1. ಅಗ್ರಿಪಿಡಿಯಾ

ಮುಂಗಾರಿನ ಬೇಸಾಯಕ್ಕೆ ಭೂಮಿ ಸಿದ್ದಗೊಳಿಸುವ ಪಾರಂಪರಿಕ “ಮಾಗಿ ಉಳುಮೆ”!

Kalmesh T
Kalmesh T
Traditional "Magi Plowing" to prepare the land for monsoon farming!

Traditional Magi Plowing: ಮುಂಗಾರಿನ ಬೇಸಾಯಕ್ಕೆ ಭೂಮಿ ಸಿದ್ದಗೊಳಿಸುವ “ಮಾಗಿ ಉಳುಮೆ” ಪಾರಂಪರಿಕ ಕೃಷಿ ಪದ್ಧತಿಯಾಗಿದೆ. ಈ ವಿಧಾನವು ವೈಜ್ಞಾನಿಕವೂ ಹೌದು. ಒಂದು ಸಸ್ಯವು ತನ್ನ ಜೀವಿತಾವಧಿ ಮುಗಿಸುವುದು ಅಥವಾ ಮಾಗುವುದು ಅಥವಾ ಮಾಗಿ ಬಂದಾಗ ಬೆಳೆಗಳನ್ನು ಕಟಾವು ಮಾಡಲಾಗುತ್ತದೆ.

ಅಂದರೆ ಬೆಳೆಯೊಂದರೆ ಪೂರ್ಣ ಅವಧಿ ಮುಗಿದ ನಂತರ ಮುಂದಿನ ಹಂಗಾಮಿನಲ್ಲಿ ಬೆಳೆ ಬೆಳೆಯಲು ಭೂಮಿ ಸಿದ್ಧಗೊಳಿಸುವುದಕ್ಕೆ “ಮಾಗಿ ಉಳುಮೆ” ಎನ್ನುವರು.

ಈ ಮಾಗಿ ಉಳುಮೆಯನ್ನು ಮುಂಗಾರಿಗಿಂತ ಮೊದಲು ಹಾಗೂ ಹಿಂಗಾರು ಬೆಳೆಗಳ ಕಟಾವಿನ ನಂತರ ಬೇಸಿಗೆಯಲ್ಲಿ ಕೈಗೊಳ್ಳಬಹುದಾದ ಕಡಿಮೆ ಖರ್ಚಿನ ಆದರೆ, ಬಹು ಉಪಯೋಗಿ ಕೃಷಿ ಚಟುವಟಿಕೆ. ಆದ್ದರಿಂದ ಇದನ್ನು ‘ಶ್ರೀಮಂತರ ಗೊಬ್ಬರಕ್ಕೆ ಬಡವನ ಮಾಗಿ ಉಳುಮೆ ಸಮ’ ಎಂಬುದಾಗಿ ರೈತರು ಮಾತನಾಡುತ್ತಾರೆ.

ಕೃಷಿಯಲ್ಲಿ ನೈಸರ್ಗಿಕವಾಗಿ ದೊರೆಯುವ ಮಣ್ಣಿಗೆ ಮಹತ್ತರವಾದ ಪಾತ್ರವಿದೆ. ಕಾರಣ ಯಾವುದೇ ಬೆಳೆಯ ಉತ್ತಮ ಬೆಳವಣಿಗೆಗೆ ಹಾಗೂ ಇಳುವರಿಗೆ ಮಣ್ಣಿನ ಫಲವತ್ತತೆಯು ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ.

ಪ್ರಸ್ತುತ ಹದವಾಗಿ ಮಳೆಯಾಗುವುದರಿಂದ ಮುಂಗಾರಿನ ಬೇಸಾಯಕ್ಕೆ (Monsoon Farming ) ಭೂಮಿ ಸಿದ್ದಗೊಳಿಸುವ ಬಹುಪಯೋಗಿ ಕೃಷಿ ಚಟುವಟಿಕೆಯಾದ ಮಾಗಿ ಉಳುಮೆಯಂತಹ (Magi Plowing) ಸಾಂಪ್ರದಾಯಿಕ ಪದ್ದತಿಗಳನ್ನು ಕೈಗೊಳ್ಳುವುದರಿಂದ ಕಡಿಮೆ ಖರ್ಚಿನಲ್ಲಿ ಉತ್ತಮ ಫಸಲನ್ನು ತೆಗೆಯಬಹುದು.

ಈ ಮಾಗಿ ಉಳುಮೆಯನ್ನು ಎತ್ತಿನ ನೇಗಿಲಿನಿಂದ ಅಥವಾ ಟ್ರಾಕ್ಟರ್‌ ಚಾಲಿತ ಕಬ್ಬಿಣದ ರೆಂಟೆಯಿಂದ ಮಾಡಬಹುದಾಗಿದೆ. ರೈತರು ಹಿಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳನ್ನು ಸಾಮಾನ್ಯವಾಗಿ ಜನವರಿ-ಫೆಬ್ರವರಿ ತಿಂಗಳಿನಲ್ಲಿ ಕಟಾವು ಮಾಡುತ್ತಾರೆ.

