1. ಅಗ್ರಿಪಿಡಿಯಾ

ದೇಸಿ ಆಕಳೊಂದಿದ್ದರೆ ಸಾಕು, ನೈಸರ್ಗಿಕ ಕೃಷಿಯಲ್ಲಿ ಯಶಸ್ಸು

ನೈಸರ್ಗಿಕ ಕೃಷಿ ಅಥವಾ ಶೂನ್ಯ ಬಂಡವಾಳ ಕೃಷಿ ಎಂದರೆ ದುಡ್ಡು ಖರ್ಚು ಮಾಡದೆ ಬೆಳೆ ಬೆಳೆಯುವುದು. ಬಿತ್ತನೆ ಬೀಜ, ಕೀಟನಾಶಕ ಎಂದು ಸಬ್ಸಿಡಿಯಲ್ಲಿ ದೊರೆಯುವ ರಸಗೊಬ್ಬರಕ್ಕಾಗಿ ಸರದಿಯಲ್ಲಿ ಕಾದು ನಿಂತು ಹಣ ಖರ್ಚು ಮಾಡಿ ಬೆಳೆ ಬೆಳೆಯುವದರ ಬದಲು ಕೊಟ್ಟಿಗೆಯಲ್ಲಿನ ಆಕಳಿನ ಸಗಣಿ, ಗಂಜಲ, ಬದುವಿನ ಮಣ್ಣು, ಬಳಸಿ ಬೆಳೆ ಬೆಳೆಯುವುದೇ ನೈಸರ್ಗಿಕ ಕೃಷಿ. ಇಲ್ಲಿ ರಸಗೊಬ್ಬರ, ಕೀಟನಾಶಕಗಳ ಅಗತ್ಯವಿಲ್ಲ, ಕೊಟ್ಟಿಗೆಯಲ್ಲಿ ಒಂದು ದೇಸಿ ಆಕಳು ಇದ್ದರೆ ಸಾಕು, ಯಾವುದೇ ಖರ್ಚಿಲ್ಲದೆ ನೈಸರ್ಗಿಕ ಕೃಷಿ ಮಾಡಬಹುದೆನ್ನುತ್ತಾರೆ ತಜ್ಞರು.

ನೈಸರ್ಗಿಕ ಕೃಷಿಯಲ್ಲಿ ಸ್ಥಳೀಯ ಹಾಗೂ ನೈಸರ್ಗಿಕವಾಗಿ ದೊರಕುವ ವಸ್ತುಗಳನ್ನು ಬಳಕೆ ಮಾಡಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದನೆ ಪಡೆಯುವ ಸುಲಭ ಮಾರ್ಗ ಇದಾಗಿದೆ. ಇದು ಭಾರತ ದೇಶದ ಈಗಿನ ಆಧುನಿಕ ಕೃಷಿ ಪದ್ಧತಿಯನ್ನು ಬದಲಾಯಿಸುವಂತಹ ಕ್ರಾಂತಿಕಾರಿ ಪರಿಕಲ್ಪನೆಯಾಗಿದೆ.  ಶ್ರೀ. ಸುಭಾಷ್ ಪಾಲೇಕರವರು ಇದರ ಪಿತಾಮಹರಾಗಿದ್ದು ಇದರ ರಚನೆ ಹಾಗೂ ಜನಪ್ರಿಯತೆಗೆ ಕಾರಣವಾಗಿದ್ದಾರೆ. ನೈಸರ್ಗಿಕ ಕೃಷಿ ಎಂದರೇನು? ಈ ಪದ್ಧತಿಯ ಪ್ರಾಮುಖ್ಯತೆ ಹಾಗೂ ಇದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಹೇಗೆ ಪಡೆದುಕೊಳ್ಳಬೇಕೆಂಬುದರ ಸಮಗ್ರ ಮಾಹಿತಿ ಇಲ್ಲಿದೆ....

