ಸಿರಿಧಾನ್ಯಗಳು ಪೌಷ್ಟಿಕ ಆಹಾರವಾಗಿದ್ದು, ಸಿರಿಧ್ಯಾನ್ಯಗಳನ್ನು ಬಳಸಿಕೊಂಡು ಆಧುಮಿಕ ಬಗೆಯ ಆಹಾರ ಖಾದ್ಯಗಳನ್ನು ಕೂಡ ಇದೀಗ ತಯಾರಿಸುತ್ತಿದ್ದಾರೆ. ಇಲ್ಲಿದೆ ಈ ಕುರಿತಾದ ವಿವರ
ಸಿರಿಧಾನ್ಯಗಳು ಪ್ರಾಚೀನ ಕಾಲದಿಂದಲೂ ಬೆಳೆಯುವ ಬೆಳೆಗಳಲ್ಲಿ ಒಂದಾಗಿವೆ. ಸಿರಿಧಾನ್ಯಗಳನ್ನು ಪ್ರಪಂಚದಾದ್ಯಂತ ಏಕದಳ ಧಾನ್ಯಗಳಾಗಿ ಹೆಚ್ಚು ಬೆಳೆಯಲಾಗುವುದು. ಸಿರಿಧಾನ್ಯಗಳು ಪೌಷ್ಟಿಕ ಆಹಾರವಾಗಿದ್ದು ಅದು ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಮತ್ತು ಅಪೌಷ್ಟಿಕತೆಯನ್ನು ಎದುರಿಸಲು ಸಹಾಯ ಮಾಡುತ್ತದೆ.
ಸಿರಿಧಾನ್ಯಗಳು ಅಮೂಲ್ಯವಾದ ಆಹಾರ ಉತ್ಪನ್ನಗಳಾಗಿವೆ. ಏಕೆಂದರೆ ಅವುಗಳು ದೀರ್ಘಕಾಲದವರೆಗೆ ಸಂಗ್ರಹಿಸಬಹುದಾದ ಧಾನ್ಯಗಳು ಹಾಗೂ ಕೀಟ ಮತ್ತು ಬರ-ನಿರೋಧಕವಾಗಿವೆ.
ಸಿರಿಧಾನ್ಯಗಳು ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿವೆ. ಸಿರಿಧಾನ್ಯಗಳಲ್ಲಿ ವಿಟಮಿನ್-ಬಿ, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಜಿಂಕ್ ಅಧಿಕವಾಗಿರುತ್ತದೆ. ಇವುಗಳು ಗ್ಲೂಟೆನ್ ಫ್ರೀ ಮತ್ತು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಹೊಂದಿರುವ ಆಹಾರ ಧಾನ್ಯಗಳಗಿವೆ.
ಕೋಷ್ಠಕ 1. ಸಿರಿಧಾನ್ಯಗಳ ಪೌಷ್ಟಿಕಾಂಶದ ವಿವರ
ಸಿರಿಧಾನ್ಯಗಳಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳಿವೆ. ಸಿರಿಧಾನ್ಯಗಳಲ್ಲಿರುವ ಫೈಟೊಕೆಮಿಕಲ್ಸ್ಗಳು ದೇಹದ ಫೈಟೇಟ್‌ಗಳ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಮಾನವನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ಹೆಚ್ಚುವರಿಯಾಗಿ ಅವುಗಳು ಸೂಕ್ಷ್ಮ ಪೋಷಕಾಂಶಗಳ ಮತ್ತು ಫೈರ‍್ಗಳ ಉತ್ತಮ ಮೂಲವಾಗಿದೆ. ಸುಧಾರಿತ .ಸಿರಿಧಾನ್ಯಗಳು ಫೈಬರ್ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಕರುಳಿನ ನೋವನ್ನು ಕಡಿಮೆ ಮಾಡುತ್ತದೆ.
