂತದಲ್ಲಿ ಈ ಯೋಜನೆಯು ಅಕ್ಟೋಬರ್ ಅಂತ್ಯದವರೆಗೆ ಜಾರಿಯಲ್ಲಿತ್ತು. 3 ಲಕ್ಷ ಕೋಟಿಯ ಗುರಿಯನ್ನು ತಲುಪಲು ಇನ್ನೂ ಆಗದಿರುವ ಕಾರಣ ಯೋಜನೆಯ ಅವಧಿಯನ್ನು ಕೇಂದ್ರ ಸರ್ಕಾರವು ನವೆಂಬರ್ 30ರವರೆಗೆ ವಿಸ್ತರಿಸಿದೆ.
ಕೊರೋನಾ ಲಾಕ್ಡೌನ್ ನಿಂದ ಹಳಿತಪ್ಪಿದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರಲು ನಿಟ್ಟಿನಲ್ಲಿ ಹಾಗೂ ಹಬ್ಬದ ಋತುವಿನಲ್ಲಿ ಬೇಡಿಕೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ತುರ್ತು ಸಾಲ ಯೋಜನೆಯನ್ನು ಘೋಷಿಸಿತ್ತು. ಅದರಂತೆ ಎಂಎಸ್ಎಂಇ ಉದ್ದಿಮೆಗಳಿಗೆ ಸಾಲ, ಬ್ಯುಸಿನೆಸ್ ಉದ್ದೇಶಕ್ಕೆ ನೀಡಲಾಗುವ ವೈಯಕ್ತಿಕ ಸಾಲ ಹಾಗೂ ಮುದ್ರಾ ಗ್ರಾಹಕರಿಗೆ ಮೇಲಾಧಾರ ಮುಕ್ತ ಸಾಲ ನೀಡಲು ನಿರ್ಧರಿಸಿತ್ತು. ಆದರೆ 3 ಲಕ್ಷ ಕೋಟಿಯ ಗುರಿಯನ್ನು ತಲುಪಲು ಇನ್ನೂ ಆಗದಿರುವ ಕಾರಣ ಈ ಯೋಜನೆಯನ್ನು ವಿಸ್ತರಿಸಲಾಗಿದೆ.
ಏನಿದು ತುರ್ತು ಸಾಲ ಯೋಜನೆ?
ಕೋವಿಡ್-19 ರ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಂದಾಗಿ ಎಂಎಸ್ಎಂಇ ವಲಯದಲ್ಲಿ ಉತ್ಪಾದನೆ ಮತ್ತು ಇತರ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿತ್ತು. ಇದಕ್ಕೆ ನಿರ್ದಿಷ್ಟ ಸ್ಪಂದನೆಯಾಗಿ ತುರ್ತು ಸಾಲ ಖಾತ್ರಿ ಯೋಜನೆ (ಇಸಿಎಲ್ಜಿಎಸ್) ಯನ್ನು ರೂಪಿಸಲಾಗಿದೆ. ಎಂಎಸ್ಎಂಇಗಳು ಎದುರಿಸುತ್ತಿರುವ ಆರ್ಥಿಕ ತೊಂದರೆಯನ್ನು ತಗ್ಗಿಸುವ ಉದ್ದೇಶದಿಂದ ಈ ಯೋಜನೆಯ ಮೂಲಕ ಸಂಪೂರ್ಣ ಖಾತರಿಪಡಿಸಿದ ತುರ್ತು ಸಾಲ ಇದಾಗಿದೆ. ಇದಕ್ಕೆ 3 ಲಕ್ಷ ಕೋಟಿ ರೂ. ಹೆಚ್ಚುವರು ಹಣಕಾಸು ನೆರವು ನೀಡಲಾಗುತ್ತಿದೆ. ಸಾಲ ನೀಡುವ ಸದಸ್ಯ ಸಂಸ್ಥೆಗಳು (ಎಂಎಲ್ಐಗಳು), ಅಂದರೆ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು (ಎಫ್ಐಐಗಳು) ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ (ಎನ್ಬಿಎಫ್ಸಿ) ಪ್ರೋತ್ಸಾಹ ನೀಡಲು ಮತ್ತು ಕೋವಿಡ್-19 ಬಿಕ್ಕಟ್ಟಿನಿಂದ ಉಂಟಾದ ಆರ್ಥಿಕ ಸಂಕಷ್ಟದಿಂದಾಗಿ ಸಾಲಗಾರರಿಂದ ಜಿಇಸಿಎಲ್ ಹಣವನ್ನು ಮರುಪಾವತಿಸದ ಕಾರಣ ಅವರು ಅನುಭವಿಸುವ ಯಾವುದೇ ನಷ್ಟಗಳಿಗೆ ಶೇಕಡಾ 100 ರಷ್ಟು ಖಾತ್ರಿ ನೀಡುವ ಮೂಲಕ ಎಂಎಸ್ಎಂಇ ಸಾಲಗಾರರಿಗೆ ಹೆಚ್ಚುವರಿ ಹಣದ ಲಭ್ಯತೆಯನ್ನು ಸಕ್ರಿಯಗೊಳಿಸುವ ಯೋಜನೆ ಇದಾಗಿದೆ.
ಅನುಷ್ಠಾನದ ಅವಧಿ:
ಯೋಜನೆ ಘೋಷಣೆಯಾದ ದಿನಾಂಕದಿಂದ 31.10.2020 ರ ಅವಧಿಯಲ್ಲಿ ಅಥವಾ ಜಿಇಸಿಎಲ್ ಅಡಿಯಲ್ಲಿ ಮೂರು ಲಕ್ಷ ಕೋಟಿ ರೂ.ಗಳನ್ನು ಮಂಜೂರು ಮಾಡುವವರೆಗೆ, ಯಾವುದು ಮೊದಲು ಆಗುತ್ತದೋ ಅಲ್ಲಿಯವರೆಗೆ ಈ ಯೋಜನೆಯು ಜಿಇಸಿಎಲ್ ಅಡಿಯಲ್ಲಿ ಮಂಜೂರಾದ ಎಲ್ಲಾ ಸಾಲಗಳಿಗೆ ಅನ್ವಯಿಸುತ್ತದೆ ಎಂದು ಹೇಳಲಾಗಿತ್ತು. ಆದರೆ ಇನ್ನೂ 3 ಲಕ್ಷ ಕೋಟಿಯ ಗುರಿಯನ್ನು ತಲುಪಿಲ್ಲ. ಹಾಗಾಗಿ ಈ ಯೋಜನೆಯನ್ನು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.
Share your comments