1. ಸುದ್ದಿಗಳು

ಅಂಗಾಂಶ ಕೃಷಿ ಮೂಲಕ ಬೆಳೆಸಿದ ಜಿ9 ತಳಿಯ ಪಚ್ಚಬಾಳೆ ಸಸಿಗಳು ಕೇವಲ 11 ರೂಪಾಯಿಗೆ!

ಅಂಗಾಂಶ  ಕೃಷಿ ಮೂಲಕ ಬೆಳೆಸಿದ ಜಿ9 ತಳಿಯ ಪಚ್ಚಬಾಳೆ ಸಸಿಗಳು ಕೇವಲ 11 ರೂಪಾಯಿ ಬೆಲೆಗೆ! ನೀವು ಸರಿಯಾಗೇ ಓದಿದ್ದೀರಿ.ಅಂಗಾಂಶ ಕೃಷಿ (ಟಿಶ್ಶು ಕಲ್ಚರ್) ಪದ್ಧತಿ ಮೂಲಕ ಅಭಿವೃದ್ಧಿಪಡಿಸಿರುವ ಅತ್ಯುತ್ತಮ ಗುಣಮಟ್ಟದ ಜಿ9 ತಳಿಯ ಬಾಳೆ ಹಣ್ಣಿನ ಸಸಿಗಳನ್ನು ಸರ್ಕಾರ ರೈತರಿಗೆ ಕೇವಲ 11 ರೂಪಾಯಿ ಬೆಲೆಗೆ ನೀಡುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಅಂಗಾAಶ ಬಾಳೆ ಸಸಿಗಳ ಬೆಲೆ 20ರಿಂದ 80 ರೂಪಾಯಿವರೆಗೂ ಇದೆ. ಹೊಸದಾಗಿ ಬಾಳೆ ಬೆಳೆಯುವ ರೈತರಿಗೆ ಸಸಿಗಳ ಬೆಲೆ ಬಗ್ಗೆ ಸಮರ್ಪಕ ಮಾಹಿತಿ ಇರುವುದಿಲ್ಲ. ಇಂತಹ ಪರಿಸ್ಥಿತಿಯನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಕೆಲ ನರ್ಸರಿ ಮಾಲಿಕರು, 50 ರೂ.ಗಳಿಂದ 80 ರೂ.ಗಳವರೆಗೆ ಒಂದು ಸಸಿಯಂತೆ ಮಾರಾಟ ಮಾಡುತ್ತಾರೆ. ಇದರಿಂದ ಬಹಳಷ್ಟು ರೈತರು, ಅದರಲ್ಲೂ ಕೊರೊನಾ ಕಾರಣದಿಂದಾಗಿ ಉದ್ಯೋಗ ತೊರೆದು ಹಳ್ಳಿಗಳಿಗೆ ಬಂದು ಇತ್ತೀಚೆಗೆ ಕೃಷಿಯತ್ತ ಮುಖ ಮಾಡಿರುವ ಯುವಕರು ಹೆಚ್ಚಾಗಿ ಮೋಸಹೋಗುತ್ತಿದ್ದಾರೆ.

ಇನ್ನೊಂದೆಡೆ ಕೇವಲ 12 ರಿಂದ 15 ರೂ. ಬೆಲೆಗೂ ಬಾಳೆ ಸಸಿಗಳು ಸಿಗುತ್ತವೆ. ಆದರೆ ಅವುಗಳ ಗುಣಮಟ್ಟ ಅಷ್ಟೊಂದು ಉತ್ತಮವಾಗಿರುವುದಿಲ್ಲ. ಇಲ್ಲಿ ಕಡಿಮೆ ಬೆಲೆಯ ಮೋಹಕ್ಕೆ ಬೀಳುವ ರೈತರು ಸರಿಯಾಗಿ ಇಳುವರಿ ಪಡೆಯದೆ ಮೋಸ ಹೋಗುತ್ತಾರೆ. ಇದನ್ನು ಅರಿತ ಸರ್ಕಾರ ಪ್ರಸ್ತುತ ಬರೀ 11 ರೂಪಾಯಿಗೆ ಅತ್ಯುತ್ತಮ ಗುಣಮಟ್ಟದ ಅಂಗಾAಶ ಬಾಳೆ ಸಸಿಗಳನ್ನು ರೈತರಿಗೆ ನೀಡಲು ಮುಂದಾಗಿದೆ.

