1. ಅಗ್ರಿಪಿಡಿಯಾ

ರೈತರೇ ತಮ್ಮ ಮನೆಯಲ್ಲಿ ಯೂರಿಯಾ ತಯಾರಿಸಬಹುದು, ಅದೂ ಅರ್ಧ ಖರ್ಚಿನಲ್ಲಿ!

KJ Staff
KJ Staff

ಕೃಷಿಯಲ್ಲಿ ಯೂರಿಯಾ ಗೊಬ್ಬರದ ಮಹತ್ವ ಎಷ್ಟೆಂಬುದು ಎಲ್ಲ ರೈತರಿಗು ತಿಳಿದಿರುವ ವಿಚಾರವೇ. ಯಾವುದೇ ಬೆಳೆ ನಾಟಿ ಮಾಡಿದಾಗ ಇಲ್ಲವೇ ಬೀಜಗಳನ್ನು ಬಿತ್ತನೆ ಮಾಡಿದ ಬಳಿಕ ಅವುಗಳು ಸಮರ್ಪಕವಾಗಿ, ಆರೋಗ್ಯದಿಂದ ಬೆಳೆಯಲು ಯೂರಿಯಾ ಬೇಕೇಬೇಕು. ಆದರೆ ಇತ್ತೀಚೆಗೆ ಯೂರಿಯಾ ಅಭಾವ ಹೆಚ್ಚಾಗಿದೆ. ಕೃಷಿಕರಿಗೆ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ಸಿಗುತ್ತಿಲ್ಲ. ಹೀಗಾಗಿ, ರೈತರು ತಮ್ಮ ಮನೆಯಲ್ಲೇ ಸಾವಯವ ಯೂರಿಯಾ ತಯಾರಿಸುವುದು ಹೇಗೆ ಎಂಬ ಕುರಿತು ಮಾಹಿತಿ ಇಲ್ಲಿದೆ.

ನೀವು ಜಗತ್ತಿನ ಯಾವುದೇ ಮೂಲೆಗೆ ಹೋದರೂ ಅಲ್ಲಿನ ಕೃಷಿಕರು ಯೂರಿಯಾ ಬಳಸೇ ಬಳಸುತ್ತಾರೆ. ಸಾರಜನಕವನ್ನು ಬಿಡುಗಡೆ ಮಾಡುವ ಮೂಲಕ ಬೆಳೆಗಳ ಪೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಯೂರಿಯಾವನ್ನು ಅತಿ ಹೆಚ್ಚು ಬಳಸುವುದು ಕೃಷಿ ಕ್ಷೇತ್ರದಲ್ಲಿ. ಜಗತ್ತಿನಲ್ಲಿ ಉತ್ಪಾದನೆಯಾಗುವ ಒಟ್ಟು ಯೂರಿಯಾದಲ್ಲಿ ಶೇ.90 ರಷ್ಟು ಕೃಷಿ ಕ್ಷೇತ್ರ ಒಂದರಲ್ಲೇ ಬಳಸಲ್ಪಡುತ್ತಿದೆ. ಅತಿ ಹೆಚ್ಚಿನ ಪ್ರಮಾಣದ ಸಾರಜನಕವನ್ನು ಬಿಡುಗಡೆ ಮಾಡುವ ರಸಗೊಬ್ಬರ ಎನಿಸಿರುವ ಯೂರಿಯಾಗೆ ಬೇಡಿಕೆಯೂ ಹೆಚ್ಚು.

ರೈತರಿಗೆ ಅತ್ಯಂತ ಪ್ರಮುಖ ರಸಗೊಬ್ಬರವಾಗಿದ್ದರೂ, ಬೇಡಿಕೆ ಹಾಗೂ ಉತ್ಪಾದನೆಯ ಅಸಮತೋಲನದ ಕಾರಣದಿಂದಾಗಿ ಪ್ರತಿ ವರ್ಷ ಕರ್ನಾಟಕ ಸೇರಿದಂತೆ ಭಾರತದ ಪ್ರತಿಯೊಂದು ರಾಜ್ಯದಲ್ಲೂ ಯೂರಿಯಾ ಗೊಬ್ಬರದ ಅಭಾವ ತಲೆದೋರುತ್ತದೆ. ಹೀಗಾಗಿ ಬೀಜಗಳ ಬಿತ್ತನೆ ಹಾಗೂ ಸಸಿಗಳ ನಾಟಿ ಸಂದರ್ಭದಲ್ಲಿ ರೈತರು ಯೂರಿಯಾಗಾಗಿ ರಾಸಾಯನಿಕ ಗೊಬ್ಬರದ ಮಾರಾಟ ಮಳಿಗೆಗಳ ಎದುರು ಹಾಗೂ ಸರ್ಕಾರದ ದಾಸ್ತಾನು ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ. ಆದರೆ, ರೈತರು ದಿನಗಟ್ಟಲೆ ಕಾದು ಕುಳಿತರೂ ಅವರಿಗೆ ಅಗತ್ಯವಿರುವಷ್ಟು ಪ್ರಮಾಣದ ಯೂರಿಯಾ ಸಿಗುವುದಿಲ್ಲ.

