1. ಅಗ್ರಿಪಿಡಿಯಾ

ಬೆಳೆಯುವ ಕಬ್ಬಿಗೆ ಬಾಧಿಸದಿರಲಿ ಬಿಸಿಲ ಬೇಗೆ

ಬೇಸಿಗೆ ಅವಧಿಯಲ್ಲಿ ಕಬ್ಬಿನ ಬೆಳೆಯನ್ನು ನಿರ್ವಹಣೆ ಮಾಡುವುದು ಸುಲಭವಲ್ಲ. ಇರುವ ಅಥವಾ ಲಭ್ಯವಾಗುವ ನೀರಿನ ಸದ್ಭಳಕೆ ಮಾಡಿಕೊಳ್ಳುವುದರ ಮೂಲಕ ಬರದ ಸ್ಥಿತಿ ನಿರ್ವಹಣೆ ಮಾಡಿ ಕಬ್ಬಿನ ಬೆಳೆದು ಉತ್ತಮ ಇಳುವರಿ ಪಡೆಯಬಹುದಾಗಿದೆ.

ದಿನ ಕಳೆದಂತೆ ವಾತಾವರಣದ ಉಷ್ಣತೆ ಹೆಚ್ಚುತ್ತಿದೆ. ವಾತಾವರಣ ಸಮತೋಲನ ಕಳೆದುಕೊಳ್ಳುತ್ತಿದೆ. ಇದರಿಂದ ಕೃಷಿಯ ಮೇಲೆ ನೇರ ದುಷ್ಪರಿಣಾಮ ಉಂಟಾಗಿ, ಇಳುವರಿ ಕಡಿಮೆಯಾಗುತ್ತಿದೆ. ಉಷ್ಣತೆ ಏರಲು ಪ್ರಮುಖ ಕಾರಣವೇನೆಂದರೆ ಅರಣ್ಯ ನಾಶ, ನಗರೀಕರಣದಿಂದ ಕೃಷಿಯೇತರ ಭೂಮಿಯ ಪ್ರಮಾಣ ಏರಿಕೆ, ಸಕಾಲಕ್ಕೆ ಮಳೆ ಬರದೇ ಇರುವುದು, ಮಳೆ ಬಂದರೂ ಸಹ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದು, ಅವೈಜ್ಞಾನಿಕ ರೀತಿಯಲ್ಲಿ ಬಾಂದಾರಗಳ ನಿರ್ಮಾಣ ಮತ್ತು ಮಳೆ ನೀರಿನ ಕೊಯ್ಲು ಪದ್ಧತಿಯ ಅಸಮರ್ಪಕ ಅಳವಡಿಕೆ ಇವುಗಳಿಂದ ನದಿ, ಕೆರೆ, ಭಾವಿ ಮತ್ತು ಕೊಳವೆ ಭಾವಿಗಳಲ್ಲಿ ನೀರಿನ ಲಭ್ಯತೆ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗಿ ಅದರಲ್ಲೂ ಬೇಸಿಗೆ ಕಾಲದಲ್ಲಿ ಕಬ್ಬು ಬೆಳೆಯಲ್ಲಿ ನೀರು ನಿರ್ವಹಣೆ ರೈತರಿಗೆ ಒಂದು ಸವಾಲಾಗಿ ಪರಿಣಮಿಸಿದೆ.

ಈ ನಿಟ್ಟಿನಲ್ಲಿ ಬೇಸಿಗೆ ಅವಧಿಯಲ್ಲಿ ಕಬ್ಬಿನ ಬೆಳೆಯನ್ನು ನಿರ್ವಹಣೆ ಮಾಡುವುದು ಸುಲಭವಲ್ಲ. ಇರುವ ಅಥವಾ ಲಭ್ಯವಾಗುವ ನೀರಿನ ಸದ್ಭಳಕೆ ಮಾಡಿಕೊಳ್ಳುವುದರ ಮೂಲಕ ಬರದ ಸ್ಥಿತಿ ನಿರ್ವಹಣೆ ಮಾಡಿ ಕಬ್ಬಿನ ಬೆಳೆದು ಉತ್ತಮ ಇಳುವರಿ ಪಡೆಯಬಹುದಾಗಿದೆ.