ಜೈವಿಕ ಕೇಂದ್ರದಲ್ಲಿ ಅಭಿವೃದ್ಧಿ

ಬೆಂಗಳೂರಿನ ಜೈವಿಕ ತಂತ್ರಜ್ಞಾನ ಕೇಂದ್ರವು ಅಂಗಾಂಶ ಕೃಷಿ ಪದ್ಧತಿ ಮೂಲಕ ಜಿ9 ಪಚ್ಚಬಾಳೆ ಸಸಿಗಳನ್ನು ಅಭಿವೃದ್ಧಿಪಡಿಸಿದೆ. ಈ ಸಸಿಗಳು ಪ್ರಸ್ತುತ ದಾವಣಗೆರೆಯ ಎಪಿಎಂಸಿ ಆವರಣದಲ್ಲಿರುವ ಜೈವಿಕ ಕೇಂದ್ರದಲ್ಲಿ ಲಭ್ಯವಿವೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ಇಂತಹ ಸಸಿಗಳು ಸಭ್ಯವಾಗಲಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಅಂಗಾಂಶ ಬಾಳೆ ಸಸಿಗಳನ್ನು ಬೆಳೆಸಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿದ ದಾವಣಗೆರೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾಗಿರುವ ಲಕ್ಷ್ಮೀಕಾಂತ ಅವರು, ‘ಅಂಗಾಂಶ ಪದ್ಧತಿಯಲ್ಲಿ ಅಭಿವೃದ್ಧಿಪಡಿಸಿದ ಜಿ9 ತಳಿಯ ಬಾಳೆ ಸಸಿಗಳನ್ನು ಬೆಂಗಳೂರಿನ ಜೈವಿಕ ತಂತ್ರಜ್ಞಾನ ಕೇಂದ್ರದಿಂದ ತರಿಸಿಕೊಂಡಿದ್ದೇವೆ. ನಮ್ಮ ಕೇಂದ್ರದಲ್ಲಿ ನೆರಳು ಪರದೆಯಲ್ಲಿ ಅವುಗಳನ್ನು ಬೆಳೆಸಲಾಗುತ್ತಿದೆ. ಬೆಂಗಳೂರಿನಿಂದ ತಂದ ನಂತರ ಸುಮಾರು ಒಂದೂವರೆ ತಿಂಗಳ ಕಾಲ ಸಸಿಗಳನ್ನು ಬೆಳೆಸಲಾಗುತ್ತದೆ. ಮೂರರಿಂದ ಐದು ಎಲೆಗಳು ಬಂದರೆ ತೋಟಗಳಲ್ಲಿ ನೆಡಲು ಬಾಳೆ ಗಿಡಗಳು ಸಿದ್ಧವಾಗಿರುತ್ತವೆ. ಇದುವರೆಗೆ ಸ್ಥಳೀಯವಾಗಿ ಈ ಸಸಿಗಳು ಲಭ್ಯವಿಲ್ಲದ ಕಾರಣ, ಜಿಲ್ಲೆಯ ರೈತರು ಹೆಚ್ಚಿನ ಬೆಲೆಗೆ ಬೆಂಗಳೂರು, ತಮಿಳುನಾಡು ಭಾಗದಿಂದ ಸಸಿಗಳನ್ನು ತರಿಸುತ್ತಿದ್ದರು. ಪ್ರಸ್ತುತ ದಾವಣಗೆರೆ, ಚಿತ್ರದುರ್ಗ, ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ದಾವಣಗೆರೆಯ ಜೈವಿಕ ಕೇಂದ್ರದಲ್ಲಿಯೇ ಸುಮಾರು 1 ಲಕ್ಷ ಸಸಿಗಗಳನ್ನು ಬೆಳೆಸಲು ಸಿದ್ಧತೆ ನಡೆಸಿದ್ದೇವೆ,’ ಎಂದು ಮಾಹಿತಿ ನೀಡಿದರು.

