1. ಅಗ್ರಿಪಿಡಿಯಾ

ಸಮಗ್ರ ಪೊಷಕಾಂಶಗಳ ನಿರ್ವಹಣೆ ಕ್ರಮಗಳನ್ನು ಅಳವಡಿಸಿ ಮೆಣಸಿನಕಾಯಿ ಇಳುವರಿ ಹೆಚ್ಚಿಸಿಕೊಳ್ಳಿ

ಮೆಣಸಿನಕಾಯಿ ರಾಜ್ಯದ ಮುಖ್ಯವಾದ ವಾಣಿಜ್ಯ ಹಾಗೂ ಮಸಾಲೆ/ಸಾಂಬಾರ ಬೆಳೆಯಾಗಿದ್ದು ರಪ್ತು ಉದ್ಯಮದಲ್ಲಿ ಈ ಬೆಳೆಗೆ ವಿಶೇಷವಾದ ಸ್ಥಾನವಿದೆ. ರಾಜ್ಯದ ಒಟ್ಟು ಉತ್ಪಾದನೆಯ ಶೇ. 80 ರಷ್ಟು ಒಣ ಮೆಣಸಿನಕಾಯಿ ಉತ್ಪಾದನೆ ಉತ್ತರ ಕರ್ನಾಟಕದ ಪ್ರದೇಶಗಳಾದ ಧಾರವಾಡ, ಹಾವೇರಿ, ಗದಗ ಹಾಗೂ ಬಳ್ಳಾರಿ ಜಿಲ್ಲೆಗಳಿಂದ ದೊರೆಯುತ್ತದೆ. ಈ ಭಾಗಗಳಲ್ಲಿ ಬೆಳೆಯುವ ಮೆಣಸಿನಕಾಯಿ ತಳಿಗಳಲ್ಲಿ ಬ್ಯಾಡಗಿ ಮೆಣಸಿನಕಾಯಿ ಜಗತ್ ಪ್ರಸಿದ್ಧವಾಗಿದೆ.

ಇತ್ತೀಚಿನ ಪರದೇಶದ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ.  ಇದನ್ನು ಮುಖ್ಯವಾಗಿ ಅಡಿಗೆಗಾಗಿ ಹಾಗೂ ಔಷಧಿ ತಯಾರಿಕೆಯಲ್ಲಿ ಉಪಯೋಗಿಸುತ್ತಿದ್ದಾರೆ. ಉತ್ಪಾದನೆ ಹೆಚ್ಚಿದ್ದರೂ ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮೆಣಸಿನಕಾಯಿ ಇಳುವರಿ ಮಟ್ಟ (ಉತ್ಪಾದನೆ) ಅತ್ಯಂತ ಕಡಿಮೆ ಇದೆ. ಆದ್ದರಿಂದ ಸಮಗ್ರ ಪೊಷಕಾಂಶಗಳ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೋಳ್ಳುವುದರಿಂದ ಇಳುವರಿ ಹೆಚ್ಚಿಸುವುದಲ್ಲದೇ ಗುಣಮಟ್ಟದ ಉತ್ಪಾದನೆ ಮಾಡಿ ರಫ್ತು ಮಾಡಲು ಹೆಚ್ಚಿನ ಅವಕಾಶವಿರುತ್ತದೆ.

