1. ಅಗ್ರಿಪಿಡಿಯಾ

ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ಹಸಿರೆಲೆ ಗೊಬ್ಬರದ ಪಾತ್ರ

Kalmesh T
Kalmesh T
Role of green manure in soil fertility - ಲೇಖಕರು: ನಾಗೇಶ್, ಸಿ. ಆರ್., ಸಹನ. ಎಸ್.ಆರ್., ಡಾ. ಸೌಮ್ಯಲತಾ ಬಿ. ಎಸ್., (ಕೃಷಿ ಸಂಶೋಧನಾ ಕೇಂದ್ರ, ವಿ. ಸಿ. ಫಾರಂ., ಮಂಡ್ಯ)

ರಾಸಾಯನಿಕ ವಸ್ತುಗಳ ಬಳಕೆಯಿಂದ ಬರಡಾಗುತ್ತಿರುವ ಭೂಮಿಗೆ ಚೈತನ್ಯ ತುಂಬಲು ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಿಸುವುದು ಅಗತ್ಯ ಮತ್ತು ಅನಿವಾರ್ಯ. ಈ ನಿಟ್ಟಿನಲ್ಲಿ ಹಸಿರೆಲೆ ಗೊಬ್ಬರಗಳು ಯಾವ ರೀತಿ ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ ಎನ್ನವುದು ಇಲ್ಲಿದೆ.

ಇನ್ನಷ್ಟು ಓದಿರಿ: ರಾಗಿ ಬೆಳೆಯ ವೈಜ್ಞಾನಿಕ ಉತ್ಪಾದನಾ ತಾಂತ್ರಿಕತೆಗಳು

ಅತಿಯಾದ ರಸಗೊಬ್ಬರ ಹಾಗೂ ಪೀಡೆನಾಶಗಳ ಬಳಕೆಯಿಂದ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು, ನಮ್ಮ ಸುತ್ತಮುತ್ತಲಿನ ವಾತಾವರಣ, ಸಸ್ಯ ಮತ್ತು ಪ್ರಾಣಿ ಸಂಕುಲಗಳು ಮಲಿನಗೊಳ್ಳುವುದರ ಜೊತೆಗೆ ಭೂಮಿಯ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಧರ್ಮಗಳು ಕ್ಷೀಣಿಸುತ್ತಿದ್ದು, ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆ ಕುಂಠಿತಗೊಳ್ಳುತ್ತಿದೆ.

ರಾಸಾಯನಿಕ ವಸ್ತುಗಳ ಬಳಕೆಯಿಂದ ಬರಡಾಗುತ್ತಿರುವ ಭೂಮಿಗೆ ಚೈತನ್ಯ ತುಂಬಲು ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಿಸುವುದು ಅಗತ್ಯ ಮತ್ತು ಅನಿವಾರ್ಯ. ಈ ನಿಟ್ಟಿನಲ್ಲಿ ಹಸಿರೆಲೆ ಗೊಬ್ಬರಗಳು ಬಹುಮುಖ್ಯ ಪಾತ್ರವಹಿಸುತ್ತವೆ.

ಹಸಿರೆಲೆ ಗೊಬ್ಬರ ಎಂದರೇನು?

ಹಸಿರೆಲೆ ಗೊಬ್ಬರದ ಬೆಳೆಗಳು, ಗಿಡ, ಮರ, ಎಲೆಗಳು, ಕಾಂಡ, ಇತರ ಭಾಗಗಳು ಮತ್ತು ಕಳೆಗಳನ್ನು ಹಸಿರಾಗಿದ್ದಾಗಲೇ ಮಣ್ಣಿಗೆ ಗೊಬ್ಬರವಾಗಿ ಸೇರಿಸಿ ಅದರ ಫಲವತ್ತತೆಯನ್ನು ಹೆಚ್ಚಿಸುವುದಕ್ಕೆ ಹಸಿರೆಲೆ ಗೊಬ್ಬರ ಎಂದು ಕರೆಯುತ್ತೇವೆ.

ಇವುಗಳು ಹೆಚ್ಚಾಗಿ ದ್ವಿದಳ ಧಾನ್ಯದ ಬೆಳೆಗಳಾಗಿದ್ದು, ಪ್ರಮುಖ ಬೆಳೆ ಬೆಳೆಯುವ ಜಮೀನಿನಲ್ಲೇ ಬೆಳೆದು ಅಥವಾ ಬೇರೆಡೆಯಿಂದ ತಂದು ಭೂಮಿಗೆ ಸೇರಿಸಬಹುದು. ಹಸಿರೆಲೆ ಗೊಬ್ಬರಗಳು ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತವೆ ಹಾಗೂ ಇದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿ ಸುಸ್ಥಿರ ಇಳುವರಿಯನ್ನು ಪಡೆಯಬಹುದಾಗಿದೆ.

