1. ಅಗ್ರಿಪಿಡಿಯಾ

ಕಾಡಿಗೆ ಮೆರಗು ನೀಡುತ್ತದೆ ಗುಲಗಂಜಿಯಂತಹ ಸಂಪತ್ತು

ಗುಲಗಂಜಿ ಎಂದರೆ ಬಹಳಷ್ಟು ಜನರಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ.ನಗರವಾಸಿಗಳಿಗೆ ಇದರ ಪರಿಚಯ ಕಡಿಮೆಯೇ ಎನ್ನಬಹುದು.ಬಂಗಾರದ ಕೆಲಸ ಮಾಡುವವರಿಗೆ ಇದು ಚಿರಪರಿಚಿತ. ಹಿಂದಿನ ದಿನಗಳಲ್ಲಿ ಬಂಗಾರವನ್ನು ಗುಲಗಂಜಿ ತೂಕದಲ್ಲಿಯೇ ತೂಗುತ್ತಿದ್ದರಂತೆ. ನೋಡಲು ಕೃತಕ ವಸ್ತುವಿನಂತೆ ಕಂಡರೂ ಪ್ರಕೃತಿದತ್ತವಾಗಿ ಬಂದ ಸಂಪತ್ತು ಗುಲಗಂಜಿ. ಗಾಢ ಕೆಂಪು ಮತ್ತು ಕಪ್ಪು ಬಣ್ಣದ ಅದರ ಸೌಂದರ್ಯಕ್ಕೆ ಮನಸೋತವರೇ ಇಲ್ಲ, ಗುಲಗಂಜಿಯ ಗಿಡ ಹಳದಿ ಬಣ್ಣದಾಗಿದ್ದು, ಕೆಂಪು ಹೂವುಗಳನ್ನು ಬಿಡುತ್ತದೆ. ಕಡು ಕೆಂಪಿನ ತುದಿಯಲ್ಲಿ ಕಪ್ಪು ಟೋಪಿಯಂತಿರುವ ಸಣ್ಣ ಬೀಜವಿದ್ದು ನೋಡಲು ಮೊಟ್ಟೆಯ ಆಕಾರದಲ್ಲಿರುತ್ತದೆ. ಈ ಗುಲಗಂಜಿಯ  ಬಳ್ಳಿ ನನಗೆ ಆಕರ್ಷಿಸಿದ್ದನ್ನು ಇಲ್ಲಿ ಅಕ್ಷರದ ರೂಪದಲ್ಲಿ ಇಳಿಸಿದ್ದೇನೆ. ನೀವು ಈ ಲೇಖನ ಓದಿ ಆನಂದಿಸುತ್ತೀರೆಂಬ ಆಶಾಭಾವನೆ ನನ್ನದು.

ಒಮ್ಮೆ ಹೀಗೆ ಕಾಡಿನ ದಾರಿಯಲ್ಲಿ ಹಾದು ಹೋಗುತ್ತಿರುವಾಗ ಕೆಂಪು ಹವಳದಂತಹ ಬೀಜಗಳು ಆಕರ್ಷಿಸಿದವು. ಅದು ಒಂದು ಮರವನ್ನು ಆಶ್ರಯಿಸಿ, ಮರದ ಸುತ್ತೆಲ್ಲಾ ಹಬ್ಬಿಕೊಂಡಿತ್ತು. ಹತ್ತಿರ ಹೋಗಿ ನೋಡಿದಾಗ ಅದೇ ಗುಲಗಂಜಿ, ಒಂದುಬಳ್ಳಿಯಲ್ಲಿ ಬಿಟ್ಟಿತ್ತು, ಅದೇ ಮೊದಲ ಬಾರಿ ನಾನು ಗುಲಗಂಜಿ ಬೀಜಗಳನ್ನು ಕಂಡದ್ದು. ನನ್ನ ಗೆಳತಿ ಇದೇ ಗುಲಗಂಜಿ ತರಹದ ಬೀಜಗಳನ್ನು (ಬಣ್ಣ ಮತ್ತು ಆಕಾರದಲ್ಲಿ) ಮರದಲ್ಲಿ ಬಿಟ್ಟಿರುವುದನ್ನು ಗಮನಿಸಿದ್ದಳು.

ಹೀಗೆ ಮಾತನಾಡುವಾಗ ಗುಲಗಂಜಿಯ ವಿಷಯ ಪ್ರಸ್ತಾಪವಾಯಿತು, ನಾನು ಗುಲಗಂಜಿ ಬಳ್ಳಿಯಲ್ಲಿ ಬಿಡುತ್ತದೆ ಎಂದು; ನನ್ನ ಗೆಳತಿ ಅವು ಮರದಲ್ಲಿ ಬಿಡುತ್ತದೆ ಎಂದು ಇದರ ಬಗ್ಗೆ ಮಾತಿನ ಚಕಮಕಿ ನಡೆದಿತ್ತು. ಕೊನೆಗೆ ಪರೀಶೀಲಿಸಿ ನೋಡಿದಾಗ ಅದು ಎರಡರಲ್ಲು ಲಭ್ಯವಿದೆ ಎಂದಾಯಿತು. ಹಾಗಾದರೆ ಅಸಲಿ ಗುಲಗಂಜಿಯಾವುದು?

