ಬಯಲುಸೀಮೆಯ ಹಳ್ಳಿ ಜನರಿಗೆ ಪಾಪಸುಕಳ್ಳಿ ಗಿಡದ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಹಾಗಂತ ಈಗಿನ ಚಿಗುರು ಮೀಸೆ ಹುಡುಗರನ್ನು ಕೇಳಿದರೆ, ‘ಪಾಪಸುಕಳ್ಳಿಯಾ... ಹಾಗಂದರೇನು?’ ಎಂದು ಮರುಪ್ರಶ್ನೆ ಹಾಕುತ್ತಾರೆ. ಏಕೆಂದರೆ, ಬರಡು, ಖಾಲಿ ಜಾಗಗಳಲ್ಲಿ ತಂತಾನೆ ಹುಟ್ಟಿ, ನೀರು, ನೆರಳಿಲ್ಲದೆ ನಿರಾಧಾರವಾಗಿ ಬೆಳೆದು ನಿಲ್ಲುತ್ತಿದ್ದ ಕಾಕ್ಟಸ್ ಜಾತಿಯ ಈ ಗಿಡ ಜನರ ಕಣ್ಣೆದುರಿನಿಂದ ಮರೆಯಾಗಿ ಈಗಾಗಲೇ ಹತ್ತಾರು ವರ್ಷಗಳೇ ಕಳೆದಿವೆ.
ಮೈತುಂಬಾ ಮುಳ್ಳು, ಒಂದೊAದು ಪ್ರದೇಶದಲ್ಲೂ ಒಂದೊಂದು ಆಕಾರ, ರೂಪತಾಳಿ ಬೆಳೆಯುತ್ತಿದ್ದ ಪಾಪಸುಕಳ್ಳಿ ಗಿಡಗಳು ಅಷ್ಟೇನೂ ಜನಪ್ರಿಯವಲ್ಲ. ಅದರಲ್ಲೂ ಕಾಕ್ಟಸ್ ಜಾತಿಯಲ್ಲಿಯೇ ಅತಿ ಹೆಚ್ಚು ನಿರ್ಲಕ್ಷö್ಯಕ್ಕೆ ಒಳಗಾದ ಸಸ್ಯವೆಂದರೆ ಪಾಪಸುಕಳ್ಳಿ. ಇದರ ಮೈ ತುಂಬಾ ಮೊನಚಾಗಿರುವ ಮುಳ್ಳುಗಳು ಬೆಳೆಯುವ ಕಾರಣಕ್ಕೆ ಜನ ಇದರ ಹತ್ತಿರಕ್ಕೂ ಸುಳಿಯುವುದಿಲ್ಲ. ಅಲ್ಲದೆ ಇದನ್ನೊಂದು ಕಳೆ ಎಂದೇ ಪರಿಗಣಿಸಲಾಗಿದೆ. ಆದರೆ, ಪೋರ್ಚಗೀಸರು ಭಾರತಕ್ಕೆ ತಂದ ಅಮೇರಿಕಾ ಮೂಲದ ಈ ಕಳ್ಳಿ ಗಿಡ, ತನ್ನೊಳಗೆ ಹಲವು ವಿಶೇಷತೆಗಳನ್ನು ಅಡಕವಾಗಿಸಿಕೊಂಡಿದೆ.
ನಗರದ ಮನೆಗಳಲ್ಲಿ ಇದೊಂದು ಅಲಂಕಾರಿಕ ಸಸ್ಯ. ಇತರೆ ಕಳ್ಳಿ ಗಿಡಗಳಂAತೆ ಇದರಲ್ಲೂ ಕಾಂಡವೇ ಎಲೆಗಳಂತೆ ಬೆಳೆಯುತ್ತದೆ. ಕೆಲವು ಜಾತಿಗಳು ದುಂಡಗೆ ಚೆಂಡಿನಂತಿದ್ದರೆ, ಕೆಲವು ಉದ್ದನೆ ಕಟ್ಟಿಗೆಯಂತೆ ಬೆಳೆಯುತ್ತವೆ. ಭಾರತದಲ್ಲಿ, ಅದರಲ್ಲೂ ಬಯಲು ಸೀಮೆಯಲ್ಲಿ ಅಂಗೈನಷ್ಟು ಅಗಲವಾಗಿರುವ ಎಲೆ ರೂಪದ ಕಾಂಡಗಳನ್ನು ಹೊಂದಿರುವ ಪಾಪಸುಕಳ್ಳಿ ಗಿಡಗಳೇ ಹೆಚ್ಚು. ಎಲೆಗಳ ಸುತ್ತ ಹೂವು ಬಿಟ್ಟು, ಕಾಯಿ ಮಾಡುವ ಈ ಸಸ್ಯಗಳು ನಮ್ಮ ತ್ವಚೆಯ ಆರೋಗ್ಯ ವೃದ್ಧಿಗೂ ಮಹತ್ವದ ಕೊಡುಗೆ ನೀಡುತ್ತವೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ.
