ಕೃಷಿ ಜಾಗರಣದ ಅಗ್ರಿ ನ್ಯೂಸ್ನ ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.
ಸಾವಿನ ನಂತರವೂ ಆತ್ಮೀಯರೊಂದಿಗೆ ಗೊಬ್ಬರ ರೂಪದಲ್ಲೂಳಿವ ಪರಿಕಲ್ಪನೆ!
ಅಸ್ತಿತ್ವ ಕಳೆದುಕೊಳ್ಳಲಿದೆ ರಾಜ್ಯದ 3,457 ಸರ್ಕಾರಿ ಶಾಲೆಗಳು!
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೋಟಾ
ನಿಯಮ ಉಲ್ಲಂಘನೆ; ದಂಡ ಪಾವತಿಯಲ್ಲಿ ಡಿಸ್ಕೌಂಟ್
ಒಂದೇ ದಿನ ಸಂಗ್ರಹವಾಯ್ತು 5.61 ಕೋಟಿ ರೂ.!
ರಾಜ್ಯದಲ್ಲಿ ಇನ್ನೂ ಎರಡು ದಿನ ಚಳಿ ವಾತಾವರಣ
ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ: ಕ್ರಿಯಾಯೋಜನೆ ಸಲ್ಲಿಸಲು ಸಿ.ಎಂ ಸೂಚನೆ
ಏರೋ ಇಂಡಿಯಾ ಶೋ: ಕರ್ನಾಟಕದ ತೇಜಸ್ ಆಕರ್ಷಣೆಯ ಕೇಂದ್ರ ಬಿಂದು
ಅಮೂಲ್ ಹಾಲು: ಪ್ರತಿ ಲೀಟರ್ 3 ರೂ. ಹೆಚ್ಚಳ
ವಿಶ್ವದ ಟಾಪ್ 20 ಶ್ರೀಮಂತರ ಪಟ್ಟಿಯಿಂದ ಉದ್ಯಮಿ ಗೌತಮ್ ಅದಾನಿ ಔಟ್!
ರಾಜ್ಯದಲ್ಲಿ ಕೆಲವು ನಿರ್ದಿಷ್ಟ ಶಾಲಾ- ಕಾಲೇಜುಗಳನ್ನು ವಿಲೀನ ಮಾಡುವಂತೆ ಆಡಳಿತ ಸುಧಾರಣಾ ಆಯೋಗ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸುಗಳನ್ನು ಅನುಷ್ಠಾನ ಮಾಡಿದರೆ, ಇನ್ಮುಂದೆ 6,796 ಸರ್ಕಾರಿ ಶಾಲೆಗಳು ವಿಲೀನವಾಗಲಿವೆ.
3,457 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಸಮೀಪದ ಶಾಲೆಗಳಲ್ಲಿ ವಿಲೀನ ಹಾಗೂ 3,339 ಶಾಲೆ– ಕಾಲೇಜುಗಳನ್ನು ವಿಲೀನಗೊಳಿಸಿ ಕ್ಲಸ್ಟರ್ಪ್ರೌಢಶಾಲೆ ಅಥವಾ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತನೆ ಮಾಡಬೇಕು ಎಂದು ಸರ್ಕಾರಕ್ಕೆ ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿದೆ.
ಇದನ್ನು ಅನುಷ್ಠಾನ ಮಾಡಿದರೆ, ಒಟ್ಟು 6,796 ಶಾಲೆ– ಕಾಲೇಜುಗಳು ವಿಲೀನಗೊಳ್ಳಲಿವೆ. ಇನ್ನು 3,457 ಶಾಲೆಗಳನ್ನು ವಿಲೀನಗೊಳಿಸುವ ಅಂಶವೂ ಈ ಶಿಫಾರಸ್ಸಿನಲ್ಲಿ ಸೇರಿದ್ದು, ಇದರಿಂದ 3 ಸಾವಿರಕ್ಕೂ ಹೆಚ್ಚು ಶಾಲೆಗಳು ಅಸ್ತಿತ್ವ ಕಳೆದುಕೊಳ್ಳಲಿವೆ.