ಅಸಲಿ ಗುಲಗಂಜಿಯು ಬಳ್ಳಿಯಾಗಿದ್ದು, ಇದರ ಬೀಜದಂತೆಯೇ ಹೋಲುವ ಮರವನ್ನು ಗುಲಗಂಜಿ ಮರ ಎಂದು ಕರೆಯುತ್ತಾರೆ (ಬೀಜಗಳ ಬಣ್ಣ, ಗಾತ್ರ ಮತ್ತು ವಿನ್ಯಾಸವು ಹೋಲಿಕೆ ಹೊಂದಿದ್ದು ಆದರೆ ಹೂವಿನ ಬಣ್ಣ, ಗಿಡದ ವಿನ್ಯಾಸ ಮತ್ತು ಔಷಧಿ ಗುಣಗಳಲ್ಲಿ ವ್ಯತ್ಯಾಸವಿದೆ.).

ಗುಲಗಂಜಿಯ ವೈಜ್ಞಾನಿಕ ಹೆಸರು ಅಬ್ರಸ್ ಪ್ರಿಕಾಟೋರಿಯಸ್, ಇದು ಫ್ಯಾಬೇಸಿಯೇ ಕುಟಂಬಕ್ಕೆ ಸೇರಿದೆ. ಇದರ ಇತರೆ ಹೆಸರುಗಳು  ಮಾರಕಏಡಿಯಕಣ್ಣು, ಹವಳ ಮಣಿ ಸಸ್ಯ, ಜಂಬಿ ಮಣಿಗಳು ಹಾಗೂ ಅಬ್ರಸ್ ಬೀಜ, ಜಾನ್ ಕಾಗೆ ಮಣಿ (ಇಂಗ್ಲೀಷ್), ಗುಲಗಂಜಿ/ಗುರಗಂಜಿ (ಕನ್ನಡ), ಗುಂಜಾ/ ಗುಂಜ್ (ಹಿಂದಿ), ಕುಂಚ್(ಬಂಗಾಳಿ), ಮುಲಾಟಿ (ಪಂಜಾಬಿ), ಗುಂಡುಮಣಿ/ ಕುಂದಮಣಿ (ತಮಿಳು), ಗುರುಗಿಂಜ (ತೆಲುಗು), ಕನ್ನಿಕುರು (ಮಲಯಾಳಂ).

ಬಳಕೆಗೆ ತಕ್ಕಂತಹ ಹೆಸರುಗಳು

  • ಹವಳ ಬಟಾಣಿ (ಮಣಿ ಸಸ್ಯ) - ಬೀಜಗಳು ನೋಡಲು ಕೆಂಪು ಬಣ್ಣದಚಿಕ್ಕಹವಳಗಳಂತೆ ಇರುವುದರಿಂದ.
  • ಜಪಮಾಲೆ ಮಣಿಗಳು, ಪ್ರಾರ್ಥನೆ ಮಣಿಗಳು- ವ್ಯಾಪಾರ ಮತ್ತು ಉದ್ಯೋಗಗಳ ಅಭಿವೃದ್ಧಿಗಾಗಿ ಪ್ರಾರ್ಥನಾ ಸಾಮಾಗ್ರಿಯಾಗಿ ಈ ಮಣಿಗಳನ್ನು ಬಳಸುವ ಪ್ರತೀತಿ ಇದೆ.
  • ಭಾರತೀಯ ಲಿಕೋರೈಸ್- ಬೇರಿನ ಔಷಧಿ ಗುಣಗಳು ಲಿಕೋರೈಸ್ (ಮುಲೇಥಿ)ನಂತೆ ಇರುವುದರಿಂದ.