ಸಮಗ್ರ ಪೋಷಕಾಂಶಗಳ ನಿರ್ವಹಣೆ 

ಸಮಗ್ರ ಪೊಷಕಾಂಶಗಳ ನಿರ್ವಹಣೆಯು ಒಂದು ಬೆಳೆಗೆ ಬೇಕಾದ ಪೊಷಕಾಂಶಗಳನ್ನು ವಿವಿದ ಮೂಲಗಳಿಂದ ಸಮಗ್ರವಾಗಿ ಪೂರೈಸುವ ಪದ್ಧತಿಯಾಗಿದೆ. ಸ್ಥಳೀಯವಾಗಿ/ನೈಸರ್ಗಿಕವಾಗಿ ಲಭ್ಯವಿರುವ ಸಾವಯವ ಗೊಬ್ಬರ, ಜೈವಿಕ ಗೊಬ್ಬರ, ಹಸಿರೆಲೆ ಗೊಬ್ಬರ ಮತ್ತು ಇತರೆ ಪ್ರಾಣಿ ಅಥವಾ ಪಕ್ಷಿ ಮೂಲದ ಗೊಬ್ಬರ ಹಾಗೂ ಸೂಕ್ತ ಪ್ರಮಾಣದ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಸಮಗ್ರವಾಗಿ ಬೆಳೆಗೆ ಬೇಕಾದ ಪೊಷಕಾಂಶಗಳನ್ನೇಲ್ಲಾ ನೀಡುವುದೇ ಸಮಗ್ರ ಪೊಷಕಾಂಶಗಳ ನಿರ್ವಹಣೆ. ಈ ವಿಧಾನದಲ್ಲಿ ಮಣ್ಣಿನ ಫಲವತ್ತತೆ, ನೈಸರ್ಗಿಕ ಸಂಪನ್ಮೂಲಗಳನ್ನು ವೃದ್ಧಿಸುವುದು ಮತ್ತು ಗುಣಮಟ್ಟದ ಆಹಾರ ಉತ್ಪಾದನೆ ಕೈಗೊಳ್ಳುವುದು ಹಾಗೂ ಸುಸ್ಥಿರ ಬೇಸಾಯ ಪದ್ಧತಿಯನ್ನು ಅಳವಡಿಸಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ್ಯದು ಮುಖ್ಯ ಉದ್ದೇಶವಾಗಿದೆ.

ಸಾವಯವ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಎರೆಹುಳ ಗೊಬ್ಬರ ಹಾಗೂ ಸೂಕ್ಷ್ಮಾಣು ಜೀವಿಗಳಾದ ‘ಅಜೋಸ್ಪೈರಿಲಂ’ ಬಳಕೆಯಿಂದ ಮೆಣಸಿನಕಾಯಿ ಇಳುವರಿ ಜಾಸ್ತಿಯಾಗುವುದಲ್ಲದೆ, ಬಣ್ಣ, ಕಾಯಿಯ ಸಂಖ್ಯೆ, ತೂಕ, ಉದ್ದ, ಸುತ್ತಳತೆ ಮುಂತಾದ ಅಂಶಗಳು ಅಧಿಕವಾಗಿರುವುದು ಸಂಶೋಧನೆಗಳಿಂದ ತಿಳಿದು ಬಂದಿದೆ.

ಮೆಣಸಿನಕಾಯಿ ಬೇಸಾಯಕ್ಕೆ ಬೇಕಾಗುವ ಗೊಬ್ಬರಗಳು (ಪ್ರತಿ ಹೆಕ್ಟೇರಿಗೆ)

ಕೊಟ್ಟಿಗೆ ಗೊಬ್ಬರ  ಅಥವಾ

25 ಟನ್

ಎರೆಹುಳು ಗೊಬ್ಬರ

12 ಟನ್

ಬೇವಿನ ಹಿಂಡಿ

2.5 ಕ್ವಿಂ.

         

ರಾಸಾಯನಿಕ ಗೊಬ್ಬರ (ಕಿ. ಗ್ರಾಂ.) 

ಸಾರಜನಕ:

ರಂಜಕ: 

ಪೊಟ್ಯಾಷ್

ನೀರಾವರಿ

150

75

75

ಖುಷ್ಕಿ

100

50

50

ಸಾವಯವ ಗೊಬ್ಬರಗಳು :

ಕೊಟ್ಟಿಗೆ ಗೊಬ್ಬರ, ಕಾಂಪೋಷ್ಟ, ಎರೆಹುಳ ಗೊಬ್ಬರ, ಕುರಿಗೊಬ್ಬರ, ಕೋಳಿ ಗೊಬ್ಬರ ಹಾಗೂ ಹಂದಿಗೊಬ್ಬರ ಪ್ರಮುಖ ಸಾವಯವ ಗೊಬ್ಬರಗಳು. ಇವುಗಳನ್ನು ಕ್ಷೇತ್ರದಲ್ಲಿ ತಯಾರಿಸಿ ಉಪಯೋಗಿಸುವರಿಂದ ಕೃಷಿ ತ್ಯಾಜ್ಯಗಳ ಮರುಬಳಕೆ ಮಾಡಿದಂತಾಗಿ ಕೃಷಿ ವೆಚ್ಚ ಕಡಿಮೆಯಾಗುತ್ತದೆ. ಸಾವಯವ ಗೊಬ್ಬರಗಳ ತಯಾರಿಕೆಯಲ್ಲಿ ಸೂಕ್ತ ತಾಂತ್ರಿಕತೆಯನ್ನು ಅಳವಡಿಸಿ ಅದನ್ನು ಸಂಪದ್ಬರಿತ ಗೊಬ್ಬರವಾಗಿ ಪರಿವರ್ತಿಸಿ ಬಳಸುವದರಿಂದ ಅವುಗಳಲ್ಲಿರುವ ಪೋಷಕಾಂಶಗಳ ಪ್ರಮಾಣ ಅಧಿಕಗೊಂಡು ಅವುಗಳ ಬಳಕೆ ಪ್ರಮಾಣ ಕಡಿಮೆ ಮಾಡಬಹುದು ಹಾಗೂ ಉತ್ತಮ ಇಳುವರಿ ಪಡೆಯಬಹುದು.