ಸ್ಕಿನ್ ಸ್ನೇಹಿ ಪಾಪಸು
ಆಫ್ರಿಕಾ, ಅಮೇರಿಕಾ ಹಾಗೂ ಇತರ ದೇಶಗಳಲ್ಲಿ ತ್ವಚೆಯ ಆರೈಕೆಗೆ ಪಾಪಸುಕಳ್ಳಿ ಗಿಡಗಳನ್ನು ಬಳಸಲಾಗುತ್ತದೆ. ಇದರ ಎಲೆಗಳಿಂದ ಸಿಗುವ ರಸವು ಮೊಡವೆಗಳನ್ನು ಹೋಗಲಾಡಿಸುವ ಗುಣ ಹೊಂದಿದೆ. ಅಷ್ಟೇ ಅಲ್ಲ, ಮೊಡವೆಗಳು ಮರೆಯಾದ ನಂತರ ಉಳಿದುಕೊಳ್ಳುವ ಕಲೆಗಳನ್ನು ಹೋಗಲಾಡಿಸಲು ಪಾಪಸುಕಳ್ಳಿ ಗಿಡದ ರಸವನ್ನು (ಲೋಳೆ) ಬಳಸುತ್ತಾರೆ. ತಿಂಗಳಲ್ಲಿ 15 ದಿನಗಳ ಕಾಲ ಬಳಸುವುದರಿಂದ ತ್ವಚೆಯ ಹೊಳಪು ಹೆಚ್ಚಿ, ಮುಖದಲ್ಲಿನ ಕಲೆಗಳು ಮಾಯವಾಗುತ್ತವೆ. ಆದರೆ, ಇಂತಹ ಸಸ್ಯಗಳ ಲೋಳೆ ಅಥವಾ ತಿರುಳನ್ನು ಬಳಸಿ ತ್ವಚೆಯ ಆರೈಕೆ ಮಾಡಿದಾಗ ಫಲಿತಾಂಶ ಸಿಗುವುದು ಸ್ವಲ್ಪ ತಡವಾಗುತ್ತದೆ. ಹೀಗಾಗಿ ಹೆಚ್ಚಿನವರು ಒಮ್ಮೆ ಅಥವಾ ಎರಡು ಬಾರಿ ಬಳಸಿ, ಇದು ಕೆಲಸ ಮಾಡುವುದಿಲ್ಲ ಎಂದು ಬಿಟ್ಟುಬಿಡುತ್ತಾರೆ. ಪ್ರತಿ ದಿನ ಒಂದು ಬಾರಿಯಂತೆ ಕನಿಷ್ಠ 10 ಬಾರಿಯಾದರೂ ಪಾಪಸುಕಳ್ಳಿಯ ಲೋಳೆಯನ್ನು ತ್ವಚೆಗೆ ಹಚ್ಚಿದರೆ ಫಲಿತಾಂಶ ಪಕ್ಕಾ ಅನ್ನುತ್ತಾರೆ ತಜ್ಞರು.
ಬೆಳೆಸುವುದು ಸುಲಭ
ಮನೆಯ ಕಾಂಪೌಂಡಿನ ಒಳಗೆ ಹೂವಿನ ಕುಂಡ ಇರಿಸಿ ಅದರೊಳಗೆ ಪಾಪಸುಕಳ್ಳಿ ಗಿಡಗಳನ್ನು ಸುಲಭವಾಗಿ ಬೆಳೆಸಬಹುದು. ಅತಿ ಉಷ್ಣವಲಯದಲ್ಲಿ ಹುಲುಸಾಗಿ ಬೆಳೆಯುವ ಈ ಗಿಡಗಳು ನಮ್ಮಲ್ಲಿನ ಹವಾಗುಣಕ್ಕೆ ಬಹು ಬೇಗ ಹೊಂದಿಕೊಳ್ಳುತ್ತವೆ. ಅಲ್ಲದೆ ಇವುಗಳಿಗೆ ಪ್ರತಿ ದಿನ ನೀರು ಹಾಕಬೇಕೆಂಬ ಚಿಂತೆ ಕೂಡ ಇರುವುದಿಲ್ಲ. ನೀವು ತಿಂಗಳುಗಟ್ಟಲೆ ಮನೆಯಲ್ಲಿ ಇಲ್ಲದಿದ್ದರೂ ಪಾಪಸುಕಳ್ಳಿ ಗಿಡಗಳು ನೀರಿಲ್ಲದೇ ಒಣಗುವುದಿಲ್ಲ. ಬೇಸಿಗೆಯಲ್ಲಿ ತುಸು ನಿಧಾನವಾಗಿ ಬೆಳೆಯುವ ಇದು, ಮಳೆಗಾಲದಲ್ಲಿ ಚುರುಕಾಗುತ್ತವೆ. ಪಾಪಸುಕಳ್ಳಿಯಲ್ಲಿ ಒಪೆನ್ಸಿಯಾ, ಸೆರಿಯಸ್ ಮತ್ತು ಮಮ್ಮಲೇರಿಯಾ ಎಂಬ ಮೂರು ಗುಂಪುಗಳಿದ್ದು, ಸುಮಾರು 1700ಕ್ಕೂ ಅಧಿಕ ತಳಿಗಳಿವೆ. ಸಾಮಾನ್ಯವಾಗಿ ಬಿಳಿ, ಹಳದಿ, ಕೆಂಪು ಮತ್ತು ನೇರಳೆ ಬಣ್ಣದ ಹೂವು, ಕಾಯಿಗಳನ್ನು ಈ ಗಿಡಗಳು ಬಿಡುತ್ತವೆ.