ಭೂಮಿಯನ್ನು ಮುಂದಿನ ಬೆಳೆಗೆ ಹದಗೊಳಿಸಲು ರೈತರು ಮಾರ್ಚ್, ಏಪ್ರಿಲ್‌ ಅಥವಾ ಮೇ ತಿಂಗಳಿನಲ್ಲಿ ಆಳವಾಗಿ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದರಿಂದ ಬೇಸಿಗೆಯಲ್ಲಿ ಸುರಿದ ಮಳೆ ಭೂಮಿಯಲ್ಲಿ ಇಂಗುವುದು ಹಾಗೂ ಮಣ್ಣು ಸಡಿಲವಾಗಿ ಭೂಮಿಯು ಹದವಾಗುತ್ತದೆ.

ಮಾಗಿ ಉಳುಮೆಯಿಂದಾಗುವ ಪ್ರಯೋಜನಗಳು:

1) ಜಮೀನಿನ ಮಣ್ಣಿನ ಮೇಲೆ ಪರಿಣಾಮ: (Impact on farm soil)

ಬೇಸಿಗೆಯಲ್ಲಿ ಮಾಗಿ ಉಳುಮೆಯಿಂದ ತಯಾರಾದ ಜಮೀನು ಮುಂಗಾರು ಮಳೆಯಾಗುತ್ತಿದ್ದಂತೆ ಹರಗಿ ಬಿತ್ತಲು ಸುಲಭವಾಗುತ್ತದೆ. ಇದರಿಂದ ಕೃಷಿ ಭೂಮಿಯಲ್ಲಿನ ಮಣ್ಣು ತಿರುವು ಮುರುವಾಗಿ ಸಡಿಲವಾಗುವುದರಿಂದ (land preparation) ಬಿದ್ದಂತಹ ಮಳೆ ನೀರು ಸುಲಭವಾಗಿ ಅಲ್ಲಿಯೇ ಇಂಗಿ ಭೂಮಿಯ ಅಂತರ್ಜಲ ಮಟ್ಟ ಮತ್ತು ತೇವಾಂಶದ ಪ್ರಮಾಣ ಅಧಿಕವಾಗಲು ಸಹಾಯ ಮಾಡುತ್ತದೆ.

ಮಳೆ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಭೂಮಿಯಲ್ಲಿ ಇಂಗುವುದಕ್ಕೆ ಸಹಕಾರಿಯಾಗುವುದರ ಜೊತೆಗೆ ಬಿತ್ತಿದ ಬೀಜಗಳ ಮೊಳಕೆ ಪ್ರಮಾಣ ಹಾಗೂ ಸದೃಢ ಸಸಿಗಳ ಸಂಖ್ಯೆ ಹೆಚ್ಚಾಗಿ ಅಧಿಕ ಇಳುವರಿ ಪಡೆಯಲು ಅನುಕೂಲವಾಗುತ್ತದೆ.

Magi Plowing

Land preparation for monsoon farming: ಪರ್ಯಾಯವಾಗಿ ತಂಪಾಗಿಸುವಿಕೆ ಮತ್ತು ಒಣಗಿಸುವಿಕೆಯಿಂದ ಮಣ್ಣಿನ ರಚನೆ ಸುಧಾರಿಸತ್ತದೆ ಹಾಗೂ ಗಾಳಿಯಾಡುವಿಕೆ ಪ್ರಮಾಣ ಹೆಚ್ಚಿಸಿ ಸೂಕ್ಷ್ಮಾಣುಜೀವಿಗಳ ಸಂಖ್ಯೆ ವೃದ್ಧಿಸುವುದು. ಇದರಿಂದಾಗಿ ಕೃಷಿ ತ್ಯಾಜ್ಯಗಳು ಬೇಗನೆ ಕೊಳೆತು ಬೆಳೆಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತವೆ.

ಮಣ್ಣಿನ ಮೇಲ್ಪದರ ಮೃದುವಾಗುವುದರಿಂದ ಬೇರುಗಳು ಸರಾಗವಾಗಿ ಆಳಕ್ಕೆ ಇಳಿದು ಬೆಳೆಗಳ ಬೆಳವಣಿಗೆಯಿಂದ ಉತ್ತಮ ಫಸಲನ್ನು ಪಡೆಯಬಹುದು. ಮಾಗಿ ಉಳುಮೆಯಿಂದ ಕೀಟ ಮತ್ತು ರೋಗಗಳ ಪಳಿಯುಳಿಕೆಗಳು ಸೂರ್ಯನ ಶಾಖಕ್ಕೆ ತೆರೆದಿಟ್ಟು ನಾಶಗೊಳ್ಳುತ್ತವೆ ಹಾಗೂ ಕೀಟರೋಗ ಬಾಧೆ ಹರಡುವಿಕೆ ಕಡಿಮೆಯಾಗುವುದು.