ಕೊಟ್ಟಿಗೆ ಗೊಬ್ಬರಗಳು :

ಕುರಿ ಗೊಬ್ಬರ, ಕೋಳಿ ಗೊಬ್ಬರ, ಹಂದಿ ಗೊಬ್ಬರ ಇತ್ಯಾದಿಗಳು ಸಾಂಪ್ರದಾಯಿಕವಾಗಿ ಪೋಷಕಾಂಶ ಮೂಲಗಳಾಗಿವೆ. ಹೊಲಗಳಲ್ಲಿ ಫಲವತ್ತತೆಯ ವೃದ್ಧಿಗಾಗಿ ಪ್ರತಿ ಹೆಕ್ಟೇರಿಗೆ 4-5 ಸಾವಿರ ಕುರಿಗಳನ್ನು ಒಂದೆರಡು ರಾತ್ರಿ ನಿಲ್ಲಿಸಿ ನಂತರ ಕುರಿ ಹಿಕ್ಕೆ ಹಾಗೂ ಉಚ್ಚೆಯನ್ನು ಕುಂಟೆಹೊಡೆದು ಹೊಲದಲ್ಲಿ ಸೇರಿಸಬೇಕು. ಇದು ಕಡಿಮೆ ವೆಚ್ಚದ ಕೆಲಸವಾಗಿದೆ. ಗೊಬ್ಬರ ಸಾಗಾಣಿಕೆಯ ವೆಚ್ಚ ಕೂಡ ಇರುವುದಿಲ್ಲ. ಕುರಿಗೊಬ್ಬರ ಕೂಡ ಕೂಡಿಸಿ ಭೂಮಿಗೆ ಸೇರಿಸಬೇಕು. ಕೋಳಿ ಗೊಬ್ಬರ ಕೂಡ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ ಹಾಗೂ ರಂಜಕ ಒದಗಿಸುವ ಗೊಬ್ಬರವಾಗಿದೆ. ಇದನ್ನು ಹೆಕ್ಟೇರಿಗೆ 1 ರಿಂದ 2 ಟನ್ ಪ್ರಮಾಣದಲ್ಲಿ ಬೆಳೆಗಳಿಗೆ ಕೊಡಬೇಕು. ಹಂದಿಗೊಬ್ಬರ ಕೂಡ ಹೆಚ್ಚು ಪೋಷಕಾಂಶ ಹೊಂದಿದ ಗೊಬ್ಬರವಾಗಿದೆ. ಈ ಗೊಬ್ಬರವನ್ನು ನೀರಿನಲ್ಲಿ ತೊಳೆದು ಬೆಳೆಗೆ ಒದಗಿಸುವದರಿಂದ ಹೂ-ಕಾಯಿ ಫಸಲು ಹೆಚ್ಚುತ್ತದೆ.

ಎರೆಹುಳು ಗೊಬ್ಬರ :

ಎರೆಹುಳು ಗೊಬ್ಬರ ಬೆಳೆಗಳಿಗೆ ಬೇಕಾಗುವ ಹಲವಾರು ಪೋಷಕಾಂಶಗಳು ಹಾಗೂ ಸೂಕ್ಷ್ಮಾಣು ಜೀವಿಗಳನ್ನು ಹೊಂದಿದ್ದು, ರಸಗೊಬ್ಬರಗಳಿಗೆ ಪರ್ಯಾಯವಾಗಿ ಬಳಸಲಾಗುತ್ತಿದೆ. ಎರೆಹುಳು ಗೊಬ್ಬರ, ಲಘು ಪೋಷಕಾಂಶಗಳಾದ ಸತುವು, ಕಬ್ಬಿಣ, ತಾಮ್ರ, ಸೂಕ್ಷ್ಮಾಣು ಜೀವಿಗಳನ್ನು ಹಾಗೂ ಬೆಳೆ ಪ್ರಚೋದಕಗಳನ್ನು ಹೊಂದಿರುತ್ತದೆ.