ಶ್ರೀ ಸುಭಾಷ್ ಪಾಲೇಕರವರ ಪ್ರಕಾರ ನೈಸರ್ಗಿಕ ಕೃಷಿಯ 4 ಮೂಲ ತತ್ವಗಳು:

  1. ಬೀಜಾಮೃತ
  2. ಜೀವಾಮೃತ
  3. ಆಚ್ಛದನಂ (ಬೆಳೆಗಳ ಹೊದಿಕೆ) ಮತ್ತು
  4. ವಾಫಾಸ (ಆರ್ದ್ರತೆ)
  1. ಬೀಜಾಮೃತ:

ಇದು ದೇಶಿ ಹಸುವಿನ ಸೆಗಣಿ ಹಾಗೂ ಗೋಮೂತ್ರ ಆಧಾರಿತ ಬೀಜೋಪಚಾರವಾಗಿದೆ. ಬೀಜಾಮೃತವನ್ನು ತಯಾರಿಸಲು ಪ್ಲಾಸ್ಟಿಕ್ ಡ್ರಮ್ ಅಥವಾ ಸಿಮೆಂಟ್ ತೊಟ್ಟಿಯನ್ನು ಬಳಸಬಹುದು. ಇದಕ್ಕಾಗಿ 50 ಲೀಟರ್ ನೀರು, 5 ಕಿ. ಗ್ರಾಂ ನಾಡ ಹಸುವಿನ ಸೆಗಣಿ, 5 ಲೀ. ಗೋಮೂತ್ರ ಹಾಗೂ 50 ಗ್ರಾಂ ಸುಣ್ಣ ಬೇಕಾಗುತ್ತದೆ.

ತಯಾರಿಸುವ ವಿಧಾನ:

ಬೀಜಾಮೃತವನ್ನು ಬಿತ್ತನೆಯ 1 ದಿನ ಮುಂಚಿತವಾಗಿ ತಯಾರಿಸಬೇಕು. 5 ಕಿ. ಗ್ರಾಂ ಸೆಗಣಿಯನ್ನು ತೆಳುವಾದ ಹತ್ತಿ ಬಟ್ಟೆಯಲ್ಲಿ ಕಟ್ಟಿ 50 ಲೀ ನೀರಿರುವ ಪ್ಲಾಸ್ಟಿಕ್ ಡ್ರಮ್‍ನ ಮಧ್ಯದಲ್ಲಿ ಮುಳುಗುವಂತೆ ತೂಗು ಹಾಕಬೇಕು. ಜೊತೆಗೆ 1 ಪ್ಲಾಸ್ಟಿಕ್ ಪಾತ್ರೆಯಲ್ಲಿ 50 ಗ್ರಾಂ ಸುಣ್ಣವನ್ನು 1 ಲೀ. ನೀರಿನಲ್ಲಿ ಕರಗಿಸಬೇಕು. ಬಿತ್ತನೆಯ ದಿನ ಬೆಳಗಿನ 6 ಗಂಟೆ ಸುಮಾರು ಸೆಗಣಿ ಗಂಟನ್ನು ಬಿಚ್ಚದೆ ನೀರಿನಲ್ಲಿ ಚೆನ್ನಾಗಿ 5-6 ಬಾರಿ ಕುಲಕಿಸಿ ಹಿಂಡಬೇಕು. ನಂತರ ಸುಣ್ಣದ ತಿಳಿಯನ್ನು ಈ ಸೆಗಣಿ ನೀರಿನಲ್ಲಿ ಚೆನ್ನಾಗಿ ಬೆರೆಸಬೇಕು. ಇದಾದ ನಂತರ 5 ಲೀ. ಗೋಮೂತ್ರವನ್ನು ಇದಕ್ಕೆ ಮಿಶ್ರಣ ಮಾಡಬೇಕು. ಬೀಜಗಳನ್ನು ಬೀಜಾಮೃತದಲ್ಲಿ 5 ನಿಮಿಷ ಮುಳುಗಿಸಿದರೆ ಸಾಕು. ನಂತರ ಬೀಜೋಪಚಾರ ಆದ ಬೀಜಗಳನ್ನು ತೇವ ಆರುವ ವರೆಗೆ ನೆರಳಿನಲ್ಲಿ ಪ್ಲಾಸ್ಟಿಕ್ ಹಾಳೆಯ ಮೇಲೆ ಹರಡಿ ಒಣಗಿಸಬೇಕು. ನಾಟಿ ಮಾಡುವ ಬೆಳೆಗಳಿಗೆ ಅವುಗಳ ಸಸಿಗಳ ಬೇರುಗಳನ್ನು ಮಾತ್ರ ಬೀಜಾಮೃತದಲ್ಲಿ ಅದ್ದಬೇಕು.