ಇದನ್ನೂ ಓದಿರಿ: ಸಾಸಿವೆ ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆ ಪಡೆಯಲು ಇಲ್ಲಿದೆ ಸರಳ ಮಾರ್ಗಗಳು

ಹಸಿರೆಲೆ ಗೊಬ್ಬರದ ಮಹತ್ವ

ಕೃಷಿಯಲ್ಲಿ ಹಸಿರೆಲೆ ಗೊಬ್ಬರಗಳ ಬಳಕೆ ನೂರಾರು ವರ್ಷಗಳಿಂದ ರೂಢಿಯಲ್ಲಿರುವ ಪದ್ದತಿ. ಇದು ಮಣ್ಣಿನ ಫಲವತ್ತತೆ ಮತ್ತು ಭೌತಿಕ ಗುಣಧರ್ಮಗಳನ್ನು ಕಾಪಾಡುವಲ್ಲಿ ಬಹಳ ಪರಿಣಾಮಕಾರಿಯಾದ ಪದ್ಧತಿ. ಆದರೆ, ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಉಪಯೋಗ ಅಧಿಕವಾಗುತ್ತಾ ಹೋದಂತೆ, ಹಸಿರೆಲೆ ಗೊಬ್ಬರಗಳ ಉಪಯೋಗದ ಪ್ರಮಾಣ ಕಡಿಮೆಯಾಗುತ್ತಿದೆ.

ರಸಗೊಬ್ಬರಗಳ ಬೆಲೆ ಅಧಿಕವಾಗುತ್ತಿರುವ ಈ ಕಾಲದಲ್ಲಿ ಸುಲಭ ಮತ್ತು ಅಗ್ಗವಾಗಿ ಒದಗುತ್ತಿರುವ ಮತ್ತು ಉಪಯೋಗಿಸಬಹುದಾದ ಹಸಿರೆಲೆ ಗೊಬ್ಬರಗಳ ಬಗ್ಗೆ ಮತ್ತೆ ಗಮನಹರಿಸುವುದು ಅವಶ್ಯಕ.

ಹಸಿರೆಲೆ ಗೊಬ್ಬರಕ್ಕಾಗಿ ಗಿಡಗಳನ್ನು ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳು:

ಒಂದು ನಿರ್ದಿಷ್ಟ ಜಮೀನಿನಲ್ಲಿ ಅನುಸರಿಸುತ್ತಿರುವ ಬೆಳೆ ಪರಿವರ್ತನೆ, ಮಣ್ಣಿನ ತೇವಾಂಶ ಹಿಡಿದಿಡುವ ಸಾಮಥ್ರ್ಯ, ಆ ಪ್ರದೇಶದ ಹವಾಮಾನ ಹಾಗೂ ಮಣ್ಣಿನ ಗುಣಧರ್ಮಗಳ ಆಧಾರದ ಮೇಲೆ ಹಸಿರುಗೊಬ್ಬರದ ಸಸ್ಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಹಸಿರೆಲೆ ಗೊಬ್ಬರಕ್ಕಾಗಿ ಗಿಡಗಳನ್ನು ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳು ಯಾವುವೆಂದರೆ,

 • ಎರಡು ಬೆಳೆಗಳ ನಡುವೆ ಅಲ್ಪಾವಧಿಯಲ್ಲಿ ತ್ವರಿತವಾಗಿ ಬೆಳೆದು ಯಥೇಚ್ಚವಾಗಿ ಸೊಪ್ಪನ್ನು ಕೊಡುವಂತಿರಬೇಕು. ಎಳಸಾಗಿದ್ದು ಕಡಿಮೆ ನಾರಿನಿಂದ ಕೂಡಿರಬೇಕು ಮತ್ತು ಮಣ್ಣಿಗೆ ಸೇರಿಸಿದಾಗ ಸುಲಭವಾಗಿ ಹಾಗೂ ಶೀಘ್ರವಾಗಿ ಕೊಳೆಯುವಂತಿರಬೇಕು, ಕಡಿಮೆ ನೀರನ್ನು ಉಪಯೋಗಿಸಿಕೊಂಡು ಶುಷ್ಕ ವಾತಾವರಣದಲ್ಲೂ ಕಡಿಮೆ ಫಲವತ್ತತೆಯಿರುವ ಭೂಮಿಯಲ್ಲೂ ಹುಲುಸಾಗಿ ಬೆಳೆಯುವಂತಿರಬೇಕು.
 • ಆಳವಾಗಿ ಬೇರು ಬಿಡುವಂತಿದ್ದು ಕೆಳಪದರಗಳಿಂದ ನೀರು ಮತ್ತು ಪೋಷಕಾಂಶಗಳನ್ನು ಉಪಯೋಗಿಸಿಕೊಂಡು ಬೆಳೆಯುವ ಗುಣವಿರಬೇಕು.
 • ದ್ವಿದಳ ಧಾನ್ಯದ ವರ್ಗಕ್ಕೆ ಸೇರಿದ್ದು, ವಾತಾವರಣದಲ್ಲಿರುವ ಸಾರಜನಕವನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ಥಿರೀಕರಿಸಿ ಬೆಳೆಗಳಿಗೆ ಒದಗಿಸುವಂತಿರಬೇಕು.

