ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ನವೆಂಬರ್ 3ರಿಂದ ನವೆಂಬರ್ 6ರ ವರೆಗೆ ಕೃಷಿಯಲ್ಲಿ ನವೋದ್ಯಮ ಘೋಷಣೆ ಅಡಿ ‘ಕೃಷಿ ಮೇಳ’ವನ್ನು ಆಯೋಜಿಸಿದೆ.
ಇದನ್ನೂ ಓದಿರಿ: ಇಂದು ನವೆಂಬರ್ 1; ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಗೊತ್ತೆ?
ಎರಡು ವರ್ಷಗಳ ನಂತರ ಮೇಳವನ್ನು ಆಯೋಜಿಸಲಾಗಿದೆ. ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ)ಯ ಆವರಣದಲ್ಲಿ ಮೇಳಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ.
ನಾಲ್ಕು ದಿನಗಳ ಈ ಕೃಷಿ ಮೇಳಕ್ಕೆ ಅಂದಾಜು 15 ಲಕ್ಷಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಕೃಷಿ ವಿವಿಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ 9 ತಳಿಗಳನ್ನು ಈ ಮೇಳದಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಬೆಳೆಗಳ ಪ್ರಾತ್ಯಕ್ಷಿಕೆಯನ್ನು ಕುಲಪತಿ ಡಾ.ಎಸ್.ವಿ.ಸುರೇಶ ಸೋಮವಾರ ಪರಿಶೀಲಿಸಿದರು.
ಮೇಳದಲ್ಲಿ ಒಟ್ಟು 700 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮಣ್ಣುರಹಿತ ಕೃಷಿ, ಕೃಷಿಯಲ್ಲಿ ಡ್ರೋನ್ ಬಳಕೆ, ಆಟೋಮೇಟೆಡ್ ಕೃಷಿ ಯಂತ್ರೋಪಕರಣ, ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ
ಈ ಬಾರಿಯ ಆಕರ್ಷಣೆಯಾಗಿದೆ ಎಂದು ಕುಲಪತಿ ಡಾ.ಎಸ್.ವಿ.ಸುರೇಶ ತಿಳಿಸಿದ್ದಾರೆ.
ತಿಂಗಳಲ್ಲಿ 36 ಲಕ್ಷ ಆದಾಯ ಗಳಿಸಿದ ಎಂಬಿಎ ಪದವೀಧರ; ಈ ಯಶೋಗಾಥೆ ನಿಮಗೂ ಪ್ರೇರಣೆ!
ಸಿರಿಧಾನ್ಯದ ಮಹತ್ವ, ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯ, ಜಲಾನಯನ ನಿರ್ವಹಣೆ, ಮಳೆ ಮತ್ತು ಚಾವಣಿ ನೀರು ಸಂಗ್ರಹ ಯೋಜನೆ,
ಸಾವಯವ ಕೃಷಿ ಪದ್ಧತಿ, ಸಮಗ್ರ ಪೋಷಕಾಂಶಗಳು, ರೋಗ ನಿರ್ವಹಣೆ, ಹನಿ ಹಾಗೂ ತುಂತುರು ನೀರಾವರಿ ಪದ್ಧತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮೇಳದಲ್ಲಿ ತಜ್ಞರಿಂದ ರೈತರಿಗೆ ಮಾಹಿತಿ ನೀಡಲಾಗುವುದು.
ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಮೌಲ್ಯವರ್ಧನೆ, ಬಿತ್ತನೆ ಬೀಜ ಪರೀಕ್ಷೆ, ಕೊಯ್ಲೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ ಹಾಗೂ ಶೇಖರಣೆ,
ಮೀನು ಸಾಕಾಣಿಕೆ, ಹವಾಮಾನ ಚತುರ ಕೃಷಿ, ಕೃಷಿಯಲ್ಲಿ ನೂತನ ಮಾಹಿತಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ವಿಧಾನಗಳು ಜೈವಿಕ
ಹಾಗೂ ನವೀಕರಿಸಲ್ಪಡುವ ಇಂಧನದ ಪ್ರಾತ್ಯಕ್ಷಿಕೆಯನ್ನು ಈ ಬಾರಿಯ ಮೇಳ ಒಳಗೊಂಡಿರುವುದು ವಿಶೇಷವಾಗಿದೆ.
