1. ಅಗ್ರಿಪಿಡಿಯಾ

ಹೂವುಗಳ ರಾಣಿ ಗುಲಾಬಿಯನ್ನು ಕಾಡುವ ಬೂದಿ ರೋಗದ ನಿಯಂತ್ರಣ ಹೇಗೆ? ಇಲ್ಲಿದೆ ಮಾಹಿತಿ

ಹೂವುಗಳ ಲೋಕದಲ್ಲಿ ಗುಲಾಬಿಗೆ ರಾಣಿಯ ಸ್ಥಾನ ನೀಡಲಾಗಿದೆ. ನೋಡಲು ಅತ್ಯಂತ ಸುಂದರವಾಗಿರುವ ಈ ಹೂವು ಪ್ರೀತಿ-ಪ್ರೇಮದ ಸಂಕೇತವೂ ಹೌದು. ಇನ್ನು ಪ್ರೇಮಿಗಳ ದಿನ (ವ್ಯಾಲೆಂಟೈನ್ಸ್ ಡೇ) ಬಂತೆAದರೆ ಕೆಂಪು ಗುಲಾಬಿ ಹೂವುಗಳಿಗೆ ಭಾರೀ ಬೇಡಿಕೆ ಬರುತ್ತದೆ.

ರಾಜ್ಯದ ಕೋಲಾರ ಜಿಲ್ಲೆಯು ಗುಲಾಬಿ ಹೂವುಗಳ ಬೆಳೆಗೆ ಹೆಚ್ಚು ಪ್ರಖ್ಯಾತಿಯನ್ನು ಪಡೆದಿದ್ದು, ಈ ಭಾಗದಲ್ಲಿ ಅತ್ಯುತ್ತಮ ಗಣಮಟ್ಟದ ಗುಲಾಬಿ ಹೂವುಗಳನ್ನು ಬೆಳೆಯಲಾಗುತ್ತದೆ. ಹಾಗೇ, ವ್ಯಾಲೆಂಟೈನ್ಸ್ ಡೇ ಹತ್ತಿರ ಬರುತ್ತಿದ್ದಂತೆ ಬೆಂಗಳೂರು ಸುತ್ತಮುತ್ತಲ ಕೃಷಿ ಭೂಮಿಯಲ್ಲಿ ಬೆಳೆಯಲಾಗುವ ಅತ್ಯದ್ಭುತವಾದ ಹಾಗೂ ಬಣ್ಣ ಬಣ್ಣದ ಗುಲಾಬಿ ಹೂವುಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತದೆ.

ತನ್ನ ಅಂದ, ಬಣ್ಣ, ಸುವಾಸನೆ ಹಾಗೂ ಇನ್ನೂ ಹಲವು ವಿಶೇಷತೆಗಳಿಂದ ಗುಲಾಬಿಯು ಪುಷ್ಪ ಸಂಕುಲದಲ್ಲೇ ಶ್ರೇಷ್ಠ ಸ್ಥಾನವನ್ನು ಪಡೆದಿದೆ. ಮಾಲೆ, ಕೇಶಾಲಂಕಾರ, ಹಾರ–ತುರಾಯಿ, ಪುಷ್ಪಗುಚ್ಛ ಹಾಗೂ ವೇದಿಕೆ ಅಲಂಕಾರ ಸೇರಿದಂತೆ ಹಲವು ಉದ್ದೇಶಗಳಿಗೆ ಇವುಗಳನ್ನು ಬಳಸುವುದರಿಂದ ಹೆಚ್ಚಿನ ಬೇಡಿಕೆ ಇದೆ. ಇಂತಹ ಗುಲಾಬಿ ಹೂವಿನ ಗಿಡಗಳು ಕೊಳೆರೋಗ, ಮೈಟ್ ನುಸಿ ಮತ್ತು ಬೂದಿ ರೋಗ ಬಾಧೆಯಿಂದ ಬಳಲುತ್ತವೆ. ಇವೆಲ್ಲವುಗಳಲ್ಲಿ ಗುಲಾಬಿಯನ್ನು ಹೆಚ್ಚಾಗಿ ಕಾಡುವುದು ಹಾಗೂ ಬಾಧಿಸುವುದು ಬೂದಿ ರೋಗ.

