1. ಸುದ್ದಿಗಳು

ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶ: ಸುಪ್ರೀಂ ತೀರ್ಪಿನ ಮುಖ್ಯಾಂಶಗಳು

ಮಹಿಳೆಯರ ದೈಹಿಕ ವ್ಯತ್ಯಾಸಗಳನ್ನು ಆಧರಿಸಿ ಅವರ ಘನತೆಯನ್ನು ಉಲ್ಲಂಘಿಸುವ ಸಂಪ್ರದಾಯ ಅಥವಾ ಧರ್ಮಾಚರಣೆ ಅಸಾಂವಿಧಾನಿಕ. ಮಹಿಳೆಯರು 'ದೇವರ ಮಲತಾಯಿ ಮಕ್ಕಳು' (children of lesser god) ಎಂಬಂತೆ ನಡೆಸಿಕೊಳ್ಳುವುದು ಅಸಾಂವಿಧಾನಿಕ ಎಂದು ಜಸ್ಟಿಸ್ಚಂದ್ರಚೂಡ್ಹೇಳಿದರು. ತೀರ್ಪಿನ ಮುಖ್ಯಾಂಶಗಳು ಇಲ್ಲಿವೆ:

ಹೊಸದಿಲ್ಲಿ: ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶದ ಅವಕಾಶವನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ದೀಪಕ್ ಮಿಶ್ರಾ ತೀರ್ಪನ್ನು ಓದುತ್ತ, ಭಕ್ತಿಯ ವಿಚಾರದಲ್ಲಿ ಲಿಂಗ ತಾರತಮ್ಯ ಸಲ್ಲದು ಎಂದು ಹೇಳಿದರು. ತೀರ್ಪಿನ ಮುಖ್ಯಾಂಶಗಳು ಇಲ್ಲಿವೆ:

