1. ಸುದ್ದಿಗಳು

ಕಲಬುರಗಿ ಸೇರಿದಂತೆ ರಾಜ್ಯದ 21 ಡಿ.ಸಿ.ಸಿ. ಬ್ಯಾಂಕ್ ಗಳ ಪುನಶ್ಚೇತನಕ್ಕೆ ಸರ್ಕಾರ ಬದ್ಧವಿದೆ- ಎಸ್.ಟಿ.ಸೋಮಶೇಖರ

DCC Bank

ವಿವಿಧ ಕಾರಣದಿಂದ ನಿಷ್ಕ್ರೀಯ ಹಂತದಲ್ಲಿದ್ದ ಕಲಬುರಗಿ ಡಿ.ಸಿ.ಸಿ ಬ್ಯಾಂಕಿಗೆ ರಾಜ್ಯ ಸರ್ಕಾರವು 10 ಕೋಟಿ ರೂಪಾಯಿ ಶೇರು ಹಣ ನೀಡಿದ್ದು, ಬ್ಯಾಂಕ್ ಪುನಶ್ಚೇತನಕ್ಕೆ ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಹೇಳಿದರು.

ಅವರು ರವಿವಾರ ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ.ಸಿ.ಸಿ. ಬ್ಯಾಂಕಿಗೆ ಅಪೆಕ್ಸ್ ಬ್ಯಾಂಕ್ ಕೂಡ 200 ಕೋಟಿ ರೂಪಾಯಿ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. ಕಲಬುರಗಿ ಡಿ.ಸಿ.ಸಿ ಬ್ಯಾಂಕಿನ ಪ್ರಸ್ತುತ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಇದರ ಪರಿಣಾಮ 187 ಕೋಟಿ ರೂ. ಸಾಲ ವಸೂಲಾತಿಯಾಗಿದೆ. ಕಲಬುರಗಿ ಸೇರಿದಂತೆ ರಾಜ್ಯದ 21 ಡಿ.ಸಿ.ಸಿ. ಬ್ಯಾಂಕ್ ಗಳನ್ನು ಪುನಶ್ಚೇತನಕ್ಕೆ ಸರ್ಕಾರದ ಬದ್ಧವಿದೆ ಎಂದರು.

ರಾಜ್ಯ ಸರ್ಕಾರವೇ ಡಿ.ಸಿ.ಸಿ ಬ್ಯಾಂಕಿಗೆ 300 ಕೋಟಿ ರೂಪಾಯಿ ಹೆಚ್ಚುವರಿ ಸಾಲ ನೀಡುವ ಮೂಲಕ ಬ್ಯಾಂಕಿಗೆ ಆರ್ಥಿಕ ಬಲ ನೀಡಬೇಕು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು ಬ್ಯಾಂಕ್ ಬೇಡಿಕೆ ಅನುಗುಣವಾಗಿ ಹಂತ ಹಂತವಾಗಿ ರಾಜ್ಯ ಸರ್ಕಾರದಿಂದ ಹಣ ನೀಡಲಾಗುವುದು ಎಂದರು.

30 ಲಕ್ಷ ರೈತರಿಗೆ ಸಾಲ ನೀಡುವ ಗುರಿ: ಪ್ರಸಕ್ತ ಮುಂಗಾರು ಹಂಗಾಮಿಗೆ ರಾಜ್ಯದ 30 ಲಕ್ಷ ರೈತರಿಗೆ ಸುಮಾರು 20 ಸಾವಿರ ಕೋಟಿ ರೂಪಾಯಿ ಡಿ.ಸಿ.ಸಿ. ಬ್ಯಾಂಕುಗಳಿಂದ ಸಾಲ ನೀಡುವ ಗುರಿ ಹೊಂದಿದೆ ಎಂದು ಸಹಕಾರ ಸಚಿವರು ತಿಳಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು 7.55 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಪ್ರಮುಖ ಬೆಳೆಗಳಾದ ತೊಗರಿ, ಹತ್ತೀ, ಹೆಸರು, ಉದ್ದು ಸೇರಿದಂತೆ ಇತರೆ ಬೆಳೆಗಳ ಬಿತ್ತನೆಯ ಗುರಿ ಹೊಂದಿದೆ. ಇದಕ್ಕಾಗಿ 46559 ಕ್ವಿಂಟಾಲ್ ಬೀಜದ ಬೇಡಿಕೆಯಿದ್ದು, ದಾಸ್ತಾನು ಪ್ರಕ್ರಿಯೆ ನಡೆಯುತ್ತಿದೆ. ಇದರ ಜೊತೆಗೆ 1,19,395 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದ್ದು, ಇದರ ದಾಸ್ತಾನಿಗೂ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಶಾಲಾ ಮಕ್ಕಳಿಗೆ ನೀಡಲಾಗುವ ಮಧ್ಯಾಹ್ನದ ಬಿಸಿ ಊಟದಲ್ಲಿ ಸಿರಿಧಾನ್ಯಗಳಾದ ನವಣೆ, ರಾಗಿ, ತೊಗರಿ ನೀಡಲು ಸಚಿವ ಸಂಪುಟ ಉಪ ಸಮಿತಿಯಲ್ಲಿ ಚರ್ಚೆ ನಡೆದಿದ್ದು, ಮುಂದಿನ ದಿನದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಬಿ.ಸಿ.ಪಾಟೀಲ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಮೂಲಸೌಕರ್ಯ, ಹಜ್ ಮತ್ತು ವಕ್ಫ್ ಸಚಿವ ಆನಂದ್ ಸಿಂಗ್ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಅರ್. ನಿರಾಣಿ ಇದ್ದರು.

Published On: 11 April 2021, 09:11 PM English Summary: All kinds of cooperation for dcc bank revival

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.