ಉಪಯೋಗ:

ದೇಶಿ ಹಸುವಿನ ಸೆಗಣಿ ಹಾಗೂ ಗೋಮೂತ್ರವು ರೋಗ ನಿರೋಧಕ ಶಕ್ತಿ ಹಾಗೂ ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಉಪಯುಕ್ತ ಸೂಕ್ಷ್ಮಾಣು ಜೀವಿಗಳು ಬೀಜಗಳ ಉತ್ತಮ ಮೊಳಕೆಗೆ ಹಾಗೂ ಅವುಗಳ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅದಲ್ಲದೆ ಬೀಜಗಳನ್ನು ರೋಗ ಹಾಗೂ ಕೀಟಗಳ ಹಾವಳಿಯಿಂದ ಕಾಪಾಡುತ್ತದೆ. ಸುಣ್ಣ ಹಾಕುವ ಉದ್ದೇಶವೇನೆಂದರೆ ಇದು ಬೀಜಾಮೃತದ ರಸಸಾರದ ಮಟ್ಟವನ್ನು ಕಾಪಾಡಲು ಸಹಾಯ ಮಾಡುತ್ತದೆ.

  1. ಜೀವಾಮೃತ:

ಜೀವಾಮೃತವೆಂದರೆ ಬೆಳಗಳಿಗೆ ಹೊಸ ಜೀವವನ್ನು ಅಥವಾ ಚೈತನ್ಯವನ್ನು ತುಂಬುವ ಸಾಮಗ್ರಿ ಎಂಬುದಾಗಿ, ಇದೂ ಸಹ ಬೀಜಾಮೃತದಂತೆ ಕೆಲಸ ಮಾಡುತ್ತದೆ. ಹಸುವಿನ ಸೆಗಣಿ ಮತ್ತು ಗಂಜಲಗಳು ಕೇವಲ ಸಾವಯವ ತ್ಯಾಜ್ಯ ವಸ್ತುಗಳಾಗಿರದೆ ಸೂಕ್ಷ್ಮ ಜೀವಾಣುಗಳ ಸಮುಚ್ಚಯವಾಗಿರುತ್ತದೆ. ಈ ಜೀವಾಣುಗಳು ಮಣ್ಣಿನಲ್ಲಿರುವ ಪೋಷಕಾಂಶ ಮತ್ತು ಸಸ್ಯ ಬೇರು ಸಮೂಹಗಳ ನಡುವೆ ವಾಹಕವಾಗಿ ಕಾರ್ಯ ನಿರ್ವಹಿಸುತ್ತವೆ. ಯಾವುದೇ ಒಂದು ಬೆಳೆಯನ್ನು ಬೆಳೆಯಲು ಅಸಂಖ್ಯಾತ ಜೀವಾಣುಗಳ ಅಗತ್ಯವಿರುತ್ತದೆ. ಸೆಗಣಿಯಲ್ಲಿ ಬೆಳೆಗಳಿಗೆ ಪೋಷಕಾಂಶಗಳನ್ನು ಸರಬರಾಜು ಮಾಡಲು ನೆರವಾಗುವ ರಂಜಕಾಂಶವನ್ನು ಕರಗಿಸುವ ಅಣುಜೀವಿಗಳು, ಬ್ಯಾಸಿಲಸ್, ಮೈಕೋರ್ಹೈಜ ಸೇರಿದಂತೆ ಅಸಂಖ್ಯಾತ ಜೀವಾಣುಗಳಿರುತ್ತವೆ. ಜೀವಾಮೃತದಲ್ಲಿ ಘನ ಮತ್ತು ದ್ರವ ಜೀವಾಮೃತವೆಂಬ ಎರಡು ಬಗೆಗಳಿವೆ.

ದ್ರವ ಜೀವಾಮೃತ:

ಇದನ್ನು ನೀರಾವರಿ ಆಸರೆಯಲ್ಲಿನ ಬೆಳೆಗಳಿಗೆ ಒದಗಿಸುವುದು ಲಾಭದಾಯಕ. ದ್ರವ ಜೀವಾಮೃತವನ್ನು ನೀರಿನ ಜೊತೆ ಬೆರೆಸಿ ಬಿಡಬಹುದು. ಟೊಮ್ಯಾಟೊ, ಮೆಣಸಿನಕಾಯಿ ಮುಂತಾದ ಬೆಳೆಗಳಿಗೆ ದ್ರವ ರೂಪದ ಜೇವಾಮೃತವನ್ನು ಕೊಡುವುದು ಲಾಭದಾಯಕ.

