1. ಅಗ್ರಿಪಿಡಿಯಾ

ಮಿತವಾಗಿ ನೀರು ಬಳಸಿ ಬಹುಕಾಲದವರಿಗೆ ಭೂ ಉತ್ಪಾದಕತೆ ಕಾಯ್ದುಕೊಳ್ಳಿ

ನೀರಾವರಿಯಿಂದ ಭೂ ಉತ್ಪಾದಕತೆಯನ್ನು ಹೆಚ್ಚಿಸಲು ಸಾಧ್ಯ.  ಆದರೆ ನೀರಾವರಿಯ ಇತಿ ಮಿತಿಯ ನೀತಿ ತಿಳಿದು ಮಾಡುವ ಕೃಷಿಯಿಂದ ಬಹು ಕಾಲದವರೆಗೆ ಭೂ ಉತ್ಪಾದಕತೆಯನ್ನು ಕಾಯ್ದುಕೊಂಡು ಹೋಗಬಹುದಲ್ಲದೆ ಜೀವಿ, ಸಸ್ಯ, ಹಾಗೂ ಪರಿಸರದ ಸಾಮ್ಯತೆಯನ್ನು ಮುಂದುವರಿಸಿಕೊಂಡು ಹೋಗಲು ಸಾದ್ಯ. ಅತೀ ನೀರಾವರಿಯ ದುಷ್ಪರಿಣಾಮ ಎಷ್ಟಾಗಿದೆ ಎಂದರೆ ನೀರಾವರಿಯಿಂದ ಆದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತಿದೆ.

ಅತೀ ನೀರಾವರಿಯಿಂದಾಗುವ ದುಷ್ಪರಿಣಾಮಗಳು:

1)   ಅತೀ ಖರ್ಚಿನಿಂದ ಹಾಗೂ ತೊಂದರೆಯಿಂದ ಸಂಗ್ರಹಿಟ್ಟ ಅಮೂಲ್ಯ ಸಂಪನ್ಮೂಲವಾದ ನೀರು ಪೋಲಾಗುವದು.

2)   ಹರಿದು ಹೋಗುವ ಹಾಗೂ ಬಸಿದು ಹೋಗುವ ನೀರಿನೊಂದಿಗೆ ಬೆಳೆಗಳಿಗೆ ಬೇಕಾದ ಪೋಷಕಾಂಶಗಳು ಪೋಲಾಗುವವು.

3)   ಸಾವಿರಾರು ವರ್ಷಗಳ ದೀರ್ಘಾವಧಿಯಲ್ಲಿ ತಯಾರಾಗುವ ಒಂದಿಂಚು ಫಲವತ್ತಾದ ಮಣ್ಣುಕೊಚ್ಚಿ ಹೋಗುತ್ತದೆ.

4)   ಅತೀ ನೀರಾವರಿಯಿಂದ ಎತ್ತರದ ಪ್ರದೇಶದಿಂದ ಬರುವ ನೀರು ತಗ್ಗಿನ ಪ್ರದೇಶವನ್ನು ಮುಳುಗಿಸುತ್ತದೆ.

5)   ಬಸಿದು ಬಂದ ನೀರಿನಿಂದ ಎತ್ತರಿಸಲ್ಪಡುವ ಅಂತರ್ಜಲದಿಂದ ಬೇಸಾಯಕ್ಕೆ ಯೋಗ್ಯವಾದ ಜಮೀನು ಕಡಿಮೆಯಾಗುತ್ತದೆ.

6)   ಬಸಿದು ಬಂದ ನೀರಿನಲ್ಲಿಯ ಹಾಗೂ ಮೇಲ್ಮಟ್ಟದ ಅಂತರ್ಜಲದಲ್ಲಿನ ಲವಣಗಳಿಂದ ಬೇಸಾಯಕ್ಕೆ ಯೋಗ್ಯವಾಗಿದ್ದ ಒಳ್ಳೇಯ ಜಮೀನು ನಿರುಪಯುಕ್ತವಾಗುತ್ತದೆ.