- ನೀರಿನ ಲಭ್ಯತೆ ಪ್ರಮಾಣಕ್ಕನುಗುಣವಾಗಿ ಕಬ್ಬು ಬೆಳೆಯ ಕ್ಷೇತ್ರ ನಿರ್ಧರಿಸಬೇಕು. ಕೇವಲ ಮಳೆಗಾಲದಲ್ಲಿನ ನೀರಿನ ಪ್ರಮಾಣ ಗಮನಿಸಿ ಕಬ್ಬು ನಾಟಿ ಮಾಡಬಾರದು. ಕಬ್ಬು ನಾಟಿ ಪೂರ್ವದಲ್ಲಿ ಹಾಗೂ ಕುಳೆ ಕಬ್ಬಿನಲ್ಲಿ ಎಕರೆಗೆ ಚನ್ನಾಗಿ ಕಳೆತ 10 ಟನ್‌ ಕೊಟ್ಟಿಗೆ ಗೊಬ್ಬರ, 2 ಟನ್‌ ಭೂಮಿಶಕ್ತಿ ಹಾಗೂ 1 ಟನ್‌ ಎರೆಹುಳು ಗೊಬ್ಬರ ಬಳಸಬೇಕು.

- ಪಟ್ಟಾ ಪದ್ಧತಿಯಲ್ಲಿ ಅಂದರೆ 2.5 - 2.5 ಅಡಿ ಅಥವಾ 3-6-3 ಅಡಿ ಅಂತರದಲ್ಲಿ ಕಬ್ಬು ನಾಟಿ ಮಾಡಬೇಕು.

- ಕಬ್ಬು ನಾಟಿ ಮಾಡುವ ಸಂದರ್ಭದಲ್ಲಿ ಸುಣ್ಣದ ತಿಳಿ ನೀರಿನಲ್ಲಿ ಕಬ್ಬಿನ ಬೀಜಗಳನ್ನು 10-15 ನಿಮಿಷ ನೆನೆಯಿಸಿ ನಂತರ ಕಬ್ಬು ನಾಟಿ ಮಾಡಬೇಕು.

- ಸಾಲು ಬಿಟ್ಟು ಸಾಲು ನೀರು ಹಾಯಿಸಬೇಕು. ಮೊದಲು ನೀರು ಹಾಯಿಸಿದ ಸಾಲು ಬಿಟ್ಟು, ಈ ಹಿಂದೆ ಹಾಯಿಸದೇ ಇರುವ ಸಾಲಿಗೆ ನೀರು ಹಾಯಿಸಬೇಕು.

- ಕಬ್ಬಿನಲ್ಲಿ ಗಣಿಕೆಯಾಗುವತನಕ(ಮೂರು ತಿಂಗಳು) ಸಾಲುಗಳ ಮಧ್ಯದಲ್ಲಿ ಮೇಲಿಂದ ಮೇಲೆ ಎಡೆಕುಂಟೆ ಹೊಡೆಯುವುದರಿಂದ ಮಣ್ಣಿನಲ್ಲಿರುವ ತೇವಾಂಶ ಸಂರಕ್ಷಿಸಲ್ಪಡುತ್ತದೆ. ಇದರಿಂದ ನೀರು ಹಾಯಿಸುವ ಅವಧಿಯ ಅಂತರ ಹೆಚ್ಚಿಸಿಕೊಳ್ಳಬಹುದು.

