1. ಅಗ್ರಿಪಿಡಿಯಾ

ಸೋಯಾ ಅವರೆ ಬೆಳೆಯಲ್ಲಿ ಬಸವನ ಹುಳುವಿನ ಕಾಟ ನಿಯಂತ್ರಿಸುವ ವಿಧಾನಗಳು

ಬೀದರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಡಾ. ಸುನೀಲಕುಮಾರ ಎನ್.ಎಂ, ಪಶು ವಿಜ್ಞಾನಿ ಡಾ.ಅಕ್ಷಯಕುಮಾರ, ಕೃಷಿ ವಿಸ್ತರಣಾ ವಿಜ್ಞಾನಿ ಅರ್ಚನಾ ಪಾಟೀಲ ಅವರು ಕೌಠಾ ಗ್ರಾಮದ ಸೋಯಾ ಅವರೆ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕಾರ್ಬೋಹೈಡ್ರೇಟ್ಸ್, ಕೊಬ್ಬು, ವಿಟಮಿನ್ ಮತ್ತು ಖನಿಜಾಂಶಗಳಾದ ಕ್ಯಾಲ್ಸಿಯಂ, ಫೋಲಿಕ್ ಆಸಿಡ್, ಕಬ್ಬಿಣ ಹೀಗೆ ನೋಡುತ್ತಾ ಹೋದರೆ ಎಲ್ಲಾ ರೀತಿಯ ಪೋಷಕಾಂಶಗಳನ್ನು ಅಡಕವಾಗಿಸಿಕೊಂಡಿರುವ ಸೋಯಾ ಅವರೆ, ಒಂದು  ಶ್ರೀಮಂತ ಪೌಷ್ಟಿಕ ಆಹಾರ. ಸೋಯಾ ಅವರೆಯು ಮನುಷ್ಯನ ದೈಹಿಕ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಅತಿ ಅವಶ್ಯಕವಾಗಿರುವ ಪೋಷಕಾಂಶಗಳ ಸಮಗ್ರ ಕಣಜವಾಗಿದೆ. ಹೀಗಾಗಿಯೇ ಆಹಾರ ತಜ್ಞರು ಇದನ್ನು ಮಾಂಸಾಹಾರಕ್ಕೆ ಪರ್ಯಾಯವಾಗಿರುವ ಸಸ್ಯಾಹಾರ ಎನ್ನುವುದೂ ಉಂಟು.

ದ್ವಿದಳ ಧಾನ್ಯ ಹಾಗೂ ಎಣ್ಣೆಕಾಳು ಬೆಳೆಗಳ ಪೈಕಿ ಎಲ್ಲಾ ರೀತಿಯ ಪ್ರೋಟಿನ್‌ಗಳನ್ನು ಹೊಂದಿರುವ ಏಕೈಕ ಕಾಳೆಂದರೆ ಅದು ಸೋಯಾ ಅವರೆ. ಜೊತೆಗೆ ಮಾನವ ಶರೀರದ ಬೆಳವಣಿಗೆಗೆ ಬೇಕಾಗುವಂತಹ ಎಲ್ಲಾ ಅಮೈನೋ ಆಸಿಡ್‌ಗಳನ್ನು ಕೂಡ ಸೋಯಾ ಹೊಂದಿದೆ. ಈ ಅಮೈನೋ ಅಸಿಡ್ ಪ್ರಮಾಣವು, ಮಾಂಸ, ಹಾಲು ಹಾಗೂ ಮೊಟ್ಟೆಯಲ್ಲಿರುವ ಪ್ರೋಟೀನ್ ಗುಣಮಟ್ಟಕ್ಕೆ ಸರಿಸಮನಾಗಿರುತ್ತದೆ.

ಇಷ್ಟೆಲ್ಲಾ ಪೌಷ್ಟಿಕಾಂಶಗಳನ್ನು ಹೊಂದಿರುವ ಸೋಯಾ ಅವರೆಯನ್ನು ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯುವುದು ಬೀದರ್ ಜಿಲ್ಲೆಯಲ್ಲಿ. ಇದು ಬೀದರ್ ಜಿಲ್ಲೆಯ ರೈತರ ಪ್ರಮುಖ ಬೆಳೆಯಾಗಿದ್ದು, ಜಿಲ್ಲೆಯಲ್ಲಿ ಈಗಾಗಲೆ ಬಿತ್ತನೆ ಕಾರ್ಯ ಭಾಗಶಃ ಮುಗಿದಿದೆ. ಕೆಲ ಪ್ರದೇಶದಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಮಳೆಗಾಲದ ಆರಂಭದಲ್ಲಿ ಬಿತ್ತಿದ ಸೋಯಾ, ಉದ್ದು, ಹೆಸರು ಮತ್ತು ತೊಗರಿ ಬೆಳೆಗಳು 2-4 ಎಲೆಯ ಹಂತದಲ್ಲಿದ್ದು, ಸುಮಾರು 10-15 ದಿನದ ಬೆಳೆಗಳನ್ನು ಹೊಲಗಳಲ್ಲಿ ಕಾಣಬಹುದಾಗಿದೆ. ಆದರೆ, ಕಳೆದ 3-4 ದಿನಗಳಿಂದ ಔರಾದ್ ತಾಲೂಕಿನ ಕೌಠಾ, ವಡಗಾಂವ್, ಭಾಲ್ಕಿ ತಾಲೂಕಿನ ನಿಟ್ಟೂರು, ಗೊರನಾಳ, ಹಜನಾಳ್, ಬಾಳುರ ಮತ್ತು ಬೀದರ್ ತಾಲೂಕಿನ ಜನವಾಡ ಗ್ರಾಮಗಳ ರೈತರ ಹೊಲಗಳಲ್ಲಿ ಬಸವನ ಹುಳು (ಶಂಖದ ಹುಳು)ವಿನ ಬಾಧೆ ಕಂಡು ಬಂದಿದೆ.