7)   ಮೇಲ್ಮಟ್ಟದ ಅಂತರ್ಜಲವು ರಸ್ತೆ, ವಸತಿ ಹಾಗೂ ಕಟ್ಟಡಗಳ ದಮನಕ್ಕೆ ಕಾರಣವಾಗಿ ಸಾಮಾಜಿಕ ಜೀವನದ ಅಸ್ತವ್ಯಸ್ತಕ್ಕೆ ನಾಂದಿಯಾಗಿದೆ.

8)   ನಿಂತ ನೀರಿನಿಂದ ಹಾಗೂ ಜವಳಿನ ತೇವದಿಂದ ರೋಗಾಣುಗಳು ಹಾಗೂ ಕೀಟಗಳು ಅಭಿವೃದ್ದಿಯಾಗಿ ಮನುಷ್ಯ, ಪ್ರಾಣಿ ಮತ್ತು ಸಸ್ಯಗಳಿಗೆ ತಗಲುವ ರೋಗರುಜುವಿನ ಬಾಧೆಯು ಹೆಚ್ಚಳವಾಗುತ್ತದೆ.

9)   ಜವಳು (ನಿಂತ ನೀರಿನ) ಜಮೀನಿನಲ್ಲಿ ಕಳೆ, ಕಸ ಬೆಳೆದು ಪರಿಸರ ಮಾಲಿನ್ಯಕ್ಕೆ ಕಾರಣವಾಗಿವೆ.

10) ಮಣ್ಣಿನಲ್ಲಿಯ ಹೆಚ್ಚಾದ ತೇವಾಂಶದಿಂದ ಪ್ರಾಣ ವಾಯುವಿನ ಕೊರತೆಯಾಗಿ ಬೆಳೆಗಳ ಬೇರುಗಳು ಕುಂಠಿತಗೊಂಡು ಬೆಳೆಗಳ ಇಳುವರಿ ಕಡಿಮೆಯಾಗುತ್ತದೆ.

ಜವಳು ಭೂಮಿ:

ಜಮೀನಿನ ಮೇಲ್ಪದರು (0-30 ಸೆಂ.ಮೀ.) ಗಾಳಿಯಾಡದೆ ಬೆಳೆಯ ಅವಧಿಯ ಕಾಲದಲ್ಲಿ ನೀರಿನಿಂದಾ ಆವೃತವಾಗಿದ್ದರೆ ಅಂತಹ ಜಮೀನನ್ನು ಜವಳೆಂದು ಕರೆಯಲಾಗುವುದು. ಇಂತಹ ಭೂಮಿಯಲ್ಲಿ ಆಮ್ಲಜನಕದ ಕೊರತೆಯುಂಟಾಗಿ ಇಂಗಾಲದ-ಡೈ-ಅಕ್ಸೈಡ್ ಹೆಚ್ಚು ಉತ್ಪತ್ತಿಯಾಗಿ ಬೆಳೆಯ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಕಾಲುವೆಯ ಸೋರುವಿಕೆ, ಅತೀ ನೀರಾವರಿ ಹಾಗೂ ಅವಶ್ಯ ಇರುವಷ್ಟು ಬಸಿಗಾಲುವೆಗಳು ಇಲ್ಲದೆ ಇರುವುದು ಬಹಳ ದಿನಗಳಿಂದ ಜವಳಾದ ಭೂಮಿಯು ಸವಳು ಮತ್ತು ಕ್ಷಾರ ಭೂಮಿಯಾಗಿ ಮಾರ್ಪಡುತ್ತದೆ. ಕಾಲುವೆಗಳಿಂದ ನೀರು ಬಸಿದು ಬರದಂತೆ ಕಾಲುವೆಯ ಒಳಭಾಗವನ್ನು ಹೊದಿಕೆ ಮಾಡಿಸಬೇಕು. ಮೇಲಿನಿಂದ ಹರಿದು ಬಂದ ನೀರನ್ನು ಸುರಕ್ಷಿತವಾಗಿ ಹೊರಹಾಕಲು ಕಾಲುವೆ ಮತ್ತು ಹಳ್ಳಗಳನ್ನು ಸುಸ್ಥಿತಿಯಲ್ಲಿಡಬೇಕು.

