1. ಸುದ್ದಿಗಳು

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ₹5000 ಕೋಟಿ ಅನುದಾನ: ಸಿಎಂ ಬೊಮ್ಮಾಯಿ

Kalmesh T
Kalmesh T
₹5000 crore grant for welfare Karnataka development: CM Bommai

1-

ಮುಂದಿನ ಹಣಕಾಸು ವರ್ಷದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5000 ಕೋಟಿ ಅನುದಾನ ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆಂದು ರೂಪಿಸಲಾಗಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಈ ಹಿಂದೆ ವಾರ್ಷಿಕವಾಗಿ ₹1000 ಕೋಟಿ ಅನುದಾನ ನೀಡಲಾಗುತ್ತಿತ್ತು.

ಆದರೇ ನಮ್ಮ ಸರ್ಕಾರ ಬಂದ ನಂತರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 3000 ಕೋಟಿ ಅನುದಾನ ಒದಗಿಸಿ, ಟೆಂಡರ್ ಮುಗಿಸಿ, ಕೆಲಸ ಆರಂಭಿಸಲಾಗಿದೆ.

ಮುಂದಿನ ಹಣಕಾಸು ವರ್ಷದಲ್ಲಿ ₹5000 ಕೋಟಿ ಅನುದಾನ ನೀಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ. 

2-

ಕೊಬ್ಬರಿ ಶೆಡ್‌ಗೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಕೊಬ್ಬರಿ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ತಾವರೇಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೈತ ಗಂಗಾಧರಯ್ಯ ಎಂಬುವವರು ತೆಂಗಿನ ಕಾಯಿಗಳನ್ನ ಕೊಬ್ಬರಿ ಮಾಡಲು

ತಮ್ಮ ಜಮೀನಿನಲ್ಲಿ ಶೆಡ್‌ ನಿರ್ಮಿಸಿ ಸುಮಾರು 25 ಸಾವಿರಕ್ಕೂ ಅಧಿಕ ಕೊಬ್ಬರಿಯನ್ನ ಶೇಖರಣೆ ಮಾಡಿದ್ದರು. ಇನ್ನೇನು ಸುಲಿಸಿ ಮಾರುಕಟ್ಟೆಗೆ ಹಾಕಬೇಕು ಎನ್ನುವಷ್ಟರಲ್ಲಿ ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ.

ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸ ಪಟ್ಟರು ಕೊಬ್ಬರಿಯಲ್ಲಿರುವ ಎಣ್ಣೆಯ ಅಂಶದಿಂದ ಬೆಂಕಿ ಹೊತ್ತಿ ಉರಿದಿದೆ. ಕೊಬ್ಬರಿ ಸಂಪೂರ್ಣವಾಗಿ ಸುಟ್ಟು ಹೋಗಿ ಉಪಯೋಗಕ್ಕೆ ಬಾರದಂತಾಗಿದೆ. ಮೂರರಿಂದ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಕೊಬ್ಬರಿ ಬೆಂಕಿಪಾಲಾಗಿದೆ. ವರ್ಷ ಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಸಿಗುವಷ್ಟರಲ್ಲಿ ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾಗಿದ್ದು ಮಮ್ಮಲ ಮರಗುವಂತಾಗಿದೆ.

3-

ಗುರುವಾರ ಅಫ್ಘಾನಿಸ್ತಾನದ ಕೆಲವು ಭಾಗಗಳಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೂಡ ಕಂಪನಗಳು ಅನುಭವಕ್ಕೆ ಬಂದಿವೆ. ರಾತ್ರಿ 7:55 ರ ಸುಮಾರಿಗೆ ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ.