ಬೇಕಾಗುವ ಸಾಮಗ್ರಿಗಳು:

250 ಲೀ. ಪ್ಲಾಸ್ಟಿಕ್ ಡ್ರಮ್, 200 ಲೀ. ನೀರು, 10 ಕಿ. ಗ್ರಾಂ ದೇಶಿ ಹಸುವಿನ ಸೆಗಣಿ, 5 - 10 ಲೀ. ಗೋಮೂತ್ರ, 2 ಕಿ. ಗ್ರಾಂ ಕಪ್ಪು ಬೆಲ್ಲ ಅಥವಾ 4 ಲೀ. ತಾಜಾ ಕಬ್ಬಿನ ಹಾಲು, 2 ಕಿ. ಗ್ರಾಂ ದ್ವಿದಳ ಧಾನ್ಯಗಳ ಹಿಟ್ಟು, ಒಂದು ಹಿಡಿ ಬದುವಿನ ಮಣ್ಣು.

ತಯಾರಿಸುವ ವಿಧಾನ:

ನೆರಳಿನಲ್ಲಿಟ್ಟ ಪ್ಲಾಸ್ಟಿಕ್ ಡ್ರಮ್‍ನಲ್ಲಿ 200 ಲೀ. ನೀರಿನ ಜೊತೆಗೆ 10 ಕಿ. ಗ್ರಾಂ ಸೆಗಣಿ ಹಾಗೂ 5-10 ಲೀ. ಗೋಮೂತ್ರ ಸೇರಿಸಿ ಮಿಶ್ರಣ ಮಾಡಬೇಕು.  ನಂತರ 2 ಕಿ. ಗ್ರಾಂ ಕಪ್ಪು ಬೆಲ್ಲ ಅಥವಾ 4 ಲೀ. ತಾಜಾ ಕಬ್ಬಿನ ಹಾಲು, 2 ಕಿ. ಗ್ರಾಂ ದ್ವಿದಳ ಧಾನ್ಯಗಳ ಹಿಟ್ಟು ಹಾಗೂ ಒಂದು ಹಿಡಿ ಬದುವಿನ ಮಣ್ಣನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿ ದಿನಕ್ಕೆ ಮೂರು ಬಾರಿ ಅಂದರೆ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಮಿಶ್ರಣವನ್ನು ಕೋಲಿನಿಂದ ಪ್ರದಕ್ಷಣಾಕಾರವಾಗಿ ತಿರುವಿ ಕಲೆಹಾಕಬೇಕು. ಹೀಗೆ ತಯಾರಿಸಿದ ಜೀವಾಮೃತವು ಸುಮಾರು 2-7 ದಿನಗಳಲ್ಲಿ ಬಳಕೆಗೆ ಸಿದ್ಧವಿರುತ್ತದೆ.

ಬಳಸುವ ವಿಧಾನ:

ಸಿದ್ಧಗೊಳಿಸಿದ ಜೀವಾಮೃತವನ್ನು 2-7 ದಿನಗಳ ಒಳಗೆ ತೇವಾಂಶವಿರುವ ಭೂಮಿಗೆ ಸಿಂಪಡಿಸುವುದು ಸೂಕ್ತ. ಪ್ರತಿ ಎಕರೆಗೆ 200 ಲೀ. ಜೀವಾಮೃತವನ್ನು ತಿಂಗಳಿಗೆ ಎರಡು ಬಾರಿ ನೀರಾವರಿ ಮುಖಾಂತರ ಅಥವಾ ನೇರವಾಗಿ ಬೆಳೆಗಳಿಗೆ ಸಿಂಪರಣೆ ಮಾಡಬಹುದು. ಸಿಂಪರಣೆ ಮಾಡುವಲ್ಲಿ ಜೀವಾಮೃತವನ್ನು ಶೇ. 10 ರ ಪ್ರಮಾಣದಲ್ಲಿ ಬಳಸಬೇಕು. ಹನಿ ನೀರಾವರಿ ಪದ್ಧತಿ ಅಳವಡಿಸಿದಲ್ಲಿ ಪ್ರತಿ ಎಕರೆಗೆ 200 ಲೀ ಸೋಸಿದ ಜೇವಾಮೃತವನ್ನು ತಿಂಗಳಿಗೆ ಎರಡು ಬಾರಿ ಉಪಯೋಗಿಸಬೇಕು. ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಗಿಡದ ಬುಡಕ್ಕೆ ಒಂದು ಲೀಟರಿನಂತೆ ತಿಂಗಳಿಗೆ ಎರಡು ಬಾರಿ ಬಳಸಬೇಕು.