ಸಿರಿಧಾನ್ಯಗಳಿಂದ ತಯಾರಿಸಿದ ಆಹಾರಗಳ ನಿಯಮಿತ ಸೇವನೆಯು ದೇಹದಲ್ಲಿನ ಕೆಟ್ಟ ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡುತ್ತದೆ. ಸಿರಿಧಾನ್ಯ ಆಧಾರಿತ ಆಹಾರಗಳು ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳನ್ನು ತಡೆಯುತ್ತದೆ ಹಾಗೂ ಮಧುಮೇಹದಿಂದ ರಕ್ಷಿಸುತ್ತವೆ.
ದೇಹದ ತೂಕ ಇಳಿಸಲು, ಮಧುಮೇಹ ಹಿಡಿತದಲ್ಲಿ ಇಟ್ಟುಕೊಳ್ಳಲು, ಕೊಲೋನ್ ಕ್ಯಾನ್ಸರ್ ಕಡಿಮೆ ಮಾಡಲು, ಸೆಲಿಯಾಕ್ ಕಾಯಿಲೆಯನ್ನು ನಿಯಂತ್ರಿಸಲು, ರಕ್ತದೊತ್ತಡ ಕಡಿಮೆ ಮಾಡಲು, ಮುಟ್ಟಿನ ನೋವನ್ನು ನಿವಾರಿಸಲು, ನಿದ್ರೆಯನ್ನು ಹೆಚ್ಚಿಸುವಲ್ಲಿ ಸಿರಿಧಾನ್ಯಗಳ ಪಾತ್ರ ಪ್ರಮುಖವಾಗಿದೆ. ಗೋಧಿ ಅಲರ್ಜಿ ಇರುವವರಿಗೆ ಸಿರಿಧಾನ್ಯಗಳು ಸೂಕ್ತವಾಗಿವೆ.
ಏಷ್ಯಾ ಮತ್ತು ಆಫ್ರಿಕಾದ ಅನೇಕ ದೇಶಗಳು ರಾಗಿಯನ್ನು ಪ್ರಾಥಮಿಕ ಆಹಾರದ ಮೂಲವಾಗಿ ಅವಲಂಬಿಸಿವೆ. ಅಕ್ಕಿ ಸಾಮಾನ್ಯ ಆಹಾರವಾಗುವ ಮೊದಲು ಭಾರತೀಯರು ಸಿರಿಧಾನ್ಯಗಳನ್ನು ಬೆಳೆಸುತ್ತಿದ್ದರು ಮತ್ತು ಸೇವಿಸುತ್ತಿದ್ದರು. ಭಾರತದಲ್ಲಿ ನವಣೆ, ರಾಗಿ, ಸಾಮೆ, ಊದಲು, ಅರಕ, ಬರಗು, ಸಜ್ಜೆ ಮತ್ತು ಜೋಳ ಪ್ರಮುಖ ಜಾತಿಯ ಸಿರಿಧಾನ್ಯಗಳಾಗಿವೆ.
ಸಿರಿಧಾನ್ಯಗಳನ್ನು ಸೇವಿಸುವ ಮೊದಲು ಸಂಸ್ಕರಣೆ ಮಾಡಲಾಗುತ್ತದೆ. ಸಂಸ್ಕರಣೆ ಮಾಡುವುದರಿಂದ ತಿನ್ನಲಾಗದ ಭಾಗವನ್ನು ತೆಗೆದು, ಬಳಕೆಯ ಅವಧಿ ಮತ್ತು ಪೌಷ್ಟಿಕಾಂಶ ಸಂವೇದನಾ ಗುಣಗಳನ್ನು ಹೆಚ್ಚಿಸಬಹುದು. ಪ್ರಾಥಮಿಕ ಸಂಸ್ಕರಣಯಲ್ಲಿ ಹೊಟ್ಟು ತೆಗೆಯುವುದು, ಸೋಕಿಂಗ್ ಮಾಡುವುದು, ಮೊಳಕೆಯೊಡೆಯುವಿಕೆ, ಹುರಿಯುವುದು, ಒಣಗಿಸುವುದು, ಪಾಲಿಶ್ ಮಾಡುವುದು ಮತ್ತು ಮಿಲ್ಲಿಂಗ್‌ನಂತಹ ತಂತ್ರಗಳು ಅನುಸರಿಸಲಾಗುತ್ತದೆ.