Kisan Credit Card: ಕಿಸಾನ್ ಕ್ರೆಡಿಟ್ ಕಾರ್ಡ್ ಎಂದರೇನು, ಯಾರೆಲ್ಲ ಇದಕ್ಕೆ ಅರ್ಹರು ಇಲ್ಲಿದೆ ಸಂಪೂರ್ಣ ಮಾಹಿತಿ!
------------------
ರಾಜ್ಯದಲ್ಲಿ ಆಡಳಿತ ಸುಧಾರಣೆಗೆ ಆದ್ಯತೆ ನೀಡುವ ಉದ್ದೇಶದಿಂದ ರಚಿಸಲಾಗಿರುವ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯ ಸಮಿತಿಯನ್ನು ರಚಿಸಿದ್ದು, ನಾಲ್ಕು ಮತ್ತು ಐದನೇ ವರದಿಯನ್ನು ವಿಜಯಭಾಸ್ಕರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶುಕ್ರವಾರ ಸಲ್ಲಿಸಿದರು.
ಇದರಲ್ಲಿ ಶಾಲೆಗಳ ವಿಲೀನ ಪ್ರಕ್ರಿಯೆಯೊಂದಿಗೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕೋಟಾ ನೀಡುವುದು ಸೇರಿದೆ.
ಗ್ರಾಮೀಣ ಕೋಟಾದಲ್ಲಿ ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸಂಖ್ಯೆ ಶೇ 3.45ರಷ್ಟಿದೆ.
ಗ್ರಾಮೀಣ ಕೋಟಾವನ್ನು ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿ ಕೋಟಾವಾಗಿ ಪರಿವರ್ತಿಸಬೇಕು ಅಥವಾ ಶೇ 7.5ರಷ್ಟು ಸೀಟುಗಳನ್ನು ಅವರಿಗೆ ಮೀಸಲಿಡಬೇಕು. ಗ್ರಾಮೀಣ ವ್ಯಾಸಂಗ, ಕನ್ನಡ ಮಾಧ್ಯಮ, ಹೈದರಾಬಾದ್ ಕರ್ನಾಟಕ ಪ್ರಮಾಣ ಪತ್ರಗಳ ಸಿಂಧುತ್ವವನ್ನು ಜೀವಿತಾವಧಿಗೆ ವಿಸ್ತರಿಸಬೇಕು ಎಂದು ಶಿಫಾರಸು ಮಾಡಲಾಗಿದೆ.
------------------
ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟಲು ಬಾಕಿ ಇರುವವರು ಮತ್ತು ಪ್ರಕರಣ ಕೋರ್ಟ್ನಲ್ಲಿ ಇದ್ದರೆ, ಅಂಥವರಿಗೆ ದಂಡ ಪಾವತಿಯಲ್ಲಿ ಶೇ.50ರಷ್ಟು ವಿನಾಯಿತಿಯನ್ನು ನೀಡಿ ರಾಜ್ಯ ಸಾರಿಗೆ ಇಲಾಖೆ ಆದೇಶ ಮಾಡಿದ್ದು, ಇದಕ್ಕೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶುಕ್ರವಾರ ಒಂದೇ ದಿನ ಬೆಂಗಳೂರಿನಲ್ಲಿ ಬರೋಬ್ಬರಿ 5.61 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. ಅಲ್ಲದೇ ಈ ಮೂಲಕ 2 ಲಕ್ಷ ಪ್ರಕರಣಗಳು ಇತ್ಯಾರ್ಥವಾದಂತಾಗಿದೆ. ಫೆ.11ರಂದು ಲೋಕ ಅದಾಲತ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಂಡ ಪಾವತಿಯಲ್ಲಿ ರಿಯಾಯಿತಿ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ. ವೀರಪ್ಪ ಅವರು ಮನವಿ ಮಾಡಿದ್ದರು.
ಅದರಂತೆ ಶೇ.50ರಷ್ಟು ರಿಯಾಯಿತಿ ನೀಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಶೇ.50ರಷ್ಟು ದಂಡ ವಿನಾಯಿತಿ ಫೆ.11ರ ವರೆಗೆ ಇರಲಿದೆ. ಫೆ.11ರ ನಂತರ ಸಂಪೂರ್ಣ ದಂಡ ಪಾವತಿ ಮಾಡಬೇಕಾಗುತ್ತದೆ.