ಬಾಧೆಯ ಲಕ್ಷಣ:

ಬೀದರ್ ಮಾತ್ರವಲ್ಲದೆ ಎಲ್ಲಾ ಭಾಗಗಳಲ್ಲೂ ಸೋಯಾ ಅವರೆಗೆ ಪರಮ ಶತ್ರು ಎನಿಸಿಕೊಂಡಿರುವುದು ಬಸವನ ಹುಳು ಅಥವಾ ಶಂಖು ಹುಳು. ಸೋಯಾ ಗಿಡಗಳು ಬೆಳವಣಿಗೆ ಹಂತದಲ್ಲಿ ಇರುವಾಗಲೇ ಗಿಡದ ದೇಟುಗಳನ್ನು ಹಾಗೂ ಕಾಂಡಗಳನ್ನು ಈ ಹುಳುಗಳು ಕೆರೆದು ತಿನ್ನುತ್ತವೆ. ಕಾಂಡವಲ್ಲದೆ ಎಲೆ, ಕಾಂಡದ ತೊಗಟೆಗಳನ್ನು ಸಹ ತಿನ್ನುವುದು ಕಂಡುಬರುತ್ತಿದೆ. ಈ ಪೀಡೆಯ ಬಾಧೆ ಹೆಚ್ಚಾದಲ್ಲಿ ರೈತರು ಮತ್ತೊಮ್ಮೆ ಬಿತ್ತನೆ ಕಾರ್ಯ ಕೈಗೊಳ್ಳಬೇಕಾಗಬಹುದು.

ಸಾಮಾನ್ಯವಾಗಿ ಸಾಯಂಕಾಲದಿಂದ ಬೆಳಗಿನ ಜಾವದವರೆಗೂ ಬೆಳೆಗಳನ್ನು ತಿಂದು ಪುನಃ ಬೆಳಗಾದ ಕೂಡಲೇ ಅಡಗು ಸ್ಥಾನಗಳಿಗೆ ಹೋಗುವುದು ಈ ಹುಳುಗಳ ಲಕ್ಷಣ. ಆದರೆ, ಮಳೆಗಾಲದಲ್ಲಿ ತುಂತುರು ಮಳೆ ಹಾಗೂ ಸೂರ್ಯನ ಮಂದ ಪ್ರಕಾಶ ಇರುವಾಗ ಹಗಲಿನಲ್ಲಿ ಕೂಡ ಬೆಳೆಗೆ ಈ ಹುಳುಗಳ ಬಾಧೆ ಹೆಚ್ಚಾಗಿರುತ್ತದೆ.

