ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಸಬೇಕು.
ಇದನ್ನು ಅನುಷ್ಠಾನ ನೀಡಲು ಫೆಬ್ರವರಿ 28ರವರೆಗೆ ಅವಕಾಶ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಪಾಲಿಕೆ ವ್ಯಾಪ್ತಿಯ ಅಂಗಡಿ, ಹೋಟೆಲ್, ಮಾಲ್ ಸೇರಿದಂತೆ ಇನ್ನಿತರ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವ ಸಂಬಂಧ ಎಲ್ಲಾ ವಲಯಗಳ ಆಯುಕ್ತರ ಜೊತೆ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇಂದಿನಿಂದ ಯುವನಿಧಿ
ರಾಜ್ಯ ಸರ್ಕಾರದ ಬಹುನಿರೀಕ್ಷಿತ ಗ್ಯಾರಂಟಿಗಳಲ್ಲಿ 4 ಗ್ಯಾರಂಟಿಗಳಿ ಈಗಾಗಲೇ ಜಾರಿಗೆ ಬಂದಿವೆ. ಇದೀಗ ಐದನೇ ಗ್ಯಾರಂಟಿಯಾದ "ಯುವನಿಧಿ' ಇಂದಿನಿಂದ ನೋಂದಣಿ ಕೂಡ ಆರಂಭವಾಗಲಿದೆ. ಸ್ವಾಮಿ ವಿವೇಕಾನಂದ ಜಯಂತಿಯ ದಿನವಾದ ಜನವರಿ 12 ರಂದು ಶಿವಮೊಗ್ಗದಲ್ಲಿ ಯುವನಿಧಿ ಗ್ಯಾರಂಟಿಗೆ ಚಾಲನೆ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದ್ದು ಅಂದೆ ಫಲಾನುಭವಿಗಳ ಖಾತೆಗ ಹಣ ವರ್ಗಾವಣೆ ಆಗಲಿದೆ.
ಕೃಷಿಭಾಗ್ಯ ಯೋಜನೆಯಡಿ ಅರ್ಜಿ ಆಹ್ವಾನ
2023-24ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಗೆ ರೈತ ಭಾಂದವರು ಡಿಸೆಂಬರ್ 31ರೊಳಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಜಿಯ ನಮೂನೆಗಳು ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುತ್ತವೆ. ರೈತರು ಕನಿಷ್ಟ 1 ಎಕರೆ ಜಮೀನನ್ನು ಹೊಂದಿರಬೇಕು. ಸದರಿ ಯೋಜನೆಯು ಒಣ ವಲಯ ಕ್ಷೇತ್ರದ ರೈತರಿಗೆ ಮಾತ್ರ ಸಂಬಂಧಪಟ್ಟಿರುತ್ತದೆ. ಗುರಿಗಿಂತ ಹೆಚ್ಚು ಅರ್ಜಿಗಳು ಸ್ವೀಕೃತವಾದರೆ ಲಾಟರಿ ಎತ್ತುವ ಮೂಲಕ ಫಲಾನುಭವಿಗಳನ್ನು ಗುರಿಗಳನ್ವಯ ಆಯ್ಕೆಮಾಡಲಾಗುವುದು. ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಮಳೆ ನೀರನ್ನು ಸಂಗ್ರಹಿಸಿ ಬೆಳೆಗಳ ಸಂದಿಗ್ದ ಹಂತದಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಕೃಷಿ ಭಾಗ್ಯ ಯೋಜನೆಯ ಉದ್ದೇಶವಾಗಿದ್ದು ಎಂದು ಅವರು ತಿಳಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಶಾಲೆಗಳಿಗೆ ರಜೆ
ತೀವ್ರ ಚಳಯಿಂದ ತತ್ತರಿಸಿರುವ ಜಾರ್ಖಂಡನಲ್ಲಿ ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ 4 ದಿನ ರಜೆ ಘೋಷಿಸಿದೆ. ಈ ಕುರಿತು ಶಾಲೆಗಳಿಗೆ ಸುತ್ತೋಲೆ ಹೊರಡಿಸಿದ್ದು, ಡಿಸೆಂಬರ್ 26 ರಿಂದ 31, ರವರೆಗೆ ಜಾರ್ಖಂಡ್‌ನಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಜಾರ್ಖಂಡ್‌ನಲ್ಲಿ ಕನಿಷ್ಠ ತಾಪಮಾನವು 7 ಡಿಗ್ರಿಗಳಿಂದ 11 ಡಿಗ್ರಿ ಸೆಲ್ಸಿಯಸ್ ನಡುವೆ ದಾಖಲಾಗಿದೆ. ಜಾರ್ಖಂಡ್‌ನ ಗರ್ಹ್ವಾದಲ್ಲಿ 6.6 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ತಾಪಮಾನವನ್ನು ದಾಖಲಾಗಿದೆ.
ರಾಜ್ಯದಲ್ಲಿ ಮಳೆ
ರಾಜ್ಯದಲ್ಲಿ ಈ ಬಾರಿ ಸಕಾಲಕ್ಕೆ ಮಳೆಯಾಗದ ಕಾರಣ ಬರಗಾಲದ ಪರಿಸ್ಥಿತಿ ಉಂಟಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ಕೆಲವು ಭಾಗಗಳಲ್ಲಿ ಚಳಿಯ ವಾತಾವರಣ ಅಧಿಕವಾಗಿದ್ದು, ಹಿಂಗಾರು ಮಳೆ ಮೆಲ್ಲನೆ ಚುರುಕುಗೊಂಡಿದೆ.ಕೆಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರೆದರೆ ಇನ್ನು ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆಗಳಿವೆ. ಹವಾಮಾನ ಇಲಾಖೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಡಿಸೆಂಬರ್ ಅಂತ್ಯದಿಂದ 2 ದಿನಗಳ ಕಾಲ ಮಳೆಯಾಗಲಿದೆ ಎಂದು ಅಂದಾಜಿಸಿದೆ.
Share your comments