ಅಳಿವಿನಂಚಿಗೆ ಸರಿದ ಕಳ್ಳಿ
ನೀರು ನೆರಳಿಲ್ಲದೆ ಬೆಳೆವ ಮತ್ತು ಮೈ ತುಂಬಾ ಮುಳ್ಳು ಹೊಂದಿರುವ ಪಾಪಸುಕಳ್ಳಿ ಯಾರಿಗೂ ಬೇಡವಾದ ಗಿಡ. ಆದರೆ, ಇತ್ತೀಚೆಗೆ ಇದಕ್ಕೆ ಭಾರೀ ಬೇಡಿಕೆ ಬಂದಿದೆ. ಈ ಬೇಡಿಕೆಯ ಲಾಭ ಪಡೆದು ಹಣ ಮಾಡಿಕೊಳ್ಳಲು ಮುಂದಾಗಿರುವ ಖದೀಮರು, ಹಲವು ದೇಶಗಳಲ್ಲಿ ಪಾಪಸುಕಳ್ಳಿ ಗಿಡಗಳ ಕಳ್ಳಸಾಗಣೆ ಧಂದೆ ನಡೆಸುತ್ತಿದ್ದಾರೆ. ಪರಿಣಾಮ ಜಗತ್ತಿನಾದ್ಯಂತ ಇರುವ ಪಾಪಸುಕಳ್ಳಿ ತಳಿಗಳಲ್ಲಿ ಶೇ.30ರಷ್ಟು ಅವಸಾನದ ಅಂಚಿಗೆ ಸರಿದಿವೆ. ಭಾರತದಲ್ಲಿ ಬೆಳೆಯುವ ಪಾಪಸುಕಳ್ಳಿ ತಳಿಗಳೂ ಇದರಲ್ಲಿ ಸೇರಿವೆ.
ಕಳ್ಳ ಸಾಗಣೆಗೆ ಬಲಿಯಾದ ಕಳ್ಳಿಗಿಡ!
ಯುರೋಪ್, ಅಮೆರಿಕ, ಜಪಾನ್‌ನಲ್ಲಿರುವ ಶ್ರೀಮಂತರ ಕಳ್ಳಗಣ್ಣು ಈಗ ಈ ಪಾಪಸುಕಳ್ಳಿ ಗಿಡಗಳ ಮೇಲೆ ಬಿದ್ದಿದೆ. ವಿಚಿತ್ರ ಆಕಾರದಲ್ಲಿ ಬೆಳೆಯುವ ಕಳ್ಳಿ ಗಿಡಗಳನ್ನು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಲು ಅವರೆಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ದಕ್ಷಿಣ ಅಮೆರಿಕದಲ್ಲಿರುವ ಚಿಲಿ, ಈ ಕಳ್ಳ ಸಾಗಾಣಿಕೆಗೆ ಬಲಿಯಾದ ಮೊದಲ ದೇಶವಾಗಿದೆ. ಮರುಭೂಮಿಯಿಂದ ಕೂಡಿರುವ ಈ ದೇಶದಲ್ಲಿ ಸುಮಾರು 500ಕ್ಕೂ ಹೆಚ್ಚು ಜಾತಿಯ ಪಾಪಸುಕಳ್ಳಿಗಳಿದ್ದು, ಇವುಗಳನ್ನು ಕಳ್ಳದಾರಿಯ ಮುಲಕ ಸಾಗಿಸಲಾಗುತ್ತದೆ. ಭಾರತದಲ್ಲೂ ಇದೇ ಕಳ್ಳಸಾಗಣೆ ಕಾರಣದಿಂದಲೇ ಪಾಪಸುಕಳ್ಳಿ ಗಿಡಗಳು ಮರೆಯಾಗಿರಬಹುದು ಎಂಬ ಅನುಮಾನವಿದೆ. ಆದರೆ, ಈ ರೀತಿ ಸಾಗಣೆ ಮಾಡಿದ ಪಾಪಸುಕಳ್ಳಿ ಗಿಡಗಳನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬುದು ಮಾತ್ರ ಇನ್ನೂ ನಿಗೂಢ.
Share your comments