1. ಸುದ್ದಿಗಳು

ಕೆ.ಆರ್.ಎಸ್ ಮಾದರಿಯಲ್ಲಿ ಭವ್ಯ ಭದ್ರಾ ವನ ನಿರ್ಮಾಣ: ಸಚಿವ ಗೋವಿಂದ ಕಾರಜೋಳ

ಮೈಸೂರಿನ ಕೃಷ್ಣರಾಜ ಸಾಗರ (ಕೆಆರ್ಎಸ್) ಹಾಗೂ ವಿಜಯಪುರದ ಲಾಲ್ ಬಹದ್ದೂರ್ ಶಾಸ್ತç (ಆಲಮಟ್ಟಿ) ಜಲಾಶಯದ ಬಳಿ ಇರುವ ಉದ್ಯಾನವನಗಳ ಮಾದರಿಯಲ್ಲೇ ಭದ್ರಾ ಜಲಾಶಯದ ಆವರಣದಲ್ಲಿ ಭದ್ರಾ ವನ ನಿರ್ಮಾಣ ಮಾಡುವುದಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿ ಇರುವ ಭದ್ರಾ ಜಲಾಶಯ ಭರ್ತಿಯಾಗುವ ಹಂತ ತಲುಪಿರುವ ಹಿನ್ನೆಲೆಯಲ್ಲಿ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಲಸಂಪನ್ಮೂಲ ಸಚಿವರು, ಕೆಆರ್ಎಸ್ ಮತ್ತು ಆಲಮಟ್ಟಿ ಮಾದರಿಯಲ್ಲಿ ಭದ್ರಾ ವನ ನಿರ್ಮಿಸಬೇಕು ಎನ್ನುವ ಬೇಡಿಕೆ 2009 ರಿಂದಲೂ ಇದ್ದು, ಇದನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗಿತ್ತು. ಆದರೆ ಇದೀಗ ಜಲಸಂಪನ್ಮೂಲ ಇಲಾಖೆಯಿಂದಲೇ ಭದ್ರಾ ವನ ನಿರ್ಮಿಸಲು ನಿರ್ಧರಿಸಲಾಗಿದೆ ಎಂದರು.

ವನ ನಿರ್ಮಾಣಕ್ಕಾಗಿ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಈಗಾಗಲೆ ಸೂಚಿಸಿದ್ದು, ಮೊದಲ ಹಂತದಲ್ಲಿ 20 ಲಕ್ಷ ರೂ. ಮಂಜೂರು ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೆ ದಾವಣಗೆರೆ ಸಂಸದರಾದ ಡಾ.ಜಿ.ಎಂ.ಸಿದ್ದೇಶರ ಅವರು ಭದ್ರಾ ಜಲಾಶಯದ ಬಳಿ ಸುಸಜ್ಜಿತವಾದ ಹೊಸ ಪ್ರವಾಸಿ ಮಂದಿರ ನಿರ್ಮಿಸುವಂತೆ ಮನವಿ ಮಾಡಿದ್ದು, ಅವರ ಮನವಿಯನ್ನು ಪುರಸ್ಕರಿಸಿ, ನೂತನ ಐಬಿ ನಿರ್ಮಿಸಲು 2 ಕೋಟಿ ರೂ. ಅನುದಾನ ಮಂಜೂರು ಮಾಡಲಾಗುವುದು ಎಂದರು.

ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಈಗಾಗಲೇ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲಿಯೇ ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯುವ ವಿಶ್ವಾಸವಿದೆ ಎಂದು ಹೇಳಿದ ಸಚಿವ ಗೋವಿಂದ ಕಾರಜೋಳ ಅವರು, ಪ್ರಸ್ತುತ ಆರ್ಥಿಕ ಇತಿ-ಮಿತಿಯೊಳಗೇ ರಾಜ್ಯ ಸರ್ಕಾರವು ನೀರಾವರಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ. ಕೊರೊನಾ ಸಾಂಕ್ರಾಮಿಕ ಸೋಂಕಿನ ಸಂಕಷ್ಟದ ನಡುವೆಯೂ ಕಳೆದ ಎರಡು ವರ್ಷದಲ್ಲಿ ಸುಮಾರು 4900 ಕೋಟಿ ರೂ. ಅನುದಾನವನ್ನು ನೀರಾವರಿ ಯೋಜನೆಗೆ ಸರ್ಕಾರ ನೀಡಿದೆ. ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಆದ್ಯತೆ ಮೇರೆಗೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳ ಜನರ ಜೀವನಾಡಿಯಾಗಿರುವ ಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ಈ ವರ್ಷ ಉತ್ತಮ ಮಳೆಯಾಗಿದೆ. ಕಾರಣ, ಇತಿಹಾಸದಲ್ಲೇ ಮೊದಲ ಬಾರಿ ಜುಲೈ ತಿಂಗಳಿನಲ್ಲಿಯೇ ಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯ ನಿರ್ಮಾಣಗೊಂಡು 69 ವರ್ಷ ಕಳೆದಿದ್ದು, ಈ ಪೈಕಿ 33 ವರ್ಷ ಮಾತ್ರ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದಿಂದ ನೀರು ಪಡೆದು ವಿವಿಧ ಬೆಳೆ ಬೆಳೆದು ಆದಾಯ ಗಳಿಸುತ್ತಿರುವ ರೈತರು ನೀರಿನ ಕರ ಪಾವತಿಸಬೇಕು. ಇದರಿಂದ ಸರ್ಕಾರಕ್ಕೆ ಆದಾಯ ಹೆಚ್ಚಲಿದ್ದು, ಇನ್ನೂ ಹೆಚ್ಚಿನ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನೆರವಾಗಲಿದೆ ಎಂದು ಮನವಿ ಮಾಡಿದರು.

ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ..ಬಸವರಾಜ ಮಾತನಾಡಿ, ಕುಡಿಯುವ ನೀರು ಪೂರೈಕೆ ಹಾಗೂ ನೀರಾವರಿಗಾಗಿ ನೀರು ಒದಗಿಸುತ್ತಿರುವ ಭದ್ರಾ ಜಲಾಶಯದ ನಿರ್ಮಾತೃಗಳಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ನಮ್ಮ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ವಿಶೇಷ ಒತ್ತು ನೀಡಿದೆ. ಶಿವಮೊಗ್ಗ ಹಾಗೂ ದಾವಣಗೆರೆ ಭಾಗದ ರೈತರು ಸೇರಿದಂತೆ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಉಳಿದ ಜಿಲ್ಲೆಗಳಿಗೂ ನೀರನ್ನು ಸಮರ್ಪಕವಾಗಿ ಪೂರೈಸಬೇಕಿದೆ. ತುಂಗಾ ನೀರನ್ನು ಭದ್ರಾ ಜಲಾಶಯಕ್ಕೆ ಲಿಫ್ಟ್ ಮಾಡಿ, ದಾವಣಗೆರೆ ಜಿಲ್ಲೆಯ ಜಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗೆ ಹರಿಸುವ ಕಾಮಗಾರಿ ತ್ವರಿತವಾಗಿ ಆಗಬೇಕು ಎನ್ನುವುದು ನಮ್ಮ ಸದಾಶಯವಾಗಿದೆ. ಈ ವರ್ಷ ಇಡೀ ರಾಜ್ಯದಲ್ಲಿ ಸಮೃದ್ಧ ಮಳೆಯಾಗಿದೆ. ವರುಣ ದೇವೆ ಮುಂದೆ ಬರಲಿರುವ ವರ್ಷಗಳಲ್ಲೂ ರಾಜ್ಯದ ಮೇಲೆ ಇದೇ ರೀತಿ ಕೃಪೆ ತೋರಲಿ. ಕೋವಿಡ್ ಭೀತಿ ಇನ್ನೂ ಇದ್ದು, ಸಾರ್ವಜನಿಕರು ಮೈಮರೆಯದೆ, ಮುಂಜಾಗ್ರತಾ ಕ್ರಮಗಳನ್ನು ತಪ್ಪದೆ ಪಾಲಿಸುವಂತೆ ಸಚಿವರು ಮನವಿ ಮಾಡಿಕೊಂಡರು.

ದಾವಣಗೆರೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಅವರು ಮಾತನಾಡಿ, ಹಲವಾರು ಜಿಲ್ಲೆಗಳಿಗೆ ಭದ್ರೆ ವರದಾನವಾಗಿದೆ. ಬೇರೆ ಜಿಲ್ಲೆಗಳಿಗೆ ಭದ್ರಾ ನೀರು ಕೊಡಬಾರದು ಎಂಬ ಯಾವುದೇ ದುರುದ್ದೇಶ ನಮಗಿಲ್ಲ. ಆದರೆ, ಭದ್ರಾ ಮೇಲ್ದಂಡೆ ಯೋಜನೆಯಡಿ ಹಂಚಿಕೆಯಾಗಿರುವ ರೀತಿಯಲ್ಲಿ, ತುಂಗಾ ಜಲಾಶಯದಿಂದ ಭದ್ರೆಗೆ ನೀರು ಲಿಫ್ಟ್ ಮಾಡುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಭದ್ರಾ ಜಲಾಶಯ ಸಂಪೂರ್ಣ ತುಂಬಿದಲ್ಲಿ, ಹೆಚ್ಚುವರಿ ನೀರನ್ನು ಉಳಿದ ಜಿಲ್ಲೆಗಳಿಗೆ ನೀಡಬೇಕು. ಒಟ್ಟಾರೆ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗೆ ತೊಂದರೆಯಾಗದ ರೀತಿಯಲ್ಲಿ ಬೇರೆ ಜಿಲ್ಲೆಗಳಿಗೂ ನೀರು ಹರಿಸಬೇಕು ಎಂದರು.

ಜಗಳೂರು ಶಾಸಕ ಎಸ್.ವಿ.ರಾಮಚಂದ್ರ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ವಿ.ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಪ್ರೊ.ಲಿಂಗಣ್ಣ, ಮಾಡಾಳ್ ವಿರೂಪಾಕ್ಷಪ್ಪ, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ದಾವಣಗೆರೆ ಮಹಾನಗರಪಾಲಿಕೆ ಮೇಯರ್ ಎಸ್.ಟಿ.ವೀರೇಶ್, ಶಿವಮೊಗ್ಗ ಗ್ರಾಮೀಣ ಶಾಸಕ ಕೆ.ಬಿ.ಅಶೋಕ ನಾಯಕ್, ವಿಧಾನಪರಿಷತ್ ಸದಸ್ಯ ರುದ್ರೇಗೌಡ, ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಪಂ ಸಿಇಒ ಡಾ. ವಿಜಯ ಮಹಾಂತೇಶ್, ಎಸ್ಪಿ ಸಿ.ಬಿ. ರಿಷ್ಯಂತ್ ಹಾಜರಿದ್ದರು.

Published On: 17 August 2021, 08:06 PM English Summary: dpr ready for krs model bhadraa vana constriction

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.