ಜಿ-20 ಶೃಂಗಸಭೆ ಅಂಗವಾಗಿ ವಿಶ್ವಪಾರಂಪರಿಕ ತಾಣವಾದ ಹಂಪಿಯಲ್ಲಿ, ಜುಲೈ 9 ರಿಂದ 12 ವರೆಗೆ 3ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆ ಆರಂಭಗೊಂಡಿದೆ. ದೇಶದ ಜವಳಿ ಕ್ಷೇತ್ರದ ವೈವಿದ್ಯತೆ ಬಿಂಬಿಸುವ ಹಾಗೂ ಜಾಗತಿಕವಾಗಿ ಸಾಂಸ್ಕೃತಿಕ ಜವಳಿ ಉದ್ದಿಮೆಯ ಬೆಳವಣಿಗೆಗೆ ಇಂಬು ಕೊಡುವ ನಿಟ್ಟಿನಲ್ಲಿ, ಹಂಪಿ ಎದುರು ಬಸವಣ್ಣ ಮಂಪಟದ ಆವರಣದಲ್ಲಿ ಜವಳಿ ವಸ್ತುಪ್ರದರ್ಶನಕ್ಕೆ ಇಂದು ಚಾಲನೆ ನೀಡಲಾಗುವುದು ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ ಮೋಹನ್ ಹೇಳಿದರು.
ದೇಶಿ ಸಾಂಸ್ಕೃತಿಕ ಕಲೆಗಳ ಜಾಗತಿಕ ಅನಾವರಣಕ್ಕೆ ಜಿ-20 ವೇದಿಕೆಯಾಗಲಿದೆ. ಈ ಹಿಂದೆ ಒರಿಸ್ಸಾದ ಖಜುರಾಹೋ ಹಾಗೂ ಭುವನೇಶ್ವರದಲ್ಲಿ ಜರುಗಿದ ಜಿ-20 1 ಮತ್ತು 2ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆಗಳು ಯಶಸ್ವಿಯಾಗಿವೆ. ಇದರಲ್ಲಿ ಜಿ-20 ಸದಸ್ಯ ರಾಷ್ಟ್ರಗಳ 45 ಅತ್ಯುನ್ನತ ಪ್ರತಿನಿಧಿಗಳು ಭಾಗವಹಿಸಿದ್ದರು. ಇದರ ಜೊತೆಗೆ ಹಲವಾರು ವೆಬಿನಾರ್‌ಗಳನ್ನು ಸಹ ಆಯೋಜಿಸಲಾಗಿತ್ತು.
ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಗುಂಪು ಪ್ರಮುಖ ನಾಲ್ಕು ಉದ್ದೇಶಗಳನ್ನು ಹೊಂದಿದೆ. ಮೊದಲನೆಯದಾಗಿ ಸದಸ್ಯ ರಾಷ್ಟ್ರಗಳ ಸಾಂಸ್ಕೃತಿಕ ಅಸ್ಮಿತೆಯನ್ನು ರಕ್ಷಿಸಿ, ಪುನರ್ ಸ್ಥಾಪಿಸುವುದಾಗಿದೆ.
1970ರ ಯುನಿಸ್ಕೋ ಓಡಂಬಡಿಕೆಯಂತೆ ಎಲ್ಲಾ ರಾಷ್ಟ್ರಗಳು ಪರಸ್ಪರ ಸಹಕಾರದಿಂದ, ವಸಾಹತು ಸಮಯ ಅಥವಾ ಇನ್ನಿತರ ಮಾರ್ಗಗಳಿಂದ ಪಡೆಯಲಾದ ಸಾಂಸ್ಕೃತಿಕ ಮಹತ್ವವುಳ್ಳ ಕಲಾಕೃತಿಗಳನ್ನು ಹಿಂದಿರುಗಿಸಬೇಕು. ಭಾರತವು ಸಹ ಇದಕ್ಕೆ ಬದ್ದವಾಗಿದ್ದು, ಈಗಾಗಲೇ ಭಾರತವು ಅಮೇರಿಕಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅಮೇರಿಕಾವು 150 ಹೆಚ್ಚು ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಲಿದೆ.
ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಎರಡನೇ ಮುಖ್ಯ ಉದ್ದೇಶವೆಂದರೆ ಜನಜೀವನದ ಜೊತೆಗೆ ಪಾರಂಪರಿಕವಾಗಿ ಬಳಕೆಗೆ ಬಂದ ಪದ್ದತಿಗಳನ್ನು ಉಳಿಸಿ ಬೆಳೆಸುವುದು ಆಗಿದೆ. ಭಾರತದಲ್ಲಿ ಆರ್ಯುವೇದ ಪದ್ದತಿ ಬಳಕೆಯಲ್ಲಿ ಇದೆ. ಹಲವಾರು ಸಂದರ್ಭದಲ್ಲಿ ಆರ್ಯವೇದಲ್ಲಿ ಬಳಕೆಯಲ್ಲಿದ್ದ ಔಷಧೋಪಚಾರಗಳ ಸ್ವಾಮ್ಯ ಹಕ್ಕು(ಪೇಟೆಂಟ್) ಬೇರೆಯವರ ಪಾಲಾಗಿದೆ. ಈ ರೀತಿಯ ಘಟನೆಗಳನ್ನು ತಪ್ಪಿಸುವುದು ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಕೆಲಸವಾಗಿದೆ.
ಗಿನ್ನಿಸ್ ದಾಖಲೆಯ ಲಂಬಾಣಿ ಕುಸೂತಿ ಕಲೆ
ಹಂಪಿಯ ಎದುರು ಬಸವಣ್ಣ ಮಂಟಪದ ಬಳಿ ಜವಳಿ ವಸ್ತುಪ್ರದರ್ಶನ ಆಯೋಜಿಸಲಾಗಿದೆ. ಜು.10ರಂದು ವಸ್ತುಪ್ರದರ್ಶನ ಉದ್ಘಾಟನೆ ನಡೆಯಲಿದೆ. ಸಂಡೂರಿನ ಕಲಾಕೇಂದ್ರದ 450ಕ್ಕೂ ಹೆಚ್ಚು ಜನ ಲಂಬಾಣಿ ಮಹಿಳೆಯರು 1300 ವೈವಿಧ್ಯಮಯ ಕಸೂತಿಗಳನ್ನು ಸಿದ್ದಪಡಿಸಿದ್ದು, ಇದು ವಿಶ್ವ ಗಿನ್ನಿಸ್ ದಾಖಲೆಗೆ ಸೇರಲಿದೆ.
ಇದರ ಪ್ರದರ್ಶನವೂ ಇಲ್ಲಿರುತ್ತದೆ. ಜೊತೆಗೆ ಇತರೆ ಕರಕಶುಲ ಹಾಗೂ ಜವಳಿ ಕಸೂತಿ ಕಲೆಗಾರರು ಪಾಲ್ಗೊಳ್ಳುವರು. ಈ ಮೂಲಕ ಜಾಗತಿಕವಾಗಿ ಸಾಂಪ್ರದಾಯಿಕ ಲಂಬಾಣಿ ಕಸೂತಿಗೆ ಮನ್ನಣೆ ದೊರಕಿಸಿ, ಅಂತರಾಷ್ಟ್ರೀಯ ಮಾರುಕಟ್ಟೆ ಸೌಲಭ್ಯ ದೊರಕಿಸುವ ಜೊತೆಗೆ ಸಾಂಪ್ರದಾಯಿಕ ಬದುಕಿನ ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಿಲ್ಲಿ ಪಾಂಡೆ ತಿಳಿಸಿದರು.
Share your comments