1. ಸುದ್ದಿಗಳು

ಸಾವಯವ ಕೃಷಿ ಉತ್ಪನ್ನಗಳ ಪ್ರಮಾಣೀಕರಣ ಪ್ರೋತ್ಸಾಹಿಸಲು ಕೃಷಿಕರಿಂದ ಅರ್ಜಿ ಆಹ್ವಾನ

Basavaraja KG
Basavaraja KG

ರಾಜ್ಯದಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವಯವ ಕೃಷಿ ಉತ್ಪನ್ನಗಳ ಪ್ರಮಾಣೀಕರಣ ಯೋಜನೆಯನ್ನು ಜಾರಿಗೊಳಿಸಿದೆ. ಪ್ರಸ್ತುತ ಇನ್ನೂ ಹೆಚ್ಚಿನ ಸಂಖ್ಯೆಯ ರೈತನ್ನು ಸಾವಯವ ಕೃಷಿ ವ್ಯಪ್ತಿಗೆ ತರುವ ಉದ್ದೇಶದಿಂದ ಸಾವಯವ ಕೃಷಿ ಉತ್ಪನ್ನಗಳ ಪ್ರಮಾಣೀಕರಣ ಪ್ರಕ್ರಿಯೆಯನ್ನು ಆರಂಭಿಸಿದೆ.

ದಾವಣಗೆರೆ ಜಿಲ್ಲೆಯಲ್ಲಿ ಈಗಾಗಲೇ ಸಾವಯವ ಪ್ರಮಾಣೀಕರಣ ಪ್ರಕ್ರಿಯೆ ಆರಂಭಗೊಂಡಿದ್ದು, ಇನ್ನೂ ಹೆಚ್ಚಿನ ವಿಸ್ತೀರ್ಣ ಹಾಗೂ ರೈತರನ್ನು ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಅರ್ಹ ಸಾವಯವ ಕೃಷಿಕರಿಂದ ಪ್ರಮಾಣೀಕರಣಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದೆ.

ಕರ್ನಾಟಕ ರಾಜ್ಯದಲ್ಲಿ ಸಾವಯವ ಬೆಳೆ/ಉತ್ಪನ್ನಗಳ ಬೇಡಿಕೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಇವುಗಳ ಗುಣಮಟ್ಟವನ್ನು ಖಾತರಿ ಪಡಿಸಲು ಸರ್ಕಾರಿ ಸ್ವಾಮ್ಯದ ನಿರ್ದಿಷ್ಟ ಸಂಸ್ಥೆ ಇರಲಿಲ್ಲ. ಇದನ್ನು ಮನಗಂಡ ರಾಜ್ಯ ಸರ್ಕಾರ, 2013ರ ಜನವರಿ 4ರಂದು ಹೊರಡಿಸಿದ ಆದೇಶದ ಪ್ರಕಾರ, ಕರ್ನಾಟಕ ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆಯು, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆ ಎಂದು ಮರು ನಾಮಕರಣಗೊಂಡಿತು. ಬಳಿಕ ಇದರ ಅಡಿಯಲ್ಲಿ ಕರ್ನಾಟಕ ರಾಜ್ಯ ಸಾವಯವ ಕೃಷಿ ಉತ್ಪನ್ನ ಪ್ರಮಾಣೀಕರಣ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ಸಾವಯವ ಕೃಷಿ ನೀತಿ 2004ರ ಅಡಿಯಲ್ಲಿ ರಾಜ್ಯದಲ್ಲಿ ಈವರೆಗೆ ಕೃಷಿ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಸಾವಯವ ಉತ್ತೇಜನ ಕಾರ್ಯಕ್ರಮಗಳಿಂದಾಗಿ ಸಾವಯವ ಕೃಷಿ ಉತ್ಪನ್ನಗಳ ಉತ್ಪಾದನೆ ಪ್ರಮಾಣ ಹೆಚ್ಚುತ್ತಿದ್ದು, ಗ್ರಾಹಕರಲ್ಲೂ ಸಾವಯವ ಉತ್ಪನ್ನಗಳ ಮಹತ್ವದ ಕುರಿತು ಜಾಗೃತಿ ಉಂಟಾಗುತ್ತಿದೆ. ಇದರಿಂದ ಸಾವಯವ ಉತ್ಪನ್ನಗಳ ಬೇಡಿಕೆ ಹೆಚ್ಚುತ್ತಿದೆ. ಆದರೆ ಸಾವಯವ ರೀತಿಯಿಂದಲೇ ಉತ್ಪನ್ನವಾಗಿರುವ ಉತ್ಪನ್ನಗಳೆಂದು ಖಾತರಿಪಡಿಸಿಕೊಳ್ಳುವ ಕುರಿತು ಅನುಮಾನ ಕೂಡ ವ್ಯಕ್ತವಾಗುತ್ತಿದೆ.