ಅದೇ ಸಮಯದಲ್ಲಿ ಸಿರಿಧಾನ್ಯ ಆಧಾರಿತ ಆಹಾರ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ದ್ವಿತೀಯ ಸಂಸ್ಕರಣಾ ವಿಧಾನಗಳಾದ ರ‍್ಮೆಂಟೇಷನ್, ಊದಿಸುವಿಕೆ, ಪಾಪಿಂಗ್, ಮಾಲ್ಟಿಂಗ್, ಬೇಕಿಂಗ್, ಫ್ಲೇಕಿಂಗ್, ಎಕ್ಸ್‌ಟ್ರೂಷನ್ ಇತ್ಯಾದಿ ತಂತ್ರಗಳನ್ನು ಬಳಸಲಾಗುತ್ತದೆ.
ಸಿರಿಧಾನ್ಯಗಳ ಸಂಸ್ಕರಣೆಯು ಜೀರ್ಣ ಕ್ರಿಯೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ನೈಸರ್ಗಿಕ ವಿಷವನ್ನು ನಿಷ್ಕ್ರಿಯಗೊಳಿಸುತ್ತದೆ ಮತ್ತು ಪೌಷ್ಟಿಕಾಂಶದ ಲಭ್ಯತೆಯನ್ನು ಹೆಚ್ಚಿಸುತ್ತದೆ. ಪ್ರಾಥಮಿಕ ಸಂಸ್ಕರಣೆಯು ಮುಖ್ಯವಾಗಿ ಡಿಸ್ಟೋನಿಂಗ್, ಕ್ಲೀನಿಂಗ್, ಡಿಹಸ್ಕಿಂಗ್, ಡಿಹಲ್ಲಿಂಗ್, ಗ್ರೇಡಿಂಗ್ ಮತ್ತು ಹಿಟ್ಟು ಮಾಡುವಿಕೆಯನ್ನು ಒಳಗೊಂಡಿರುತ್ತದೆ.
ಡಿಕರ‍್ಟಿಕೇಷನ್ನಿಂದ ಸಿರಿಧಾನ್ಯಗಳ ಭಾಗಶಃ ಹೊರ ಪದರವನ್ನು ತೆಗೆದು ಹಾಕಬಹುದಾಗಿದೆ, ಪ್ರೋಟೀನ್ ಉಪಯುಕ್ತತೆ ಸುಧಾರಿಸುತ್ತದೆ ಮತ್ತು ಖನಿಜಾಂಶಗಳ ನಷ್ಟವು ಕಡಿಮೆಯಾಗುತ್ತದೆ. ಇದನ್ನು ಪೌಂಡಿಂಗ್ ಮೂಲಕ ಮತ್ತು ರೈಸ್ ಡಿಹಲ್ಲರ್ ಅಥವಾ ಇತರ ಅಬ್ರಾಸಿವ್ ಡಿಹಲ್ಲರ್‌ಗಳನ್ನು ಬಳಸಿ ಮಾಡಲಾಗುತ್ತದೆ.
ಇದರಿಂದಾಗಿ ಸಿರಿಧಾನ್ಯಗಳು ಹಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತವೆ. ಡಿಹಲ್ಲಿಂಗ್ ಎನ್ನುವುದು ಹೊಟ್ಟನ್ನು ತೆಗೆದುಹಾಕುವ ಪ್ರಕ್ರಿಯೆಯಾಗಿದೆ. ಇದು ಜೋಳದಲ್ಲಿರುವ ಫೈಟೇಟ್ ಮತ್ತು ಕಬ್ಬಿನಾಂಶವನ್ನು ತೆಗೆದುಹಾಕಿ ಟ್ಯಾನಿನ್ ಅಂಶವು ಕಡಿಮೆ ಮಾಡುತ್ತದೆ.
