ಕೊರೋನಾದಿಂದಾಗಿ ಕಳೆದ ವರ್ಷ ಮಾರ್ಚ್ ತಿಂಗಳಿಂದ ಮುಚ್ಚಿರುವ ಪದವಿ, ವಿಶ್ವವಿದ್ಯಾನಿಲಯಗಳ ತರಗತಿ ಕೊಠಡಿಗಳ ಬಾಗಿಲುಗಳು ಮುಂಗಳವಾರದಿಂದ ಸಕಲ ಸುರಕ್ಷಾ ಕ್ರಮದೊಂದಿಗೆ ತೆರೆಯಲಿವೆ.
ಸುಮಾರು 8 ತಿಂಗಳಗಳು ನಂತರ ಕಾಲೇಜುಗಳಲ್ಲಿ ಭೌತಿಕವಾಗಿ ಬೋಧನಾ ಚಟುವಟಿಕೆಗಳು ನಡೆಯಲಿವೆ. ಜತೆಗೆ 2020-21ನೇ ಸಾಲಿನ ಶೈಕ್ಷಣಿಕ ವರ್ಷವೂ ಅಧಿಕೃತವಾಗಿ ಮಂಗಳವಾರದಿಂದಲೇ ಆರಂಭವಾಗಲಿದೆ. ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ನೇರ ತರಗತಿಗಳು ನಡೆಯಲಿವೆ.
ಕಾಲೇಜುಗಳನ್ನು ತೆರೆಯಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮಾರ್ಗಸೂಚಿ ಹೊರಡಿ ಸಿದ್ದು, ಅದರಂತೆ ಕಾಲೇಜುಗಳನ್ನು ಪುನರಾರಂಭಿಸಲು ಉನ್ನತ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಉಳಿದ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತದೆ. ನೇರ ತರಗತಿಗೆ ಅಂದರೆ, ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರ ನೀಡಬೇಕು.
ಬೋಧಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಮೂರು ದಿನ ಮೊದಲು ಕೋವಿಡ್ ಪರೀಕ್ಷೆ ಮಾಡಿಕೊಂಡು, ನೆಗೆಟಿವ್ ಇದ್ದಲ್ಲಿ ಮಾತ್ರ ಹಾಜರಾಗಲು ಅವಕಾಶ ನೀಡಬೇಕು ಎಂದು ಸಂಬಂಧಪಟ್ಟ ಪ್ರಾಚಾರ್ಯರಿಗೆ ಸೂಚನೆ ನೀಡಲಾಗಿದೆ.
ಕಾಲೇಜಿನ ಕಟ್ಟಡ, ಶೌಚಾಲಯ, ಎಲ್ಲ ಕೊಠಡಿಗಳಲ್ಲಿನ ಪೀಠೋಪಕರಣ ಮತ್ತು ಪಠ್ಯ ಸಾಮಗ್ರಿಗಳನ್ನು ಸ್ಯಾನಿಟೈಸ್ ಮಾಡಬೇಕು ಎಂದೂ ಸೂಚಿಸಲಾಗಿದೆ.
ಕಡ್ಡಾಯವಿಲ್ಲ:
ವಿದ್ಯಾರ್ಥಿಗಳು ಕಾಲೇಜಿಗೆ ಬರಲೇಬೇಕು ಎಂಬ ಕಡ್ಡಾಯ ನಿಯಮವಿಲ್ಲ. ಹಾಗೆಯೇ ವಿದ್ಯಾರ್ಥಿಗಳು ಕಾಲೇಜಿಗೆ ಕಡ್ಡಾಯವಾಗಿ ಬರಬೇಕು ಎಂದು ಆಡಳಿತ ಮಂಡಳಿಗಳು ಒತ್ತಡ ಹೇರುವಂತಿಲ್ಲ. ಬಹುತೇಕ ವಿಶ್ವವಿದ್ಯಾನಿಲಯಗಳು ನ. 17 ರಿಂದ ಪದವಿಯ 5ನೇ ಸೆಮಿಸ್ಟರ್ ಮತ್ತು ಸ್ನಾತಕೋತ್ತರ ಪದವಿಯ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾತ್ರ ಭೌತಿಕ ತರಗತಿ ನಡೆಸಲಿವೆ. ಉಳಿದಂತೆ ಎಲ್ಲಾ ವಿದ್ಯಾರ್ಥಿಗಳಿಗೂ ಆನ್ ಲೈನ್ ಹಾಗೂ ಆಫ್ ಲೈನ್ ವ್ಯವಸ್ಥೆಯಲ್ಲೇ ಬೋಧನೆ ಮುಂದುವರೆಯಲಿದೆ. ಪದವಿಯ 5ನೇ ಸೆಮಿಸ್ಟರ್ ಹಾಗೂ ಸ್ನಾತಕೋತ್ತರ ಪದವಿಯ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಭೌತಿಕ ತರಗತಿಯಲ್ಲಿ ಭಾಗವಹಿಸಲು ಇಚ್ಚಿಸದೆ ಇದ್ದಲ್ಲಿ ಆನ್ ಲೈನ್ ಬೋಧನಾ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬಹುದು.
Share your comments