ಇತ್ತೀಚಿಗೆ ಈರುಳ್ಳಿ ಬೆಲೆ ಏರಿಕೆಯಾಗಿ ಗ್ರಾಹಕರಿಗೆ ತಲೆಬಿಸಿಯಾಗಿ ಪರಿಣಮಿಸಿತ್ತು. ಅದರ ಮೊದಲು ಟೊಮೆಟೊ ಬೆಲೆಯಲ್ಲಿ ಏರಿಕೆ ಕಂಡು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿಯನ್ನು ತಲುಪಿಸಿತ್ತು. ಕೇಂದ್ರ ಸರ್ಕಾರ ಬಫರ್ ಸ್ಟಾಕ್ ಆರಂಭಿಸಿದ ಮೇಲೆ 100 ಹಾಗೂ 120 ರ ಆಸುಪಾಸಿನಲ್ಲಿದ್ದ ಈರುಳ್ಳಿಯ ಬೆಲೆ ಇದೀಗ ಚಿಲ್ಲರೆ ಮಾರುಕಟ್ಟೆಯಲ್ಲಿ 60 ರಿಂದ 70 ರೂಪಾಯಿವರೆಗೆ ಬಿಕರಿಯಾಗುತ್ತಿವೆ. ಇದೀಗ ಈ ರೇಟ್ ಮತ್ತೇ ದುಪ್ಪಟ್ಟಾಗುವ ಆತಂಕ ಎದುರಾಗಿದೆ.
ಶೀಘ್ರವೇ ಈರುಳ್ಳಿ ಬೆಲೆ ಏರಿಕೆ?
ಹೌದು ಶೀಘ್ರವೇ ಈರುಳ್ಳಿ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆಯಲ್ಲಿ ಚರ್ಚೆ ನಡೆಯುತ್ತಿವೆ. ಸರ್ಕಾರ ಈ ಹಿಂದೆ ಬಫರ್ ಸ್ಟಾಕ್ ಮೂಲಕ ಸಂಗ್ರಹಿಸಿದ ಈರುಳ್ಳಿಯಲ್ಲಿ ಶೇ 25 ರಷ್ಟು ಈರುಳ್ಳಿ ಹಾಳಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸಂಗ್ರಹಿಸಿದ ಈರುಳ್ಳು ಹಾಳಾಗುತ್ತಿದ್ದು ಇದು ಸೇವನೆಗೆ ಯೋಗ್ಯವಲ್ಲ ಎಂದು ಹೇಳಲಾಗುತ್ತಿದೆ. ಶೇ 25 ರಷ್ಟು ಈರುಳ್ಳಿ ಹಾಳಾದರೆ ಸರ್ಕಾರಕ್ಕೆ 300 ಕೋಟಿ ರೂಪಾಯಿ ನಷ್ಟವಾಗುವ ಸಾಧ್ಯತೆಗಳಿದ್ದು ಮಾರುಕಟ್ಟೆಯಲ್ಲೂ ಕೂಡ ಈರುಳ್ಳಿ ಬೆಲೆ ಮತ್ತೇ ಗಗನಕ್ಕೇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇಲ್ಲಿಯವರೆಗೆ ಕೇಂದ್ರ ಸರ್ಕಾರ ರೈತರಿಂದ ಬರೋಬ್ಬರಿ 5 ಲಕ್ಷ ಟನ್ ಈರುಳ್ಳಿಯನ್ನು ಬಫರ್ ಸ್ಟಾಕ್‌ಗಾಗಿ ಖರೀದಿ ಮಾಡಿ ಸಂಗ್ರಹ ಮಾಡಿದೆ. ಇದರಲ್ಲಿ ಸುಮಾರ 2.5 ಲಕ್ಷ ಟನ್ ಈರುಳ್ಳು ಹಾಳಾಗಿದೆ ಎಂದು ಹೇಳಲಾಗುತ್ತಿದ್ದರು ಕೂಡ ಇದನ್ನು ಬಿ ಗ್ರೇಡ್ ಈರುಳ್ಳಿ ಎಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈರುಳ್ಳಿ ಸಂಪೂರ್ಣವಾಗಿ ಕೆಟ್ಟಿಲ್ಲ ಇದನ್ನು ಅಗ್ಗದ ದರದಲ್ಲಿ ಮಾರಾಟ ಮಾಡಲು ಅವಕಾಶಗಳಿವೆ ಎಂದಿದ್ದಾರೆ. ಇನ್ನು ಬೆಲೆ ಏರಿಕೆಯ ಅಂದಾಜುಗಳಿಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ನಿರಂತರವಾಗಿ ಬಫರ್ ಸ್ಟಾಕ್‌ನಲ್ಲಿ ಈರುಳ್ಳು ಖರೀದಿಸುತ್ತಿರುವುದರಿಂದ ದೇಶದಲ್ಲಿ ಪೂರೈಕೆಯ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಹೀಗಾಗಿ ಬೆಲೆ ಏರಿಕೆಯ ಸಾಧ್ಯತೆಗಳು ಕಡಿಮೆ ಎಂದು ತಿಳಿಸಿದ್ದಾರೆ.
7 ಲಕ್ಷ ಟನ್ ಈರುಳ್ಳಿ ಖರೀದಿಸಲು ಸೂಚನೆ
ಸದ್ಯ ಈ ವರ್ಷದಲ್ಲಿ ಈರುಳ್ಳಿ ಬಫರ್ ಸ್ಟಾಕ್ ಮಾಡಲು ಸರ್ಕಾರ 7 ಲಕ್ಷ ಟನ್ ಈರುಳ್ಳಿ ಖರೀದಿಸಲು NCCF ಮತ್ತು NAFED ಗೆ ನಿರ್ದೇಶನ ನೀಡಿದೆ ಎಂದು ಪ್ರಸ್ತುತ ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಮಹಾರಾಷ್ಟ್ರ , ಮಧ್ಯಪ್ರದೇಶ , ರಾಜಸ್ಥಾನ ಮತ್ತು ಆಂಧ್ರಪ್ರದೇಶದಿಂದ ಎರಡು ಹಂತಗಳಲ್ಲಿ ಈರುಳ್ಳಿ ಖರೀದಿಸಲಾಗಿದ್ದು, ಸದ್ಯ ಗುಜರಾತ್‌ನ ರೈತರಿಂದಲೂ ಈರುಳ್ಳಿ ಖರೀದಿಸಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.
ರೈತರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, NCCF ಮತ್ತು NAFED ರೈತರು ಮತ್ತು FPO ಗಳಲ್ಲಿ ಜಾಗೃತಿ ಮೂಡಿಸಲು ಕರಪತ್ರಗಳನ್ನು ವಿತರಿಸಲು ಪ್ರಾರಂಭಿಸಿವೆ. ಅಲ್ಲದೆ , ಗುಣಮಟ್ಟದ ಉತ್ಪನ್ನವನ್ನು ಖರೀದಿಸುವ ಮೂಲಕ ರೈತರಿಗೆ ನ್ಯಾಯಯುತ ಬೆಲೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಅವರು ಹೇಳಿದರು.
Share your comments