- ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದ ವಿವಿಧೆಡೆ ಮೂರು ದಿನ ಮಳೆ
2. ಕೆಂಪು ಅಡಿಕೆ ಬೆಲೆಯಲ್ಲಿ ಇಳಿಕೆ: ರೈತರಿಂದ ಹಸಿ ಅಡಿಕೆ ಮಾರಾಟ
3. ಸ್ವಾತಂತ್ರ್ಯ ಉದ್ಯಾನದಲ್ಲಿ ಮುಂದುವರಿದ ಕಬ್ಬು ಬೆಳೆಗಾರರ ಪ್ರತಿಭಟನೆ
4. ಕೃಷಿ ಸಚಿವ ಬಿ.ಸಿ ಪಾಟೀಲ ಅವರಿಂದ ವರ್ಚ್ಯೂಲ್ ಸಭೆ
5. 15 ವರ್ಷಕ್ಕಿಂತ ಹಳೆಯ ವಾಹನಗಳು ಗುಜರಿಗೆ: ಕೇಂದ್ರ ಸಚಿವ ನಿತಿನ್ ಗಡ್ಕರಿ
6. ಅಕ್ಷಯ ಪಾತ್ರ ಸಂಸ್ಥೆಗೆ 16 ಕೋಟಿ ನೆರವು: ಮಕ್ಕಳ ಬಿಸಿಯೂಟಕ್ಕೆ ಬಳಕೆ
7. ಬೆಲ್ಜಿಯಂ ಯುವತಿಯೊಂದಿಗೆ ಹೊಸಪೇಟೆ ಗೈಡ್ ಲಗ್ನ!
8. ಒಡಿಶಾದಲ್ಲಿ ಗುಡ್ಡ ಕಡಿದು ರಸ್ತೆ ನಿರ್ಮಿಸಿದ ಬುಡಕಟ್ಟು ಗ್ರಾಮಸ್ಥರು!
9. ಕೆ.ಆರ್.ಎಸ್ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ: 50 ಲಕ್ಷ ನಷ್ಟ
10. ರಾಜ್ಯದ 49 ತಾಲ್ಲೂಕುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಂತರ್ಜಲ ಮಟ್ಟ ಇಳಿಕೆ!
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕರಾವಳಿ ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಾಸನ, ಕೊಡಗು, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.
ಮುಂಜಾನೆ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆ ಚಳಿ ಹೆಚ್ಚಾಗಲಿದೆ.
ಇನ್ನು ಬೆಂಗಳೂರು ಸೇರಿದಂತೆ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ರಾಮನಗರ, ಹಾವೇರಿ ಮತ್ತು ವಿಜಯಪುರ ಸೇರಿದಂತೆ ವಿವಿಧೆಡೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಕೆಂಪು ಅಡಿಕೆ ಬೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಇಳಿಕೆ ಕಂಡುಬಂದಿದ್ದು, ಹಸಿ ಅಡಿಕೆ ಮಾರಾಟ ಮಾಡಲು ರೈತರು ಮುಂದಾಗಿದ್ದಾರೆ.
ಈ ಹಿಂದೆ ಕ್ವಿಂಟಲ್‌ಗೆ 58 ಸಾವಿರ ಇದ್ದ ರಾಶಿ ಇಡಿ ಮಾದರಿ ಅಡಿಕೆ ಧಾರಣೆಯು ಇದೀಗ 46 ಸಾವಿರಕ್ಕೆ ಕುಸಿದಿದೆ.
ಗೊರಬಲು ಮಾದರಿ ಅಡಿಕೆಯ ಬೆಲೆಯೂ ಕ್ವಿಂಟಲ್‌ಗೆ 30 ಸಾವಿರಕ್ಕೆ ಕುಸಿದಿದೆ. ಅಕಾಲಿಕ ಮಳೆ ಮತ್ತು ಮೋಡ ಕವಿದ
ವಾತಾವರಣ ಕೊಯ್ಲಿಗೆ ಅಡ್ಡಿಯಾಗಿದೆ. ಅಡಿಕೆ ಒಣಗಿಸಲು ಬಿಸಿಲಿನ ಕೊರತೆ ಇರುವುದರಿಂದ ಬೆಳೆಗಾರರು ಹಸಿ ಅಡಿಕೆಯನ್ನೇ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ.