ಅಫ್ಘಾನಿಸ್ತಾನದ ಫೈಜಾಬಾದ್‌ನಿಂದ ದಕ್ಷಿಣಕ್ಕೆ 79 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಕೇಂದ್ರವು 200 ಕಿಲೋಮೀಟರ್ ಆಳದಲ್ಲಿದೆ. "ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆಯ ಭೂಕಂಪವು ನಿನ್ನೆ ಸಂಜೆ 7:55 ಸಂಭವಿಸಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪ್ರಕಾರ, ಕಳೆದ ಭಾನುವಾರ ಮುಂಜಾನೆ ದೆಹಲಿ-ಎನ್‌ಸಿಆರ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 3.8 ಅಳತೆಯ ಭೂಕಂಪ ಸಂಭವಿಸಿದೆ. NCS ದೇಶದಲ್ಲಿ ಭೂಕಂಪದ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾಗಿದೆ. ಭಾನುವಾರ ನಸುಕಿನ 1:19ಕ್ಕೆ ಭೂಕಂಪ ಸಂಭವಿಸಿದ್ದು, ಹರಿಯಾಣದ ಜಜ್ಜರ್ ಜಿಲ್ಲೆ ಇದರ ಕೇಂದ್ರಬಿಂದುವಾಗಿತ್ತು.

4-

ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ರಾಜ್ಯ ಕೃಷಿ ಇಲಾಖೆ ವತಿಯಿಂದ 3 ದಿನಗಳ ಕಾಲ 'ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ' ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಖಾತೆ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ರೈತರಿಗೆ ಮಾರುಕಟ್ಟೆ ಒದಗಿಸಲು, ಸಾವಯವ ಮತ್ತು ಸಿರಿಧಾನ್ಯ ಮಾರುಕಟ್ಟೆ ವಿಸ್ತರಣೆ ಮಾಡಲು ಅಲ್ಲದೆ ಆರೋಗ್ಯಕರ ಜವನ ಶೈಲಿಗೆ ಸಿರಿಧಾನ್ಯಗಳ ಮಹತ್ವ ತಿಳಿಸುವ ಉದ್ದೇಶದಿಂದ ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಗುರುವಾರ ಸಿರಿಧಾನ್ಯ ಮೇಳದ ಪೂರ್ವಭಾವಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ್ದಾರೆ. 2023ನ್ನು "ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ" ಎಂದು ಘೋಷಣೆ ಮಾಡಲಾಗಿದೆ.

ಸಿರಿಧಾನ್ಯ ಬೆಳೆಯುವ ರೈತರಿಗೆ ಮಾರುಕಟ್ಟೆ ಒದಗಿಸಲು ಹಾಗೂ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಮೇಳ ಆಯೋಜಿಸಲಾಗಿದೆ ಎಂದಿದ್ದಾರೆ. ಜನವರಿ 20ರಂದು ಸಿಎಂ ಬಸವರಾಜ ಬೊಮ್ಮಾಯಿ ಸಿರಿಧಾನ್ಯ ಮೇಳ' ಉದ್ಘಾಟಿಸಲಿದ್ದಾರೆ.

ಮೇಳದಲ್ಲಿ ಚರ್ಚಾಗೋಷ್ಠಿಗಳು, ಸಾವಯವ ಮತ್ತು ಸಿರಿಧಾನ್ಯಗಳ ಪ್ರದರ್ಶನ ಮಳಿಗೆಗಳು, ಸಿರಿಧಾನ್ಯ ಉತ್ಪನ್ನಗಳು, ಸಭೆ, ಕಾರ್ಯಾಗಾರಗಳು ಇರಲಿವೆ. ವಿಶೇಷವಾಗಿ ಮೇಳದಲ್ಲಿ ಸಿರಿಧಾನ್ಯ ಬೆಳೆಗಾರರು, ಗ್ರಾಹಕರು, ರಫ್ತುದಾರರ ನಡುವೆ ಸಂಪರ್ಕ ಕಲ್ಪಿಸುವ  ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

5-

ಬೆಂಗಳೂರಿನ ಕಬ್ಬನ್‌ಪಾರ್ಕಿನಲ್ಲಿ ಸಾವಯವ ಸಿರಿಧಾನ್ಯ  ಕುರಿತು ಜಾಗೃತಿ ಮೂಡಿಸಲು ಜನವರಿ 14ಕ್ಕೆ "ಜಾಗೃತಿ ವಾಕಥಾನ್"  ನಡೆಯಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದ್ದಾರೆ.