ಯಾವುದೇ ಕಾಲದಲ್ಲೂ ಹುಲುಸಾಗಿ ಬೆಳೆಯುವ ಗುಣ ಹೊಂದಿದ್ದು, ಹವಾಮಾನ ವೈಪರೀತ್ಯಗಳನ್ನು ತಡೆದುಕೊಂಡು ಬೆಳೆಯಬೇಕು ಹಾಗೂ ಜಾನುವಾರುಗಳಿಗೆ ಒಳ್ಳೆಯ ಮೇವನ್ನು ಒದಗಿಸುವಂತಿರಬೇಕು.

ಉತ್ಪಾದನೆ ಮತ್ತು ಬಳಕೆ

ಹಸಿರೆಲೆ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಹೊಲಗಳಲ್ಲೇ ಬೆಳೆಯುವುದು ರೈತರಿಗೆ ಹೆಚ್ಚು ಅನುಕೂಲಕರ. ಹಸಿರೆಲೆ ಗೊಬ್ಬರದ ಸಸ್ಯಗಳನ್ನು ಹೂ ಬಿಡುವುದಕ್ಕಿಂತ ಮುಂಚೆಯೇ ಮಣ್ಣಿನೊಳಗೆ ಸೇರಿಸಬೇಕು. ಇಲ್ಲವಾದಲ್ಲಿ ಕಾಂಡದಲ್ಲಿ ನಾರಿನಂಶ ಹೆಚ್ಚಾಗಿ ಕಳಿಯುವಿಕೆ ಸಮಯ ಹೆಚ್ಚಾಗುತ್ತದೆ.

ಈ ಬೆಳೆಗಳನ್ನು ಬೆಳೆದಾಗ ಅವುಗಳ ಬೇರುಗಳ ಗಂಟುಗಳಲ್ಲಿ ಸಾರಜನಕ ಸ್ಥಿರೀಕರಣವಾಗುತ್ತದೆ. ನಂತರ ಸಂಗ್ರಹವಾದ ಸಾರಜನಕ ಅಂಶ ಮಣ್ಣಿನಲ್ಲಿ ಬೆರೆತು ಫಲವತ್ತತೆಯನ್ನು ಹೆಚ್ಚಿಸುತ್ತದೆ.

