1. ಸುದ್ದಿಗಳು

ಮುಂಗಾರು ಹಂಗಾಮಿನಲ್ಲಿ 307.31 ಮಿಲಿಯನ್ ಟನ್ ಆಹಾರ ಉತ್ಪಾದನೆ ಗುರಿ: ಕೇಂದ್ರ ಕೃಷಿ ಸಚಿವಾಲಯ

ಪ್ರಸಕ್ತ ವರ್ಷದ ಭತ್ತದ ಸೀಸನ್‌ನಲ್ಲಿ ಅಂದರೆ, 2021-22ನೇ ಕೃಷಿ ವರ್ಷದ ಜೂನ್-ಜುಲೈನಲ್ಲಿ ಆರಂಭವಾಗಲಿರುವ ಮಳೆಗಾಲದ ಭತ್ತದ ಬೆಳೆ ರುತುವಿನಲ್ಲಿ 104.3 ಮಿಲಿಯನ್ ಟನ್ ಭತ್ತ ಸೇರಿದಂತೆ ಒಟ್ಟಾರೆ, 307.31 ಮಿಲಿಯನ್ ಟನ್ ಆಹಾರ ಧಾನ್ಯಗಳ ಉತ್ಪಾದನೆ ಗುರಿ ಹೊಂದಿರುವುದಾಗಿ ಹೊಂದಿರುವುದಾಗಿ ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.

ಜಗತ್ತಿನಲ್ಲೇ ಅತಿ ಹೆಚ್ಚು ಭತ್ತ ಬೆಳೆಯುವ ರಾಷ್ಟçಗಳಲ್ಲಿ ಭಾರತವೂ ಒಂದಾಗಿದ್ದು, ಇಲ್ಲಿ ಪ್ರತಿ ವರ್ಷ ಸುಮಾರು 11 ಕೋಟಿ ಎಕರೆ ಪ್ರದೇಶದಲ್ಲಿ ಭತ್ತದ ನಾಟಿ ಮಾಡಲಾಗುತ್ತಿದೆ. ಇನ್ನು ಪಶ್ಚಿಮ ಬಂಗಾಳವು ದೇಶದಲ್ಲೇ ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯವಾಗಿದೆ.

ಪ್ರಸ್ತುತ ಮುಂಗಾರು ಹಂಗಾಮು ಆರಂಭವಾಗಿದ್ದು, ಭತ್ತವು ಮಳೆಗಾಲದ ವೇಳೆ ಭಾರತ ಅತಿ ಹೆಚ್ಚು ಪ್ರದೇಶದಲ್ಲಿ ಬೆಳೆಯುವ ಪ್ರಮುಖ ಬೆಳೆಯಾಗಿದೆ. ದೇಶದಲ್ಲಿ ಭತ್ತ ಬೆಳೆಯುತ್ತಿರುವ ಬಹುತೇಕ ರಾಜ್ಯಗಳಲ್ಲಿ ಈಗಾಗಲೇ ಬೇಸಿಗೆ ಭತ್ತದ ಬೆಳೆಯ ಕಟಾವು ಕಾರ್ಯ ಪೂರ್ಣಗೊಂಡಿದೆ. ಈಗ ಭತ್ತದ ಕೃಷಿಗೆ ಕೊಂಚ ಬಿಡುವು ಕೊಟ್ಟಿರುವ ರೈತರು, ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲದ ಬೆಳೆಗಾಗಿ ತಯಾರಿ ಆರಂಭಿಸಲಿದ್ದಾರೆ.

