1. ಅಗ್ರಿಪಿಡಿಯಾ

ಸಾಮಾನ್ಯ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಬೆಳೆಗಳಿಗೆ ರೋಗ, ಕೀಟಗಳ ಹಾನಿ ಕಡಿಮೆ

ನಮ್ಮ ದೇಶದಲ್ಲಿ ಪ್ರತಿ ವರ್ಷವು ರೋಗ ಮತ್ತು ಕೀಟಗಳ ಬಾಧೆಯಿಂದ ಬೆಳೆಗಳಿಗೆ ಸಾಕಷ್ಟು ಹಾನಿಯುಂಟಾಗುತ್ತದೆ. ಅದೇ ಸಮಯದಲ್ಲಿ ಪೀಡೆನಾಶಕಗಳ ಅತಿಯಾದ ಬಳಕೆಯಿಂದ ವೆಚ್ಚ ಹೆಚ್ಚಾಗುವುದಲ್ಲದೆ ನೈಸರ್ಗಿಕ ಸಂಪನ್ಮೂಲಗಳಾದ ನೀರು, ಮಣ್ಣು ಮತ್ತು ಗಾಳಿ ಮಲಿನಗೊಳ್ಳುವುದರ ಜೊತೆಗೆ ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆ ಸಹಾ ಕುಂಠಿತಗೊಂಡಿದೆ. ಬೆಳೆಗಳಿಗೆ ರೋಗ ಮತ್ತು ಕೀಟಗಳಿಂದ ಉಂಟಾಗುವ ಹಾನಿಯನ್ನು ಸೂಕ್ತ ಸಮಯದಲ್ಲಿ ಕಡಿಮೆಗೊಳಿಸಲು ಅಥವಾ ತಪ್ಪಿಸಲು ಸಾಮಾನ್ಯ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಯಂತ್ರಿಸಬಹುದು. ಕೆಲವು ಪದ್ಧತಿಗಳನ್ನು ಕೆಳಗಿನಂತೆ ಪಟ್ಟಿಸಲಾಗಿದೆ.

  1. ಮಾಗಿ ಉಳುಮೆಯ:

ಬೆಳೆ ಕಟಾವು ಆದ ನಂತರ ಎಪ್ರಿಲ್-ಮೇ ತಿಂಗಳಲ್ಲಿ ಮಾಗಿ ಉಳುಮೆ ಮಾಡುವುದರಿಂದ ಪತಂಗಗಳ ತತ್ತಿ, ಕೀಡೆ ಮತ್ತು ಕೋಶಗಳನ್ನು ಮಣ್ಣಿನ ಮೇಲ್ಪದರಿಗೆ ತಂದು ಹಕ್ಕಿಗಳಿಂದ ಹಾಗೂ ಬಿಸಿಲಿನ ಪ್ರಖರತೆಯಿಂದ ನಿಯಂತ್ರಿಸಬಹುದು. ಮಾಗಿ ಉಳುಮೆ ಮಾಡುವುದರಿಂದ ಭೂಮಿಯೊಳಗಿನ ಹುಳುಗಳು ಮೇಲೆ ಬಂದು, ಹಂದಿ, ಕಾಗೆ, ಮೈನಾ ಪಕ್ಷಿಗಳಿಗೆ ಆಹಾರವಾಗುವುದರಿಂದ ಬಹುತೇಕ ಹುಳುಗಳನ್ನು ನಿಯಂತ್ರಿಸಬಹುದು.

ನಿಯಂತ್ರಿಸಬಹುದಾದ ಕೀಟಗಳು: ಕಾಯಿ ಕೊರಕ, ಬೇರು ಹುಳು, ಗೊಣ್ಣೆ ಹುಳುಗಳು, ಬಿಹಾರ್ ಕಂಬಳಿ ಹುಳು, ಸೈನಿಕ ಹುಳು, ಕಾಂಡ ಕೊರಕ, ಥ್ರಿಪ್ಸ್ ಇತ್ಯಾದಿ.