ಹಸಿರೆಲೆ ಗೊಬ್ಬರದ ವಿಧಾನಗಳು

 1. ಹಸಿರೆಲೆ ಗೊಬ್ಬರದ ಬೆಳೆಗಳನ್ನು ಸ್ಥಳದಲ್ಲಿಯೇ ಬೆಳೆದು ಮಣ್ಣಿಗೆ ಸೇರಿಸುವುದು: ಕೃಷಿಗೆ ಯೋಗ್ಯವಲ್ಲದ ಅಥವಾ ಯೋಗ್ಯವಿರುವ ಜಮೀನುಗಳಲ್ಲಿ ಹಸಿರೆಲೆ ಗೊಬ್ಬರಗಳ ಬೆಳೆಗಳನ್ನು ಮುಖ್ಯ ಬೆಳೆ ಬೆಳೆಯುವುದಕ್ಕಿಂತ ಮೊದಲು ಅಥವಾ ನಂತರ ಬೆಳೆದು ಹೂ ಬಿಡುವ ಹಂತದಲ್ಲಿ ಅಂದರೆ ಸುಮಾರು 40 ರಿಂದ 50 ದಿವಸಗಳಿರುವಾಗ ಉಳುಮೆ ಮಾಡುವುದರ ಮೂಲಕ ಮಣ್ಣಿಗೆ ಸೇರಿಸುವುದು. ಉದಾಹರಣೆಗೆ: ಹುರಳಿ, ಅಲಸಂದೆ, ಅಪ್‍ಸೆಣಬು, ಡಯಂಚ, ಸ್ಟೈಲೋಕ್ಸಾಂಥಸ್ ಇತ್ಯಾದಿ.
 2. ಗಿಡ ಅಥವಾ ಮರಗಳಿಂದ ಹಸಿರೆಲೆಗಳನ್ನು ಕ್ರೋಡೀಕರಿಸಿ ಮಣ್ಣಿಗೆ ಸೇರಿಸುವುದು: ಕೃಷಿಗೆ ಯೋಗ್ಯವಲ್ಲದ ಜಮೀನುಗಳಲ್ಲಿ (ಗೋಮಾಳ, ಅರಣ್ಯ ಪ್ರದೇಶ, ಬದುಗಳ ಮೇಲೆ, ರಸ್ತೆ ಬದಿಗಳಲ್ಲಿ) ಬೆಳೆದ ಹಸಿರು ಗಿಡಗಳನ್ನು ಮೃದುವಾದ ಕಾಂಡ ಸಹಿತ ತಂದು ಕೃಷಿ ಜಮೀನಿನ ಮಣ್ಣಿನಲ್ಲಿ ಸೇರಿಸುವುದು. ಉದಾಹರಣೆಗೆ: ಹೊಂಗೆಸೊಪ್ಪು, ಗ್ಲಿರಿಸೀಡಿಯಾ, ಎಕ್ಕ, ಸುಬಾಬುಲ್, ಬೇವು, ಕಕ್ಕೆಮರ ಇತ್ಯಾದಿ ಹಸಿರು ಗೊಬ್ಬರಗಳನ್ನು ಬಳಸುವಾಗ ಅನುಸರಿಸಬೇಕಾದ ಕ್ರಮಗಳು:
 3. ಜಮೀನುಗಳಲ್ಲಿ ಹಸಿರು ಗೊಬ್ಬರದ ಬೀಜಗಳನ್ನು ಬಿತ್ತನೆ ಮಾಡುವುದಕ್ಕೆ ಮುಂಚಿತವಾಗಿ ಸಾವಯವ ಗೊಬ್ಬರಗಳನ್ನು ಭೂಮಿಗೆ ಸೇರಿಸಬೇಕು. ಭೂಮಿಗೆ ಶಿಲಾ ರಂಜಕ ಗೊಬ್ಬರಗಳನ್ನು ಸೇರಿಸುವುದರಿಂದ ದ್ವಿದಳ ಧಾನ್ಯ ವರ್ಗಕ್ಕೆ ಸೇರಿದ ಹಸಿರು ಗೊಬ್ಬರದ ಗಿಡಗಳ ಬೇರುಗಳಲ್ಲಿ ಗಂಟುಗಳು ವೃದ್ಥಿಸಿ, ವಾತಾವರಣದಲ್ಲಿರುವ ಸಾರಜನಕವನ್ನು ಮಣ್ಣಿನಲ್ಲಿ ಸ್ಥಿರೀಕರಿಸುತ್ತವೆ ಹಾಗೂ ಬೆಳವಣಿಗೆ ಕೂಡ ವೃದ್ಧಿಸುತ್ತದೆ.
 4. ಮೊದಲ ಮಳೆ ಬಂದಾಗ ಅಥವಾ ಮುಖ್ಯ ಬೆಳೆ ಕಟಾವಾದ ನಂತರ ಮುಂದಿನ ಬೆಳೆಗೆ ಸಾಕಷ್ಟು ಸಮಯವಿದ್ದಲ್ಲಿ ಮಣ್ಣಿನಲ್ಲಿರುವ ತೇವಾಂಶವನ್ನು ಉಪಯೋಗಿಸಿಕೊಂಡು, ಹಸಿರು ಗೊಬ್ಬರದ ಬೆಳೆಯ ಹೆಚ್ಚು ಬೀಜಗಳನ್ನು ಉಪಯೋಗಿಸಿ ಬಿತ್ತುವುದರಿಂದ ಹೆಚ್ಚು ಹಸಿರೆಲೆ ಇಳುವರಿ ಬರುತ್ತದೆ.
 5. ಸಕಾಲದಲ್ಲಿ ಅಂದರೆ ಹೂ ಬಿಡುವ ಹಂತದಲ್ಲಿ ಗಿಡಗಳನ್ನು ಭೂಮಿಗೆ ಸೇರಿಸಬೇಕು, ಮುಂಚಿತವಾಗಿ ಕತ್ತರಿಸಿದರೆ ಸೊಪ್ಪಿನ ಇಳುವರಿ ಕಡಿಮೆ ಆಗುತ್ತದೆ. ತಡ ಮಾಡಿ ಕತ್ತರಿಸಿದರೆ ಗಿಡಗಳು ಬಲಿತು ನಾರಿನಂಶ ಹೆಚ್ಚಾಗಿ ಭೂಮಿಯಲ್ಲಿ ಕಳಿಯಲು ಹೆಚ್ಚು ಸಮಯ ಬೇಕಾಗುತ್ತದೆ.
 6. ಹಸಿರು ಗೊಬ್ಬರವನ್ನು ನೇಗಿಲ ಸಾಲಿನಲ್ಲಿ ಹಾಕಿ ಭೂಮಿಯಲ್ಲಿ ಸೇರಿಸಬೇಕು. ಬೇರೆ ಕಡೆಗಳಿಂದ ತಂದ ಸೊಪ್ಪನ್ನು ಕತ್ತರಿಸಿ ನೆಲದ ಮೇಲೆ ಹರಡಿ ಉಳುಮೆ ಮಾಡಿ ಮುಚ್ಚಬೇಕು. ಕೆಸರು ಗದ್ದೆಗಳಲ್ಲಿ ಹಸಿರು ಗೊಬ್ಬರದ ಗಿಡ ಅಥವಾ ಸೊಪ್ಪನ್ನು ಭೂಮಿಗೆ ಸೇರಿಸಲು ಹಸಿರು ಗೊಬ್ಬರ ತುಳಿಯುವ ಸಾಧನವನ್ನು ಉಪಯೋಗಿಸಬಹುದು.
 7. ಹಸಿರು ಗೊಬ್ಬರವನ್ನು ಭೂಮಿಗೆ ಸೇರಿಸುವಾಗ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿದ್ದರೆ ಕಳಿಯುವಿಕೆಯು ತ್ವರಿತವಾಗುತ್ತದೆ. ಹಸಿರು ಗೊಬ್ಬರವನ್ನು ಮಣ್ಣಿಗೆ ಸೇರಿಸಿದ 2-3 ವಾರಗಳಲ್ಲಿಯೇ ಕಳಿತು ಗೊಬ್ಬರವಾಗುತ್ತದೆ. ಸಾಮಾನ್ಯವಾಗಿ ಪ್ರತಿ ಎಕರೆ ಪ್ರದೇಶದಿಂದ 4-10 ಟನ್ ನಷ್ಟು ಹಸಿರು ಎಲೆ ಮತ್ತು 20 ರಿಂದ 30 ಕಿ.ಗ್ರಾಂ. ಸಾರಜನಕವನ್ನು ಒದಗಿಸುತ್ತದೆ.
 8. ಹಸಿರು ಗೊಬ್ಬರದ ಗಿಡಗಳ ಬೀಜದ ಅವಶ್ಯಕತೆ ಇದ್ದಾಗ ಮಾತ್ರ ಮುಖ್ಯ ಬೆಳೆ ಬೆಳೆಯುವಾಗ ಜಮೀನಿನ ಬದುಗಳಲ್ಲಿ ಹಸಿರು ಗೊಬ್ಬರದ ಗಿಡಗಳನ್ನು ಬೆಳೆಸಿ ಬೀಜವನ್ನು ಪಡೆಯಬಹುದು.