ಸವಳು (ಚೌಳು) ಮತ್ತುಕ್ಷಾರ (ಕರ್ಲ) ಮಣ್ಣು:

 ಮಣ್ಣು ಪರೀಕ್ಷಯ ನಂತರ ನಾವು ಸವಳು, ಕ್ಷಾರ ಮತು ಸವಳು-ಕ್ಷಾರ ಭೂಮಿ ಎಂದು ವರ್ಗೀಕರಿಸಬಹುದು. ಮಣ್ಣು ಪರೀಕ್ಷೆ ನಂತರ ಅದರ ರಸಸಾರ (pH), ಒಟ್ಟು ಕರಗುವ ಲವಣಾಂಶ (EC) ಮತ್ತು ಶೇಕಡಾ ವಿನಿಮಯ ಸೋಡಿಯಂನ (ESP) ಪ್ರಮಾಣದ ಮೇಲೆ ಭೂಮಿಯನ್ನು ಸವಳು, ಸವಳು-ಕ್ಷಾರ ಮತ್ತು ಕ್ಷಾರ ಎಂದು ಈ ಕೆಳಗಿನಂತೆ ವರ್ಗೀಕರಿಸಬಹುದು.

ಕ್ರ.ಸಂ.

ಗುಣಗಳು         

ಸವಳು ಭೂಮಿ

ಸವಳು-ಕ್ಷಾರ

ಕ್ಷಾರ

1

ಮಣ್ಣಿನ ರಸಸಾರ 

7.5-8.5 

7.5-8.5 

8.5-10

2

ಮಣ್ಣಿನಲ್ಲಿಯ ಲವಣಾಂಶಡಿ.ಎಸ್/ಮೀ

>4

>4

<4

3

ಮಣ್ಣಿನ ಮೇಲೆ ವಿನಿಮಯವಾಗುವ

ಸೋಡಿಯಂ ಶೇಕಡಾ

<15

>15

>15

ಸವಳು ಭೂಮಿಯ ಸುಧಾರಣೆ ಕ್ರಮಗಳು:

ಸವಳು ಮಣ್ಣಿನ ರಸಸಾರ 8.5 ಕ್ಕಿಂತ ಕಡಿಮೆ ಇರುತ್ತದೆ. ಒಟ್ಟು ಕರಗುವ ಲವಣಾಂಶ 4 ಡಿ.ಎಸ್./ಮೀ. ಹಾಗೂ ವಿನಿಮಯ ಸೋಡಿಯಂ ಪ್ರಮಾಣ. ಶೇಕಡಾ 15 ಕ್ಕಿಂತ ಕಡಿಮೆ ಇರುತ್ತದೆ. ನೀರು ಸುಲಭವಾಗಿ ಹರಿದು ಹೋಗದೆ ಇರುವ ಭೂಮಿಯಲ್ಲಿ ಜಲ ಮಟ್ಟವು ಎರುವುದರಿಂದ ಮತ್ತು ನೀರು ಆವಿಯಾಗುವುದರಿಂದ ಲವಣಗಳು ಮಣ್ಣಿನ ಮೇಲ್ಪದರದಲ್ಲಿ ಶೇಖರಣೆಗೊಂಡು ಮಣ್ಣು ಸವಳಾಗುತ್ತದೆ. ಇದಲ್ಲದೇ ಹೆಚ್ಚು ಲವಣಾಂಶವಿರುವ ನೀರನ್ನು ಜಮೀನಿಗೆ ಬಳಸುವುದರಿಂದ ಭೂಮಿಯಲ್ಲಿ ಲವಣಾಂಶದ ಪ್ರಮಾಣ ಹೆಚ್ಚುತ್ತದೆ.