ರಾಜ್ಯದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಬಾರಿ ಮೇಳದಲ್ಲಿ ಜಾನುವಾರು ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ.
ರಾಜ್ಯದಲ್ಲಿ ಹೆಚ್ಚಾಯ್ತು ಚಳಿ; ಬೆಂಗಳೂರಲ್ಲಿ ದಶಕದಲ್ಲೇ ಕನಿಷ್ಠ ತಾಪಮಾನ!
ಮೇಳಕ್ಕೆ ರಾಜ್ಯಪಾಲರಿಂದ ಚಾಲನೆ
ನವೆಂಬರ್ 3ರಂದು ಬೆಳಿಗ್ಗೆ 11ಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಕೃಷಿ ಮೇಳವನ್ನು ಉದ್ಘಾಟಿಸಲಿದ್ದಾರೆ.
ಸಚಿವ ಬಿ.ಸಿ.ಪಾಟೀಲ, ಶಾಸಕ ಕೃಷ್ಣ ಬೈರೇಗೌಡ ಅವರು ಪಾಲ್ಗೊಳ್ಳಲಿದ್ದಾರೆ. ಆನ್‌ಲೈನ್‌ನಲ್ಲೂ ಕೃಷಿ ಮೇಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕುಲಪತಿ ಡಾ.ಎಸ್.ವಿ.ಸುರೇಶ ತಿಳಿಸಿದ್ದಾರೆ.
ಮೇಳಕ್ಕೆ ಬರುವ ರೈತರಿಗೆ ಮಣ್ಣು ರಹಿತ ಕೃಷಿಯ ಮಾಹಿತಿ ನೀಡಲಾಗುವುದು. ಇದರ ಪ್ರಾತ್ಯಕ್ಷಿಕೆ ಸಹ ಮಾಡಲಾಗಿದ್ದು, ಮಣ್ಣಿನ ಅವಶ್ಯಕತೆ ಇರುವುದಿಲ್ಲ.
ಈ ಪದ್ಧತಿಯಲ್ಲಿ ಕಡಿಮೆ ಅವಧಿಯಲ್ಲಿ ಬೆಳೆ ಶೀಘ್ರವಾಗಿ ಬೆಳವಣಿಗೆ ಆಗಲಿದೆ. ನೀರು ಸಹ ಪೋಲಾಗುವುದಿಲ್ಲ. ಈ ಮಾದರಿಯ ಕೃಷಿಯಿಂದ ಶೇ 90ಕ್ಕಿಂತ ಹೆಚ್ಚು ನೀರಿನ ಸದ್ಬಳಕೆ ಮಾಡಬಹುದಾಗಿದೆ ಎಂದು ಡಾ.ನಾಗರಾಜು ಹುಲ್ಲೂರು ತಿಳಿಸಿದರು.
ಇದನ್ನು ಕಡಿಮೆ ಸ್ಥಳದಲ್ಲಿ ಹೆಚ್ಚು ಉತ್ಪಾದನೆ ಮಾಡಬಹುದಾಗಿದ್ದು, ಈ ಮಾದರಿಯಲ್ಲಿ ವರ್ಷಪೂರ್ತಿ ಬೆಳೆ ಬೆಳೆಯಬಹುದಾಗಿದೆ.
ಸಸ್ಯಗಳಿಗೆ ಒದಗಿಸಿದ ಪೊಷಕಾಂಶಗಳು ವ್ಯರ್ಥವಾಗದೆ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಕಳೆ ಬರುವುದಿಲ್ಲ.
ಕೀಟ ಮತ್ತು ರೋಗಬಾಧೆ ಮುಕ್ತವಾದ ಬೆಳೆ ಪಡೆಯಲು ಸಹಕಾರಿಯಾಗಿದೆ ಎಂದು ವಿವರಿಸಿದರು.