ಸೊಂಕು ತರುವ ಮಣ್ಣುಜನ್ಯ ಸೂಕ್ಷಾö್ಮಣುಜೀವಿಗಳಾದ ಶಿಲೀಂಧ್ರಗಳು (ಫ್ಯುಸೇರಿಯಂ, ಸ್ಕಿ÷್ಲರೋಷಿಯಂ, ರೈಝೋಕ್ಟಿನಿಯಾ, ಪಿಥಿಯಂ, ಫೈಟಾಫ್ತಾರ, ವರ್ಟಿಸಿಲಿಯಂ ಇತ್ಯಾದಿ), ದುಂಡಾಣು (ರ‍್ವೀನಿಯ, ಸ್ಟೆçಪ್ಟೋಮೈಸಿಸ್) ಮತ್ತು ಜಂತು ಹುಳುಗಳು (ಮೆಲೈಡೋಗೈನ್, ಹೆಟಿರೋಡರಾ) ಮಣ್ಣಿನಲ್ಲಿ ಶಾಶ್ವತವಾಗಿರುತ್ತದೆ. ವಿವಿಧ ಶಿಲೀಂಧ್ರಗಳು ಮಣ್ಣಲ್ಲಿ ಹಲವಾರು ತಿಂಗಳಿAದ ವರ್ಷಗಳ ಕಾಲ ಸೂಪ್ತಾವಸ್ಥೆಯಲ್ಲಿ ವಾಸಿಸುತ್ತವೆ. ಮಾಗಿ ಉಳುಮೆಯಿಂದ ಸೂಕ್ಷಾಣು ಜೀವಿಗಳು ಬಿಸಿಲಿನ ತಾಪಕ್ಕೆ ಬಿದ್ದಾಗ ಇದರ ಜನಸಂಖ್ಯೆ ಮತ್ತು ಚಟುವಟಿಕೆಗಳನ್ನು ಕಡಿಮೆ ಗೊಳಿಸಬಹುದು. ರೋಗಾಣುಗಳು ಬಿಸಿಲಿನ ತಾಪಕ್ಕೆ ಸತ್ತು ರೋಗದ ಸೊಂಕು ಕಡಿಮೆಯಾಗುವುದು.

ಇದಲ್ಲದೆ ಬೇಸಿಗೆ ಉಳುಮೆಯು ಮಣ್ಣಿನ ನೀರು ಹಿಡಿಯುವ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ ಕಳೆಗಳನ್ನು ಕಡಿಮೆಗೊಳಿಸುತ್ತದೆ ಮತ್ತು ಮಣ್ಣಿನ ಸವೆತವನ್ನು ಕಡಿಮೆ ಮಾಡುತ್ತದೆ. ಮುಂಗಾರು ಪ್ರಾರಂಭವಾಗುವ ಮೊದಲೇ 15 ರಿಂದ 20 ದಿನಗಳ ಅಂತರದಲ್ಲಿ ಮಾಗಿ ಉಳುಮೆಯನ್ನು ಮಾಡಬೇಕು.

  1. ಮಣ್ಣಿನ ಸೌರೀಕರಣ:

ಇತ್ತೀಚಿನ ಸಂಶೋಧನೆಯಿAದ ಬೇಸಿಗೆಯಲ್ಲಿ ಭೂಮಿಯನ್ನು ಕರಿಯ ಪಾಲಿಥಿನ್ ಹಾಳೆಯಿಂದ ಮುಚ್ಚಿದರೆ ರೋಗದ ಹತೋಟಿ ಸಾಧ್ಯವೆಂದು ತಿಳಿಯಲಾಗಿದೆ. ಇದರಿಂದ ರೋಗಾಣುಗಳು ಬಿಸಿಲಿನ ತಾಪಕ್ಕೆ ಸತ್ತು ಹೋಗುತ್ತದೆ. ಈ ಸಂಶೋಧನೆ ರೈತರ ಮಟ್ಟದಲ್ಲಿ ಎಷ್ಟೊಂದು ಉಪಯುಕ್ತವಾಗುತ್ತದೆಂಬುದುರ ಬಗ್ಗೆ ಮುಂದುವರೆದ ಪ್ರಯೋಗಗಳು ನಡೆದಿವೆ.