ಘನ ಜೀವಾಮೃತ:

 ಇದರಲ್ಲಿ ಜೀವಾಣುಗಳು ಸುಪ್ತಾವಸ್ಥೆಯಲ್ಲಿದ್ದು ತಂಪು ಲಭಿಸಿದ ಕೂಡಲೆ ಕಾರ್ಯಪ್ರವೃತ್ತಗೂಳ್ಳುತ್ತವೆ. ಮಳೆ ಆಸರೆಯಲ್ಲಿನ ಅಲ್ಪಾವಧಿ ಬೆಳೆಗಳಿಗೆ ಘನ ಜೀವಾಮೃತದ ಅವಶ್ಯಕತೆ ಬಹಳಷ್ಟಿದೆ.

ತಯಾರಿಸುವ ವಿಧಾನ ಮತ್ತು ಬಳಕೆ:

100 ಕಿ. ಗ್ರಾಂ ದೇಶಿ ಹಸುವಿನ ಸೆಗಣಿ, 2 ಕಿ. ಗ್ರಾಂ ಬೆಲ್ಲ, 2 ಕಿ. ಗ್ರಾಂ ದ್ವಿದಳ ಧಾನ್ಯಗಳ ಹಿಟ್ಟು ಹಾಗೂ ಒಂದು ಹಿಡಿ ಬದುವಿನ ಮಣ್ಣನ್ನು ಸ್ವಲ್ಪ ಗೋಮೂತ್ರವನ್ನು ಚಿಮುಕಿಸಿ ಸರಿಯಾಗಿ ಮಿಶ್ರಣ ಮಾಡಬೇಕು. ನಂತರ ನೆರಳಿನಲ್ಲಿ ತೆಳುವಾಗಿ ಹರಡಿ ಒಣಗಿಸಬೇಕು.  ಒಣಗಿದ ನಂತರ ಕೈಯಿಂದ ಪುಡಿಮಾಡಿ 100 ಕಿ. ಗ್ರಾಂ ತಿಪ್ಪೆ ಗೊಬ್ಬರದ ಜೊತೆಗೆ 10 ಕಿ. ಗ್ರಾಂ ಘನ ಜೀವಾಮೃತವನ್ನು ಮಿಶ್ರಣ ಮಾಡಿ ಬೆಳೆಗಳಿಗೆ ಒದಗಿಸಬೇಕು.

  1. ಆಚ್ಛದನಂ (ಬೆಳೆಗಳ ಹೊದಿಕೆ):

ಇದನ್ನು ‘ಮಲ್ಚಿಂಗ್’, ‘ಮುಚ್ಚಿಗೆ’ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಬೆಳೆ ಸಾಲುಗಳ ನಡುವೆ ಹಾಗೂ ಗಿಡ ಮರಗಳ ಬುಡದ ಪಾತಿಗಳ ಅಗಲಕ್ಕೆ ಜೈವಿಕವಾಗಿ ಶಿಥಿಲಗೊಳ್ಳುವ ಸಾವಯವ ತ್ಯಾಜ್ಯ ವಸ್ತುಗಳನ್ನು ಮಂದವಾಗಿ ಹರಡಿದಲ್ಲಿ ಮಣ್ಣು ಬಹುಕಾಲ ಹಸಿಯಾಗಿ ಉಳಿಯುತ್ತದೆ, ಮಳೆಯಾದಾಗ ಮೇಲ್ಮಣ್ಣು ಕೊಚ್ಚಿ ನಷ್ಟಗೊಳ್ಳುವುದಿಲ್ಲ. ಕಳೆಗಳು ಅಷ್ಟಾಗಿ ಪೀಡಿಸಲಾರವು ಹಾಗೂ ಅವು ಬಲು ನಿಧಾನವಾಗಿ ಕೊಳೆತು ಗೊಬ್ಬರವಾಗುತ್ತವೆ. ಇವೆಲ್ಲಕ್ಕೂ ಮಿಗಿಲಾಗಿ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು ಹಾಗೂ ಎರೆಹುಳುಗಳು ಅಸಂಖ್ಯಾತವಾಗಿ ವೃದ್ಧಿ ಹೊಂದುತ್ತವೆ. ಮಣ್ಣಿನ ಉಷ್ಣತೆ ಒಂದೇ ತೆರನಾಗಿರುತ್ತದೆ. ಇದರಲ್ಲಿ ಮೂರು ವಿಧಗಳು - ಮಣ್ಣಿನ ಹೊದಿಕೆ, ಒಣ ಹೊದಿಕೆ ಮತ್ತು ಜೀವಂತ ಹೊದಿಕೆ.