ರಾಜ್ಯದಲ್ಲಿ ಸೂಪರ್‌ಸ್ಟಾರ್, ಕ್ವೀನ್ ಎಲಿಜಬೆತ್, ಗೋಲ್ಡನ್ ಟೈಮ್ಸ್, ಟಾಟಾ ಸೆಂಟಿನರಿ ಹಾಗೂ ಡಬಲ್ ಡಿಲೈಟ್‌ನ ಮಿಶ್ರ ವರ್ಣದ ಗುಲಾಬಿ ಪ್ರಭೇದಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಇತ್ತೀಚೆಗೆ ಅರಳುತ್ತಿದ್ದಂತೆ ಒಣಗಿ ಮುರುಟುತ್ತಿವೆ. ಇದರೊಂದಿಗೆ, ಗುಲಾಬಿ ಗಿಡಗಳ ಎಲೆ, ಕಾಂಡ ಮತ್ತು ಮೊಗ್ಗುಗಳ ಮೇಲೆ ಬೂದು ಬಣ್ಣದ ಚುಕ್ಕೆಗಳು ಕಾಣಿಸಿಕೊಂಡಿವೆ. ಎಲೆಗಳು ಮುದುಡಿ ಬಾಡುತ್ತಿವೆ. ರೋಗಕ್ಕೆ ತುತ್ತಾದ ಮೊಗ್ಗುಗಳು ಅರಳುವುದಿಲ್ಲ. ಎಲೆಗಳ ರಸ ಹೀರುವ ಕೀಟಗಳಿಂದ ಹೂ ಮೊಗ್ಗು ಸುಟ್ಟಂತೆ ಕಾಣುತ್ತದೆ. ಹೂವಿನ ಒಂದೊಂದೇ ದಳ ಒಣಗಿ ಹೂ ಸಂಪೂರ್ಣ ಉದುರುತ್ತದೆ. ಇದರಿಂದ ಇಳುವರಿ ಕುಂಠಿತಗೊಂಡು ಪುಷ್ಪ ಕೃಷಿಕರು ನಷ್ಟ ಅನುಭವಿಸುವಂತಾಗಿದೆ.

ರೋಗಕ್ಕೆ ಕಾರಣವೇನು?

ಹವಾಮಾನ ವೈಪರಿತ್ಯದಿಂದ ಗುಲಾಬಿ ಬೆಳೆಯಲ್ಲಿ ರೋಗ ಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ ಕಾರಣ ರೈತರು ರೋಗ ಹತೋಟಿಗೆ ಕ್ರಮ ಕೈಗೊಳ್ಳಬೇಕು. ರಾತ್ರಿ ಅತಿಯಾದ ತಂಪು ವಾತಾವರಣವಿದ್ದರೆ ಗುಲಾಬಿ ಗಿಡಗಳು ಬಹು ಬೇಗನೆ ಬೂದಿ ರೋಗಕ್ಕೆ ತುತ್ತಾಗುವ ಸಾಧ್ಯತೆಯಿದೆ. ರೈತರು ಹವಾಗುಣಕ್ಕೆ ತಕ್ಕಂತೆ ಗುಲಾಬಿ ಗಿಡಗಳಿಗೆ ಕೀಟನಾಶಕ ಸಿಂಪಡಣೆ ಮಾಡಬೇಕು. ರೋಗ ಉಲ್ಬಣಗೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲೆ, ಕಾಂಡ ಮತ್ತು ಮೊಗ್ಗುಗಳ ಮೇಲೆ ಬೂದಿ ಬಣ್ಣದ ಚುಕ್ಕೆ ಕಾಣಿಸಿಕೊಳ್ಳುವುದು ಬೂದಿ ರೋಗದ ಮುಖ್ಯ ಲಕ್ಷಣವಾಗಿದೆ. ಈ ರೋಗಕ್ಕೆ ತುತ್ತಾದ ಎಲೆಗಳು ಮುದುಡಿಕೊಳ್ಳುತ್ತವೆ. ನಂತರ ಎಲೆಗಳು ಬಾಡಿ ಒಣಗುತ್ತವೆ. ರೋಗಕ್ಕೆ ತುತ್ತಾದ ಮೊಗ್ಗುಗಳು ಅರಳುವುದಿಲ್ಲ.