ಈಗಾಗಲೇ ರಾಜ್ಯದ‌ ಎಲ್ಲಾ ಜಿಲ್ಲೆಗಳಲ್ಲಿ ಸಿರಿಧಾನ್ಯ ಸಾವಯವ ಮೇಳ ನಡೆಯುತ್ತಿದೆ. ಸಿರಿಧಾನ್ಯ ಬಳಕೆ ಮತ್ತು ಬೆಳೆಯುವಲ್ಲಿ ಕರ್ನಾಟಕ ದೇಶಕ್ಕೆ ಮಾದರಿ ಆಗಿದೆ ಎಂದು ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕ ನಂತರ ಸಾರ್ವಜನಿಕರು ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಇದೇ ವೇಳೆ ಅಂತಾರಾಷ್ಟ್ರೀಯ ಸಿರಿಧಾನ್ಯದ ಬಗ್ಗೆ ಸುಲಭವಾಗಿ ಎಲ್ಲಿರಿಗೂ

ಮಾಹಿತಿ ಲಭ್ಯವಾಗುವಂತೆ ಅಭಿವೃದ್ಧಿ ಪಡಿಸಲಾದ ವೆಬ್‌ಸೈಟ್‌ ಒಂದನ್ನು ಕೃಷಿ ಸಚಿವರು ಬಿಡುಗಡೆ ಮಾಡಿದರು. ಕೃಷಿ ಇಲಾಖೆಯ ನಿರ್ದೇಶಕ ಜಿ.ಟಿ.ಪುತ್ರನ್, ಆಯುಕ್ತ ಶರತ್, ಕೆಪೆಕ್ ಅಧ್ಯಕ್ಷ ವಿರೂಪಾಕ್ಷಪ್ಪ ,ಕೆಮಿಕ್‌ ನಿರ್ದೇಶಕ ಪದ್ಮನಾಭಯ್ಯ  ಉಪಸ್ಥಿತರಿದ್ದರು.

6-

ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಬಳಿ ಹಾದು ಹೋಗಲಿದ್ದ ಸ್ಯಾಟಲೈಟ್‌ ಟೌನ್‌ ರಿಂಗ್‌ ರಸ್ತೆಯ ಸುರಂಗ ಕಾಮಗಾರಿಯನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅಧ್ಯಕ್ಷತೆಯಲ್ಲಿ  ನಡೆದ ಸಭೆಯ ಬಳಿಕ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹೆದ್ದಾರಿ ನಿರ್ಮಾಣ ಕೈಬಿಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. STTR ಹೆದ್ದಾರಿ ಬನ್ನೆರುಘಟ್ಟ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಯೋಜನೆಯಾಗಿತ್ತು.

ಆದರೆ, ಇಲ್ಲಿನ ಅರಣ್ಯ ಪ್ರದೇಶದಲ್ಲಿ ಹೆದ್ದಾರಿ ನಿರ್ಮಿಸಬಾರದು ಎಂದು ರಾಜ್ಯ ವನ್ಯಜೀವಿ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. ಹೀಗಾಗಿ ಈ ಸ್ಯಾಟಲೈಟ್‌ ಟೌನ್‌ ರಿಂಗ್‌ ರಸ್ತೆಯ ಪ್ರಸ್ತಾಪ ಕೈಬಿಡಲಾಗಿದೆ. ಬನ್ನೇರುಘಟ್ಟ ಉದ್ಯಾನದಿಂದ ದೂರದಲ್ಲಿ ಹೊರಭಾಗದಲ್ಲಿ ರಸ್ತೆ ನಿರ್ಮಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಸುಮಾರು 17 ಸಾವಿರ ಕೋಟಿ ಮೊತ್ತದ ಉದ್ದೇಶಿತ ಈ ಹೆದ್ದಾರಿಯು 288 ಕಿಲೋ ಮೀಟರ್ ಉದ್ದವಿತ್ತು. ತಮಿಳುನಾಡಿನ ಪ್ರದೇಶದಲ್ಲಿ 45 ಕಿಲೋ ಮೀಟರ್‌ ಹಾದು ಹೋಗಲಿದೆ. ಯೋಜನೆಗಾಗಿ ಈಗಾಗಲೇ 6,000 ಕೋಟಿ ಮೊತ್ತದಲ್ಲಿ 136 ಕಿಲೋ ಮೀಟರ್‌ ಮಾರ್ಗಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದೆ.