ನ್ಯಾನೋ ಹೊಸ ಆಶಾಕಿರಣ

ದೇಶವೇ ಯೂರಿಯಾದ ಅಭಾವ ಎದುರಿಸುತ್ತಿದೆ. ಜೊತೆಗೆ ವರ್ಷದಿಂದ ವರ್ಷಕ್ಕೆ ಗೊಬ್ಬರದ ಬೆಲೆ ಕೂಡ ಹೆಚ್ಚಾಗುತ್ತಾ ಸಾಗಿದೆ. ಹೀಗಾಗಿ ರೈತರು ಯೂರಿಯಾಗೆ ಪರ್ಯಾಯ ಯಾವುದು ಎಂಬ ಹುಡುಕಕಾಟದಲ್ಲಿದ್ದಾರೆ. ಆದರೆ ಈ ರಸಗೊಬ್ಬರದ ಸ್ಥಾನವನ್ನು ಬೇರೊಂದು ರಸಗೊಬ್ಬರ ಮಾಡುತ್ತದೆ ಎಂಬ ಕಲ್ಪನೆಯೂ ಸದ್ಯದ ಮಟ್ಟಿಗೆ ಕಷ್ಟ. ಈ ನಡುವೆ ಇತ್ತೀಚೆಗೆ ಬಿಡುಗಡೆಯಾಗಿರುವ ಇಫ್ಕೋ ಕಂಪನಿಯ ನ್ಯಾನೋ ಯೂರಿಯಾ ರೈತರ ಪಾಲಿನ ಹೊಸ ಆಶಾಕಿರಣವಾಗಿ ಕಾಣುತ್ತಿದೆ.

ನೀವೇ ಯುರಿಯಾ ತಯಾರಿಸಿ

ಹೌದು, ರೈತರು ಸ್ವತಃ ಯೂರಿಯಾ ತಯಾರಿಸಿದರೆ ಹೇಗೆ? ಇದು ಸಾಧ್ಯವಾದರೆ ಒಂದು ದೊಡ್ಡ ಸಮಸ್ಯೆ ಪರಿಹಾರವಾದಂತೆ ಅಲ್ಲವೇ. ಇದು ಸಾಧ್ಯವಿದೆ. ಅದೂ ಕೂಡ ನಮ್ಮದೇ ದೇಸಿ, ಸಾವಯವ ಪದ್ಧತಿ ಮೂಲಕ ಎಂಬುದು ವಿಶೇಷ. ಎಮ್ಮೆ, ಹಸು ಮತ್ತಿತರ ದನಕರುಗಳ ಗಂಜಲ (ದೇಸಿ, ಜವಾರಿ ಹಸುವಿನ ಗಂಜಲವಾದರೆ ಇನ್ನೂ ಉತ್ತಮ) ಮತ್ತು ಮರಳನ್ನು ಬಳಸುವ ಮೂಲಕ ಕೇವಲ ಒಂದು ತಿಂಗಳಲ್ಲಿ ತಮಗೆ ಅಗತ್ಯವಿರುವಷ್ಟು ಯೂರಿಯಾವನ್ನು ರೈತರು ತಮ್ಮಲ್ಲೇ ತಯಾರಿಸಿಕೊಳ್ಳಬಹುದು. ಅದು ಹೇಗೆ ಎನ್ನುವಿರಾ. ಇಲ್ಲಿದೆ ನೋಡಿ ತಯಾರಿಸುವ ವಿಧಾನ...