ಮಣ್ಣಿನ ಹೊದಿಕೆ:

ಇದಕ್ಕೆ ‘ಸಾಯಿಲ್ ಮಲ್ಚಿಂಗ್’ ಎನ್ನುತ್ತಾರೆ. ಮಣ್ಣಿನ ಹೊದಿಕೆಯೆಂದರೆ ಮೇಲ್ಮಣ್ಣನ್ನು ಸಡಿಲಗೊಳಿಸುವುದು ಅಥವಾ ಪುಡಿ ಮಣ್ಣನ್ನು ಹರಡುವುದು. ಮಣ್ಣಿನ ಹೊದಿಕೆ ಮಾಡುವುದರಿಂದ ಮಣ್ಣಿನ ತಳಪದರಗಳಲ್ಲಿ ತೇವಾಂಶ ಹೆಚ್ಚು ಕಾಲ ಇದ್ದು ಬೆಳೆಗಳಿಗೆ ಪೂರೈಕೆಯಾಗುತ್ತಿರುತ್ತದೆಯಲ್ಲದೆ ಕಳೆಗಳಿಂದಾಗುವ ಪೈಪೋಟಿ ಇರುವುದಿಲ್ಲ. ತೋಟಗಾರಿಕೆ ಬೆಳೆಗಳ ಸಾಲುಗಳ ನಡುವೆ ಮಣ್ಣಿನ ಹೊದಿಕೆ ಬಹಳ ಉಪಯುಕ್ತ.

ಒಣ ಹೊದಿಕೆ:

ಯಾವುದೇ ಒಂದು ನೈಸರ್ಗಿಕವಾಗಿ ಕ್ರಮೇಣ ಶಿಥಿಲಗೊಂಡು ಅದರಲ್ಲಿನ ಪೋಷಕಾಂಶಗಳನ್ನು ಮಣ್ಣಿಗೆ ಸೇರಿಸುವ ಸಾವಯವ ತ್ಯಾಜ್ಯವನ್ನು ಹರಡಿದಾಗ ಅದನ್ನು ಒಣ ಹೊದಿಕೆ ಎನ್ನುತ್ತಾರೆ. ಅಂತಹ ಸಾಮಗ್ರಿಗಳನ್ನು ಮಣ್ಣಿನ ಮೇಲೆ ಪದರದಂತೆ ಇಲ್ಲವೇ ಚೆದುರಿದಂತೆ ಹರಡಿದಾಗ, ಅದು ಮಣ್ಣಿನ ಮೇಲ್ಪದರವನ್ನು ಆವರಿಸಿ, ಬಿಸಿಲು ನೇರವಾಗಿ ಮಣ್ಣಿನ ಕಣಗಳ ಮೇಲೆ ಬಿದ್ದು ತೇವಾಂಶ ಆವಿಯಾಗಿ ಹೋಗುವುದನ್ನು ತಪ್ಪಿಸುತ್ತದೆ. ಪ್ರಾರಂಭಕ್ಕೆ ಅದು ಕಳಿಯದೇ ಇದ್ದರೂ ದಿನ ಕಳೆದಂತೆ ಮಣ್ಣಿನಲ್ಲಿನ ತೇವಾಂಶ, ಉಷ್ಣತೆ ಮತ್ತು ಸೂಕ್ಷ್ಮಜೀವಿಗಳ ಕ್ರಿಯೆಯಿಂದ ಕಳಿತು ಗೊಬ್ಬರವಾಗಿ ಮಾರ್ಪಡುತ್ತದೆ. ಮಳೆಯಾದಾಗ ಅಥವಾ ಬೆಳೆಗೆ ನೀರನ್ನು ಒದಗಿಸಿದಾಗ ತೇವಾಂಶ ಮಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಇಂಗುತ್ತದೆ. ಮಣ್ಣು ಕೊಚ್ಚುವುದಾಗಲೀ ಅಥವಾ ಮಳೆ ನೀರು ಹರಿದು ಪೋಲಾಗುವುದಾಗಲೀ ಇರುವುದಿಲ್ಲ. ಸೂಕ್ಷ್ಮಜೀವಿಗಳಿಗೆ, ಎರೆಹುಳುಗಳಿಗೆ ಅನುಕೂಲಕರ ವಾತಾವರಣವುಂಟಾಗಿ ಅವು ಅಧಿಕ ಸಂಖ್ಯೆಯಲ್ಲಿ ವೃದ್ಧಿಹೊಂದಿ ಮಣ್ಣಿನ ಕಣಗಳನ್ನು ಸಡಿಲಗೊಳಿಸಿ, ಗಾಳಿಯಾಡುವಂತೆ ಮಾಡಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಜಮೀನಿನಲ್ಲಿಯೇ ಅಲ್ಲದೇ ಬೇರೆಡೆಗಳಿಂದ ಸಂಗ್ರಹಿಸಿದ ಒಣಹುಲ್ಲು, ಸೋಗೆ, ಗರಿ, ತರಗು, ಕಳೆ ಸಸ್ಯಗಳು, ಸೊಪ್ಪುಸದೆ, ಕೂಳೆಗಳು, ಬೆಳೆಯ ಕೊಯ್ಲಿನ ನಂತರ ಉಳಿಯುವ ಸಸ್ಯಭಾಗಗಳು, ಸಿಪ್ಪೆ, ಮಟ್ಟೆ, ತೆಂಗಿನ ನಾರಿನ ಪುಡಿ, ಕಸಕಡ್ಡಿಗಳು ಮುಂತಾದ ಸಾಮಗ್ರಿಗಳೆಲ್ಲವೂ ಒಣ ಹೊದಿಕೆಗೆ ಬಳಸಲು ಉಪಯುಕ್ತವಿರುತ್ತದೆ.

ಜೀವಂತ ಹೊದಿಕೆ:

ಇದನ್ನು ಸಜೀವ ಹೊದಿಕೆ, ಲೈವ್ ಮಲ್ಚಿಂಗ್ ಮುಂತಾಗಿ ಕರೆಯುತ್ತಾರೆ. ಯಾವುದೇ ಒಂದು ಗಿಡ್ಡ ಬೆಳೆಯಲ್ಲಿನ ಸಾಲುಗಳ ನಡುವೆ ಇಲ್ಲವೇ ಬದುಗಳ ಮೇಲೆ ಎತ್ತರದ ಬೆಳೆಗಳನ್ನು ಬೆಳೆದಾಗ ಎತ್ತರದ ಬೆಳೆಗಳು ಗಿಡ್ಡ ಬೆಳೆಗಳಿಗೆ ನೆರಳನ್ನು ಒದಗಿಸುತ್ತವೆ. 

  1. ಆದ್ರ್ರತೆ (ವಾಫಾಸ):