- ಕಾಲುವೆ ನೀರಾವರಿ ಪದ್ಧತಿಗಿಂತ ಹನಿ ನೀರಾವರಿ ಪದ್ಧತಿ, ತುಂತುರು ನೀರಾವರಿ ಪದ್ಧತಿ ಅಳವಡಿಕೆಯಿಂದ ನೀರಿನ ಬಳಕೆ ಸಾಮರ್ಥ್ಯ‌ ಹೆಚ್ಚಿಸಿಕೊಂಡು ಉತ್ತಮ ಇಳುವರಿ ಪಡೆಯಬಹುದು.

- ನಾಟಿ ಕಬ್ಬು ಬೆಳೆಯಲ್ಲಿ (5 ರಿಂದ 6 ತಿಂಗಳ ಬೆಳೆಯ ಅವಧಿ) ಸಂಪೂರ್ಣವಾಗಿ ಒಣಗಿದ ಕಬ್ಬಿನ ಕೆಳ ಭಾಗದ ಎಲೆಗಳನ್ನು ಸುಲಿದು ಸಾಲುಗಳ ಮಧ್ಯ ಹೊದಿಕೆ (ಅಚ್ಛಾದನೆ) ಮಾಡುವುದರಿಂದ ಮಣ್ಣಿನಲ್ಲಿರುವ ತೇವಾಂಶ ಕಾಪಾಡಿಕೊಳ್ಳಬಹುದು.

- ಕಬ್ಬು ಕಟಾವು ಮಾಡಿದ ತಕ್ಷಣ (ಕುಳೆ ಬೆಳೆಯಲ್ಲಿ) ಕಬ್ಬಿನ ರವದಿ ಹಾಗೂ ಸೋಗೆಗಳನ್ನು ಕಬ್ಬಿನ ಒಂದು ಸಾಲು ಬಿಟ್ಟು ಇನ್ನೊಂದು ಸಾಲುಗಳಲ್ಲಿ ಹೊದಿಕೆ(ಅಚ್ಛಾದನೆ) ಮಾಡುವುದರಿಂದ ಶೇ.30 ರಿಂದ 40 ರಷ್ಟು ನೀರು ಉಳಿತಾಯ ಮಾಡಬಹುದು. ಪ್ರವಾಹ(ಕಾಲುವೆ) ನೀರಾವರಿ ಪದ್ಧತಿ ಇದ್ದಲ್ಲಿ ರವದಿ ಹೊದಿಕೆ (ಅಚ್ಛಾದನೆ) ಮಾಡಲಾರದ ಸಾಲುಗಳಲ್ಲಿ ಮಾತ್ರ ನೀರನ್ನು ಹಾಯಿಸುವುದರಿಂದ ನೀರಿನ ಬಳಕೆಯನ್ನು ಕಡಿಮೆ ಮಾಡಬಹುದಾಗಿದೆ.

- ರವದಿ ನಿರ್ವಹಣೆಗಾಗಿ ಪ್ರತಿ ಎಕರೆಗೆ ಐದು ಕೆ.ಜಿ ರವದಿ ಕಳೆಯುವ ಸೂಕ್ಷ್ಮಾಣು ಜೀವಿಗಳಾದ ಟ್ರೈಕೋಡರ್ಮಾ ಪರತಂತ್ರ ಜೀವಿಗಳನ್ನು ಹತ್ತು ಕೆ.ಜಿ ತಿಪ್ಪೆ ಗೊಬ್ಬರದಲ್ಲಿ ಮಿಶ್ರಣ ಮಾಡಿ ಬಳಸಬೇಕು. ಇದರಿಂದ ರವದಿ ಬೇಗನೆ ಕಳೆತು ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗಿ ಜಮೀನಿನಲ್ಲಿ ಸದಾಕಾಲ ತೇವಾಂಶ ಲಭಿಸುತ್ತದೆ. ಇದರಿಂದ ಕಬ್ಬು ಬೆಳೆಯೂ ಆರೋಗ್ಯಕರ ಬೆಳವಣಿಗೆಯನ್ನು ಹೊಂದುತ್ತದೆ.