ಮಾಗಿ ಉಳುಮೆಯನ್ನು ಇಳಿ ಜಾರಿಗೆ ಅಡ್ಡಲಾಗಿ ಮಾಡುವುದರಿಂದ ಮಣ್ಣು, ನೀರಿನ ಸಂರಕ್ಷಣೆ ಮತ್ತು ಮಳೆ ನೀರು ಸಂಗ್ರಹಣೆ ಹಾಗೂ ಅದರ ದಕ್ಷ ಉಪಯೋಗವನ್ನು ಹೆಚ್ಚಿನ ಖರ್ಚಿಲ್ಲದೆ ಪಡಯಬಹುದು.

land preparatiom for monsoon farming

2) ಕಳೆಗಳ ನಿಯಂತ್ರಣ: (Weed control)

ಮಾಗಿ ಉಳುಮೆ ಕೈಗೊಳ್ಳುವ ಮೂಲಕ ಕರಿಕೆಯ ಬೇರುಗಳು ಹಾಗೂ ಜೇಕಿನ ಗಡ್ಡೆಗಳನ್ನು ಮತ್ತು ಇನ್ನಿತರ ಕಳೆಗಳ ಅವಶೇಷಗಳನ್ನು ಸುಲಭವಾಗಿ ಆರಿಸಿ ತೆಗೆಯಲು ಸಹಾಯವಾಗುವುದರಿಂದ ಮುಂದಿನ ಬೆಳೆಗಳಲ್ಲಿ ಇಂತಹ ಕಳೆಗಳನ್ನು ಪ್ರಥಮ ಹಂತದಲ್ಲಿಯೇ ಹತೋಟಿ ಮಾಡಬಹುದು.

ಕಳೆಗಳ ನಿಯಂತ್ರಣಕ್ಕಾಗಿ ತಗಲುವ ವೆಚ್ಚ ಮತ್ತು ಕಳೆನಾಶಕಗಳ ವೆಚ್ಚ ಮತ್ತು ಸಮಯವನ್ನು ಕಡಿಮೆಗೊಳಿಸಬಹುದಾಗಿದೆ. ಹಾಗೂ ಬೇಸಿಗೆಯಲ್ಲಿ ಮಾಗಿ ಉಳುಮೆಯಿಂದ ತಯಾರಾದ ಜಮೀನು ಮುಂಗಾರು ಮಳೆಯಾಗುತ್ತಿದ್ದರೆ ಹರಗಿ ಬಿತ್ತಲು ಸುಲಭವಾಗುತ್ತದೆ.

ಬಿತ್ತಿದ ಬೀಜದ ಮೊಳಕೆ ಪ್ರಮಾಣ ಹಾಗೂ ಸದೃಢ ಸಸಿಗಳ ಸಂಖ್ಯೆ ಹೆಚ್ಚಿ ಒಳ್ಳೆಯ ಬೆಳೆ ಬೆಳೆಯುವಲ್ಲಿ ಸಹಕಾರಿಯಾಗುತ್ತದೆ.

Land preparation for monsoon farming

3) ಕೀಟಗಳು ಮತ್ತು ರೋಗಾಣುಗಳ ನಿಯಂತ್ರಣ: (Control of pests and diseases)

ಹಿಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳಿಗೆ ಸಂಬಂಧಿಸಿದ ಕೀಟಗಳ ಕೋಶ ಮತ್ತು ಅವುಗಳ ತತ್ತಿಗಳು ಸೂರ್ಯನ ಶಾಖಕ್ಕೆ ಒಗ್ಗುವುದರಿಂದ ಜಮೀನಿನ ಒಳಗೆ ಇರಬಹುದಾದ ಪೈರಿನ ವೈರಿಗಳಾದ ಕೆಲವು ಕೀಟಗಳು ಮತ್ತು ಸಸ್ಯ ರೋಗಗಳ ರೋಗಾಣುಗಳನ್ನು ಕೋಶದ ಹಂತದಲ್ಲಿಯೇ ಹತೋಟಿ ಮಾಡಬಹುದು.

ಈ ಮೂಲಕ ಮುಂದೆ ಆಗಬಹುದಾದ ಕೀಟಗಳ ಹಾವಳಿಯನ್ನು ನಿಯಂತ್ರಿಸಿ ಕೀಟನಾಶಕಗಳು ಮತ್ತು ಪೀಡೆನಾಶಕಗಳಿಗೆ ತಗಲುವ ಅನವಶ್ಯಕ ಖರ್ಚನ್ನು ಕಡಿಮೆಗೊಳಿಸಬಹುದು.