ಈ ಪರಿಸ್ಥಿತಿಯನ್ನು ಮನಗಂಡು, ಕರ್ನಾಟಕ ಸರ್ಕಾರವು ದೇಶದಲ್ಲಿಯೇ ಪ್ರಥಮ ಬಾರಿಗೆ ಸಾವಯವ ಕೃಷಿಕರ ಉತ್ಪನ್ನಗಳಿಗೆ ದೃಢೀಕರಣ, ಪ್ರಮಾಣೀಕರಣ ನೀಡುವ ಯೋಜನೆಯಾದ ‘ಸಾವಯವ ಕೃಷಿ ಅಳವಡಿಕೆ ಮತ್ತು ದೃಢೀಕರಣ ಕಾರ್ಯಕ್ರಮ’ವನ್ನು ಅನುಷ್ಠಾನಗೊಳಿಸಿದೆ.

ಈ ಕಾರ್ಯಕ್ರಮದಲ್ಲಿ ವೈಯಕ್ತಿಕವಾಗಿ ಹಾಗೂ ಗುಂಪಿನಲ್ಲಿ ನೊಂದಾಯಿಸಿಕೊAಡ ರೈತರಿಗೆ ಪರಿವರ್ತನಾ ಅವಧಿಯಾದ 03 ವರ್ಷಗಳಲ್ಲಿ ಸಾವಯವ ಉತ್ಪನ್ನಗಳನ್ನು ಉತ್ಪಾದಿಸಲು ಪ್ರೋತ್ಸಾಹಿಸಿ ಅವುಗಳಿಗೆ ದೃಢೀಕರಣ, ಪ್ರಮಾಣೀಕರಣ ನೀಡುವ ಉದ್ದೇಶ ಹೊಂದಲಾಗಿದೆ.

ಆಸಕ್ತ ಸಾವಯವ ರೈತರ ಗುಂಪುಗಳು ಹಾಗೂ ರೈತ ಬಾಂಧವರು ಸಮೀಪದ ರೈತ ಸಂಪರ್ಕ ಕೇಂದ್ರ, ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಲು ಕೋರಲಾಗಿದೆ. ಗುಂಪು ಹಾಗೂ ವೈಯಕ್ತಿಕ ಅರ್ಜಿಗಳನ್ನು ಸಲ್ಲಿಸಲು ಆ.16 ಕೊನೆಯ ದಿನಾಂಕವಾಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿಕರು ಗಮನಿಸಬೇಕಾದ ಅಂಶಗಳು