  1. ಹೊಲ/ತೋಟದ ಸ್ವಚ್ಛತೆ:

ಹೊಲ/ತೋಟದ ಸ್ವಚ್ಛತೆಯು ರೋಗ ಅಥವಾ ಕೀಟಗಳಿಗೆ ಅತಿಧೇಯವಾಗಬಹುದಾದ ಯಾವುದಾದರೂ ವಸ್ತುವನ್ನು ತೆಗೆದುಹಾಕುವ ಒಂದು ಸರಳ ಅಭ್ಯಾಸವಾಗಿದೆ. ಇದು ಸತ್ತ ಮತ್ತು ರೋಗ ಪೀಡಿತ ಗಿಡಗಳನ್ನು ತೆಗೆದುಹಾಕುವುದು, ಬೆಳೆ ಉಳಿಕೆಯನ್ನು ತೆಗೆದುಹಾಕುವುದು, ನಿಂತ ನೀರನ್ನು ನಿಯಂತ್ರಿಸುವುದು, ಇತ್ಯಾದಿಯನ್ನು ಒಳಗೊಂಡಿದೆ.  ಹಲವಾರು ಪತಂಗಗಳು ಕಳೆಗಳಲ್ಲಿ ತನ್ನ ಸಂತಾನೋತ್ಪತಿಯನ್ನು (ತತ್ತಿ, ಕೀಡೆ ಹಂತಗಳು) ಮುಗಿಸುವುದಲ್ಲದೆ ಈ ಕೀಡೆಗಳು ಮುಖ್ಯ ಬೆಳೆಗೂ ಹಾನಿಯನ್ನುಂಟು ಮಾಡುತ್ತವೆ.

ದಾಳಿಂಬೆ ಬೆಳೆಯ ರಸ ಹೀರುವ ಕೀಟವು ಕಳೆಯಾದ ಅಮೃತಬಳ್ಳಿಯಲ್ಲಿ ತನ್ನ ಕೀಡೆಯ ಅವಧಿಯನ್ನು ಮುಗಿಸಿ ನಂತರ ಪತಂಗವು ಹಣ್ಣಿನಿಂದ ರಸವನ್ನು ಹೀರುತ್ತದೆ.

 ಸಸ್ಯ ರೋಗಕಾರಕಗಳಾದ ಶಿಲೀಂಧ್ರಗಳು, ದುಂಡಾಣು ಮತ್ತು ಜಂತು ಹುಳುಗಳು ಬೆಳೆ ಉಳಿಕೆ ಮತ್ತು ಹೊಲದಲ್ಲಿನ ಕಳೆಗಳ ಮೇಲೆ ಸೂಪ್ತಾವಸ್ಥೆಯಲ್ಲಿ ವಾಸಿಸುತ್ತವೆ. ಸೂಕ್ತ ಬೆಳೆ ಲಭ್ಯವಾದಾಗ ಮತ್ತೆ ರೋಗವನ್ನುಂಟುಮಾಡುತ್ತದೆ. ಇದರ ನಿಯಂತ್ರಣದಿಂದ ಮುಂದೆ ಬೆಳೆಯುವ ಬೆಳೆಗಳನ್ನು ರೋಗ ಮತ್ತು ಕೀಟ ಬಾಧೆಯಿಂದ ರಕ್ಷಿಸಬಹುದು. ಆದ್ದರಿಂದ ಸ್ವಚ್ಛತೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೊಲ ಸ್ವಚ್ಛತೆ ಮತ್ತು ಆಳವಾದ ಉಳುಮೆಯಿಂದ ಮಣ್ಣಿನ ಮೇಲ್ಪದರದಲ್ಲಿರುವ ಕಸದ ಬೀಜಗಳು ಆಳಕ್ಕೆ ಹೋಗಿ ಮೊಳಕೆಯೊಡೆದು ಹೊರಬರಲಾರವು.

