ಎಲ್ಪಿಜಿ ಸಿಲೆಂಡರ್ ಬಳಸುವ ಗ್ರಾಹಕರಿಗೆ ಅಲ್ಪ ಸಂತಸದ ಸುದ್ದಿ. ಕಳೆದೆರಡು ತಿಂಗಳಿಂದ ಏರುಗತಿಯಲ್ಲಿದ್ದ ಎಲ್‌ಪಿಜಿ ಸಿಲೆಂಡರ್ ಬೆಲೆ 10 ರೂಪಾಯಿ ಇಳಿಕೆಯಾಗಿದೆ. ಇದರಿಂದಾಗಿ 14.2 ಕೆಜಿ ತೂಕದ ಎಲ್ಪಿಜಿ ಸಿಲಿಂಡಜರ್ ಬೆಲೆ ಬೆಂಗಳೂರಿನಲ್ಲಿ 822 ಇದ್ದಿದ್ದು 812 ಕ್ಕೆ ಇಳಿಕೆಯಾಗಿದೆ.
ಗೃಹಬಳಕೆಯ ಎಲ್ಪಿಜಿ ಬೆಲೆಯನ್ನು ಸತತವಾಗಿ ಏರಿಸಿದ್ದ ಸರ್ಕಾರ ಇದೀಗ 10 ರೂಪಾಯಿ ಇಳಿಕೆ ಮಾಡಿದೆ. ಈ ಮೂಲಕ ಗ್ರಾಹಕರ ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡಿದೆ ಎನ್ನಲಾಗುತ್ತಿದೆ.
ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೇರುತ್ತಿರುವುದರಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಲೆಂಡರ್ ಬೆಲೆ ಸಹ 50 ರೂಪಾಯಿಯಂತೆ ಮೂರು ಸಲ ಏರಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿತ್ತು. ಇಂಧನಗಳ ಬೆಲೆಯಲ್ಲಿ ಭಾರೀ ಏರಿಕೆ ನಂತರ ಕಳೆದ ಒಂದು ವಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೂರು ಬಾರಿ ಇಳಿಕೆಯಾಗಿದೆ. ಇದೀಗ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲೂ ಇಳಿಕೆ ಮಾಡಲಾಗಿದೆ. ಪರಿಷ್ಕೃತ ದರಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ತಿಳಿಸಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕೊರೊನಾ ಎರಡನೇ ಅಲೆ ಕಾರಣ ಬೇಡಿಕೆ ಕಡಿಮೆಯಾಗಿರುವುದು, ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಇಳಿಕೆ ಮಾಡಲಾಗಿದೆ ಎನ್ನಲಾಗಿದೆ. 2021ರ ಏಪ್ರಿಲ್ 1ರಿಂದ ಎಲ್‌ಪಿಜಿ ಬೆಲೆಯಲ್ಲಿ ಪ್ರತಿ ಸಿಲಿಂಡರ್‌ಗೆ 10 ರೂಪಾಯಿ ಕಡಿಮೆಯಾಗಲಿದೆ.
ಹೊಸದಿಲ್ಲಿ ಮತ್ತು ಮುಂಬಯಿಯಲ್ಲಿ ಗೃಹಬಳಕೆಯ (14.2 ಕೆಜಿ) ಸಿಲಿಂಡರ್ ಪ್ರಸ್ತುತ 819 ರೂಪಾಯಿ ಇದೆ. ಇದೀಗ 10 ರೂಪಾಯಿ ಬೆಲೆ ಇಳಿಕೆಯಾಗಿದ್ದು, ಏಪ್ರಿಲ್ 1ರಿಂದ 809 ರೂಪಾಯಿಗೆ ದೊರೆಯಲಿದೆ.
ಇತ್ತೀಚೆಗಷ್ಟೇ ಎಲ್‌ಪಿಜಿ ಬೆಲೆಯಲ್ಲಿ 125 ರೂಪಾಯಿ ಏರಿಕೆ ಮಾಡಲಾಗಿತ್ತು. ಭಾರತದಲ್ಲಿ ಎಲ್‌ಪಿಜಿ ಬೆಲೆಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಮುಖ್ಯವಾಗಿ ಪರಿಗಣಿಸಿ ನಿರ್ಧರಿಸಲಾಗುತ್ತದೆ.
ಎಲ್‌ಪಿಜಿ ಸಂಪರ್ಕ ಪಡೆದ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ದೊರೆಯುತ್ತದೆ. ಅದಕ್ಕಿಂತಲೂ ಹೆಚ್ಚು ಸಿಲಿಂಡರ್ ಪಡೆದರೆ, ಹೆಚ್ಚುವರಿ ಸಿಲಿಂಡರ್‌ಗಳಿಗೆ ಸಬ್ಸಿಡಿ ದೊರೆಯುವುದಿಲ್ಲ.
Share your comments