------------------
ಬಜೆಟ್ 2023: ಮಹಿಳೆಯರಿಗೆ ಉಳಿತಾಯ ಖಾತೆಯ ಮೂಲಕ 7.5% ಬಡ್ಡಿ!
------------------
ರಾಜ್ಯದಲ್ಲಿ ಇನ್ನೂ ಎರಡು ದಿನ ಮೋಡ ಕವಿದ ವಾತಾವರಣ ಇರಲಿದ್ದು, ಬೆಂಗಳೂರಿನಲ್ಲಿ ಚಳಿ ವಾತಾವರಣ ಇರಲಿದೆ. ಶ್ರೀಲಂಕಾದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕೇರಳ ಹಾಗೂ ತಮಿಳುನಾಡಿನ ವಿವಿಧೆಡೆ ಭಾರೀ ಮಳೆ ಆಗಿದೆ.
ಹೀಗಾಗಿ, ರಾಜ್ಯದ ವಿವಿಧೆಡೆ ಕನಿಷ್ಠ ತಾಪಮಾನ ವರದಿ ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಶನಿವಾರ ಕನಿಷ್ಠ ಉಷ್ಣಾಂಶವು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 3ರಿಂದ 4 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
------------------
ಮಾರ್ಚ್ 31ರೊಳಗೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂಪಾಯಿ ಕ್ರಿಯಾಯೋಜನೆ ಸಲ್ಲಿಸಲು ಮುಖಮಂತ್ರಿ ಬಸವರಾಜ್ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಡಿಭಾಗದಲ್ಲಿ ಶಿಕ್ಷಣ, ಕೈಗಾರಿಕೆ, ಮೂಲಭೂತ ಸೌಕರ್ಯ, ಕನ್ನಡ ಭಾಷಾ ಅಭಿವೃದ್ಧಿಗಳ ಬಗ್ಗೆ ಕೆಲಸ ಮಾಡುವ ಅವಶ್ಯಕತೆ ಇದೆ. ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಇದೇ ವರ್ಷದ ಮಾರ್ಚ್ 31 ರೊಳಗೆ 100 ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದು.
ಈ ಅನುದಾನಕ್ಕೆ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
------------------
ಬೆಂಗಳೂರಿನ ಯಲಹಂಕದ ಏರ್ ಫೋರ್ಸ್ ಸ್ಟೇಷನ್ನಲ್ಲಿ ಫೆಬ್ರವರಿ 13 ರಂದು ಏರೋ ಇಂಡಿಯಾ ಶೋ ಆರಂಭವಾಗಲಿದ್ದು, ಐದು ದಿನಗಳ ಪ್ರದರ್ಶನ ಇರಲಿದೆ. ಈ ಬಾರಿಯೂ ಕರ್ನಾಟಕದ ಲಘು ಯುದ್ಧವಿಮಾನ ತೇಜಸ್ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಏರೋ ಇಂಡಿಯಾದ 14ನೇ ಆವೃತ್ತಿ ಇದಾಗಿದ್ದು, ಹಲವು ಬದಲಾವಣೆಗಳನ್ನು ಹೊಂದಿರುತ್ತದೆ. ಏರೋ ಇಂಡಿಯಾ ಶೋ ಹೊರಗಿನ ದೇಶಗಳ ವೈಮಾನಿಕ ಪ್ರದರ್ಶನಗಳಿಗೂ ಪ್ರಸಿದ್ಧಿಯಾಗಿದ್ದು, ಈ ಬಾರಿ ಭಾರತ ನಿರ್ಮಿತ ರಕ್ಷಣಾ ಉತ್ಪನ್ನಗಳಿಗೆ ರಫ್ತು ಮಾರುಕಟ್ಟೆಯನ್ನು ಒದಗಿಸಲಿದೆ. ಏರೋ ಇಂಡಿಯಾ ಶೋದ ಧ್ಯೇಯ ಒಂದು ಬಿಲಿಯನ್ ಅವಕಾಶಗಳಿಗೆ ದಾರಿ ಕಂಡುಕೊಳ್ಳುವಿಕೆ ಆಗಿದೆ.