  1. ನಿರ್ಮೂಲನೆ:

ನಿರ್ಮೂಲನೆಯು ಹೊಲದ ಸ್ವಚ್ಛತೆಯಂತಯೇ ಅನುಸರಿಸುತ್ತದೆ. ಇದರಲ್ಲಿ ಹಾನಿಕಾರಕ ಕಳೆಗಳು ಮತ್ತು ರೋಗಪೀಡಿತ ಸಸ್ಯ ಸಾಮಗ್ರಿಗಳನ್ನು ಮಣ್ಣಿನಲ್ಲಿ ಅಥವಾ ಗೊಬ್ಬರದ ಘಟಕದಲ್ಲಿ ಮತ್ತೆ ಸೇರಿಸುವ ಬದಲು ಸುಟ್ಟುಹಾಕಬೇಕು.

  1. ಬೆಳೆ ಪರಿವರ್ತನೆ

2 ರಿಂದ 3 ವರ್ಷಗಳ ಅಂತರದಲ್ಲಿ ಬೆಳೆ ಪರಿವರ್ತನೆಯನ್ನು ಮಾಡುವುದರಿಂದ ಮಣ್ಣನ್ನು ರೋಗ ಮತ್ತು ಕೀಟಗಳಿಂದ ರಕ್ಷಿಸಬಹುದು. ಬೆಳೆ ಪರಿವರ್ತನೆಯಿಂದ ರೋಗ ಮತ್ತು ಕೀಟಗಳನ್ನು ಅದರ ಆಹಾರ ಮೂಲ್ಯದಿಂದ ಹೊರತುಪಡಿಸಬಹುದು. ಇದರಿಂದ ಕೀಡೆಗಳ ಜೀವನ ಚಕ್ರವನ್ನು ಒಡೆಯುವುದಲ್ಲದೆ ಕಳೆಗಳನ್ನು ನಿಯಂತ್ರಿಸಬಹುದು. ಮಣ್ಣು ಜನ್ಯರೋಗವನ್ನುಂಟಾಗುವ ಬೆಳೆಗಳ ನಂತರ ರೋಗ ಸಹಿಷ್ಠುತ ಬಲೆ ಬೆಳೆಗಳನ್ನು ಬೆಳೆಯಬೇಕು.

ಉದಾಹರಣೆ: ರೋಗಗ್ರಸ್ತ ಭೂಮಿಯಲ್ಲಿ 4 ರಿಂದ 5 ವರ್ಷಗಳವರೆಗೆ ತೊಗರಿಯನ್ನು ಬೆಳೆಯದೆ ಜೋಳ ಮತ್ತು ಮೆಕ್ಕೆ ಜೋಳ ಬೆಳೆಯಬೇಕು. ಮೆಕ್ಕೆ ಜೋಳ ಬೇರುಗಳು ಉತ್ಪಾದಿಸುವ ರಸಾಯನಕ (ಹೈಡ್ರೋಸೈನಿಕ್ ಆಮ್ಲ) ವು ತೊಗರಿ ಬೆಳೆಯಲ್ಲಿ ನೆಟಿ ರೋಗ/ಸಿಡಿ ರೋಗ ಉಂಟುಮಾಡುವ ರೋಗಾಣುವಿನ ಪ್ರಮಾಣ ಕಡಿಮೆ ಮಾಡುವುದು ಎಂದು ತಿಳಿದುಬಂದಿದೆ. ಅದೇ ರೀತಿ ಕಬ್ಬು ಬೆಳೆಯ ನಂತರ ಚಂಡು ಹೂ ಬೆಳೆಯುವುದರಿಂದ ಮಣ್ಣಲ್ಲಿ ಜಂತು ಹುಳುಗಳ ಸಮಸ್ಯೆಯನ್ನು ಕಡಿಮೆಗೊಳಿಸಬಹುದು.