2025ಕ್ಕೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು. ಸ್ಯಾಟಲೈಟ್‌ ಟೌನ್‌ ರಿಂಗ್‌ ರಸ್ತೆಯು ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸುಲಿಬೆಲೆ, ಹೊಸಕೋಟೆ, ಸರ್ಜಾಪುರ, ಅತ್ತಿಬೆಲೆ, ಆನೇಕಲ್, ತಟ್ಟೆಕೆರೆ, ಕನಕಪುರ, ರಾಮನಗರ, ಮಾಗಡಿ ಮೂಲಕ ಹಾದು ಹೋಗಲಿದೆ.

7 –

ನವಲಗುಂದ ಭಾಗದಲ್ಲಿ ಕಡಲೆ ಬೆಳೆಗೆ ಸಿಡಿ ರೋಗ ಕಾಣಿಸಿಕೊಂಡಿತ್ತು. ಇದರಿಂದಾಗಿ ಬಹುತೇಕ ರೈತರು ರೋಗ ಭಾದೆಯಿಂದಾಗಿ ಕಂಗೆಟ್ಟು ಹೋಗಿದ್ದರು. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ನೂರಾರು ಎಕರೆಯಲ್ಲಿ ಬೆಳೆದ ಗಿಡಗಳು ಒಣಗಿ ಹೋಗಿದ್ದವು. ಈ ಸಂಬಂಧಪಟ್ಟಂತೆ ರೈತರು ಕೃಷಿ ಅಧಿಕಾರಿಗಳ ಸಲಹೆ ಕೇಳಿದ್ದರು.

ರೈತರ ಮನವಿಗೆ ಇದೀಗ  ನವಲಗುಂದ ತಾಲೂಕ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಾಥ ಚಿಮ್ಮಲಗಿ ಅವರು ಸಿಡಿ ರೋಗದಿಂದ ಕಡಲೆ ಬೆಳೆ ರಕ್ಷಣೆ ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ.

8 –

ಪಶುಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ ಎಂದು ಮಾಜಿ ಶಾಸಕ ಕೋನರಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶುಸಂಗೋಪನೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಒಟ್ಟು 68 ಹುದ್ದೆಗಳಿದ್ದು, ಅದರಲ್ಲಿ ಕೇವಲ 30 ಹುದ್ದೆಗಳಲ್ಲಿ ಮಾತ್ರ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಉಳಿದ ಹುದ್ದೆಗಳು ಖಾಲಿ ಇರುವದರಿಂದ ರೈತರು ದೂರವಾಣಿ ಕರೆ ಮಾಡಿದರೆ, ರೈತರ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ನವಲಗುಂದ ಹಾಗೂ ಹುಬ್ಬಳ್ಳಿ ತಾಲೂಕಿನಲ್ಲಿ ಅಂದಾಜು 180 ಕ್ಕೂ ಹೆಚ್ಚು ಜಾನುವಾರುಗಳು

ಗಂಟು ರೋಗ ವೈರಸ್‌ನಿಂದಾಗಿ ದಿನನಿತ್ಯ ಪ್ರಾಣ ಕಳೆದುಕೊಳ್ಳುತ್ತಿವೆ. ಇದೊಂದು ಕರೋನ ವೈರಸ್ ತರಹ ದಿನದಿಂದ ದಿನಕ್ಕೆ ಜಾನುವಾರುಗಳಿಗೆ ಹರಡುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಇದನ್ನು ತಡೆಯಬೇಕಾದರೆ ಕ್ಷೇತ್ರದಲ್ಲಿ ಪಶುಸಂಗೋಪನೆ ಇಲಾಖೆ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ತಕ್ಷಣ ಸರ್ಕಾರ ಸಿಬ್ಬಂದಿಯನ್ನು ನೇಮಕಾತಿ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡು ಸ್ಪಂದಿಸಬೇಕು ಎಂದಿದ್ದಾರೆ.