ಹಸಿರು ಗೊಬ್ಬರಗಳಾಗಿ ಡಯಂಚ (ಸಸ್ಬೇನಿಯಾ ಅಕ್ಯುಲೇಟಾ), ಸಸ್ಬೇನಿಯಾ (ಸಸ್ಬೇನಿಯಾ ಸ್ಪೇಸಿಯೋಸಾ, ಸಸ್ಬೇನಿಯಾ ರೋಸ್ಟ್ರಾಟಾ), ಸೆಣಬು (ಕ್ರೋಟಲೇರಿಯಾ), ಕಾಡು ಸೆಣಬು (ಕ್ರೋಟಲೇರಿಯಾ), ಕಾಡು ಸೆಣಬು (ಕ್ರೋಟಲೇರಿಯಾ ಸ್ಪ್ರಯಾಟ), ದ್ವಿದಳ ಧಾನ್ಯಗಳಾದ ಅಲಸಂದೆ (ವಿಗ್ನಾ ಅಂಗುಕ್ಯುಲೆಟಾ), ಹೆಸರು (ವಿಗ್ನಾ ಮುಂಗೋ), ಉದ್ದು (ವಿಗ್ನಾ ರೇಡಿಯೇಟಾ), ಹುರುಳಿ, ಸೋಯಾಬೀನ್, ವೆಲ್ ವೆಟ್ ಬೀನ್ ಮತ್ತು ಚವಳಿ ಕಾಯಿಯನ್ನು ಉಪಯೋಗಿಸಬಹುದು.