 ಸವಳು ಭೂಮಿಯಲ್ಲಿ ಬೆಳೆಗೆ ಬೇಕಾದ ಭೌತಿಕ ಗುಣಲಕ್ಷಣಗಳು ಇರುತ್ತವೆ. ಆದರೆ ನೀರನಲ್ಲಿ ಸವಳಿನ ಅಂಶವು (ಈ ಮಣ್ಣಿನಲ್ಲಿ ಮುಖ್ಯವಾದ ಅಯಾನಗಳಾದ ಕ್ಯಾಲ್ಸಿಯಂ, ಮೆಗ್ನೇಷಿಯಂ, ಸೋಡಿಯಂ ಮತ್ತು ಪೂಟ್ಯಾಷಿಯಂ ಹಾಗೂ ಋಣ ಅಯನುಗಳಾದ ಸಲ್ಪೇಟ್, ಕ್ಲೋರೆಡ್ ಮತ್ತು ಬೈಕಾರ್ಬೊನೇಟಳು ಇರುತ್ತವೆ) ಕರಗುವುದರಿಂದ ಸಸ್ಯದಲ್ಲಿರುವ ನೀರಿನ ಅಂಶ ಕಡಿಮೆಯಾಗಿ ಸಸ್ಯ ಸಾಯುತ್ತದೆ (ಪ್ಲಾಸ್ಮೋಲೈಸಿಸ್).

ಮಣ್ಣಿನಲ್ಲಿರುವ ಲವಣಾಂಶವನ್ನು ಹೊರತೆಗೆದು ಬೇಸಾಯಕ್ಕೆ ಒಳ್ಳೆಯ ಭೂಮಿಯನ್ನು ಮಾಡಲು ಮುಖ್ಯವಾಗಿ ಗಮನಿಸಬೇಕಾದ ಅಂಶಗಳೆಂದರೆ.

  1. ಲವಣವನ್ನು ಮಣ್ಣಿನ ಪದರಿನಿಂದ ಬಸಿದು ತೆಗೆಯಲು ಜಮೀನನ್ನು ಸಮತಟ್ಟು ಮಾಡಿ. ಲವಣಗಳನ್ನು ಕರಗಿಸುವ ಸಲುವಾಗಿ ನೀರು ನಿಲ್ಲಿಸಲು 10 ಚ.ಮೀ. ನ ಪಾತಿಗಳಾಗಿ ವಿಂಗಡಿಸಿ 10-15 ಸೆಂ. ಮೀ. ಎತ್ತರಕ್ಕೆ ಬದು ಹಾಕಿ. ಮಳೆ ನೀರು ಅಥವಾ ಒಳ್ಳೆ ಗುಣಧರ್ಮದ ನೀರನ್ನುಕಟ್ಟಿ, ಮಣ್ಣಿನ ಪದರಿನ ಲವಣವನ್ನು ನೀರಿನಲ್ಲಿ ಕರಗಿಸಿಅದು ನೀರಿನೊಡನೆ ಬಸಿದು ಹೊರ ಹೊಗಲು ಅವಕಾಶ ಮಾಡಿಕೊಡಬೇಕು.
  2. ಎಲ್ಲೆಲ್ಲಿ ಬಸಿ ನೀರನ್ನು ಹೊರ ಹಾಕಲು ಸಹಜವಾಗಿ ಬರುವುದಿಲ್ಲವೋ ಅಂತಹ ಭಾಗಗಳಲ್ಲಿ ವಿವಿಧ ಮಣ್ಣುಗಳಿಗೆ ಅನುಸಾರವಾಗಿ ಸಿಪಾರಸ್ಸು ಅಂತರದಲ್ಲಿ ಬಸಿಗಾಲುವೆ ನಿರ್ಮಿಸಬೇಕು. ಇದಲ್ಲದೇ ಹಂಚು ಪೈಪಿನ ಬಸಿ ಗಾಲುವೆ ಅಥವಾ ರಂಧ್ರಗಳಿರುವ ಪಿ.ವಿ.ಸಿ. ಪೈಪಿನ ಬಸಿಗಾಲುವೆಗಳನ್ನು ಸಿಫಾರಸಿನಂತೆ ನಿರ್ಮಿಸಬೇಕು. ಇಂತಹ ಭೂಮಿಯಲ್ಲಿ ಈ ಕೆಳಗೆ ತಿಳಿಸಿದ ಲವಣ ಸಹಿಷ್ಣು ಬೆಳೆಗಳನ್ನು ಬೆಳೆಯಬೇಕು.