ಕಬ್ಬಿಗೆ ಎಫ್‌ಆರ್‌ಪಿ ದರ ಏರಿಕೆ ಮಾಡುವಂತೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ,ರಾಜ್ಯ ರೈತ ಸಂಘಟನೆಗಳ
ಒಕ್ಕೂಟದ ಸಹಯೋಗದಲ್ಲಿ ರೈತರು ನಡೆಸುತ್ತಿರುವ ಆಹೋರಾತ್ರಿ ಪ್ರತಿಭಟನೆ ಶನಿವಾರವೂ ಮುಂದುವರಿಯಿತು.
ಕಬ್ಬಿಗೆ ಎಫ್‌ಆರ್‌ಪಿ ದರ ಏರಿಕೆ ಮಾಡಬೇಕು ಎಂದು ಆಗ್ರಹಿಸಿ ರೈತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ ಭರವಸೆ ಈಡೇರಿಸಿಲ್ಲ.
ಇದು ರೈತರಿಗೆ ಮಾಡುತ್ತಿರುವ ಅನ್ಯಾಯ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷಿ ಸಚಿವ ಬಿ.ಸಿ ಪಾಟೀಲ ಅವರು ಅಧಿಕಾರಿಗಳೊಂದಿಗೆ ವರ್ಚ್ಯೂಲ್ ಸಭೆ ನಡೆಸಿದರು.
ಸಭೆಯಲ್ಲಿ ಕೃಷಿ ಇಲಾಖೆಯಲ್ಲಿ ಆಡಳಿತ ಸುಧಾರಣೆಗಳ ಬಗ್ಗೆ ಕೈಗೊಂಡ ಕಾರ್ಯಕ್ರಮಗಳು ಹಾಗೂ ಬಿತ್ತನೆ ರಸಗೊಬ್ಬರ ದಾಸ್ತಾನು ಮತ್ತು ವಿತರಣೆ, ಮಳೆಹಾನಿ ಪರಿಹಾರ, ಬೆಳೆವಿಮೆ ಪರಿಹಾರ, ಸಿರಿಧಾನ್ಯ ಹಾಗೂ ಸಾವಯವ ಅಂತರಾಷ್ಟ್ರೀಯ ಮೇಳದ ತಯಾರಿ, ಜಲಾನಯನ ಅಭಿವೃದ್ದಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಭಾರತ ಸರ್ಕಾರಕ್ಕೆ ಸೇರಿದ 15 ವರ್ಷ ಹಳೆಯ ಎಲ್ಲ ವಾಹನಗಳನ್ನು ಗುಜರಿಗೆ ಹಾಕಲಾಗುವುದು.
ಈ ಕುರಿತು ಎಲ್ಲ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಈ ನೀತಿಯನ್ನು ಎಲ್ಲ ರಾಜ್ಯಗಳಿಗೂ ರವಾನಿಸಲಾಗಿದೆ. ರಾಜ್ಯ ಮಟ್ಟದಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು ಎಂದಿದ್ದಾರೆ.
ಇನ್ನು ಪಾಣಿಪತ್‌ನಲ್ಲಿ ಶೀಘ್ರ ಇಂಡಿಯನ್ ಆಯಿಲ್‌ನ ಎರಡು ಘಟಕಗಳು ಆರಂಭವಾಗಲಿವೆ.
ಒಂದರಲ್ಲಿ ನಿತ್ಯ 1 ಲಕ್ಷ ಲೀಟರ್‌ನಷ್ಟು ಎಥೆನಾಲ್, ಮತ್ತೊಂದರಲ್ಲಿ ಭತ್ತದ ತ್ಯಾಜ್ಯದಿಂದ ತಯಾರಿಸುವ
ಬಯೋ–ಬಿಟುಮೆನ್ ಅನ್ನು ಪ್ರತಿದಿನ 150 ಟನ್‌ನಷ್ಟು ಉತ್ಪಾದಿಸಲಾಗುವುದು ಎಂದು ಹೇಳಿದ್ದಾರೆ.
