ಕೊರೋನಾ ಕಾಟ ತಪ್ಪಿತು ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ದೇಶದ ಜನತೆಗೆ ಮತ್ತೊಂದು ಆಘಾತ ಸುದ್ದಿ ಬರಸಿಡಿಲಿನಂತೆ ಬಡಿದಿದೆ. ಕೊರೋನಾನಂತರ ಈಗ ಹಕ್ಕಿಜ್ವರದ ಭೀತಿ ದೇಶಕ್ಕೆ ಎದುರಾಗಿದೆ.
ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಗುಜರಾತಿನ ಒಟ್ಟು ಹನ್ನೆರಡು ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದು ದೃಢಪಟ್ಟಿದೆ ಎಂದು ಕೇಂದ್ರ ಸರಕಾರ ಶುಕ್ರವಾರ ತಿಳಿಸಿದೆ.
ದೇಶದಲ್ಲಿ ಪಕ್ಷಿ ಜ್ವರದ ಸ್ಥಿತಿಗತಿಯ ಕುರಿತಂತೆ ನಡೆದ ಸಭೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.ಸೋಂಕು ಹರಡದಂತೆ ತುರ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಈ ರಾಜ್ಯಗಳಿಗೆ ಸೂಚಿಸಿದೆ. ಅಲ್ಲದೇ ಈ ಆರೂ ರಾಜ್ಯಗಳಿಗೆ ತಜ್ಞರ ತಂಡಗಳನ್ನು ಕಳುಹಿಸಿಕೊಟ್ಟಿದೆ.
ರೋಗ ಕಂಡು ಬಂದಿರುವ ಕೇರಳದ ಜಿಲ್ಲೆಗಳಲ್ಲಿ ಕೋಳಿಗಳ ಸಾಮೂಹಿಕ ಹತ್ಯೆ ಕಾರ್ಯಾಚರಣೆ ಮಾಡಲಾಗುತ್ತಿದೆ. ರೋಗ ಹರಡಿರುವ ಪ್ರದೇಶಗಳ ಜಲ ಮೂಲಗಳು, ಜೀವಂತ ಕೋಳಿ, ಪಕ್ಷಿಗಳ ಮಾರುಕಟ್ಟೆ, ಮೃಗಾಲಯ, ಕುಕ್ಕಟ ಸಾಕಾಣಿಕೆ ಕೇಂದ್ರಗಳಲ್ಲಿ ಕಣ್ಗಾವಲು ಹೆಚ್ಚಿಸುವಂತೆ ಸೂಚಿಸಲಾಗಿದೆ. ಸಾಮೂಹಿಕ ನಾಶ ಕಾರ್ಯಾಚರಣೆಗೆ ಅಗತ್ಯವಾಗಿರುವ ಸುರಕ್ಷಿತ ಸಾಧನಗಳಾದ ಪಿಪಿಇ ಕಿಟ್ ಗಳು, ಮತ್ತಿತರ ಅಗತ್ಯ ಪರಿಕರಗಳು ಲಭ್ಯವಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳುವಂತೆಯೂ ಸೂಚಿಸಲಾಗಿದೆ.
ಇತ್ತ ಹರಿಯಾಣ ಸರಕಾರವು, 1.60 ಲಕ್ಷ ಕೋಳಿಗಳನ್ನು ಸಾಯಿಸಲು ನಿರ್ಧಾರ ಕೈಗೊಂಡಿದೆ. ಈ ಮಧ್ಯೆ ದಿಲ್ಲಿಯ ಮಯೂರ್ ವಿಹಾರ ಪ್ರದೇಶದಲ್ಲಿ 20ಕ್ಕೂ ಹೆಚ್ಚು ಕಾಗೆಗಳು ಅನುಮಾನಾಸ್ಪದ ರೀತಿಯಲ್ಲಿ ಸತ್ತುಬಿದ್ದಿದ್ದು ಹಕ್ಕಿ ಜ್ವರದ ಭೀತಿ ಹುಟ್ಟಿಸಿದೆ.
ರೈತರು ಅಥವಾ ಕೋಳಿ ಸಾಕಾಣಿಕೆದಾರರು ಮತ್ತು ಸಾರ್ವಜನಿಕರಲ್ಲಿ (ಮೊಟ್ಟೆ ಮತ್ತು ಕೋಳಿ ಗ್ರಾಹಕರು) ಈ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Share your comments