ವಿವಿಧ ಬೆಳೆಗಳ ಲವಣ ಸಹಿಷ್ಣುತೆ

ಸೈರಣಾಶಕ್ತಿ

ಬೆಳೆಗಳು

ಸಹಿಷ್ಣತೆ

ಗೋದಿ, ಬಾರ್ಲಿಓಟ್, ಪೇರಲ, ಕರ್ಜೂರ, ತೆಂಗು,

ಅರೆ ಸಹಿಷ್ಣತ ಮುಸುಕಿನ ಜೋಳ. ನವಣೆ, ಭತ್ತ, ಕುಸುಬೆ, ಕಬ್ಬು, ಹತ್ತಿ, ಕಲ್ಲಂಗಡಿ,  ಹೂಕೋಸು, ಎಲೆಕೋಸು,  ಈರುಳ್ಳಿ, ಆಲೂಗಡ್ಡೆ, ಮಾವು,  ದಾಳಿಂಬೆ, ಗೆಣಸು,  ಮೆಂತೆಸೂಪ್ಪು, ಉದ್ದು, ಹೆಸರು,  ಲೆಂಟಿಲ್

ಅಸಹಿಷ್ಣತೆ

ಕಡಲೆ, ಬಟಾಣಿ, ಪೀಲ್ಡ್ ಬೀನ್ಸ್, ಬೆಂಡೆ, ಅಲಸಂದೆ, ನಿಂಬೆ, ಸೇಬು, ಪ್ರೇರ್ಚಬೀನ್ಸ್

ಕ್ಷಾರ ಜಮೀನಿನ ಸುಧಾರಣೆ ವಿಧಾನಗಳು :

ಕ್ಷಾರ ಮಣ್ಣಿನ ರಸಸಾರ 8.5 ಕ್ಕಿಂತ ಹೆಚ್ಚು ಇರುತ್ತದೆ. ಇಂತಹ ಮಣ್ಣಿನ ಒಟ್ಟು ಕರಗುವ ಲವಣಾಂಶ 4 ಡಿ.ಎಸ್./ಮೀ.ಗಿಂತ ಕಡಿಮೆ ಹಾಗೂ ಮಣ್ಣಿನಲ್ಲಿ ವಿನಿಮಯ ಸೋಡಿಯಂ ಪ್ರಮಾಣ 15 ಕ್ಕಿಂತ ಹೆಚ್ಚಾದಾಗ ಜಮೀನು ಕ್ಷಾರವಾಗುತ್ತದೆ.ಇಂತಹ ಮಣ್ಣಿನ ಭೌತಿಕ ಗುಣಲಕ್ಷಣಗಳು ಸರಿಯಾಗಿರುವುದಿಲ್ಲ. ಭೂಮಿಯ ಮೇಲ್ಭಾಗದಲ್ಲಿ ಮಣ್ಣು ಕಂದು ಮಿಶ್ರಿತ ಮಾಸಲು ಬಣ್ಣ ಹೊಂದಿರುತ್ತದೆ. ಇಂತಹ ಮಣ್ಣುಗಳಲ್ಲಿ ಮಣ್ಣಿನ ಕಣಗಳು ರಚನೆ ಹಾಳಾಗಿ ಗಾಳಿಯ ಚಲನೆ ಮತ್ತು ನೀರು ಇಂಗುವಿಕೆ/ಬಸಿಯುವಿಕೆ ಕ್ರಿಯೆ ಕ್ರಮಬದ್ಧವಾಗಿರುವುದಿಲ್ಲ. ಕೆಲವು ಸಮಯದಲ್ಲಿ ಮಣ್ಣು ಬಹಳ ಗಟ್ಟಿಯಾಗಿರುತ್ತದೆ. ಬೀಜದ ಮೊಳೆಯುವಿಕೆ ಪ್ರಮಾಣ ಕಡಿಮೆ ಇರುತ್ತದೆ. ಮಣ್ಣಿನ ಲಕ್ಷಣ ಸರಿಯಾಗಿಲ್ಲದಿರುವುದರಿಂದಾಗಿ ಬೇರಿನ ಬೆಳವಣಿಗೆಗೆ ತೊಂದರೆಯಾಗುತ್ತದೆ ಹಾಗೂ ಬೇರುಗಳು ಆಳವಾಗಿ ಹೋಗುವುದಿಲ್ಲ. ಇಂತಹ ಜಮೀನಿನಲ್ಲಿ ವಿನಿಮಯ ಸೋಡಿಯಂನ ಅಂಶವನ್ನು ಶೇಕಡಾ 5 ರಿಂದ 6 ರ ವರೆಗೆ ಕಡಿಮೆ ಮಾಡಲು ಕೆಳಗಿನ ಕ್ರಮಗಳನ್ನು ಅನುಸರಿಸಬೇಕು.

