1. ಸುದ್ದಿಗಳು

ಸದ್ದು, ಗದ್ದಲವಿಲ್ಲದೆ ಸಂಪನ್ನಗೊಂಡಿತು ಮೈಸೂರು ದಸರಾ ವೈಭವ

ಮಹಾಮಾರಿ ಕೊರೋನಾ ಭೀತಿಯ ಮಧ್ಯೆ ಈವರ್ಷ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಯಾವುದೇ ಆಡಂಬರವಿಲ್ಲದೆ ಅತ್ಯಂತ ಸರಳವಾಗಿ, ಸಾಂಪ್ರಾದಾಯಿಕವಾಗಿ ಆಚರಿಸಲಾಯಿತು. ಜಂಬೂ ಸವಾರಿಯಲ್ಲಿ ಈ ವರ್ಷ ಕೇವಲ 300 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಅರಮನೆ ಆವರಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.
 ಚಿನ್ನದ ಅಂಬಾರಿಯಲ್ಲಿ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯನ್ನು ಹೊತ್ತ ಅಭಿಮನ್ಯು ಆನೆ, ಗಾಂಭೀರ್ಯದಿಂದ ನಡಿಗೆ ಹಾಕಿ ರೋಮಾಂಚನಗೊಳಿಸಿತು.  ಇದೇ ವೇಳೆ ನಾಡ ಅಧಿದೇವತೆಗೆ ಜಿಲ್ಲಾಡಳಿತದಿಂದ ನಮನ ಸಲ್ಲಿಸಲಾಯಿತು.

ಅಭಿಮನ್ಯುವಿನ ಗಾಂಭೀರ್ಯದ ನಡಿಗೆ

ಸುಮಾರು 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು, ಶಾಂತಚಿತ್ತನಾಗಿ ಗಜಗಾಂಭೀರ್ಯದಿಂದಲೇ ಮುಖ್ಯಮಂತ್ರಿಗಳು ಆಸೀನರಾಗಿದ್ದ ವೇದಿಕೆಯತ್ತ ತೆರಳಿತು. ಸಂಪ್ರದಾಯದಂತೆ ಸಿಎಆರ್ ಪೊಲೀಸರು 21 ಕುಶಾಲು ತೋಪುಗಳನ್ನು ಪಿರಂಗಿ ಮೂಲಕ ಹಾರಿಸುತ್ತಿದ್ದಂತೆ, ಚಾಮುಂಡೇಶ್ವರಿ ದೇವಿಯ ಜಯಘೋಷಗಳು ಮೊಳಗಿದವು. ಇದೇ ಮೊದಲ ಬಾರಿಗೆ ಅಂಬಾರಿ ಹೊತ್ತಿದ್ದ ಅಭಿಮನ್ಯು ಆನೆಗೆ ವಿಜಯಾ, ಕಾವೇರಿ ಆನೆಗಳು ಕುಮ್ಕಿಯಾಗಿ ಸಾಥ್ ನೀಡಿದವು. ಸರಳ ದಸರಾ ಹಿನ್ನೆಲೆಯಲ್ಲಿ ಪ್ರತಿ ವರ್ಷ ಅರಮನೆಯಿಂದ ಬನ್ನಿ ಮಂಟಪದವರೆಗೆ ಸುಮಾರು 5.5 ಕಿಲೋ ಮೀಟರ್ ಸಾಗುತ್ತಿದ್ದ ಜಂಬೂಸವಾರಿ ಈ ಬಾರಿ ಕೇವಲ 400 ಮೀಟರ್‌ ಅಂತರದಲ್ಲೇ ಸಾಗಿದವು.

ಆಕರ್ಷಣೆಯ ಮೆರವಣಿಗೆ:
ಮೊದಲಿಗೆ ವೀರಗಾಸೆ ಕುಣಿತದಿಂದ ಮೆರವಣಿಗೆ ಆರಂಭವಾಯ್ತು. ನಂತರ ಕೊರೊನಾ ವಾರಿಯರ್ಸ್ ಸ್ತಬ್ಧಚಿತ್ರ ಹಿಂಬಾಲಿಸಿತು. ಕೊರೊನಾ ವೈರಸ್ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳುವುದು ಹಾಗೂ ವೈದ್ಯರ, ದಾದಿಯರ ಕರ್ತವ್ಯಕ್ಕೆ ಗೌರವ ಸೂಚಿಸುವ ಟ್ಯಾಬ್ಲೋ ಇದಾಗಿತ್ತು. ಇದರ ಹಿಂದೆಯೇ ಮರಗಾಲು ವೇಷಧಾರಿಗಳು ಕೊರೊನಾ ವೈರಸ್‌ ಹಿಮ್ಮೆಟ್ಟಿಸುವ ದುರ್ಗೆಯ ರೂಪವನ್ನು ಪ್ರದರ್ಶಿಸಿದರು. ಕರ್ನಾಟಕ ಶಾಸ್ತ್ರೀಯ ವೃಂದ, ಅರಮನೆ ಸಂಗೀತ ಗೋಷ್ಠಿ ಕೂಡಾ ನೋಡುಗರ ಕಣ್ಮನ ಸೆಳೆಯಿತು.

ಮೆರವಣಿಗೆಯಲ್ಲಿ ಮೈಸರು ಜಿಲ್ಲಾ ಪಂಚಾಯಿತಿ ಸಿದ್ಧಪಡಿಸಿದ್ದ ಕೊರೋನಾ ಜಾಗೃತಿ ಮೂಡಿಸುವ ಒಂದು ಸ್ತಬ್ಧಚಿತ್ರ ಮಾತ್ರ ಭಾಗವಹಿಸಿತ್ತು. ಉಳಿದಂತೆ ಅಶ್ವಾರೋಹಿ ದಳದ ಎರಡು ತುಕಡಿ, ಕರ್ನಾಟಕ ಪೊಲೀಸ್ ಬ್ಯಾಂಡ್ ನ ಆನೆಗಾಡಿ ಹಾಗೂ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿದ್ದವು. ಒಟ್ಟಿನಲ್ಲಿ ಮೈಸೂರು ದಸರಾ ಸರಳವಾಗಿ ನಡೆದರೂ, ಅರಮನೆ ಆವರಣದಲ್ಲಿ ಯಾವುದೇ ಸಂಭ್ರಮಕ್ಕೆ ಕೊರತೆ ಇರಲಿಲ್ಲ.

Published On: 26 October 2020, 05:10 PM English Summary: cm yediyurappa inaugurates Mysuru dasara jamboo savari

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.