ಸಾವಯವ ಕೃಷಿ ಕ್ಷೇತ್ರಗಳನ್ನು ಭೂ ಪರಿವರ್ತನೆ ಮೇಲೆ ಪ್ರಮಾಣೀಕರಿಸಲಾಗುತ್ತದೆ. ಸಾಂದ್ರ ಬೇಸಾಯ ಪದ್ಧತಿಯಿಂದ ಸಾವಯವ ಬೇಸಾಯ ಪದ್ಧತಿಗೆ ಭೂಪರಿವರ್ತನೆಗೊಳ್ಳಲು ಬೇಕಾಗುವ ಸಮಯದ ಆಧಾರದಲ್ಲಿ ಎರಡು ವಿಧಗಳಾಗಿ ವಿಂಗಡಿಸಿದ್ದು, ಸಾಮಾನ್ಯವಾಗಿ ವಾರ್ಷಿಕ ಬೆಳೆಗಳಿಗೆ 2 ವರ್ಷ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಭೂಪರಿವರ್ತನೆ ಅವಧಿಯು 3 ವರ್ಷಳಾಗಿರುತ್ತದೆ. ಭಾಗಶಃ ಭೂಪರಿವರ್ತನೆಗೆ ಒಳಪಡುವ ಕೃಷಿ ಕ್ಷೇತ್ರಗಳು ಹಾಗೂ ಶೇಖರಣ ಸ್ಥಳಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತವೆ.

ಸಾವಯವ ಕೃಷಿಯಲ್ಲಿ ಉಪಯೋಗಿಸುವ ಬಿತ್ತನೆ ಬೀಜ, ಸಸ್ಯಾಭಿವೃದ್ಧಿ ಭಾಗಗಳು ಪ್ರಮಾಣಿತ ಸಾವಯವ ಮೂಲದ್ದಾಗಿರಬೇಕು. ಇಲ್ಲವಾದಲ್ಲಿ ರಸಾಯನಿಕ ಮುಕ್ತವಾಗಿ ಉಪಚರಿಸಲಾಗಿರುವ ಬಿತ್ತನೆ ಬೀಜ, ಸಸಿಗಳನ್ನು ಬಳಸಬಹುದು. ಕೃಷಿಕರು ಬೆಳೆಗಳಿಗೆ ಪ್ರಮಾಣಿತ ಸಾವಯವ ಮೂಲದ ಗೊಬ್ಬರಗಳು ಹಾಗೂ ಪೀಡೆನಾಶಕಗಳನ್ನೇ ಬಳಸಬೇಕು. (ಆದಷ್ಟು ಕೃಷಿ ಭೂಮಿಯಲ್ಲೇ ಉತ್ಪಾದಿಸಿ ಉಪಯೋಗಿಸಬೇಕು).

ಅಗತ್ಯ ದಾಖಲೆಗಳು

ಸಾವಯವ ಕೃಷಿಕರ ಕೃಷಿ ಭೂಮಿಯ ಅಕ್ಕಪಕ್ಕದಲ್ಲಿ ರಾಸಾಯನಿಕ ಬಳಸುವ ಕೃಷಿ ಭೂಮಿಗಳಿರುವುದು ಸಹಜ. ಇಂತಹ ಸಂದರ್ಭದಲ್ಲಿ ಪಕ್ಕದ ಕೃಷಿ ಭೂಮಿಯಯಲ್ಲಿನ ರೈತರು ರಾಸಾಯನಿಕ ಸಿಂಪರಣೆ ಮಾಡಿದಾಗ ಬರಬಹುದಾದ ಕೀಟ ನಾಶಕಗಳ ಹರಡುವಿಕೆ ತಡೆಯಲು ಸಾವಯವ ಕೃಷಿ ಕ್ಷೇತ್ರದಲ್ಲಿ ನೈಸರ್ಗಿಕ ತಡೆಗೋಡೆಯನ್ನು (ಬಫರ್ ಜ್ಹೋನ್) ಕಡ್ಡಾಯವಾಗಿ ನಿರ್ಮಿಸಬೇಕು. ಇದರೊಂದಿಗೆ ಕೃಷಿ ಭೂಮಿಯಲ್ಲಿ ಕೈಗೊಂಡ ಕೆಲಸಗಳ ದಿನಚರಿ, ವಾರ್ಷಿಕ ಸಾವಯವ ಕ್ಷೇತ್ರ ನಿರ್ವಹಣಾ ಯೋಜನೆ ವಿವರ, ಮತ್ತೊಬ್ಬರಿಂದ ಭೂಮಿ ಖರೀದಿಸಿದ್ದರೆ ಅದರ ದಾಖಲೆಗಳು, ಮಾರಾಟ ಮಾಡಿದ ದಾಖಲೆಗಳು, ಮಣ್ಣು ಮತ್ತು ನೀರಿನ ಪರೀಕ್ಷಾ ವರದಿಗಳು, ಸಾವಯವ ಕೃಷಿ  ಬಗ್ಗೆ ತರಬೇತಿ ಪಡೆದ ಮಾಹಿತಿ ಒದಗಿಸುವ ಪೂರಕ ದಾಖಲೆಗಳನ್ನು ರೈತರು ಹೊಂದಿರಬೇಕು.