ಹಸಿರೆಲೆ ಗೊಬ್ಬರದ ಗಿಡಗಳಾಗಿ ಗೊಬ್ಬರದ ಗಿಡ (ಗ್ಲಿರಿಸೀಡಿಯಾ ಮ್ಯಾಕುಲೇಟಾ), ಹೊಂಗೆ (ಪೊಂಗಾಮಿಯಾ ಪಿನ್ನಾಟಾ), ಕೆಲಪೊಗೋನಿಯ ಮುಕುನೋಯಿಡ್ಸ್, ಕೋಲಂಜಿ (ಟೆಪ್ರೋಸಿಯಾ ಪರ್ಪುರಿಯಾ), ಸುಬಾಬುಲ್, ಕ್ಯಾಸಿಯಾ, ಎಕ್ಕ, ತಂಗಡಿ, ಮತ್ತು ಕ್ರೋಮೋಲಿನಾ ಒಡೋರೆಟಾ ಹಾಗೂ ಮರಗಳಾದ ಹಲಸು, ಹರಿವಾಣ, ಸಂಪಿಗೆ, ಬೇವು ಮೊದಲಾದ ಮರಗಳ ಸೊಪ್ಪನ್ನು ಕೂಡ ಉಪಯೋಗಿಸಬಹುದು.

ಬಹಳ ಕಾಲದಿಂದ ಗದ್ದೆಗಳಲ್ಲಿ ಗ್ಲಿರಿಸೀಡಿಯಾ, ಹೊಂಗೆ ಇತ್ಯಾದಿ ಹಸಿರೆಲೆಗಳನ್ನು ಗೊಬ್ಬರಕ್ಕೆ ಬಳಸುತ್ತಿದ್ದಾರೆ. ಇತ್ತೀಚೆಗೆ ಮಲೆನಾಡು ಪ್ರದೇಶದಲ್ಲಿ ಹೇರಳವಾಗಿ ದೊರಕುವ ಕ್ರೋಮಲೀನಾ ಕಳೆಯನ್ನು ಭತ್ತದ ಗದ್ದೆಯಲ್ಲಿ ಹಸಿರೆಲೆ ಗೊಬ್ಬರವಾಗಿ ಉಪಯೋಗಿಸಲಾಗುತ್ತಿದೆ.

 

ಹಸಿರೆಲೆ ಗೊಬ್ಬರ ಬೆಳೆಗಳ ಬಿತ್ತನೆ ಬೀಜ, ಉತ್ಪಾದನೆ ಮತ್ತು ಪೋಷಕಾಂಶಗಳ ಪ್ರಮಾಣ

ಕ್ರ.ಸಂ

ಹಸಿರೆಲೆ ಬೆಳೆಗಳು

 ಬೀಜದ ಪ್ರಮಾಣ     

   (ಕಿ.ಗ್ರಾಂ. / ಎ.)

ಹಸಿರು ಗೊಬ್ಬರದ            ಉತ್ಪಾದನೆ (ಟನ್ / ಎ.)

1

ಡಯಂಚ               

8-10      

7-8                3.5                             

0.6         1.2

2

ಸಸ್ಬೇನಿಯಾ         

6-8        

10-12             3.0                             

0.5         1.6

3

ಆಪ್ ಸೆಣಬು

12-15      

6-8                2.3              

0.5         1.8

 

4

ಅಲಸಂದೆ             

6-8        

4-5                2.3                                 

0.5         2.1

5

ಹೆಸರು, ಉದ್ದು

 

               6-8

4-5             0.70

0.17- 0.50

6

ಹುರುಳಿ               

10                     

4-5

0.91 -0.18- 0.65

 

7

ಕುದುರೆಮಸಾಲೆ     

4            

 