ನಾಟಿ ಕೋಳಿ ಪ್ರದರ್ಶನ
ಈ ಬಾರಿಯ ಕೃಷಿ ಮೇಳದಲ್ಲಿ ನಾಟಿ ಕೋಳಿಗಳ ಕೇಂದ್ರ ಬಿಂದುವಾಗಿರಲಿದೆ. ಗ್ರಾಮಪ್ರಿಯ, ವನರಾಜ, ಟರ್ಕಿ, ಬಾತುಕೋಳಿ, ಗಿನಿ ಫೌಲ್, ಡಿ.ಪಿ ಕ್ರಾಸ್, ಕಾವೇರಿ, ಅಸೀಲ್ ಕ್ರಾಸ್, ಗಿರಿರಾಜ, ಸ್ವರ್ಣಧಾರ, ಫೈಟರ್, ನೇಕೆಡ್ ನೆಕ್ ಸೇರಿದಂತೆ ಹಲವು ಮಾದರಿಯ ಕೋಳಿಗಳ ಪ್ರದರ್ಶನ ನಡೆಯಲಿದೆ.
ಕೃಷಿ ಸಾಧಕರಿಗೆ ಪ್ರಶಸ್ತಿ
ಈ ಬಾರಿಯ ಮೇಳದಲ್ಲಿ ಪ್ರತಿ ವರ್ಷದಂತೆ ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಗೋಪಾಲಗೌಡ, ನವಿಕ್ರಮ್ ಅವರು ರಾಜ್ಯಮಟ್ಟದ ಕೃಷಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಕೃಷಿ ಮೇಳದಲ್ಲಿ ಪ್ರಗತಿ ಪರ ರೈತರಿಗೆ ರಾಜ್ಯ ಹಾಗೂ ಜಿಲ್ಲಾಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಕೂಕಿನ ಹಿತ್ತಲಹಳ್ಳಿಯ ಗ್ರಾಮದ ಪ್ರಗತಿ ಪರ ಕೃಷಿಕರಾದ ಎಚ್.ಜಿ.ಗೋಪಾಲಗೌಡ ಅವರು ಎಚ್.ಡಿ.ದೇವೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ದೊಡ್ಡಬಳ್ಳಾಪುರದ ಲಕ್ಷ್ಮೀದೇವಿಪುರದ ಸಿ. ನವಿಕ್ರಮ್ ಅವರಿಗೆ ಡಾ.ಎಂ.ಎಚ್.ಮರಿಗೌಡ ರಾಜ್ಯಮಟ್ಟದ ತೋಟಗಾರಿಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೂಳೂರುದೊಡ್ಡಿಯ ಸಿ.ಪಿ.ಕೃಷ್ಣ, ಹಾಸನ ಜಿಲ್ಲೆ ಹೊಳೆನರಸಿಪುರ ತಾಲ್ಲೂಕಿನ ಬಂಟರತಳಾಲು
ಗ್ರಾಮದ ಎಂ.ಕವಿತಾ ಅವರಿಗೆ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಹಾಗೂ ರೈತ ಮಹಿಳೆ ಪುರಸ್ಕಾರ ಸಂದಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಜಂಗಮಕೋಟೆಯ ಎಂ.ಮುನೇ ಗೌಡರಿ ಅವರಿಗೆ ಡಾ.ಆರ್. ದ್ವಾರಕೀನಾಥ್ ರೈತ ಪುರಸ್ಕಾರ,
ಹಾಸನ ಜಿಲ್ಲೆ ಕಂದಲಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ರಾಜೇಗೌಡ ಅವರಿಗೆ ಡಾ.ಆರ್.ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ಲಭಿಸಿದೆ.
ಒಟ್ಟಾರೆ ಈ ಬಾರಿಯ ಕೃಷಿ ಮೇಳವು ಹಲವು ವಿಶೇಷತೆಗಳನ್ನು ಹೊಂದಿದ್ದು, ರೈತರು, ಕೃಷಿ ಸಂಶೋಧಕರು, ವಿಜ್ಞಾನಿಗಳು ಹಾಗೂ ತಂತ್ರಜ್ಞರು
ಹಾಗೂ ಕೃಷಿ ವಿದ್ಯಾರ್ಥಿಗಳು ಸೇರಿದಂತೆ ಹಲವರ ಸಮಾಗವಾಗಲಿದ್ದು, ರೈತರಿಗೆ ಅನುಕೂಲವಾಗಲಿದೆ.
Share your comments