ಸಿರಿಧಾನ್ಯಗಳ ಹೊರಪದರ/ ಹೊಟ್ಟನ್ನು ತೆಗೆದು ಹಾಕಿ ಮತ್ತು ಗಿರಣಿಗಳಲ್ಲಿ ಹ್ಯಾಮರ್ ಮಿಲ್ಲಗಳನ್ನೂ ಬಳಸಿ ಹಿಟ್ಟಾಗಿಸುವುದನ್ನು ಮಿಲ್ಲಿಂಗ್ ಎಂದು ಕರೆಯಲಾಗುತ್ತದೆ. ಮಿಲ್ಲಿಂಗ್ ಕರ‍್ಯಾಚರಣೆಯು ಧಾನ್ಯದ ಪ್ರೋಟೀನ್, ಆಹಾರದ ನಾರಿನಂಶ, ಜೀವಸತ್ವ ಮತ್ತು ಖನಿಜಗಳ ಅಂಶವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ ಆದರೆ ಗ್ರಾಹಕರ ಸ್ವೀಕಾರರ‍್ಹತೆಯನ್ನು ಹೆಚ್ಚಿಸುತ್ತದೆ ಹಾಗೂ ಪೋಷಕಾಂಶಗಳ ಲಭ್ಯತೆಯನ್ನು ಅಧಿಕಗೊಳಿಸಿ ಉತ್ಪನ್ನಗಳ ತಯಾರಿಕೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.
ದ್ವಿತೀಯ ಸಂಸ್ಕರಣೆಯು, ಪ್ರಾಥಮಿಕ ಹಂತದಲ್ಲಿ ಸಂಸ್ಕರಿಸಿದ ಉತ್ಪನಗಳನ್ನು ಸೇವಿಸಲು ಸೂಕ್ತವಾದ ಉತ್ಪನ್ನಗಳಾಗಿ ಪರಿರ‍್ತಿಸುವ ಒಂದು ಪ್ರಕ್ರಿಯೆಯಾಗಿದೆ. ಪಾಪಿಂಗ್ ಮತ್ತು ಫ್ಲೇಕಿಂಗ್ ಸಾಂಪ್ರದಾಯಿಕ ವಿಧಾನಗಳು ಮತ್ತು ರೋಲರ್ ಡ್ರೈಯಿಂಗ್, ಎಕ್ಸ್ಟ್ರುಶನ್, ಬೇಯಿಸುವುದು, ಆಧುನಿಕ ವಿಧಾನದ ದ್ವಿತೀಯ ಸಂಸ್ಕರಣೆಯ ವಿಧಗಳಾಗಿದೆ.
ಪಾಪಿಂಗ್ ಕರ‍್ಯಾಚರಣೆಯು ಫೈಬರ್ ಮತ್ತು ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ ಮತ್ತು ಕರ‍್ಬೋಹೈಡ್ರೇಟ್ ಮತ್ತು ಶಕ್ತಿಯ ಮೌಲ್ಯವನ್ನು ಹೆಚ್ಚಿಸುತ್ತದೆ. ಸಿರಿಧಾನ್ಯಗಳನ್ನು ಹಿಗ್ಗಿಸಲು ಪಾಪಿಂಗ್ ತಂತ್ರವನ್ನು ಬಳಸಲಾಗುತ್ತದೆ.
ಫ್ಲೇಕಿಂಗ್ ಅನ್ನು ರೋಲ್ಸ್ ಫ್ಲೇಕರ್ ಮೂಲಕ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮೈಲ್ಲರ‍್ಡ್ ಕ್ರಿಯೆಯು ಸಂಭವಿಸುತ್ತದೆ, ಇದರಲ್ಲಿ ಅಲ್ಯುರೋನ್ ಪದರದಲ್ಲಿರುವ ಸಕ್ಕರೆಯು ಸಿರಿಧಾನ್ಯದಲ್ಲಿರುವ ಅಮೈನೋ ಆಮ್ಲಗಳೊಂದಿಗೆ ಪ್ರತಿಕ್ರಿಯಿಸಿ ಉತ್ತಮ ಪರಿಮಳವನ್ನು ಭೀರುತ್ತದೆ.