4-5         0.8                                

0.14 - 0.66

8

ಗೊಬ್ಬರದ ಗಿಡ  

400-450   

2-3 / ಕಟಾವು  2.4

0.1         1.8

9

ಹೊಂಗೆ  

35-40

180-225 ಕಿ.ಗ್ರಾಂ. / ಮರ                   

1.20

10

ಕೊಳಂಜಿ ಸೊಪ್ಪು   

12          

2-2.5      0.78              

0.20- 0.60

11

ಎಕ್ಕದ ಗಿಡ

400-450 ಗಿಡಗಳು ಬದುಗಳ ಮೇಲೆ    

1.5-2 /ಕಟಾವು               

2.1 - 0.5-  0.3

12

ಕಕ್ಕೆ ಮರ

35-40    

150-175 ಕಿ.ಗ್ರಾಂ / ಮರ    

1.6- 0.2- 1.2

 

13

ಯುಪಟೋರಿಯಂ ಕಳೆ ಗಿಡ 

3-4        

0.82      

0.20  - 0.46

 

ಹಸಿರು ಗೊಬ್ಬರದ ಪ್ರಯೋಜನಗಳು

 • ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳನ್ನು ಉತ್ತಮಪಡಿಸುತ್ತದೆ.

ಭೌತಿಕ ಗುಣಗಳು:

 • ಮಣ್ಣಿನಲ್ಲಿರುವ ಸಾವಯವ ಅಂಶ ಹೆಚ್ಚಾಗಿ, ಮಣ್ಣಿನ ಫಲವತ್ತತೆ ವೃದ್ಧಿಗೊಳ್ಳುತ್ತದೆ.
 • ಮಣ್ಣಿನ ಕಣಗಳನ್ನು ಸಡಿಲಗೊಳಿಸುವುದರ ಮೂಲಕ ಮಣ್ಣಿನ ಕಣಗಳ ನಡುವಿನ ಜಾಗ ಹೆಚ್ಚಾಗಿ ಗಾಳಿಯಾಡುವಿಕೆ ಹಾಗೂ ನೀರು ಸರಾಗವಾಗಿ ಮಣ್ಣಿನೊಳಗೆ ಇಳಿಯಲು ನೆರವಾಗುತ್ತದೆ.
 • ಮಣ್ಣಿನಲ್ಲಿ ಗಾಳಿ ಮತ್ತು ನೀರಿನ ಸಮತೋಲನ ಉತ್ತಮಗೊಂಡು ಬೆಳೆಗಲ ಬೆಳವಣಿಗೆಯು ಉತ್ತಮವಾಗಿರುತ್ತದೆ.
 • ಕೆಳ ಪದರಗಳಿಂದ ಪೋಷಕಾಂಶಗಳನ್ನು ಮೇಲಕ್ಕೆ ತಂದು, ಬೆಳೆಗಳಿಗೆ ಸುಲಭವಾಗಿ ದೊರಕುವ ರೂಪಕ್ಕೆ ಮಾರ್ಪಡಿಸುತ್ತದೆ.
 • ಮಣ್ಣಿನ ಮೇಲ್ಬಾಗದಲ್ಲಿರುವ ಪೋಷಕಾಂಶಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗುವುದನ್ನು ಮತ್ತು ಮಣ್ಣಿನ ಕೆಳಪದರಗಳಲ್ಲಿ ಪೋಷಕಾಂಶಗಳು ಹೊರ ಹೋಗದಂತೆ ತಡೆಗಟ್ಟುತ್ತದೆ.
 • ಹಸಿರು ಗೊಬ್ಬರದ ಪೈರು ಹೊದಿಕೆ ಬೆಳೆಯುವಂತಿದ್ದು, ಮಳೆ ಹಾಗೂ ಗಾಳಿಯಿಂದ ಮಣ್ಣಿನ ಸವಕಳಿಯನ್ನು ತಡೆಯುತ್ತದೆ.
 • ಹಸಿರು ಗೊಬ್ಬರದ ಗಿಡಗಳು ಸಾಮಾನ್ಯವಾಗಿ ಒರಟಾಗಿರುವುದರಿಂದ ಮತ್ತು ಹುಲುಸಾಗಿ ಬೆಳೆಯುವುದರಿಂದ ಕಳೆಗಳಿಗೆ ನೀರು, ಪೋಷಕಾಂಶ, ಬೆಳಕು ಹಾಗೂ ಸ್ಥಳ ಸಿಗದಂತೆ ಮಾಡಿ ಕಳೆಗಳ ಬೆಳವಣಿಗೆಯನ್ನು ಶೀಘ್ರದಲ್ಲಿ ಹತೋಟಿ ಮಾಡುತ್ತದೆ.