44 ಮಿಲಿಯನ್ ಹೆಕ್ಟೇರ್ ನಾಟಿ

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು, ಮಹಾರಷ್ಟç, ಪಶ್ಚಿಮ ಬಂಗಾಳ, ಒರಿಸ್ಸಾ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಅಸ್ಸಾಂ, ಛತ್ತೀಸ್‌ಗಢ, ರ‍್ಯಾಣ, ಗುಜರಾತ್, ಉತ್ತರಾಖಂಡ ಸೇರಿ ದೇಶದ ಒಟ್ಟು 21 ರಾಜ್ಯಗಳಲ್ಲಿ ಭತ್ತವನ್ನು ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 44 ಮಿಲಿಯನ್ ಹೆಕ್ಟೇರ್ (ಸುಮಾರು 11 ಕೋಟಿ ಎಕರೆ) ಪ್ರದೇಶದಲ್ಲಿ ಭತ್ತ ನಾಟಿ ಮಾಡಲಿದ್ದು, 104 ಮಿಲಿಯನ್ ಟನ್ ಇಳುವರಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ. ಕಳೆದ ವರ್ಷ 102.60 ಮಿಲಿಯನ್ ಟನ್ ಭತ್ತ ಬೆಳೆಯುವ ಗುರಿ ಹಾಕಿಕೊಳ್ಳಲಾಗಿತ್ತು. ಆಗ ಸುಮಾರು 103.75 ಟನ್‌ಗಳಷ್ಟು ಭತ್ತದ ಇಳುವರಿ ಬಂದಿತ್ತು. ಹೀಗಾಗಿ ಪ್ರಸಕ್ತ ಕೃಷಿ ವರ್ಷದಲ್ಲಿಯೂ ನಿಗದಿತ ಗುರಿಗಿಂತಲೂ ಹೆಚ್ಚಿನ ಪ್ರಮಾಣದ ಭತ್ತದ ಇಳುವರಿ ಬರಲಿದೆ ಎಂಬ ನಿರೀಕ್ಷೆ ಕೇಂದ್ರ ಸರ್ಕಾರದ್ದಾಗಿದೆ.

ಈ ಕುರಿತು ವಿವಿಧ ರಾಜ್ಯಗಳ ಪ್ರತಿನಿಧಿಗಳ ಜೊತೆ ಚರ್ಚಿಸಿರುವ ಕೃಷಿ ಆಯುಜ್ತ ಎಸ್.ಕೆ.ಮಲ್ಹೋತ್ರಾ ಅವರು, ಪ್ರಸಕ್ತ ವರ್ಷ ದೇಶದಲ್ಲಿ ಪೂರ್ಣ ಪ್ರಮಾಣದ ಮುಂಗಾರು ನಿರೀಕ್ಷಿಸಲಾಗಿದೆ. ಹೀಗಾಗಿ ಹೆಚ್ಚಿನ ಪ್ರಮಾಣದ ಭತ್ತ ಉತ್ಪಾದನೆ ಗುರಿ ಹೊಂದಲಾಗಿದ್ದು, ರಾಜ್ಯಗಳು ಭತ್ತ ಬೆಳೆಯುವ ರೈತರಿಗೆ ಸೂಕ್ತ ಸಹಕಾರ, ಪ್ರೋತ್ಸಾಹ ನೀಡಬೇಕು. ಈ ನಿಟ್ಟಿನಲ್ಲಿ ಲವಣಾಂಶ ಹಾಗೂ ಪ್ರವಾಹ ಸಂದರ್ಭವನ್ನೂ ಸಮರ್ಥವಾಗಿ ಸಹಿಸಿಕೊಳ್ಳಬಲ್ಲ ಗುಣವಿರುವ ಬೀಜದ ವಿಧಗಳನ್ನು ರೈತರಿಗೆ ಪರಿಚಯಿಸಬೇಕಿದೆ. ಇದರೊಂದಿಗೆ, ಅಕ್ಕಿ ರಫ್ತು ಮಾಡುವ ಸಂದರ್ಭದಲ್ಲಿ ಆಗಬಹುದಾದ ಅಡಚಣೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ರೈತರು ಅಕ್ಕಿಯಲ್ಲಿ ಟ್ರೈಸೈಕ್ಲಾಜೋಲ್ ಮತ್ತು ಬುಪ್ರೊಫೆಜಿನ್ ಅನ್ನು ಸುರಕ್ಷಿತ ಮತ್ತು ಮಿತ ಪ್ರಮಾಣದಲ್ಲಿ ಬಳಸುವಂತೆ ಉತ್ತೇಜಿಸಬೇಕು ಎಂದು ಸಲಹೆ ನೀಡಿದರು.