ಸಾವಯವ ಯೂರಿಯಾ ತಯಾರಿಸುವ ಬಗೆ

  • ಮೊದಲು ಮನೆ ಅಥವಾ ಲಭ್ಯವಿರುವ ಖಾಲಿ ಜಾಗದಲ್ಲಿ 5 ಅಡಿ ಉದ್ದ, 4 ಅಡಿ ಅಗಲ ಹಾಗೂ 2 ಅಡಿ ಆಳದ ಗುಂಡಿ ತೆಗೆಯಿರಿ (ಸಿಮೆಂಟ್ ತೊಟ್ಟಿಯಲ್ಲೂ ಮಾಡಬಹುದು).
  • ನಿಮ್ಮ ಮನೆಯಲ್ಲಿ ದನದ ಕೊಟ್ಟಗೆ ಇದ್ದರೆ ಅದರ ಪಕ್ಕದಲ್ಲಿಯೇ, ಅಂದರೆ ದನಗಳ ಗಂಜಲ (ಮೂತ್ರ) ಹೊರಹೋಗಲು ಇರುವ ಸ್ಥಳಕ್ಕೆ ಹೊಂದಿಕೊAಡAತೆ ಗುಂಡಿ ತೆಗೆಯುವುದು ಸೂಕ್ತ.
  • ಬಳಿಕ ಆ ಗುಂಡಿಯಲ್ಲಿ ಮರಳು ತುಂಬ ಬೇಕು. ಒಂದೂವರೆ ಅಥವಾ ಒಂದೂ ಮುಕ್ಕಾಲು ಅಡಿವರೆಗೆ ಮರಳು ತುಂಬಿದರೆ ಸಾಕು.
  • ಮರಳು ತುಂಬಿದ ಗುಂಡಿಗೆ ಮೊದಲ ದಿನದಿಂದಲೇ ದಿನವಿಡೀ ಲಭ್ಯವಿರುವ ಗಂಜಲ ಸುರಿಯಬೇಕು. 30 ದಿನಗಳವರೆಗೆ ಪ್ರತಿ ದಿನವೂ ಹೀಗೆ ಗಂಜಲ ಸುರಿಯಬೇಕು.
  • ಈ ಪ್ರಕ್ರಿಯೆಯಿಂದಾಗಿ 30 ದಿನಗಳ ಬಳಿಕ ಮರಳಿನಲ್ಲಿ ಸಾರಜನಕದ ಅಂಶ ಕ್ರೋಢೀಕರಣಗೊಳ್ಳುತ್ತದೆ. ಗುಂಡಿಯೊಳಗಿನ ಮರಳು ಕಪ್ಪು ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಸಾರಜನಕದ ಅಂಶ ಕ್ರೋಡೀಕೃತವಾಗಿದೆ ಎಂದರ್ಥ.
  • 30 ದಿನಗಳ ನಂತರ ಮರಳನ್ನು ಗುಂಡಿಯಿAದ ಹೊರತೆಗೆದು ಗೋಣಿ ಚೀಲಗಳ ಮೇಲೆ ಹರಡಿ, ಒಂದೆರಡು ದಿನ ನೆರಳಿನಲ್ಲಿ ಒಣಗಿಸಿ. ಬಳಿಕ ಚೀಲಗಳಲ್ಲಿ ಶೇಖರಿಸಿಡಿ.

ಒಂದೊಮ್ಮೆ ನಿಮ್ಮ ದನದ ಕೊಟ್ಟಿಗೆ ಇಲ್ಲದಿದ್ದರೆ, ಮನೆ ಬಳಿಯಲ್ಲೇ ಅಥವಾ ಜಮೀನಿನ ಒಂದು ಭಾಗದಲ್ಲಿ ಮೇಲೆ ತಿಳಿಸಿರುವ ಅಳತೆಯ ಗುಂಡಿ ತೆಗೆದು, ದನ ಸಾಕಿರುವ ಅಕ್ಕಪಕ್ಕದ ಮನೆಯವರ ಬಳಿ ಹಸುವಿನ ಗಂಜಲ ತೆಗೆದುಕೊಂಡು ಬಂದು ಸಾವಯವ ಯೂರಿಯಾ ತಯಾರಿಸಿಕೊಳ್ಳಿ.

ಉಪಯೋಗಗಳೇನು?

  • ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಯೂರಿಯಾದ ರೀತಿಯಲ್ಲಿಯೇ ಸಾವಯವ ಯೂರಿಯಾವನ್ನೂ ಮೆಲು ಗೊಬ್ಬರವಾಗಿ ಬಳಸಬೇಕು.
  • ಸಾವಯವ ಯೂರಿಯಾದಿಂದ ಬೆಳೆಗಳಿಗೆ ಹೆಚ್ಚಿನ ಪ್ರಮಾಣದ ಸಾರಜನಕ ಲಭ್ಯವಾಗುತ್ತದೆ. ಜೊತೆಗೆ ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳು ಸಹ ದೊರೆಯುತ್ತವೆ.
  • ಜೊತೆಗೆ ಈ ಯೂರಿಯಾದಲ್ಲಿ ರಾಸಾಯನಿಕಗಳು ಇಲ್ಲದಿರುವ ಕಾರಣ ಮಣ್ಣಿನ ಆರೋಗ್ಯ ಉತ್ತಮಗೊಳ್ಳುತ್ತದೆ.
  • ರಾಯಾಯನಿಕ ಯೂರಿಯಾಗೆ ಹೋಲಿಸಿದರೆ ಸಾವಯವ ಯೂರಿಯಾ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ.
  • ಪ್ರತಿ 50 ಕೆ.ಜಿ ಸಾವಯವ ಯೂರಿಯಾ ತಯಾರಿಸಿದಾಗ ರೈತರಿಗೆ ಕನಿಷ್ಠ 250 ರೂ. ಉಳಿತಾಯವಾಗುತ್ತದೆ.

ಆಧಾರ: ಪುಣ್ಯಕೋಟಿ ಫಾರ್ಮರ್ಸ್ ಪ್ರೊಡ್ಯುಸರ್ ಕಂ.ಲಿ.

Published On: 02 June 2021, 04:06 PM English Summary: Produce Urea at your home

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.