  1. ರೋಗ ನಿರೋಧಕ ತಳಿಗಳ ಆಯ್ಕೆ

ರೋಗ ನಿರೋಧಕ ತಳಿಗಳ ಆಯ್ಕೆಯಿಂದ ರೋಗಗಳನ್ನು ನಿಯಂತ್ರಿಸಿ ಮುಂದೆ ಮಾಡುವ ರಾಸಾಯನಿಕಗಳ ಖರ್ಚನ್ನು ಕಡಿಮೆಗೊಳಿಸಬಹುದು. 

ಉದಾಹರಣೆ: ಅ. ತೊಗರಿ ಬೆಳೆಯ ಟಿ.ಎಸ್.-3ಆರ್ ತಳಿಯು ಬೇಗ ಮಾಗುವ ಮಧ್ಯಮಾವಧಿ ತಳಿಯಾಗಿದ್ದರಿಂದ ಕಡಿಮೆ ಆಳದ ಕಪ್ಪು ಭೂಮಿಗೆ ಸೂಕ್ತವಾಗಿರುತ್ತದೆ. ಗುಲ್ಯಾಳ್ ಲೋಕಲ್/ಸ್ಥಳೀಯ ತಳಿಗೆ ಪರ್ಯಾಯ ತಳಿಯಾಗಿದೆ ಮತ್ತು ಸಿಡಿ ರೋಗ ಸಹಿಷ್ಣುತೆಯನ್ನು ಹೊಂದಿದೆ.  ಜಿ.ಆರ್.ಜಿ -811 ತಳಿಯು ನೀರಾವರಿಗೆ ಹಾಗೂ ನಾಟಿ ಪದ್ಧತಿಗೆ ಸೂಕ್ತವಾಗಿದೆ. ಇದು ಕೂಡ ಮಧ್ಯಮಾವಧಿ ತಳಿ ಹಾಗು ಉತ್ತಮ ಇಳುವರಿ ಕೊಡುವ ಶಕ್ತಿ ಹೊಂದಿದೆ ಮತ್ತು ತೊಗರಿ ಬೆಳೆಗೆ ಮುಖ್ಯವಾಗಿ ಕಾಡುವ ಸಿಡಿ/ನೆಟಿ ರೋಗ ನಿರೋಧಕತೆಯನ್ನು ಹೊಂದಿದೆ. 

ಆ. ಗೋದಿ ತಳಿಯಾದ ಯು.ಎ.ಎಸ್ -304 ತುಕ್ಕು ರೋಗ ನಿರೋಧಕತೆಯನ್ನು ಹೊಂದಿದೆ. 

  1. ತಡೆಗಟ್ಟುವಿಕೆ: ಸಾಧ್ಯವಾದಷ್ಟು ನಾಟಿ/ಬಿತ್ತನೆಗಾಗಿ “ಪ್ರಾಮಾಣಿಕತೆ” ಹೊಂದಿರುವ ಸಸ್ಯ/ಬೀಜಗಳನ್ನು ಬಳಸಬೇಕು. ಇವು ರೋಗದಿಂದ ಮುಕ್ತವಾಗಿರುತ್ತವೆ.

ಲೇಖನ: ಡಾ. ಸೈಯದ್ ಸಮೀನ್ ಅಂಜುಮ್ (ಸಸ್ಯರೋಗ ಶಾಸ್ತ್ರ) 9739321487, ಡಾ. ಆರ್. ಬಿ. ನೆಗಳೂರ, ಶ್ರೀಮತಿ ಹೀನಾ, ಎಮ್. ಎಸ್. ಮತ್ತು ಡಾ. ಸವಿತಾ. ಬಿ,  ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ವಿಜಯಪೂರ II-ಇಂಡಿ

Published On: 16 May 2021, 09:16 PM English Summary: pest and Disease management by cultural control

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.