ಏಕರೂಪದ ಇಳುವರಿ

‘ಟಿಶ್ಶು ಕಲ್ಚರ್ ಮೂಲಕ ಅಭಿವೃದ್ಧಿಪಡಿಸಿದ ಬಾಳೆ ಸಸಿಗಳು 10 ತಿಂಗಳಿಗೆ ಗೊನೆ ಬಿಡಲು ಆರಂಭಿಸುತ್ತವೆ. ಏಕರೂಪದಲ್ಲಿ ಇಳುವರಿ ನೀಡುವುದು ಇವುಗಳ ವಿಶೇಷತೆಯಾಗಿದೆ. ಸಾಮಾನ್ಯವಾಗಿ ರೈತರು ಬೇರೆಯವರ ತೋಟದಿಂದ ಬಾಳೆ ಗುನ್ನಿಗಳನ್ನು ತಂದು ನಾಟಿ ಮಾಡುತ್ತಾರೆ. ಹೀಗೆ ಮಾಡಿದಾಗ ಒಂದು ಗಿಡದಿಂದ ಇನ್ನೊಂದು ಬಾಳೆ ಗಿಡಕ್ಕೆ ಇಳುವರಿಯಲ್ಲಿ ವ್ಯತ್ಯಾಸವಾಗುತ್ತದೆ. ಆದರೆ, ಅಂಗಾಂಶ ಕೃಷಿ ಬಾಳೆ ಸಸಿಗಳನ್ನು ಬೆಳೆಸುವುದರಿಂದ ಏಕರೂಪ ಹಾಗೂ ಅತಿ ಹೆಚ್ಚು ತೂಕದ ದೊಡ್ಡ ಬಾಳೆ ಗೊನೆಗಳನ್ನು ರೈತರು ಬೆಳೆಯಬಹುದಾಗಿದೆ. ಜೊತೆಗೆ ಬೇರೆ ತಳಿಗಳಿಗೆ ಹೋಲಿಸಿದರೆ ಇವುಗಳಲ್ಲಿ ರೋಗ ಲಕ್ಷಣಗಳು ತೀರಾ ಕಡಿಮೆ. ಈ ಸಸಿಗಳಿಂದ 25ರಿಂದ 40 ಕೆ.ಜಿ ವರೆಗಿನ ಗೊನೆಗಳನ್ನು ರೈತರು ನಿರೀಕ್ಷಿಸಬಹುದಾಗಿದೆ,’ ಎಂದು ವಿವರಿಸಿದರು.

ಉತ್ತಮ ತಾಕುಗಳಿಂದ ಆಯ್ಕೆ

ರೈತರಿಗೆ ಅತ್ಯುತ್ತಮ ಗುಣಮಟ್ಟದ ಬಾಳೆ ಸಸಿಗಳನ್ನು ನಿಡುವ ಉದ್ದೇಶ ಇಲಾಖೆಯದ್ದಾಗಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ, ಶಿಖಾರಿಪುರ, ಭದ್ರಾವತಿ, ಹೊಳೆಹೊನ್ನೂರು ಸೇರಿ ಗುಣಮಟ್ಟದ ಬಾಳೆ ಬೆಳೆಯುವ ಪ್ರದೇಶಗಳಿಗೆ ತೆರಳಿ, ಅಲ್ಲಿ ಉತ್ತಮ ತಾಕುಗಳನ್ನು ಗುರುತಿಸಿ, ಕನಿಷ್ಠ 30 ಕೆ.ಜಿ ತೂಕದ ಬಾಳೆ ಗೊನೆಗಳನ್ನು ಬಿಟ್ಟಿರುವ ಗಿಡದ ತಾಯಿ ಬೇರುಗಳನ್ನು ಸಂಗ್ರಹಿಸುತ್ತೇವೆ. ಆ ಬೇರುಗಳನ್ನು ತಂದು ಅಂಗಾಂಶ ಕೃಷಿ ವಿಧಾನದ ಮೂಲಕ ಸಸಿಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ದಾವಣಗೆರೆ ಜೈವಿಕ ಕೇಂದ್ರದ ಅಧಿಕಾರಿ ಸುನೀಲ್ ಮಾಹಿತಿ ನೀಡಿದ್ದಾರೆ.

Published On: 09 June 2021, 08:26 PM English Summary: G9 banana sapling for just Rs 11!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.