------------------
ಇತ್ತೀಚಿಗಷ್ಟೇ ಹಲವು ಹಾಲಿನ ಕಂಪನಿಗಳು ಹಾಲಿನ ದರ ಹೆಚ್ಚಿಸಿದ್ದವು. ಇದೀಗ ಅಮೂಲ್ ಮತ್ತೆ ಹಾಲಿನ ದರವನ್ನು ಹೆಚ್ಚಿಸಿದೆ. ಅಮೂಲ್ ಪ್ರತಿ ಲೀಟರ್ ಹಾಲಿನ ಬೆಲೆಯನ್ನು 3 ರೂಪಾಯಿ ಹೆಚ್ಚಳ ಮಾಡಿದೆ. ಈ ಹೆಚ್ಚಳದ ನಂತರ ಒಂದು ಲೀಟರ್ ಅಮುಲ್ ಗೋಲ್ಡ್ ಬೆಲೆ 63 ರೂಪಾಯಿಯಿಂದ 66 ರೂಪಾಯಿಗೆ ಏರಿಕೆಯಾಗಲಿದೆ.
1 ಲೀಟರ್ ಅಮುಲ್ ತಾಜಾ ಹಾಲಿನ ಬೆಲೆ ₹54 ರೂಪಾಯಿ ಆಗಿತ್ತು. ಇನ್ಮುಂದೆ ಅಮುಲ್ ಹಸುವಿನ ಹಾಲಿಗೆ 56 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಅಮುಲ್ ಎ2 ಎಮ್ಮೆಯ ಹಾಲಿನ ದರ ಲೀಟರ್ಗೆ 70 ರೂಪಾಯಿಗೆ ಏರಿಕೆಯಾಗಿದೆ ಎಂದು ಕಂಪನಿ ಹೇಳಿದೆ. ಈ ವರ್ಷ ಮೊದಲ ಬಾರಿಗೆ ಅಮುಲ್ ಹಾಲಿನ ದರವನ್ನು ಹೆಚ್ಚಿಸಿದೆ.
------------------
ವಿಶ್ವದ ಟಾಪ್ 20 ಶ್ರೀಮಂತರ ಪಟ್ಟಿಯಿಂದ ಉದ್ಯಮಿ ಗೌತಮ್ ಅದಾನಿ ಅವರು ಶುಕ್ರವಾರ ಹೊರಬಿದ್ದಿದ್ದಾರೆ. ಫೋರ್ಬ್ಸ್ ಬಿಡುಗಡೆ ಮಾಡಿರುವ ವಿಶ್ವದ ರಿಯಲ್-ಟೈಮ್ ಬಿಲಿನಿಯರ್ಗಳ ಪಟ್ಟಿಯಲ್ಲಿ ಗೌತಮ್ ಅದಾನಿ ಅವರು 22ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್ಬರ್ಗ್ ರಿಸರ್ಚ್ ವರದಿಯ ಬಳಿಕ ಅದಾನಿ ಕಂಪನಿಯ ಷೇರುಗಳ ಬೆಲೆಯಲ್ಲಿ ಭಾರೀ ಕುಸಿತ ಕಂಡುಬಂದಿದ್ದು, ಸಂಚಲನ ಮೂಡಿಸಿದೆ.
ಇದೀಗ ಗೌತಮ್ ಅದಾನಿ ಅವರ ಸಂಪತ್ತು ಶೇಕಡಾ 21.77 ರಷ್ಟು ಕುಸಿದಿದೆ. ಕಳೆದ ಎರಡು ವಾರಗಳಿಂದ ಗೌತಮ್ ಅದಾನಿ ಕಂಪನಿಗಳ ಷೇರುಗಳಲ್ಲಿ ಭಾರಿ ಕುಸಿತ ದಾಖಲಾಗುತ್ತಿದೆ. ವಿಶ್ವದ ಮೊದಲ 500 ಶ್ರೀಮಂತ ಪುರುಷರು ಮತ್ತು ಮಹಿಳೆಯರ ಪಟ್ಟಿಯಲ್ಲಿ, ಅದಾನಿ 2023ನೇ ವರ್ಷದಲ್ಲಿ ಅತಿದೊಡ್ಡ ಕುಸಿತ ಕಂಡಿದ್ದಾರೆ.
Share your comments