ಗುಲಗಂಜಿಯು ಔಷಧೀಯ ಸಸ್ಯವಾಗಿದ್ದು, ಗಿಡಮೂಲಿಕೆಗಳಲ್ಲಿ ಬಳಸಲಾಗುತ್ತದೆ. ಪ್ರತಿಯೊಂದು ಬೀಜಗಳ ತೂಕವು ಒಂದೇ ಸಮಾನವಾಗಿರುತ್ತವೆ. ಆದ್ದರಿಂದ ಅಕ್ಕಸಾಲಿಗರು ಅಮೂಲ್ಯವಾದ ಲೋಹ ಮತ್ತು ವಜ್ರಗಳನ್ನು ತೊಗಲು ಬಳಸುತ್ತಿದ್ದರು. ಈ ಬೀಜಗಳನ್ನು ಆಭರಣ ಮತ್ತು ಜಪಮಾಲೆ ತಯಾರಿಸಲು ಸಹ ಬಳಸುತ್ತಾರೆ. ಈಗಂತೂ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಆಭರಣಗಳಿಗೆ ಬೇಡಿಕೆ ಹೆಚ್ಚು ಹಾಗಾಗಿ ಇದರ ಬಳಕೆ ಆಭರಣ ತಯಾರಿಕೆ ಮತ್ತು ಕರಕುಶಲ ವಸ್ತುಗಳಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯಕಾರಣ, ಕಾಲ ಬದಲಾದಂತೆ ಇದರ ಬಣ್ಣ ಮಾಸುವುದಿಲ್ಲ ಮೊದಲಿನಂತೆ ಕಡು ಕೆಂಪು ಬಣ್ಣವನ್ನು ಇದು ಉಳಿಸಿಕೊಂಡಿರುತ್ತದೆ.

ಇದು ಬೇರೆ ಮರಗಳನ್ನು ಆಶ್ರಯಿಸಿ ಬೆಳೆಯುವ ಬಳ್ಳಿಯಾಗಿದೆ. ಮಸುಕಾದ ಗುಲಾಬಿ ಬಣ್ಣದ ಹೂಗಳು, ಕಾಯಿಗಳು ಹಣ್ಣಾದ ನಂತರ ಇಬ್ಭಾಗವಾಗಿ ಆಕರ್ಷಿಸುವ ಕೆಂಪು ಬೀಜಗಳು ಹೊರಕಾಣುತ್ತವೆ. ಸಸ್ಯದ ಅತ್ಯಂತ ವಿಷಕಾರಿಭಾಗವೆಂದರೆ ಬೀಜ. ಎಲೆಗಳು ಮತ್ತು ಬೇರುಗಳು ಸಿಹಿಯಾಗಿರುತ್ತದೆ. ಬೀಜಗಳು ವಿಭಿನ್ನ ಬಣ್ಣಗಳಲ್ಲಿ ಅಂದರೆ ಕಪ್ಪು ಕೆಂಪು ಮಿಶ್ರಿತ, ಬಿಳಿ, ಹಸಿರು, ಕಪ್ಪು ಬಣ್ಣದಲ್ಲಿ ದೊರೆಯುತ್ತದೆ. 

ಉಪಯೋಗಗಳು:

  • ಗುಂಜಾ ಬೀಜಗಳನ್ನು ಮಾಪನದ ಪ್ರಮುಖಘಟಕವಾಗಿ ಬಳಸಲಾಗುತ್ತದೆ. ಒಂದುಗುಂಜ ಬೀಜವನ್ನು 125 ಮಿಲೀ. ಗ್ರಾಂ ತೂಕ ಎಂದು ಪರಿಗಣಿಸಲಾಗುತ್ತದೆ. (8 ಬೀಜಗಳು =  1 ಗ್ರಾಂ)
  • ಇದರ ಬೀಜಗಳು ಮತ್ತು ಬೇರುಗಳನ್ನು ಕೂದಲು ಉದರುವುದು, ಸಂಧಿವಾತ ಮತ್ತು ಕಾಮೋತ್ತೇಜಕವಾಗಿ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
  • ಬಿಳಿ ಗುಲಗಂಜಿಯ ಬೇರಿನ ಪುಡಿಯನ್ನು ಲೈಂಗಿಕ ದುರ್ಬಲತೆಯನ್ನು ಸರಿಪಡಿಸಲು ಬಳಸಲಾಗುತ್ತದೆ.
  • ಕೆಂಪು ಗುಲಗಂಜಿಯ ಬೇರಿನ ಪುಡಿಯನ್ನು ಹೆಣ್ಣುಮಕ್ಕಳಲ್ಲಿ ಹಾರ್ಮೋನ್‍ನ ವ್ಯತ್ಯಾಸದ ಸಮತೋಲನಕ್ಕಾಗಿ ಬಳಸಲಾಗುತ್ತದೆ.

ಅಡ್ಡ ಪರಿಣಾಮಗಳು:

  • ಸರಿಯಾಗಿ ಶುದ್ಧೀಕರಿಸದಿದ್ದರೆ ಅಥವಾ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಸಿದರೆ ಇದು ತೀವ್ರ ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗಬಹುದು.
  • ಗಾಯಗಳ ಮೇಲೆ ಬಳಸುವ ಶುದ್ಧೀಕರಿಸದ ಬೀಜದ ಪುಡಿ ಅಥವಾ ರಕ್ತದೊಂದಿಗೆ ನೇರ ಸಂಪರ್ಕವು ವಿಷಕಾರಿ ಪರಿಣಾಮಗಳನ್ನು ಉಂಟು ಮಾಡುತ್ತದೆ.
  • ಬೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿದರೆ ವಾಂತಿಗೆ ಕಾರಣವಾಗಬಹುದು.
  • ಗರ್ಭಾವಸ್ಥೆಯಲ್ಲಿ ಹಾಗೂ ಹಾಲುಣಿಸುವ ಮತ್ತು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಗುಂಜಾ ಅಥವಾ ಅದರಲ್ಲಿರು ವಔಷಧಿಯನ್ನು ತಪ್ಪಿಸುವುದು ಉತ್ತಮ.