151.43 ಮಿ.ಟನ್ ಆಹಾರ ಧಾನ್ಯ ಗುರಿ

ಇದೇ ವೇಳೆ ಈ ಮುಂಗಾರು ಹಂಗಾಮಿನಲ್ಲಿ 37.31 ಮಿಲಿಯನ್ ಟನ್ ಸಿರಿಧಾನ್ಯಗಳ ಬೆಳೆ, 26.20 ಮಿಲಿಯನ್ ಟನ್ ಎಣ್ಣೆ ಕಾಳುಗಳ ಉತ್ಪಾದನೆ ಹಾಗೂ 9.82 ಮಿಲಿಯನ್ ಟನ್ ಬೇಳೆ ಕಾಳುಗಳ ಇಳುವರಿ ಸೇರಿದಂತೆ ಒಟ್ಟು 151.43 ಮಿಲಿಯನ್ ಟನ್ ಆಹಾರ ಧಾನ್ಯಗಳ ಉತ್ಪಾದನೆಯ ಗುರಿ ಹೊಂದಿರುವುದಾಗಿ ತಿಳಿಸಿರುವ ಮಲ್ಹೋತ್ರಾ, ಈ ಬಾರಿ ಭತ್ತವೂ ಸೇರಿದಂತೆ ಒಟ್ಟಾರೆ 307.31 ಮಿಲಿಯನ್ ಟನ್ ಆಹಾರ ಧಾನ್ಯಗಳ ಉತ್ಪಾದನೆ ಗುರಿ ಹೊಂದಿರುವುದಾಗಿ ಹೇಳಿದರು. ಕೃಷಿ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ ವರ್ಷ ಇದೇ ಮುಂಗಾರು ಹಂಗಾಮು ಸಮಯದಲ್ಲಿ 147.95 ಮಿಲಿಯನ್ ಟನ್ ಆಹಾರ ಧಾನ್ಯಗಳ ಉತ್ಪಾದನೆಯಾಗಿತ್ತು. ಆದರೆ, ಕಳೆದ ಬಾರಿಯ ನಿಗದಿತ ಗುರಿ (149.35 ಮಿಲಿಯನ್ ಟನ್) ಗಿಂತಲೂ 1.4 ಮಿಲಿಯನ್ ಟನ್ ಕಡಿಮೆ ಇಳುವರಿ ಬಂದಿತ್ತು.

ರಸಗೊಬ್ಬರ ಅಗತ್ಯ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ದೇಶಾದ್ಯಂತ ಒಟ್ಟು 177.53 ಲಕ್ಷ ಟನ್ ಯೂರಿಯಾದ ಅಗತ್ಯ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಇದರೊಂAದಿಗೆ 65.18 ಲಕ್ಷ ಟನ್ ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ), 20.24 ಲಕ್ಷ ಟನ್ ಮುರಿಯೆಟ್ ಆಫ್ ಪೊಟ್ಯಾಶ್ (ಎಂಒಪಿ), 61.87 ಲಕ್ಷ ಟನ್ ಎನ್‌ಪಿಕೆ ರಸಗೊಬ್ಬರ (ನೈಟ್ರೋಜನ್, ಫಾಸ್ಫರಸ್, ಪೊಟ್ಯಾಷಿಯಂ) ಗೆ ಬೇಡಿಕೆ ಬರುವ ನಿರೀಕ್ಷೆಯಿದ್ದು, ಅಗತ್ಯ ಪ್ರಮಾಣದ ರಸಗೊಬ್ಬರ ಪೂರೈಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಮೆಕ್ಕೆಜೋಳ ಮತ್ತು ಸೋಯಾಬಿನ್ ಹೊರತುಪಡಿಸಿ ಇತರ ಎಲ್ಲ ಆಹಾರ ಧಾನ್ಯಗಳ ಬಿತ್ತನೆ ಬೀಜದ ಸಂಗ್ರಹ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ. 73,445 ಟನ್ ಮೆಕ್ಕೇಜೋಳದ ಬಿಜ ಹಾಗೂ 87,656 ಟನ್ ಸೋಯಾಬಿನ್ ಬಿತ್ತನೆ ಬೀಜಗಳ ಸಂಗ್ರಹ ಇಲಾಖೆಯ ಬಳಿ ಇದೆ ಎಂದು ಮಲ್ಹೋತ್ರಾ ಅವರು ಮಾಹಿತಿ ನೀಡಿದರು.

Published On: 18 June 2021, 08:03 PM English Summary: food grain production target of 307.31 million tones

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.