ರಾಸಾಯನಿಕ ಗುಣಗಳು:

 • ಮಣ್ಣಿನಲ್ಲಿ ಕಳಿತು, ಮಣ್ಣಿನಲ್ಲಿ ಇಂಗಾಲ ಮತ್ತು ಹ್ಯೂಮಸ್ ಅಂಶ ಹೆಚ್ಚಾಗಲು ಸಹಕರಿಸುತ್ತವೆ.
 • ವಾತಾವರಣದಲ್ಲಿ ಅನಿಲ ರೂಪದಲ್ಲಿರುವ ಸಾರಜನಕವನ್ನು ಹೀರಿ ಮಣ್ಣಿನಲ್ಲಿ ಸ್ಥಿರೀಕರಿಸುತ್ತವೆ.
 • ಭೂಮಿಯ ಉತ್ಪಾದನೆಯನ್ನು ಹೆಚ್ಚಿಸುತ್ತವೆ.
 • ಹಸಿರು ಗೊಬ್ಬರ ಸಸ್ಯಗಳು ಮಣ್ಣಿನಲ್ಲಿ ಕಳಿಯುವುದರಿಂದ ರಂಜಕ, ಕ್ಯಾಲ್ಷಿಯಂ ಮತ್ತು ಇತರ ಲಘು ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತವೆ.
 • ಮಣ್ಣಿನ ಧನ ಅಯಾನು (ಸಿ.ಇ.ಸಿ.) ಗಳ ವಿನಿಮಯ ಸಾಮಥ್ರ್ಯವು 2 ರಿಂದ 30 ಪಟ್ಟು ಹೆಚ್ಚಾಗುವುದರಿಂದ ಬೆಳೆಗಳಿಗೆ ಪೋಷಕಾಂಶಗಳ ಪೂರೈಕೆಯ ಸಾಮಥ್ರ್ಯವು ಅಧಿಕಗೊಳ್ಳುತ್ತದೆ.

ಜೈವಿಕ ಗುಣಗಳು:

 • ಭೂಮಿಯಲ್ಲಿರುವ ಸೂಕ್ಷ್ಮಾಣು ಜೀವಿಗಳಿಗೆ ಆಹಾರ ದೊರೆತು ಅವುಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿ ಮಣ್ಣನ್ನು ಜೀವಂತವಾಗಿಡುವಲ್ಲಿ ಸಹಕಾರಿಯಾಗುತ್ತದೆ.
 • ಸಾವಯವ ಅಂಶವನ್ನೊಳಗೊಂಡ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಹಾಗೂ ಕ್ರಿಯೆ ಚುರುಕಾಗಿರುತ್ತದೆ.
 • ಜೈವಿಕ ಕ್ರಿಯೆಯ ಚಟುವಟಿಕೆಯನ್ನು ಹೆಚ್ಚಿಸಿ ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತವೆ.
 • ಸೂಕ್ಷ್ಮಾಣು ಜೀವಿಗಳು ನಡೆಸುವ ಕ್ರಿಯೆಗಳಲ್ಲಿ ಸಹಕರಿಸಿ ಮಣ್ಣಿನಲ್ಲಿರುವ ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತವೆ
 • ಹಸಿರೆಲೆ ಗೊಬ್ಬರ ಬೆಳೆ ಬೆಳೆಯುವುದರಿಂದ ಮಣ್ಣನ್ನು ಜೀವಂತವಾಗಿರಿಸಿ ಸುಸ್ಥಿರ ಇಳುವರಿಯನ್ನು ಪಡೆಯಬಹುದು.

ನಾಗೇಶ್, ಸಿ. ಆರ್.,  ಸಹನ. ಎಸ್.ಆರ್.,  ಡಾ. ಸೌಮ್ಯಲತಾ ಬಿ. ಎಸ್., (ಸಹಾಯಕ ಪ್ರಾಧ್ಯಪಕರು, ಬೇಸಾಯ ಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ವಿ. ಸಿ. ಫಾರಂ., ಮಂಡ್ಯ, ಕಿರಿಯ ಸಂಶೋಧನಾ ಸಹಚರರು, ಅಖಿಲ ಭಾರತ ಸುಸಂಘಟಿತ ಕಿರು ಧಾನ್ಯಗಳ ಸಂಶೋಧನಾ ಪ್ರಾಯೋಜನೆ,  ವಲಯ ಕೃಷಿ ಸಂಶೋಧನಾ ಕೇಂದ್ರ, ವಿ. ಸಿ. ಫಾರಂ., ಮಂಡ್ಯ)

Published On: 16 October 2022, 04:17 PM English Summary: Role of green manure in soil fertility

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.