ಇದರಿಂದ ಭತ್ತ ಬೆಳೆಯುವ ದೇಶದ ವಿವಿಧ ಭಾಗಗಳಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಾಕುವುದರಿಂದ ಉಂಟಾಗುತ್ತಿರುವ ವಾಯು ಮಾಲಿನ್ಯ ತಪ್ಪಿಸಬಹುದು ಎಂದು ತಿಳಿಸಿದ್ದಾರೆ.
ಅಕ್ಷಯ ಪಾತ್ರಗೆ 16 ಕೋಟಿ ದೇಣಿಗೆ ಸಂಗ್ರಹವಾಗಿದೆ. ಫೌಂಡೇಷನ್ ವತಿಯಿಂದ ಅಮೆರಿಕದ ಮೂರು
ರಾಜ್ಯಗಳ ಸ್ವಯಂಸೇವಕರ ಘಟಕ ನೆವಾರ್ಕ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೆರವು ಸಂಗ್ರಹವಾಗಿದೆ.
ಸಂಗ್ರಹವಾಗಿರುವ 16 ಕೋಟಿ ಮೊತ್ತವನ್ನು ಭಾರತದಲ್ಲಿ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಊಟ ಯೋಜನೆಗೆ ಬಳಸಲಾಗುವುದು
ಎಂದು ಸಂಸ್ಥೆಯ ಭಾರತ ಸಿಇಒ ಶ್ರೀಧರ್ ವೆಂಕಟ್ ತಿಳಿಸಿದ್ದಾರೆ.
ಬೆಲ್ಜಿಯಂನ ಕೆಮಿಲ್ ಹಾಗೂ ಪ್ರವಾಸಿ ಮಾರ್ಗದರ್ಶಿ ಅನಂತರಾಜು ಅವರ ಮದುವೆ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಈಚೆಗೆ ಹಿಂದೂ ಸಂಪ್ರದಾಯದಂತೆ ನೆರವೇರಿತು.
ಬೆಲ್ಜಿಯಂನ ಕೆಮಿಲ್ ಹಾಗೂ ಹೊಸಪೇಟೆಯ ಅನಂತರಾಜು ಅವರು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದರು.
ದೂರದ ಬೆಲ್ಜಿಯಂನ ಯುವತಿಯೊಂದಿಗೆ ಕರ್ನಾಟಕದ ಯುವಕ ವಿವಾಹವಾದ ಅಪರೂಪದ ಕ್ಷಣಗಳಿಗೆ ಹಂಪಿ ಸಾಕ್ಷಿ ಆಗಿದೆ.
ವಿಶ್ವವಿಖ್ಯಾತ ಹಂಪಿಯ ಗತವೈಭವ ನೋಡಲು ಮೂರು ವರ್ಷಗಳ ಹಿಂದೆ ಬೆಲ್ಜಿಯಂ ದೇಶದಿಂದ ಕೆಮಿಲ್ ಅವರ ಕುಟುಂಬದವರು ಬಂದಿದ್ದರು.
ಈ ಸಂದರ್ಭದಲ್ಲಿ ಆಟೋ ಚಾಲಕ ಹಾಗೂ ಮಾರ್ಗದರ್ಶಕ ಅನಂತರಾಜುವಿನ ಪರಿಚಯವಾಗಿತ್ತು.
ಅನಂತರಾಜು ಪ್ರಾಮಾಣಿಕ ಆಟೋ ಚಾಲಕ ಎನ್ನುವುದರೊಂದಿಗೆ ಉತ್ತಮ ಮಾರ್ಗದರ್ಶಕ ಆಗಿಯೂ ಅವರ ಮನಗೆದ್ದಿದ್ದರು.
ಗ್ರಾಮಸ್ಥರೇ ಪರ್ವತ ಗುಡ್ಡ ಕಡಿದು ರಸ್ತೆ ನಿರ್ಮಿಸಿಕೊಂಡಿರುವ ಅಪರೂಪದ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಕೊರಾಪುಟ್‌ನ ಘಂಟ್ರಗುಡ್ಡದ ಬುಡಕಟ್ಟು ನಿವಾಸಿಗಳು ರಸ್ತೆ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ತಾವೇ ರಸ್ತೆ ನಿರ್ಮಿಸಿದ್ದಾರೆ.