ಇದು ಫೈಟೇಟ್ ಹಾಗೂ ಟ್ಯಾನಿನ್‌ಗಳಂತಹ ಆಂಟಿನ್ಯೂಟ್ರಿಯೆಂಟ್‌ಗಳನ್ನು ಕಡಿಮೆ ಮಾಡುತ್ತದೆ ಮತ್ತು ಪ್ರೋಟೀನ್, ಕರ‍್ಬೋಹೈಡ್ರೇಟ್ ಜರ‍್ಣಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಬೇಯಿಸುವ ತಂತ್ರಜ್ಞಾನವನ್ನು ಉಪಯೋಗಿಸುವುದರಿಂದ ಸಿರಿಧಾನ್ಯಗಳ ಮೌಲ್ಯರ‍್ಧಿತ ಉತ್ಪನ್ನಗಳನ್ನು ಹೆಚ್ಚಿಸಬಹುದು.
ಸಿರಿಧಾನ್ಯಗಳನ್ನು ಬಳಸಿ ನಾವು ಕಡಿಮೆ ಕ್ಯಾಲೋರಿ, ಗ್ಲುಟೆನ್ ಮುಕ್ತ, ತಿನ್ನಲು ಸಿದ್ಧವಾದ ಪದರ‍್ಥಗಳನ್ನು ತಯಾರಿಸಬಹುದು. ಸಿರಿಧಾನ್ಯಗಳನ್ನು ಉಪಯೋಗಿಸಿ ಮಾಲ್ಟ್, ತ್ವರಿತ ಜೋಳದ ಇಡ್ಲಿ ಮಿಶ್ರಣ, ಉಬ್ಬಿಸಿದ ತಿನಿಸುಗಳು, ತ್ವರಿತ ಉಪ್ಮಾ ಮಿಶ್ರಣ, ತ್ವರಿತ ದೋಸೆ ಮಿಶ್ರಣ, ತ್ವರಿತ ಪೊಂಗಲ್ ಮಿಶ್ರಣ, ತ್ವರಿತ ಲಡ್ಡು ಮಿಶ್ರಣ, ತ್ವರಿತ ಪಾಸ್ಟಾ, ಸಿರಿಧಾನ್ಯಗಳ ರ‍್ಮಿಸೆಲ್ಲಿ, ಸಿರಿಧಾನ್ಯದ ಕುಕೀಸ್, ಸಿರಿಧಾನ್ಯದ ಬ್ರೆಡ್, ಸಿರಿಧಾನ್ಯದ ಕೇಕ್, ಸಿರಿಧಾನ್ಯದ ಪಿಜ್ಜಾ ಹೀಗೆ ಹಲವಾರು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.
ಸಿರಿಧಾನ್ಯಗಳ ಬ್ರೆಡ್
ಇದು ಜನಪ್ರಿಯ ಉಪಹಾರವಾಗಿದ್ದು, ಸಾಮಾನ್ಯವಾಗಿ ಗೋಧಿ ಹಿಟ್ಟಿನಿಂದ ಮಾಡಿದ ಬ್ರೆಡಿನಲ್ಲಿ ಹಲವಾರು ಮೈಕ್ರೊನ್ಯೂಟ್ರಿಯೆಂಟ್ಸ್ ಕೊರತೆ ಇರುವದರಿಂದ ಸಿರಿಧಾನ್ಯದಿಂದ ಮಾಡಿದ ಬ್ರೆಡಿಗೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದೆ. ಸಿರಿಧಾನ್ಯ ಗಳಿಂದ ಮಾಡಿದ ಬ್ರೇಡ್ನಲ್ಲಿ ಮೈಕ್ರೊ ಮತ್ತು ಮ್ಯಾಕ್ರೋನ್ಯೂಟ್ರಿಯೆಂಟ್ಸ್ ಗಳಿರುವದರಿಂದ ಪೌಷ್ಟಿಕಾಂಶಗಳನ್ನು ಹೆಚ್ಚಿಸುತ್ತದೆ.