ಸಾವಯವ ಬೆಳೆಗಳ ಕೊಯ್ಲು ಮಾಡುವ ಸಂದರ್ಭದಲ್ಲಿ ಯಂತ್ರಗಳನ್ನು ಬಳಸುವಂತಿಲ್ಲ ಎಂಬ ನಿಯಮವಿದೆ. ಒಂದೊಮ್ಮೆ ಯಂತ್ರಗಳನ್ನು ಬಳಸಿದರೂ, ಅವುಗಳು ರಾಸಾಯನಿಕ ಮತ್ತು ಮಾಲಿನ್ಯ ಮುಕ್ತವಾಗಿರಬೇಕು. ಅಂದರೆ, ಯಂತ್ರಗಳಿAದ ರಾಸಾಯನಿಕಗಳು ಮತ್ತು ಮಾಲಿನ್ಯಕಾರಕ ಅಂಶಗಳು ಬಿಡುಗಡೆ ಆಗಬಾರದು. ಇದರೊಂದಿಗೆ ಬೆಳೆಯ ಶೇಖರಣೆ ಮತ್ತು ಸಾಗಣೆ ಪ್ರಕ್ರಿಯೆಯಲ್ಲೂ ರೈತರು ಎಚ್ಚರ ವಹಿಸಬೇಕು. ಸಾವಯವ ಕೃಷಿ ಉತ್ಪನ್ನಗಳನ್ನು ರಾಸಾಯನಿಕ ಮುಕ್ತವಾಗಿ ಶೇಖರಣೆ ಮತ್ತು ಸಾಗಣೆ ಮಾಡಬೇಕು.

;

ಸಾವಯವ ಕೃಷಿ ಕ್ಷೇತ್ರಗಳಲ್ಲಿ ಒಂದೇ ವಿಧದ ಅಂದರೆ, ಏಕ ರೀತಿಯ ಬೆಳೆಗಳನ್ನು ಬೆಳೆಯಬಾರದು. ಬದಲಿಗೆ ಬಹು ಬೆಳೆ ಅಥವಾ ಮಿಶ್ರ ಬೆಳೆ ಪದ್ಧತಿ ಅನುಸರಿಸಬೇಕು. ರಾಸಾಯನಿಕವಾಗಿ ಉಪಚರಿಸಿದ ಬಿತ್ತನೆ ಬೀಜ, ಸಸಿಗಳು ಸೇರಿದಂತೆ ಯಾವುದೇ ರಾಸಾಯಯನಿಕ ಉತ್ಪನ್ನಗಳನ್ನು ಕೃಷಿಕರು ಬಳಸಬಾರದು. ಜೈವಿಕವಾಗಿ ಮಾರ್ಪಾಟುಗೊಂಡ ಬಿತ್ತನೆ ಬೀಜ ಮತ್ತು ಸಸ್ಯಾಭಿವೃದ್ಧಿ ಭಾಗಗಳನ್ನು ಉಪಯೋಗಿಸಬಾರದು. ಬಿತ್ತನೆ ಬೀಜಗಳನ್ನು ರೈತರು ತಮ್ಮ ಹಿಂದಿನ ಬೆಳೆಯಿಂದಲೇ ಶೇಖರಿಸಿ ಬಳಸಬೇಕು. ಸಾವಯವ ವಿಧಾನದ ಮುಲಕವೇ ಬೀಜೋಪಚಾರ ಮಾಡಬೇಕು.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.