ಬುಡಕಟ್ಟು ನಿವಾಸಿಗಳು ಗುದ್ದಲಿ, ಕುಡುಗೋಲು, ಮಚ್ಚು ಮೊದಲಾದ ಕೃಷಿ ಸಲಕರಣೆಗಳಿಂದ ಬುಡಕಟ್ಟು ಬೆಟ್ಟವನ್ನು ಅಗೆದಿದ್ದಾರೆ. ಬೆಟ್ಟವನ್ನು ಕಡಿದು, 6 ಕಿ.ಮೀ ಉದ್ದದ ಕಚ್ಚಾ ರಸ್ತೆಯನ್ನು ನಿರ್ಮಿಸಿದ್ದಾರೆ.
ನೇರ ರಸ್ತೆಗಳಿಲ್ಲದ ಕಾರಣ ಕೊರಾಪುಟ್ ಪಟ್ಟಣವನ್ನು ತಲುಪಲು ಕಷ್ಟವಾಗುತ್ತಿತ್ತು. ರಾತ್ರಿ ವೇಳೆ ಮತ್ತು ಅನಾರೋಗ್ಯ ಸಮಸ್ಯೆ ಎದುರಾದರೆ, ಆಸ್ಪತ್ರೆಗೆ ಸ್ಥಳಾಂತರಿಸುವುದು ಸವಾಲಾಗಿತ್ತು.
----
ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕೆಆರ್‌ಎಸ್ ಬೃಂದಾವನದಲ್ಲಿ ಇತ್ತೀಚೆಗಷ್ಟೇ ಚಿರತೆ ಕಾಣಿಸಿಕೊಂಡಿತ್ತು. ಇದರಿಂದ ಬೃಂದಾವನಕ್ಕೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು.
ಚಿರತೆ ಕಾಣಿಸಿಕೊಂಡಿದ್ದರಿಂದ ನವೆಂಬರ್ 6 ರಿಂದ 17 ದಿನಗಳ ಕಾಲ ಉದ್ಯಾನವನವನ್ನು ಬಂದ್ ಮಾಡಲಾಗಿತ್ತು. ಇದರಿಂದ ಕಾವೇರಿ ನೀರಾವರಿ ನಿಗಮಕ್ಕೆ 50 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಅಲ್ಲದೇ 15 ದಿನ ಕಳೆದರೂ ಚಿರತೆ ಸೆರೆ ಹಿಡಿಯದೆ ಇರುವುದಕ್ಕೆ ಅರಣ್ಯ ಇಲಾಖೆ ವಿರುದ್ಧ ಪ್ರವಾಸಿಗರು, ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
----
ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಮಳೆ ಆಗಿರುವ ಹೊರತಾಗಿಯೂ ಕರ್ನಾಟಕದ 49 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿರುವುದು ವರದಿ ಆಗಿದೆ.
ಕೇಂದ್ರ ಜಲಶಕ್ತಿ ಸಚಿವಾಲಯವು ಕೇಂದ್ರ ಅಂತರ್ಜಲ ಮಂಡಳಿಯ ಸಹಕಾರದೊಂದಿಗೆ ದೇಶದ
ಅಂತರ್ಜಲ ಸ್ಥಿತಿಗತಿ– ಕುರಿತು ವಿಸ್ತೃತವಾದ ವರದಿಯನ್ನು ಸಿದ್ಧಪಡಿಸಿದೆ. ಇದರ ಅನ್ವಯ ರಾಜ್ಯದ 49 ತಾಲ್ಲೂಕುಗಳಲ್ಲಿ ನಿರಂತರ
ಮಳೆಯ ಹೊರತಾಗಿಯೂ ಅಂತರ್ಜಲ ಮಟ್ಟ ಇಳಿಕೆ ಆಗಿರುವುದು ವರದಿ ಆಗಿದೆ.
ಇನ್ನು ಅಂತರ್ಜಲ ಇಳಿಕೆ ಆಗಿರುವ ಪ್ರಮುಖ ಜಿಲ್ಲೆಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,
ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿವೆ.
Share your comments