  1. 4 ಸೆಂ. ಮೀ. ಆಳದವರೆಗೆ ಮೇಲ್ಪದರದ ಮಣ್ಣು ತೆಗೆದು ಜಮೀನಿನಿಂದ ಸಾಗಿಸಬೇಕು.
  2. ಕ್ಯಾಲ್ಸಿಯಂಯುಕ್ತ ರಾಸಾಯನಿಕ ವಸ್ತುಗಳನ್ನು ಬೆರೆಸಿ ಮಡ್ಕಿ ಹೊಡೆಯುವಾಗ ಮಣ್ಣಿಗೆ ನೀರು ಹಾಯಿಸಿ ಬಸಿಗಾಲುವೆಯ ಮೂಲಕ ಹೊರಗೆ ಸಾಗಿಸಬೇಕು.
  3. ಹಸಿರಲೆ ಗೊಬ್ಬರಗಳಾದ ಸೆಣಬು ಅಥವಾ ಸೆಸ್ ಬೇನಿಯಾ ಬೆಳೆಗಳನ್ನು ಬೆಳೆದು (40-45 ದಿನದ ಬೆಳೆ) ಮಣ್ಣಿನಲ್ಲಿ ಬೆರಸಬೇಕು.
  4. ಒಳ್ಳೆಯ ನೀರನ್ನು ಹಂತ ಹಂತವಾಗಿ ಕೊಡಬೇಕು
  5. ಬಸಿಗಾಲುವೆ ತೆಗೆಯಬೇಕು ಬಸಿಗಾಲುವೆ ಅಥವಾ ರಂಧ್ರಗಳಿರುವ ಪಿ.ವಿ.ಸಿ. ಪೈಪಿನ ಬಸಿಗಾಲುವೆಗಳನ್ನು ಶಿಪಾರಸ್ಸು ಅಂತರದಲ್ಲಿ ರಚಿಸಬೇಕು
  6. ಹುಳಿಯುಕ್ತ ಗೊಬ್ಬರಗಳಾದ ಅಮೋನಿಯಂ ಸಲ್ಪೇ ಟ್‍ ಅಥವಾ ಅಮೋಯಂ ಸಲ್ಪೇಟ್ ಗೊಬ್ಬರಗಳನ್ನು ಕೊಡಬೇಕು
  7. ಬೆಳೆ ಇರುವ ಸಮಯದಲ್ಲಿ ಆಗಾಗ್ಗೆ ಏಡೆ ಹೊಡೆಯಬೇಕು

ರಾಸಾಯನಿಕ ವಸ್ತುಗಳ ಸುರಕ್ಷಿತ ಉಪಯೋಗ ಬೆಲೆಗಳನ್ನು ಲಕ್ಷದಲ್ಲಿಟ್ಟುಕೊಂಡು ಕ್ಷಾರ ಜಮೀನಿನ ಸುಧಾರಣೆ ಜಿಪ್ಸಮ್/ಗಂಧಕ ಪೈರೈಟ್ಸಗಳಂತಹ ಪದಾರ್ಥಗಳನ್ನು ಬಳಸುತ್ತಾರೆ. ಮೇಲಿನ ರಾಸಾಯನಿಕಗಳ ಪ್ರಮಾಣವು ವಿನಮಯ ಸೋಡಿಯಂ ಪ್ರಮಾಣ, ಜೇಡಿಯ ಪ್ರಮಾಣ ಇತ್ಯಾದಿಗಳನ್ನು ಅವಲಂಬಿಸಿದ ಕಾರಣ ಭೂಸುಧಾರಣೆಗೆ ಎಷ್ಟು ರಾಸಾಯನಿಕಗಳನ್ನು ಬಳಸಬೇಕೆಂಬುದನ್ನು ಮಣ್ಣಿನ ಮಾದರಿಯನ್ನು ಮಣ್ಣು ಆರೋಗ್ಯ ಕೇಂದ್ರಕ್ಕೆ ಕಳಿಸಿ ತಿಳಿದು ಕೊಳ್ಳಬೇಕು.