ಶೇ 50 ರಷ್ಟು ಗೋಧಿ ಹಿಟ್ಟಿನ ಬದಲಿಗೆ ರಾಗಿ , ಸಜ್ಜೆ, ನವಣೆ ಹಿಟ್ಟನ್ನು ಬೇರೆ ಬೇರೆ ಅನುಪಾತದಲ್ಲಿ ಬಳಸಿ ಮತ್ತು ಉತ್ತಮ ಗುಣಮಟ್ಟದ ಯೀಸ್ಟ್, ಕೊಬ್ಬು ಮತ್ತು ಸಕ್ಕರೆಯನ್ನು ಬಳಸಿ ಮೃದುವಾದ ಬ್ರೇಡ್ ಹಿಟ್ಟನ್ನು ತಯಾರಿಸಿ ಪ್ರುಫ್ಫಿಂಗ್ ಮಾಡಿ ಓವನ್ನಲ್ಲಿ ಬೆಯಿಸುವದರಿಂದ ಹೆಚ್ಚು ಪೌಷ್ಟಿಕಾಂಶವುಲ್ಲ ಸಿರಿಧಾನ್ಯದ ಬ್ರೆಡ್ಡನ್ನು ತಯಾರಿಸಲಾಗುತ್ತದೆ.
ಸಿರಿಧಾನ್ಯಗಳ ಕುಕೀಸ್
ಕುಕೀಸ್ ಒಂದು ವಿವಿಧ ವಯೋಮಾನದವರು ಸೇವಿಸುವ ಜನಪ್ರಿಯ ಉತ್ಪನ್ನಗಳಾಗಿವೆ ಹಾಗೂ ಶೇ 100 ರಷ್ಟು ಸಿರಿಧಾನ್ಯಗಳ ಹಿಟ್ಟಿನಿಂದ ಮತ್ತು ಪ್ಲಾನೆಟರಿ ಮಿಕ್ಸರ್ ಉಪಯೋಗಿಸಿ ಮಾಡಬಹುದು.
ಇದನ್ನು ಸ್ವಯಂಚಾಲಿತ ಕುಕೀ ಮಾಡುವ ಯಂತ್ರ ಮತ್ತು ರೋಟರಿ ಓವನ್ ಬಳಸಿ ತಯಾರಿಸಲಾಗುತ್ತದೆ. ಹೈದರಾಬಾದ್‌ನಲ್ಲಿ ಸಕ್ಕರೆ, ಹಾಲಿನ ಘನವಸ್ತುಗಳು, ಕೊಬ್ಬು, ಉಪ್ಪು ಮತ್ತು ಸುವಾಸನೆಯ ಪದರ‍್ಥಗಳನ್ನು ನವಣೆ, ರಾಗಿ ಮತ್ತು ಸಜ್ಜೆ ಹಿಟ್ಟಿಗೆ ಸೇರಿಸಿ ಬಳಸಿ ಉತ್ತಮಗುಣಮಟ್ಟದ ಕುಕೀಸ್ಗಳನ್ನು ತಯಾರಿಸಲಾಗಿದೆ.