ಇಂತಹ ಗಂಭೀರ ಕಾಯಿಲೆಗೆ ಇಲ್ಲಿಯವರೆಗೂ ಸರಿಯಾದ ವ್ಯಾಕ್ಸಿನ್ ಕಂಡು ಹಿಡಿದಿಲ್ಲ. ಸರ್ಕಾರ ಈಗಾಲೇ ಮೃತಪಟ್ಟ ಜಾನುವಾರುಗಳಾದ ಆಕಳು, ಎತ್ತುಗಳಿಗೆ 30 ಸಾವಿರ ಹಾಗೂ ಸಣ್ಣ ಕರುಗೆ ಕೇವಲ 5 ಸಾವಿರ ಪರಿಹಾರ ನಿಗದಿ ಮಾಡಿದ್ದು, ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಕೋನರಡ್ಡಿ ಒತ್ತಾಯಿಸಿದರು.

9-

ಆಹಾರ ಮತ್ತು ರಸಗೊಬ್ಬರ ಸಬ್ಸಿಡಿಯಲ್ಲಿ ಮುಂದಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಹಲವು ಮಹತ್ವದ ಬದಲಾವಣೆಗಳನ್ನು ತರುವ ಸಾಧ್ಯತೆ ಇದೆ. ವಿವಿಧ ಕಾರಣಗಳಿಂದ ವಿತ್ತೀಯ ಕೊರತೆ ಹೆಚ್ಚಾಗುತ್ತಿದ್ದು, ಇದರ ಕೊರತೆ ನೀಗಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ವಿತ್ತೀಯ ನೀತಿಯನ್ನು ಸರಿದೂಗಿಸುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರವು ಆಹಾರ ಮತ್ತು ರಸಗೊಬ್ಬರ ಸಬ್ಸಿಡಿ ಮೇಲಿನ ವೆಚ್ಚವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಏಪ್ರಿಲ್‌ನಿಂದ ಶುರುವಾಗುವ ಆರ್ಥಿಕ ವರ್ಷದಲ್ಲಿ ₹3.70 ಲಕ್ಷ ಕೋಟಿಗೆ ಆಹಾರ ಮತ್ತು ರಸಗೊಬ್ಬರದ ಸಬ್ಸಿಡಿಯನ್ನು ಇಳಿಕೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಇದು 2022–23ರ ವೆಚ್ಚಕ್ಕೆ ಹೋಲಿಸಿದರೆ ಶೇಕಡ 26ರಷ್ಟು ಕಡಿಮೆ ಇದೆ. ಆಹಾರ ಮತ್ತು ರಸಗೊಬ್ಬರಗಳಿಗೆ ನೀಡುವ ಸಬ್ಸಿಡಿಯು ಕೇಂದ್ರದ ಈ ವರ್ಷದ ಬಜೆಟ್‌ನ ಎಂಟನೆಯ ಒಂದರಷ್ಟಿದೆ.

ಕೇಂದ್ರವು 2023–24ರಲ್ಲಿ ಆಹಾರ ಸಬ್ಸಿಡಿಗೆ  2.30 ಲಕ್ಷ ಕೋಟಿಯನ್ನು ಮೀಸಲಿಡುವ ಉದ್ದೇಶ ಹೊಂದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆಹಾರ ಸಬ್ಸಿಡಿಗೆ 2.70 ಲಕ್ಷ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ.