  1. ಪೂಜೆಯ ಹಕ್ಕು ಎಲ್ಲ ಭಕ್ತರಿಗೂ ಇದೆ. ಅದರಲ್ಲಿ ಲಿಂಗಾಧಾರಿತ ತಾರತಮ್ಯ ಸಲ್ಲದು.
  2. 10ರಿಂದ 50ರ ವಯೋಮಾನದ ಮಹಿಳೆಯರಿಗೆ ದೇವಳ ಪ್ರವೇಶ ನಿಷೇಧಿಸುವುದು ಸಾಂವಿಧಾನಿಕ ತತ್ವಗಳ ಉಲ್ಲಂಘನೆಯಾಗುತ್ತದೆ.
  3. 0ರಿಂದ 50ರ ವಯೋಮಾನದ ಮಹಿಳೆಯರಿಗೆ ಪ್ರವೇಶ ನಿಷೇಧಿಸುವ ಶಬರಿಮಲೆ ದೇವಸ್ಥಾನದ ಸಂಪ್ರದಾಯಕ್ಕೆ ಸಂವಿಧಾನದ 26ನೇ ವಿಧಿಯ ಬೆಂಬಲವಿಲ್ಲ ಎಂದು ನ್ಯಾಯಮೂರ್ತಿ ನಾರಿಮನ್ ವಾದಿಸಿದರು.
  4. ಭಕ್ತಿ ಮತ್ತು ಆರಾಧನೆ ಎಂಬುದು ಲಿಂಗ ತಾರತಮ್ಯಕ್ಕೆ ಒಳಪಡುವಂಥದ್ದಲ್ಲ ಎಂದು ಸಿಜೆಐ ಮಿಶ್ರಾ ಮತ್ತು ಎ.ಎಂ ಖಾನ್ವಿಲ್ಕರ್ ಹೇಳಿದರು.
  5. ಭಕ್ತಿಯಲ್ಲಿ ಸಮಾನತೆ ವಿಚಾರದಲ್ಲಿ ಪಿತೃಪ್ರಧಾನ ಕಲ್ಪನೆಗೆ ಜಾಗವಿಲ್ಲ.
  6. ಧರ್ಮ ಎಂಬುದು ದೇವತ್ವದ ಜತೆಗೆ ಬದುಕುವ ಒಂದು ಮಾರ್ಗವಾಗಿದೆ ಎಂದು ಸಿಜೆಐ ಮಿಶ್ರಾ ನುಡಿದರು.
  7. ದೈಹಿಕ ನಿರ್ಬಂಧಗಳ ಮೂಲಕ ಮಹಿಳಾ ಹಕ್ಕುಗಳನ್ನು ಕಸಿಯಲು ಅವಕಾಶವಿಲ್ಲ.
  8. ಸ್ವಾಮಿ ಅಯ್ಯಪ್ಪನ ಭಕ್ತರು ಪ್ರತ್ಯೇಕ ಗುಂಪಾಗಿ ಪರಿಗಣಿತವಾಗುವುದಿಲ್ಲ. ಅವರೆಲ್ಲರೂ ಹಿಂದೂಗಳು.
  9. ಶಬರಿಮಲೆ ದೇವಸ್ಥಾನದಲ್ಲಿ ಹಾಕಲಾದ ನಿರ್ಬಂಧಗಳು ಧಾರ್ಮಿಕ ಆಚರಣೆಯಲ್ಲಿ ಇರಲೇಬೇಕಾದ್ದೇನೂ ಅಲ್ಲ.
  10. ಮಹಿಳೆಯರ ದೈಹಿಕ ವ್ಯತ್ಯಾಸಗಳನ್ನು ಆಧರಿಸಿ ಅವರ ಘನತೆಯನ್ನು ಉಲ್ಲಂಘಿಸುವ ಸಂಪ್ರದಾಯ ಅಥವಾ ಧರ್ಮಾಚರಣೆ ಅಸಾಂವಿಧಾನಿಕ. ಮಹಿಳೆಯರು 'ದೇವರ ಮಲತಾಯಿ ಮಕ್ಕಳು' (children of lesser god) ಎಂಬಂತೆ ನಡೆಸಿಕೊಳ್ಳುವುದು ಅಸಾಂವಿಧಾನಿಕ ಎಂದು ಜಸ್ಟಿಸ್‌ ಚಂದ್ರಚೂಡ್‌ ಹೇಳಿದರು.
  11. ಮಹಿಳೆ ಮುಟ್ಟಾಗುತ್ತಾಳೆ ಎಂಬ ಕಾರಣಕ್ಕೆ ಹೊರಗಿಡುವುದು ಸಂಪೂರ್ಣ ಅಸಾಂವಿಧಾನಿಕ ಎಂದು ಚಂದ್ರಚೂಡ್ ನುಡಿದರು.
  12. ಮಹಿಳೆಯರನ್ನು ಕೀಳಾಗಿ ಕಾಣುವ ಯಾವುದೇ ಧಾರ್ಮಿಕ ಸಂಪ್ರದಾಯಗಳಿಗೆ ಕೋರ್ಟ್‌ ಮಾನ್ಯತೆ ನೀಡಬಾರದು ಎಂದು ಚಂದ್ರಚೂಡ್ ಪ್ರತಿಪಾದಿಸಿದರು.
  13. ಸಿಜೆಐ ದೀಪಕ್ ಮಿಶ್ರಾ, ಜಸ್ಟಿಸ್ ಆರ್‌.ಎಫ್‌ ನಾರಿಮನ್, ಎ.ಎಂ ಖಾನ್ವಿಲ್ಕರ್‌, ಡಿವೈ ಚಂದ್ರಚೂಡ್‌ ಏಕರೂಪದ ತೀರ್ಪು ನೀಡಿದರೆ, ಜಸ್ಟಿಸ್‌ ಇಂದೂ ಮಲ್ಹೋತ್ರಾ ಅವರು ಶಬರಿಮಲೆ ವಿಚಾರದಲ್ಲಿ ಭಿನ್ನ ನಿಲುವು ತಳೆದರು.
  14. ಪ್ರಸ್ತುತ ತೀರ್ಪು ಶಬರಿಮಲೆಗಷ್ಟೇ ಸೀಮಿತವಲ್ಲ, ಅದಕ್ಕೂ ಮೀರಿದ ವ್ಯಾಪಕ ಪರಿಣಾಮಗಳನ್ನು ಉಂಟುಮಾಡಲಿದೆ ಎಂದು ಜಸ್ಟಿಸ್ ಇಂದೂ ಮಲ್ಹೋತ್ರಾ ನುಡಿದರು.
  15. ಈ ವಿವಾದ ಧಾರ್ಮಿಕತೆಯ ಆಳವನ್ನೇ ಪ್ರಶ್ನಿಸಿದೆ. ದೇಶದ ಜಾತ್ಯತೀತ ವಾತಾವರಣದ ಪಾಲನೆಗಾಗಿ ಆಳವಾಗಿ ಬೇರೂರಿದ ಧಾರ್ಮಿಕ ಆಚರಣೆಗಳನ್ನು ಹಾಳುಗೆಡವಬಾರದು ಎಂದು ಜಸ್ಟಿಸ್‌ ಮಲ್ಹೋತ್ರಾ ತಿಳಿಸಿದರು.
  16. ಕೆಲವರು ಹೇಳುವ ಪ್ರಕಾರ ಸಮಾನತೆಯ ಹಕ್ಕು ಧಾರ್ಮಿಕ ಆಚರಣೆ ಹಾಗೂ ಮೂಲಭೂತ ಹಕ್ಕಿನ ಜತೆಗೂ ಸಂಘರ್ಷಕ್ಕಿಳಿಯುತ್ತದೆ.
  17. ಶಬರಿಮಲೆ ದೇವಸ್ಥಾನದ ಭಕ್ತರು ಪ್ರತ್ಯೇಕ ಧಾರ್ಮಿಕ ಪಂಥ ಅನುಸರಿಸುವ ಗುಂಪಾಗಿ ಪರಿಗಣಿಸಲ್ಪಡುತ್ತಾರೆ. ಕೆಲವು ನಿರ್ದಿಷ್ಟ ವ್ರತಾಚರಣೆಗಳೊಂದಿಗೆ ಅವರು ದೇವಳ ಪ್ರವೇಶಿಸುತ್ತಾರೆ. ಎಂದು ಜಸ್ಟಿಸ್‌ ಮಲ್ಹೋತ್ರಾ ನುಡಿದರು.
Published On: 30 September 2018, 05:40 PM English Summary: Access to the Sabarimala temple for women of all ages: Highlights of the Supreme Court

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.