ಸಿರಿಧಾನ್ಯಗಳ ಕೇಕ್
ಇದು ಹಿಟ್ಟು, ಸಕ್ಕರೆ, ಕೊಬ್ಬು, ಮೊಟ್ಟೆ ಮತ್ತು ಸುವಾಸನೆಬರಿತ ಪದರ‍್ಥಗಳ ಮಿಶ್ರಣದಿಂದ ತಯಾರಿಸಲಾದ ಉತ್ಪನ್ನವಾಗಿದೆ. ಸಿರಿಧಾನ್ಯಗಳ ಮಿಶ್ರಣವನ್ನು ಹಿಟ್ಟಾಗಿಸಿ, ಹಿಟ್ಟನ್ನು ಬೇಯಿಸುವ ಮೂಲಕ ಕೇಕನ್ನು ತಯಾರಿಸಬಹುದು. ಕೇಕ್‌ಗಳಿಗೆ ಚಾಕೊಲೇಟ್ ಅಥವಾ ವೆನಿಲ್ಲಾದ ಪರಿಮಳ/ಸುವಾಸನೆಯನ್ನು ಸೇರಿಸಲಾಗುತ್ತದೆ.
ಸಿರಿಧಾನ್ಯಗಳ ಪಿಜ್ಜಾ
ಇದನ್ನು ಹಿಟ್ಟು, ಬುರುಗು, ಉಪ್ಪು, ಕೊಬ್ಬು ಮತ್ತು ಸುವಾಸನೆಭರಿತ ಪದರ‍್ಥಗಳ ಮಿಶ್ರಣವನ್ನು ಹಿಟ್ಟಾಗಿ ಪರಿವರ್ತಿಸಿ ಮತ್ತು ಬೇಯಿಸುವ ಮೂಲಕ ತಯಾರಿಸಲಾಗುತ್ತದೆ. ಪ್ರತಿ ಶತ 50 ರಷ್ಟು ಮೈದಾ ಹಿಟ್ಟಿನ ಜೊತೆಗೆ ಪ್ರತಿ ಶತ 50 ರಷ್ಟು ಸಿರಿಧಾನ್ಯಗಳಾದ ಜೋಳ, ಸಜ್ಜೆ, ನವಣೆ, ಮತ್ತು ರಾಗಿ ಹಿಟ್ಟನ್ನು ವಿವಿದ ಪ್ರಮಾಣದಲ್ಲಿ ಬಳಸಿ ಉತ್ತಮ ಪೌಷ್ಟಿಕಾಂಶಗಳುಳ್ಳ ಪಿಜ್ಜಾವನ್ನು ತಯಾರಿಸಲಾಗುತ್ತದೆ. ಜೋಳದಿಂದ ತಯಾರಿಸಿದ ಪಿಜ್ಜಾ ಹೆಚ್ಚು ಸ್ವೀಕಾರರ‍್ಹವಾಗಿದೆ.
ಸಿರಿಧಾನ್ಯ ಪೌಷ್ಟಿಕ ಆಹಾರವಾಗಿದ್ದು, ಹೆಚ್ಚಿನ ಶಕ್ತಿಯನ್ನು ನೀಡುವುದಲ್ಲದೆ ಅಪೌಷ್ಟಿಕತೆಯನ್ನು ಎದುರಿಸಲು ಸಹಾಯ ಮಾಡುತ್ತದೆ. ಸಿರಿಧಾನ್ಯಗಳು ಅಮೂಲ್ಯವಾದ ಆಹಾರ ಉತ್ಪನ್ನಗಳಾಗಿವೆ ಏಕೆಂದರೆ, ಅವುಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಬಹುದು ಮತ್ತು ರಾಸಾಯನಿಕಗಳ ಬಳಕೆಯಿಲ್ಲದೆ ಬೆಳೆಯುವ ವಿವಿಧ ಜಾತಿಗಳ ಸಿರಿಧಾನ್ಯಗಳು ಸಣ್ಣ-ಪ್ರಮಾಣದ ಕೃಷಿ ಕ್ಷೇತ್ರಗಳಿಗೆ ಆದಾಯವನ್ನು ನೀಡುವ ಅತ್ಯುತ್ತಮ ಸಾವಯವ ಆಹಾರವೆಂದು ಪರಿಗಣಿಸಲಾಗಿದೆ.
Share your comments