ಮಳೆಗಾಲದಲ್ಲಿ ನೀರಿನ ಮೂಲದ ಸುತ್ತಮುತ್ತ ಇರುವ ಹೊಲಗಳಲ್ಲಿ ನಡೆದಾಡಲು ಬಳಸುವ ಕಟ್ಟೆಗಳು, ಒಡಾಡುವ ಸ್ಥಳ, ಕಾಲುದಾರಿ ಬದಿಗಳು, ಕಳೆ-ಕಸಗಳ ಗುಪ್ಪೆಗಳು ಈ ಹುಳುಗಳ ಅಡಗು ತಾಣಗಳಾಗಿವೆ. ಬಸವನ ಹುಳುಗಳ ಸಂತಾನ ವೃದ್ಧಿ ಆಗುವುದು ಕೂಡ ಇವೇ ಅಡುಗು ತಾಣಗಳಲ್ಲಿ. ಒಂದು ಶಂಖದ ಹುಳು ತನ್ನು ಜೀವಿತಾವಧಿಯಲ್ಲಿ 100-500 ಮೊಟ್ಟೆಗಳನ್ನು ಇಡುವ ಸಾಮಾರ್ಥ್ಯ ಹೊಂದಿರುತ್ತದೆ. ಭೂಮಿಯ ಮೇಲ್ಪದರದಿಂದ 3-5 ಸೆಂ.ಮೀ ಆಳದಲ್ಲಿ ಮಟ್ಟೆಗಳನ್ನು ಇರಿಸಿ, ನಂತರ ಅವುಗಳನ್ನು ಜಿಗುಟಾದ ವಸ್ತುವಿನಿಂದ ಮುಚ್ಚುತ್ತದೆ. ಅನುಕೂಲಕರ ವಾತಾವರಣ ಇದ್ದಲ್ಲಿ ಮೊಟ್ಟೊಯಿಂದ ಮರಿಗಳು ಹೊರ ಬಂದು, ದೊಡ್ಡವಾಗುತ್ತಲೇ ಬೆಳೆಗಳ ಮೇಲೆ ದಾಳಿ ಮಾಡುತ್ತವೆ. ಅನುಕೂಲಕರ ವಾತಾವರಣ ಇಲ್ಲದಿದ್ದರೆ ಮೊಟ್ಟೆಗಳು ಸೂಪ್ತಾವಸ್ಥೆಗೆ ಹೊಗುತ್ತವೆ.

ಪೀಡೆಯ ನಿರ್ವಹಣೆ:

  1. ಹುಳುಗಳಿಗೆ ಆಸರೆಯಾಗುವ ಅಡಗು ತಾಣಗಳಾದ ಹುಲ್ಲು, ಕಸಕಡ್ಡಿ ಗುಪ್ಪೆ ಅಥವಾ ಗುಂಪೆ ಮಂತಾದವುಗಳನ್ನು ತಗೆದು ಹೊಲವನ್ನು ಸ್ವಚ್ಛವಾಗಿಡಿ.
  2. ಹೊಲದಲ್ಲಿ ಅಲ್ಲಲ್ಲಿ ಕೃಷಿ ತ್ಯಾಜ್ಯಗಳ ಗುಂಪೆ ಹಾಕುವುದರಿಂದ ಹುಳುಗಳು ಆಸರೆಗಾಗಿ ಆ ಗುಂಪೆಗಳಲ್ಲಿ ಅಡಗಿ ಕೂರುತ್ತವೆ. ಹೀಗಾಗಿ ಇಂತಹ ಗುಂಪೆಗಳನ್ನು ಸುಡಬೇಕು.
  3. ಹೊಲದಲ್ಲಿ ನಡೆದಾಡುವ ಕಟ್ಟೆ ಅಥವಾ ಅರಣಿಯ ಆರಂಭದಲ್ಲಿ (ಗಡಿ ಗುಂಟ) ಹರಳು ಉಪ್ಪನ್ನು ಸುರಿಯಿರಿ.
  4. ಮುಂಜಾನೆ ಅಥವಾ ಸಂಜೆ ಅವಧಿಯಲ್ಲಿ ಕಾಣುವ ಹುಳುಗಳನ್ನು ಕೈಯಿಂದ ಆರಿಸಿ ಗೋಣಿ ಚೀಲದಲ್ಲಿ ಕಲೆಹಾಕಿ ಅವುಗಳ ಮೇಲೆ ಉಪ್ಪು ಹಾಕುವ ಮೂಲಕ ನಾಶಪಡಿಸಬಹುದು.
  5. ಹೊಲದಲ್ಲಿ ಅಲ್ಲಲ್ಲಿ ನೀರಿನಲ್ಲಿ ನೆನೆಸಿದ ಗೋಣಿ ಚೀಲ ಹರಡಿ ಅಥವಾ ಕಳಿತ ಕಸವನ್ನು ಹೊಲದಲ್ಲಿ ಗುಂಪಾಗಿಟ್ಟು ಆಸರೆಗಾಗಿ ಬರುವ ಹುಳುಗಳ ಮೇಲೆ ಬ್ಲೀಚಿಂಗ್ ಪುಡಿ (8-10 ಕಿ.ಗ್ರಾ. ಪ್ರತಿ ಎಕರೆಗೆ) ಧೂಳೀಕರಿಸಿ ನಾಶಪಡಿಸ ಬಹುದು.
  6. ಮೆಟಾಲ್ಡಿಹೈಡ್ (2.5ಶೇ) ಮಾತ್ರೆಗಳನ್ನು ಎಕರೆಗೆ 2. ಕಿ.ಗ್ರಾಂ ನಂತೆ ಹೊಲದಲ್ಲಿ ಎರಚಿ. ಇವುಗಳಿಗೆ ಆಕರ್ಷಿತವಾಗಿ ಬರುವ ಹುಳುಗಳು ಸಾಯುತ್ತವೆ.
Published On: 24 June 2021, 01:33 PM English Summary: methods of snail management in soybean crop

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.