4) ನೈಸರ್ಗಿಕ ಹಾಗೂ ಜೈವಿಕ ಪರಿಸರದ ಮೇಲೆ ಪರಿಣಾಮ: (Impact on natural and biological environment) 

ಮಾಗಿ ಉಳುಮೆಯಿಂದ ಕೀಟಗಳ ಕೋಶಗಳು ಮತ್ತು ರೋಗಾಣುಗಳನ್ನು ಪಕ್ಷಿಗಳು ಹೆಕ್ಕಿ ತಿನ್ನುವುದರಿಂದ ಜೈವಿಕವಾಗಿ ಕೀಟ ಮತ್ತು ರೋಗಗಳ ನಿಯಂತ್ರಣವಾಗುವುದಲ್ಲದೆ, ಮಣ್ಣಿನ ಆರೋಗ್ಯಕರ ಮಣ್ಣು ಮತ್ತು ಉತ್ತಮ ಪರಿಸರದಿಂದ ವಿಷಮುಕ್ತ ಆಹಾರವನ್ನು ಬೆಳೆಯುವುದರ ಜೊತೆಗೆ ಮಣ್ಣಿನಲ್ಲಿ ಜೈವಿಕ ಕ್ರಿಯೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.

5) ಬೆಳೆ ಉಳಿಕೆಗಳು : (Crop residues)

ಬೆಳೆ ಕಟಾವು ನಂತರ ಉಳಿದ ಬೆಳೆ ಉಳಿಕೆಗಳು ಮತ್ತು ತ್ಯಾಜ್ಯ ವಸ್ತುಗಳು ಮಣ್ಣಿನಲ್ಲಿ ಬೇಗನೆ ಕೊಳೆತು ಉತ್ತಮ ಸಾವಯವ ಗೊಬ್ಬರವಾಗಿ ಮುಂಬರುವ ಬೆಳೆಗಳಿಗೆ ಪೂರೈಕೆಯಾಗುತ್ತದೆ. ಇದರಿಂದ ಕೃಷಿಯಲ್ಲಿ ಸಾವಯವ ಪದಾರ್ಥಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಗೂ ಉತ್ಪಾದಕತೆ ಹೆಚ್ಚಿಸಬಹುದು.

ರೈತರು ಬೇಸಿಗೆಯಲ್ಲಿ ಮಾಗಿ ಉಳುಮೆ ಕೈಗೊಂಡು ನೈಸರ್ಗಿಕ ಹಾಗೂ ಜೈವಿಕ ವಿಧಾನಗಳಿಂದ ಪ್ರಕೃತಿದತ್ತವಾದ ಮಣ್ಣಿನ ಸಂಪತ್ತನ್ನು ಸಂರಕ್ಷಿಸುವುದು, ಅಭಿವೃದ್ಧಿಪಡಿಸುವುದು ಹಾಗೂ ಸಮರ್ಪಕ ರೀತಿಯಿಂದ ಬಳಸುವುದು ನಮ್ಮ ಕೈಯಲ್ಲಿಯೇ ಇದೆ.

ಆದ್ದರಿಂದ ರೈತರು ಮಣ್ಣು ಪರೀಕ್ಷೆ ಫಲಿತಾಂಶ ಆಧರಿಸಿ ಮೇಲೆ ಬೆಳೆಗಳಿಗೆ ಸಮತೋಲನ ರಸಗೊಬ್ಬರಗಳನ್ನು ಬಳಸಿದರೆ ಭೂಮಿಯ ಫಲವತ್ತತೆ ಹಾಗೂ ಉತ್ಪಾದಕತೆಯನ್ನು ಅಂದರೆ ಮಣ್ಣಿನ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ.

ಜೊತೆಗೆ ಕಡಿಮೆ ಖರ್ಚಿನ ಬೇಸಾಯವನ್ನು ಕೈಗೊಂಡು ಅಧಿಕ ಇಳುವರಿ ಪಡೆಯುವ ಮೂಲಕ ತಮ್ಮ ಆದಾಯವನ್ನೂ ಸಹ ಹೆಚ್ಚಿಸಿಕೊಳ್ಳಬಹುದು.

ಲೇಖಕರು : ರೇಣುಕಾ ಬಿರಾದಾರ, ಡಾ. ವಾಣಿಶ್ರೀ ಎಸ್. ಮತ್ತು ಅರವಿಂದ ರಾಥೋಡ್, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಲಿಂಗಸುಗೂರು

Published On: 05 May 2023, 12:51 PM English Summary: Traditional "Magi Plowing" to prepare the land for monsoon farming!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.