ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕಲಬುರಗಿ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ “ಗ್ರಾಮ ಕಾಯಕ ಮಿತ್ರ” ಹುದ್ದೆಗಳ ಭರ್ತಿ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಮಾತ್ರ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಶ್ ಸಾಸಿ ಅವರು ತಿಳಿಸಿದ್ದಾರೆ.
ಮಹಿಳಾ ಅಭ್ಯರ್ಥಿಗಳ ಕನಿಷ್ಠ ವಿದ್ಯಾರ್ಹತೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯು ದಿನಾಂಕ: 1.1.2021ಕ್ಕೆ ಅನ್ವಯಿಸುವಂತೆ ತಾವು ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕ್ರಿಯಾಶೀಲ ಜಾಬಕಾರ್ಡ್ ಹೊಂದಿರಬೇಕು. ವಯೋಮಿತಿ 1-1-2021 ಕ್ಕೆ ಅನ್ವಯಿಸುವಂತೆ 45 ವರ್ಷ ಮೀರಿರಬಾರದು. ಚೆನ್ನಾಗಿ ಓದು ಮತ್ತು ಬರಹ ಬಲ್ಲವರಾಗಿರಬೇಕು. ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಆಯಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಯು ಕಳೆದ ಮೂರು ವರ್ಷಗಳಲ್ಲಿ (2018-19, 2019-20 ಮತ್ತು 2020-21) ಕನಿಷ್ಠ ಎರಡು ವರ್ಷಗಳು ಈ ಯೋಜನೆಯಡಿ ಅಕುಶಲ ಕೂಲಿಕಾರರಾಗಿ ಕೆಲಸ ನಿರ್ವಹಿಸಿರಬೇಕು.
2020-21ನೇ ಸಾಲಿನಲ್ಲಿ 20 ಸಾವಿರ ಮಾನವ ದಿನಗಳ ಸೃಜನೆ ಮಾಡಿದ ಗ್ರಾಮ ಪಂಚಾಯತಗಳಲ್ಲಿ ಮಾತ್ರ “ಗ್ರಾಮ ಕಾಯಕ ಮಿತ್ರ” ರನ್ನು ನೇಮಕ ಮಾಡಲಾಗುತ್ತದೆ. ಗ್ರಾಮ ಕಾಯಕ ಮಿತ್ರರಿಗೆ ಮಾಸಿಕ 6,000 ರೂ.ಗಳ ಗೌರವಧನ ನೀಡಲಾಗುತ್ತದೆ. ಅವರ ಕಾರ್ಯನಿರ್ವಹಣೆಯನ್ನು ಆಧರಿಸಿ 5,000 ರೂ.ಗಳ ವರೆಗೆ ಪ್ರೋತ್ಸಾಹ ಧನ ಪಡೆಯಬಹುದಾಗಿದೆ. ಅಭ್ಯರ್ಥಿಯು ಪರಿಣಾಮಕಾರಿ ಸಂವಹನ ಕೌಶಲ್ಯ, ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಸ್ಪಂದಿಸುವ ಗುಣಲಕ್ಷಣಗಳನ್ನು ಹೊಂದಿರಬೇಕು.
ಗ್ರಾಮ ಕಾಯಕ ಮಿತ್ರರನ್ನು ಒಂದು ವರ್ಷದ ಅವಧಿಗೆ ಆಯ್ಕೆ ಮಾಡಲಾಗುವುದು. ಒಂದು ವರ್ಷದ ನಂತರ ಗ್ರಾಮ ಪಂಚಾಯಿತಿಗಳ ಮಾನವ ದಿನಗಳ ಸೃಜನೆ, ದಾಖಲಾತಿಗಳ ನಿರ್ವಹಣೆ ಸೇರಿದಂತೆ ನಿಗದಿಪಡಿಸಲಾದ ಜವಾಬ್ದಾರಿಗಳಿಗೆ ಅನುಗುಣವಾಗಿ ಅವರ ಕಾರ್ಯನಿರ್ವಹಣೆಯನ್ನು ಮೌಲ್ಯಮಾಪನ ಮಾಡಿ ಅವರನ್ನು ಮುಂದುವರಿಸುವ ಅಥವಾ ತೆಗೆದು ಹಾಕುವ ಬಗ್ಗೆ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯು ನಿರ್ಧರಿಸುತ್ತದೆ. ಅರ್ಹ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಅರ್ಜಿ ಸ್ವೀಕರಿಸುವ ಕೊನೆಯ ದಿನ 2021ರ ಏಪ್ರಿಲ್ 12 ಇರುತ್ತದೆ.
ಅಭ್ಯರ್ಥಿಗಳು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತಮ್ಮ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
Share your comments