- ನೀರಿನ ಅಭಾವ ಪರಿಸ್ಥಿಯಲ್ಲಿ ಶಿಫಾರಸು ಪ್ರಮಾಣಕ್ಕಿಂತ ಹೆಚ್ಚಿಗೆ, ಅಂದರೆ ಪ್ರತಿ ಎಕರೆಗೆ ಅಂದಾಜು 20 ಕೆ.ಜಿ. ಮ್ಯುರೇಟ್‌ ಆಫ್‌ ಪೋಟ್ಯಾಷ್‌ (ಎಂಒಪಿ) ಗೊಬ್ಬರವನ್ನು ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳಲ್ಲಿ ಉಪಯೋಗಿಸಬೇಕು.

- ಪ್ರತಿ ಲೀಟರ್‌ ನೀರಿನಲ್ಲಿ 25 ಗ್ರಾಂನಂತೆ ಪೋಟ್ಯಾಷ್‌(ಎಂಒಪಿ) ಗೊಬ್ಬರವನ್ನು ಮಿಶ್ರಣ ಮಾಡಿದ ದ್ರಾವಣವನ್ನು ಪ್ರತಿ ಎಕರೆಗೆ 150 ರಿಂದ 250 ಲೀಟರ್‌ನಂತೆæ ಸಿಂಪರಣೆ ಮಾಡಬೇಕು. ಇದರಿಂದ ಕಬ್ಬಿನ ಎಲೆಗಳಲ್ಲಿನ ರಂಧ್ರಗಳ ಮುಖಾಂತರ ಆವಿಯಾಗುವ ತೇವಾಂಶವನ್ನು ತಡೆಗಟ್ಟಬಹುದಾಗಿದೆ. ಈ ಸಿಂಪರಣಾ ಕ್ರಮವನ್ನು ಮೇಲಿಂದ ಮೇಲೆ ಅನುಸರಿಸುವುದು ಅಪಾಯಕಾರಿ, ಕಾರಣ ಎಲೆಗಳಲ್ಲಿರುವ ಅತ್ಯಂತ ಸೂಕ್ಷ್ಮ ರಂಧ್ರಗಳು ಸಂಪೂರ್ಣ ಮುಚ್ಚುವುದರಿಂದ ಬೆಳೆಗೆ ಉಸಿರಾಟದ ತೊಂದರೆಯಾಗಿ ಬೆಳೆಯು ಒಣಗುವ ಸಂಭವವುಂಟು. ಆದ್ದರಿಂದ ಈ ದ್ರಾವಣವನ್ನು 10 ರಿಂದ 15 ದಿನಕ್ಕೊಮ್ಮೆ ಬೆಳೆಯ ಬೆಳವಣಿಗೆಯನ್ನು ಗಮನಿಸಿ ಸಿಂಪಡಿಸಬೇಕು.

- ಸೂಕ್ಷ್ಮ ವಾತಾವರಣವನ್ನು ಕಲ್ಪಿಸಲು ಬೆಳೆಯ ಕ್ಷೇತ್ರದ ಸುತ್ತಲು ಬದುಗಳ ಮೇಲೆ ಗಾಳಿ ತಡೆಗಟ್ಟುವ ಗಿಡಗಳನ್ನು ಬೆಳೆಸಬೇಕು.

- ನೀರಿನ ಕೊರತೆಯಲ್ಲಿ ಬೆಳೆಯುವ ಸಾಮರ್ಥ್ಯ‌ವುಳ್ಳ ಸಿಓಸಿ 671, ಸಿಓಎಸ್‌ಎನ್‌ಕೆ 0632 ಮತ್ತು ಸಿಓ 94012 ತಳಿಗಳನ್ನು ನಾಟಿ ಮಾಡಬೇಕು.
Published On: 21 February 2019, 09:24 PM English Summary: ಬೆಳೆಯುವ ಕಬ್ಬಿಗೆ ಬಾಧಿಸದಿರಲಿ ಬಿಸಿಲ ಬೇಗೆ

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.