ನಿಯಂತ್ರಣ ಕ್ರಮಗಳು

ಬೂದಿ ರೋಗ ನಿಯಂತ್ರಣಕ್ಕೆ ಮೊದಲ ಹಂತದಲ್ಲಿ 1 ಗ್ರಾಂ. ಕಾರ್ಬಂಡೈಜಿಮ್ ಅಥವಾ 0.5 ಮಿ.ಲೀ ಟ್ರೆöಡೆಮಾರ್ಫ್ ಕೀಟನಾಶಕವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. 2ನೇ ಹಂತದಲ್ಲಿ 1.5 ಮಿ.ಲೀ ಡೈನೀಕ್ಯಾಪ್ ಅಥವಾ 0.5 ಮಿ.ಲೀ ಅಮಿಸ್ಟರ್ ಕೀಟನಾಶಕವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. 3ನೇ ಹಂತದಲ್ಲಿ 1 ಮಿ.ಲೀ ಹೆಕ್ಸಾಕೀನಾಜೋಲ್ ಅಥವಾ 2 ಗ್ರಾಂ ಸಲ್ಫೇಕ್ಸ್ ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಮೆಟಲಾಕ್ಸಿಲ್ ಮ್ಯಾಂಕೊಜೆಬ್ ಕೀಟನಾಶಕವನ್ನು ನೀರಿಗೆ ಬೆರೆಸಿ ಸಿಂಪಡಿಸುವುದರಿAದ ತುಪ್ಪಳದ ರೋಗ ತಡೆಗಟ್ಟಬಹುದು. ಗಿಡಗಳ ಸವರುವಿಕೆ ನಂತರ 3 ಗ್ರಾಂ. ಕಾಪರ್ ಆಕ್ಸಿಕ್ಲೋರೈಡ್ ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡುವುದರಿಂದ ಡೈ ಬ್ಯಾಕ್ ರೋಗ ಹತೋಟಿಗೆ ಬರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡೈಕೋಫಾಲ್ ಮತ್ತು ಅಬಾಮೆಕ್ಟಿನ್ ಕೀಟನಾಶಕಗಳನ್ನು ಪರ್ಯಾಯವಾಗಿ ಸಿಂಪಡಿಸುವುದರಿಂದ ಮೊಗ್ಗು ಕೊರೆಯುವ ಹುಳು, ಬಿಳಿ ನೊಣದ ಬಾಧೆ, ಕೆಂಪು ನುಸಿ ಕೀಟ ನಿಯಂತ್ರಿಸಬಹುದು. ಅಸಿಫೇಟ್ ಅಥವಾ ಫಿಪ್ರೋನಿಲ್, ಇಮಿಡಾಕ್ಲೋಪ್ರಿಡ್ ಸಿಂಪಡಿಸುವುದರಿಂದ ಥ್ರಿಪ್ಸ್ ಕೀಟವನ್ನು ಬಗ್ಗುಬಡಿಯಬಹುದು. ರೈತರು ಹೆಚ್ಚಿನ ಮಾಹಿತಿಗೆ ಮೊ: 78295 12236 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Published On: 23 July 2021, 07:18 PM English Summary: powdery mildew disease controlling methods in rose plants

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.