ವಿವಿಧ ಬೆಳೆಗಳ ಕ್ಷಾರ ಸಹಿಷ್ಣತೆ

ಸೈರಾಣಾಶಕ್ತಿ:

ಬೆಳೆಗಳು

ಸಹಿಷ್ಣತೆ:

ಭತ್ತ. ಷಗರಬೀಟ್, ಐರ್ನಿಪ್, ಪಯಾರ ಹುಲ್ಲು.

ಅರೆ ಸಹಿಷ್ಣತೆ:

ಬಾರ್ಲಿ. ಗೋದಿ, ಕಬ್ಬು, ಹತ್ತಿ, ನವಣೆ, ಜೋಳ, ಆಲೂಗಡ್ಡೆ, ಕಲ್ಲಂಗಡಿ

ಅಸಹಿಷ್ಣತೆ:

ಹತ್ತಿ (ಮೂಳಕೆ ಸಮಯದಲ್ಲಿ) ಮುಸುಕಿನ ಜೋಳ, ನೆಲಗಡಲೆ, ಬಟಾಣಿ ಸೂರ್ಯಕಾಂತಿ, ಆಲಸಂದಿ, ಉದ್ದು, ಲೆಂಟಲ್

 

ಸವಳು-ಕ್ಷಾರಯುಕ್ತ ಭೂಮಿಯ ಸುಧಾರಣೆ ಕ್ರಮಗಳು:

ಇಂತಹ ಮಣ್ಣಿನಲ್ಲಿರಸಸಾರ 8.5 ಗಿಂತ ಕಡಿಮೆ ಇಟ್ಟು ಕರಗುವ ಲವಣಾಂಶ 4 ಡಿ, ಎಸ್. /ಮೀ.ಕ್ಕಿಂತ ಹೆಚ್ಚು ಹಾಗೂ ವಿನಿಮಯ ಸೋಡಿಯಂ ಪ್ರಮಾಣ ಸೇಕಡಾ 15 ಕ್ಕಿಂತ ಹೆಚ್ಚು ಇರುತ್ತದೆ. ಸವಳು ಜಮೀನಿನಲ್ಲಿಯ ಲವಣ ಬಸಿದು ತೆಗೆಯುವ ವಿಧಾನಗಳ ಜೊತೆಗೆ ಸೋಡಿಯಂ ವಿನಿಮಯಕ್ಕೆ ಕ್ಯಾಲ್ಸಿಯಂಯುಕ್ತ ರಾಸಾಯನಿಕ ವಸ್ತುಗಳನ್ನು ಮಣ್ಣಿಗೆ ಬೆರೆಸಬೇಕಾಗುತ್ತದೆ.ಮಣ್ಣಿನಲ್ಲಿ ನೀರು ಬಸಿಯುವಿಕೆ ಸುಧಾರಣೆಗಾಗಿ ಯಥೇಚ್ಚವಾಗಿ ಕೊಟ್ಟಿಗೆ ಗೊಬ್ಬರ ಅಥವಾ ಹಸಿರೆಲೆ ಗೊಬ್ಬರಗಳ ಬಳಕೆ ಮಾಡಿಕೂಳ್ಳಬೇಕು.