ಮಣ್ಣಿನ ಹ್ಯೂಮಸ್‍ನ್ನು ವೃದ್ಧಿಸಿ ಮಣ್ಣಿನ ವಾಯುಗುಣವನ್ನು ವೃದ್ಧಿಸುವುದು. ವಾಫಾಸವೆಂದರೆ ಒಂದು ಮಣ್ಣಿನ ವಾತಾವರಣವಾಗಿದ್ದು, ಇದರಲ್ಲಿ ಶೇ. 50 ರಷ್ಟು ಗಾಳಿ ಹಾಗೂ ಶೇ. 50 ರಷ್ಟು ನೀರಿನ ಅಣುಗಳ ಮಿಶ್ರಣವನ್ನು ಒಳಗೊಂಡಿದೆ. ಮಣ್ಣಿನ ಪದರಗಳಲ್ಲಿನ ತೇವ ಮತ್ತು ಗಾಳಿಯ ಮಿಶ್ರಣವೇ ಈ ಆದ್ರ್ರತೆ. ಯಾವುದೇ ಬೆಳೆ ಚೆನ್ನಾಗಿ ಫಲಿಸಬೇಕಾದರೆ ಸಮತೋಲನ ಪೋಷಕಾಂಶಗಳ ಜೊತೆಗೆ ಅಗತ್ಯ ಪ್ರಮಾಣದ ತೇವಾಂಶ ಪೂರೈಕೆಯಾಗಬೇಕು. ಗೊಬ್ಬರಗಳಲ್ಲಿನ ಪೋಷಕಾಂಶಗಳು ಕರಗಿ ಬೇರು ಸಮೂಹಕ್ಕೆ ಸಿಗುವಂತೆ ಮಾಡಲು ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರುವುದು ಅತ್ಯಗತ್ಯ. ಬೆಳೆಗಳಲ್ಲಿ ಆದ್ರ್ರತೆಯನ್ನು ಕಾಪಾಡುವಲ್ಲಿ ಸಾಲುಗಳ ನಡುವೆ ಅಥವಾ ಪಾತಿಗಳಲ್ಲಿ ಮೊದಲಿಗೆ ಒಣ ಹೊದಿಕೆ ಸಾಮಗ್ರಿಗಳನ್ನು ಹರಡಿ, ಆನಂತರ ಅದರ ಮೇಲೆ ಹಸಿ ಅಥವಾ ಜೀವಂತ ಹೊದಿಕೆಯನ್ನು ಬಳಸಬೇಕು. ಆಗ ವಾತಾವರಣದಲ್ಲಿನ ತೇವಾಂಶ ಅಥವಾ ಆದ್ರ್ರತೆಯು ಸೆಳೆಯಲ್ಪಟ್ಟು, ಪೋಷಕಾಂಶಗಳನ್ನು ಹೀರುವ ಬೇರು ಸಮೂಹಕ್ಕೆ ಲಭ್ಯಗೊಳ್ಳುತ್ತದೆ. ಆದ್ರ್ರತೆಯು ಮಣ್ಣಿನಲ್ಲಿ ಎರೆಹುಳು ಮತ್ತು ಇತರ ಉಪಯುಕ್ತ ಸೂಕ್ಷ್ಮಜೀವಿಗಳ ಸಂಖ್ಯೆಯನ್ನು ವೃದ್ಧಿಸಿ ಅವುಗಳು ಹೆಚ್ಚು ಕ್ರಿಯಾಶೀಲವಾಗಿರಲು ಅತ್ಯಗತ್ಯ.

ಈ ಮೇಲೆ ಹೇಳಿರುವ 4 ತತ್ವಗಳನ್ನು ನೈಸರ್ಗಿಕ ಕೃಷಿಯು 4 ಚಕ್ರಗಳೆಂದು ಸಹ ಕರೆಯಬಹುದಾಗಿದೆ. ಯಾವುದೇ ಖರ್ಚಿಲ್ಲದೇ ಬೇಸಾಯವನ್ನು ಮಾಡುವ ತಂತ್ರವೇ ನೈಸರ್ಗಿಕ ಕೃಷಿ. ಈ ಕೃಷಯಿಂದ ನೈಸರ್ಗಿಕವಾಗಿ ಬೆಳೆಗಳನ್ನು ಬೆಳೆಯುವುದಲ್ಲದೆ ಮಣ್ಣಿನ ಸಂರಕ್ಷಣೆ ಸಹ ಮಾಡಬಹುದು. ಅದಲ್ಲದೆ ಈ ಕೃಷಿಯು ಅತೀ ಕಡಿಮೆ ಬಂಡವಾಳವನ್ನು ಒಳಗೊಂಡಿರುವುದರಿಂದ ನಷ್ಟದ ಮಾತೇ ಇಲ್ಲ!!!

ಲೇಖಕರು : ಡಾ. ಸುನಿಲ್ ಕುಮಾರ್. ಕೆ ಮತ್ತು ಡಾ. ಮಧುರಿಮಾ ವಿನೋದ್

ಸಂಶೋಧನೆ ಸಹಾಯಕರು (RA), ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ,  ZAHRS, ಬ್ರಹ್ಮಾವರ, ಉಡುಪಿ

Published On: 12 November 2020, 09:32 PM English Summary: Natural farming

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.