ಮರದ ವಿವರಣೆ:

 ಕನ್ನಡದಲ್ಲಿ ಈ ಮರವನ್ನು ಗುಲಗಂಜಿ ಮರ ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಅಡೆನೆಂಥರಾ ಪಾವೋನಿನಾ, ಇದುಕೂಡ ಫ್ಯಾಬೇಸಿಯೇ ಕುಟುಂಬಕ್ಕೆ ಸೇರಿದೆ.

ಮರದ ಮೂಲವು ಭಾರತ ಮತ್ತು ಆಗ್ನೇಯಚೀನಾ ಎಂದು ನಂಬಲಾಗಿದೆ. ಇದು ಮಧ್ಯಮಗಾತ್ರದÀ ಮರವಾಗಿದ್ದು, ಇದು ಸುಮಾರು 30 ಮೀ ಎತ್ತರಕ್ಕೆ ಬೆಳೆಯುತ್ತದೆ. ಹೂವುಗಳು ವರ್ಷಕ್ಕೆ ಎರಡು ಬಾರಿ ಬಿಡುತ್ತವೆ. ಸಣ್ಣ ಹಳದಿ ಬಣ್ಣದ ಹೂವುಗಳು ಸೌಮ್ಯ ಸುಗಂಧವನ್ನು ಹೊಂದಿರುತ್ತದೆ.

ಚಳಿಗಾಲದಲ್ಲಿ ಹೂವುಗಳು ಬಿಟ್ಟು ಬೇಸಿಗೆಯಲ್ಲಿ ಕಾಯಿ ಕಟ್ಟುತ್ತದೆ. ಕಾಯಿಗಳು ಹುಣಸೆ ಹಣ್ಣಿನಂತೆ ಗೊಂಚಲು- ಗೊಂಚಲಾಗಿ ಬಿಡುತ್ತದೆ. ಹಣ್ಣಾದ ನಂತರ ಮರದಲ್ಲೇಒಣಗಿಕಂದು ಬಣ್ಣಕ್ಕೆತಿರುಗುತ್ತದೆ. ಸಿಪ್ಪೇಗಳು ಇಬ್ಭಾಗವಾಗಿಕೆಂಪಾದ ಬೀಜಗಳು ಹೊರಕಾಣುತ್ತವೆ. ಹೆಚ್ಚಾಗಿ ಉಷ್ಣವಲಯದಲ್ಲಿ ಈ ಮರಗಳನ್ನು ಕಾಣಬಹುದು. ರುಚಿಯಲ್ಲಿ ಸಿಹಿಯಾಗಿರುವ ಎಲೆಗಳಲ್ಲಿ ಗ್ಲೈಸಿರೈಜಿನ್(10 %),ಅಬ್ರಿನ್, ಹೆಪಾಫೊಟಿನ್, ಕೋಲಿನ್, ಪ್ರಿಕ್ಟೋರಿನ್‍ ಇರುತ್ತದೆ.

ಲೇಖನ: 1. ಪವಿತ್ರ, ಎಸ್ -ಸಹಾಯಕ ಪ್ರಾಧ್ಯಪಕರು, ಹಣ್ಣಿನ ವಿಭಾಗ, (ಗುತ್ತಿಗೆ ಆಧಾರಿತ) ತೋಟಗಾರಿಕೆ ಕಾಲೇಜು, ಮೂಡಿಗೆರೆ, 2. ವಿದ್ಯಾ. ಎಸ್. ಪಿ. ತೋಟಗಾರಿಕೆ ಕಾಲೇಜು, ಬೆಂಗಳೂರು. 3.ಕವನ. ಜಿ. ಬಿ. -ಸಹಾಯಕ ಪ್ರಾಧ್ಯಪಕರು, ಪುಷ್ಪ ಕೃಷಿ ಮತ್ತು ಉದ್ಯಾನ ವಿನ್ಯಾಸ, (ಗುತ್ತಿಗೆ ಆಧಾರಿತ) ತೋಟಗಾರಿಕೆ ಕಾಲೇಜು, ಮೂಡಿಗೆರೆ.

Published On: 26 November 2020, 09:03 AM English Summary: Rosary pea

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.