ಸವಳು- ಕ್ಷಾರದ ಅರೆ ಸಹಿಷ್ಣತೆಯಲ್ಲಿ ಬೆಳೆಯಬಹುದಾದ ಮೇವಿನ ಹಾಗು ಇತರೆ ಮರಗಳು

ಮೇವಿನ ಬೆಳೆ          

ಉರುವಲು ಮರ

ಮರಮುಟ್ಟುರೋಡ್ಸ್

 

ಹುಲ್ಲು

ಬಳ್ಳಾರಿ ಜಾಲಿ

ಜಾಲಿಮರ

 

ಪ್ಯಾರ ಹುಲ್ಲು          

ನೀಲಗಿರಿ

ಬೇವು

ಚಿಗರೆ ಹುಲ್ಲು

ಸುಬಾಬುಲ್‍ದಾಲ್ಬರ್ಜಿಯಾ

ಸಿಸು

ಸಾವಯವ ಗೊಬ್ಬರಗಳ ಪಾತ್ರ:

ಸಾವಯವ ಗೊಬ್ಬರಗಳಾದ ಕೊಟ್ಟಿಗೆಗೊಬ್ಬರ, ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರಗಳು, ಭತ್ತದ ಹುಲ್ಲು, ಬೆಳೆಯ ಪಳೆಯುಳಿಕೆಗಳು, ಕಾಕಂಬಿ ಮತ್ತು ಪ್ರೆಸ್ಮಡಸವಳು ಮತ್ತು ಕ್ಷಾರ ಮಣ್ಣಿನ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಈ ಮೇಲೆ ತಿಳಿಸಿದ ಸಾವಯವ ಗೊಬ್ಬರಗಳು ಸಸ್ಯಗಳಿಗೆ ಬೇಕಾದ ಅತೀ ಅವಶ್ಯಕ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಷ್ (ಮುಖ್ಯ ಪೋಷಕಾಂಶಗಳು), ಸುಣ್ಣ ಮೆಂಗ್ನೇಷಿಯಂ ಮತ್ತು ಸತು, ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಮಾಲಿಬ್ಡಿನಮ್, ಬೋರಾನ್ ಮತ್ತು ಕ್ಮೋರಿನ್ (ಸೂಕ್ಷ್ಮ ಪೋಷಕಾಂಶಗಳು) ಒದಗಿಸುವುದಲ್ಲದೇ ಮಣ್ಣಿನ ರಾಸಾಯನಿಕ, ಭೌತಿಕ ಮತ್ತು ಜೈವಿಕ ಗುಣದರ್ಮಗಳನ್ನು ಉತ್ತಮ ಪಡಿಸುತ್ತವೆ. ಮಣ್ಣಿನ ಮೇಲೆ ಇರುವ ವಿನಿಮಯ ಸೋಡಿಯಂನ್ನು ತಟಸ್ಥಗೊಳಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚು ಮಾಡುತ್ತವೆ. ಇದಲ್ಲದೇ ಮಣ್ಣಿನಲ್ಲಿ ಸಾವಯವಗೊಬ್ಬರ ಕಳೆಯುವಾಗ ಇಂಗಾಲದ ಡೈಆಕ್ಸೆಡ್ ಮತ್ತು ಸಾವಯವ ಹುಳಿ ಪದಾರ್ಥಗಳು ಉತ್ಪತ್ತಿಯಾಗಿ ಮಣ್ಣಿನಲ್ಲಿ ಕರಗದೆ ಇರುವ ಸುಣ್ಣವನ್ನು ಕರಗಿಸಿ ಮಣ್ಣನ್ನುತಟಸ್ಥ ಮಾಡುತ್ತವೆ. ಇದರಿಂದ ಮಣ್ಣಿನಲ್ಲಿ ನೀರಿನ ಪ್ರವೇಶ ಹೆಚ್ಚಾಗುವದು ಹಾಗೂ ಮಣ್ಣಿನಲ್ಲಿ ಬ್ಯಾಕ್ಟೀರಿಯಗಳು ಹೆಚ್ಚಾಗಿ ಮಣ್ಣು ಜೋಳದ ಕಣದಂತಾಗಿ ಮಣ್ಣಿನ ಫಲವತ್ತತೆ ಹೆಚ್ಚಾಗುವದು.

 

ಲೇಖಕರು:

ಡಾ. ಕೃಷ್ಣಾ ಡಿ. ಕುರುಬೆಟ್ಟ ಮತ್ತು ಡಾ.ಅಬ್ದುಲ್ ಕರೀಂ ಎಮ್.

krishina.kurubetta@uhsbagalkot.edu.in

Published On: 10 September 2020, 02:13 PM English Summary: Problematic soils

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.