ರಸಗೊಬ್ಬರ ಸಬ್ಸಿಡಿ ಮೊತ್ತವು ಪ್ರಸಕ್ತ ಆರ್ಥಿಕ ವರ್ಷದಲ್ಲಿ 2.30 ಲಕ್ಷ ಕೋಟಿಯಷ್ಟು ಇದೆ. ಅದು ಮುಂದಿನ ಆರ್ಥಿಕ ವರ್ಷಕ್ಕೆ 1.40 ಲಕ್ಷ ಕೋಟಿಗೆ ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. 

10-

ಇಂದಿನಿಂದ ಹಾವೇರಿಯಲ್ಲಿ 3 ದಿನಗಳ ಕಾಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕಳೆದ ಕೆಲ ತಿಂಗಳಿನಿಂದ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ನಡೆದಿದ್ದು, ಶುಕ್ರವಾರ ನುಡಿ ಜಾತ್ರೆಯ ತೇರಿಗೆ ಚಾಲನೆ ಸಿಗಲಿದೆ.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿ ಸಂಪೂರ್ಣವಾಗಿ ಸಜ್ಜಾಗಿದೆ. ಸುಮಾರು 128 ಎಕರೆ ವಿಸ್ತೀರ್ಣದಲ್ಲಿ ವಿವಿಧ ವೇದಿಕೆಗಳನ್ನು ನಿರ್ಮಿಸಲಾಗಿದೆ. ಪ್ರಧಾನ ವೇದಿಕೆಯಲ್ಲಿ ಸುಮಾರು 30 ಸಾವಿರ ಜನರು ಕುಳಿತುಕೊಳ್ಳಲು ಆಸನ ಕಲ್ಪಿಸಲಾಗಿದೆ. ಇದರ ಜೊತೆಗೆ ಸಮನಾಂತರ ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಅಲ್ಲಿಯೂ ಸಹ ಸಾವಿರಾರು ಜನರಿಗೆ ಕುಳಿತುಕೊಳ್ಳುವ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಮೂರು ವೇದಿಕೆಗಳಲ್ಲಿ ವಿವಿಧ ಗೋಷ್ಠಿಗಳು ನಡೆಯಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪುಸ್ತಕ ಮತ್ತು ವಾಣಿಜ್ಯ ಬಳಕೆಗೆ ಸುಮಾರು 600 ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ.

ಪ್ರಮುಖವಾಗಿ ಮೂರು ಬೃಹತ್ ಮಳಿಗೆಗಳಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ. ಒಂದರಲ್ಲಿ ತೋಟಗಾರಿಕೆ ಇಲಾಖೆ ಫಲಪುಷ್ಪಪ್ರದರ್ಶನ, ಎರಡನೇಯದರಲ್ಲಿ ವಾರ್ತಾ ಇಲಾಖೆ ಪ್ರದರ್ಶನ ಮತ್ತು ಮೂರನೇಯ ಪ್ರದರ್ಶನವನ್ನು ಕಸಾಪ ಏರ್ಪಡಿಸಿತ್ತು. ಕಸಾಪ ಪ್ರದರ್ಶನದಲ್ಲಿ ವಿಶೇಷವಾಗಿ ಕನ್ನಡದ ಪ್ರಥಮಗಳ ಪುಸ್ತಕಗಳ ಪ್ರದರ್ಶನ ಮಾಡಲಾಗಿದೆ.

ಇವಿಷ್ಟು ಈ ಹೊತ್ತಿನ ಪ್ರಮುಖ ಕೃಷಿ ಸುದ್ದಿಗಳು

ಇನ್ನೂ ಹೆಚ್ಚಿನ ಕೃಷಿ ಸಂಬಂಧಿ ಮಾಹಿತಿಗಳಿಗಾಗಿ ನೋಡ್ತಾಯಿರಿ ಕೃಷಿ ಜಾಗರಣ ಕನ್ನಡ.  

ನಮಸ್ಕಾರ…

Published On: 06 January 2023, 06:41 PM English Summary: ₹5000 crore grant for welfare Karnataka development: CM Bommai

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.