ಹಿಂಡಿಗಳು :

ಬೇವು, ಹೊಂಗೆ ಹಾಗೂ ಇತರ ಆಹಾರಕ್ಕೆ ಯೋಗ್ಯವಲ್ಲದ ಹಿಂಡಿಗಳು ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿರುತ್ತವೆ. ಇವುಗಳನ್ನು ಹೆಕ್ಟೇರಿಗೆ ಸುಮಾರು 300 ಕಿ.ಗ್ರಾಂ. ಪ್ರಮಾಣದಲ್ಲಿ ಮಣ್ಣಿಗೆ ಬೆರೆಸುವುದು ಸೂಕ್ತ. ಇದರಿಂದ ಪೋಷಕಾಂಶಗಳ ಪೂರೈಕೆಯಲ್ಲದೆ, ಬೆಳೆಗಳಲ್ಲಿ ಕೀಟ ಹಾಗೂ ರೋಗ ನಿರೋದಕ ಶಕ್ತಿ ಕೂಡ ಬರುತ್ತದೆ

ಬೆಳೆ ಪದ್ಧತಿಗಳು :

ಸಾವಯವ ಕೃಷಿಯಲ್ಲಿ ಬೆಳೆ ಕಾಲಗೈ ಹಾಗೂ ಮಿಶ್ರ ಬೆಳೆ ಪದ್ಧತಿಗಳು ಹೆಚ್ಚಿನ ಮಹತ್ವ ಪಡೆದಿವೆ. ಬೆಳೆ ಕಾಲಗೈ ಮಾಡುವದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು ಬಳಕೆ ಸೂಕ್ತ ರೀತಿಯಿಂದಾಗುವದರಿಂದ ಲಘು ಪೋಷಕಾಂಶಗಳ ಕೊರತೆ ಕೂಡ ಕಂಡು ಬರುವದಿಲ್ಲ. ಆಳವಾದ ಬೇರುಳ್ಳ ಹಾಗೂ ಕಡಿಮೆ ಆಳದ ಬೇರುಗಳ ಬೆಳೆಗಳನ್ನು ಉದಾ : ಈರುಳ್ಳಿ + ಮೆಣಸಿನಕಾಯಿ + ಹತ್ತಿ ಮಿಶ್ರ ಬೆಳೆಯಾಗಿ ಬೆಳೆಯುವದರಿಂದ ಮಣ್ಣಿನಲ್ಲಿರುವ ಪೋಷಕಾಂಶÀಗಳು ವಿವಿಧ ಹಂತಗಳಲ್ಲಿ ಹಾಗೂ ಸಮಯದಲ್ಲಿ ಸೂಕ್ತ ರೀತಿಯಿಂದ ಬಳಕೆಯಾಗಿ ಉತ್ಪಾದಕತೆಯನ್ನು ಹೆಚ್ಚಿಸಬಹುದು. ಬೆಳೆ ಕಾಲಗೈ ಹಾಗೂ ಬಹುಬೆಳೆ ಪದ್ಧತಿಗಳು ಮಣ್ಣಿನ ಫಲವತ್ತತೆ ನಿರ್ವಹಣೆಯಲ್ಲದೆ ಕೀಟ ರೋಗ ನಿರ್ವಹಣೆಯಲ್ಲಿಯೂ ಹೆಚ್ಚಿನ ಮಹತ್ವ ಪಡೆದಿವೆ.

ಜೈವಿಕ ಗೊಬ್ಬರಗಳು :

ಜೈವಿಕ ಗೊಬ್ಬರಗಳು ಪ್ರಯೋಜನಕಾರಿ ಸೂಕ್ಷ್ಮಾಣುಜೀವಿಗಳನ್ನು ಹೊಂದಿದ್ದು, ಇವುಗಳನ್ನು ಬಳಸುವದರಿಂದ ವಿವಿಧ ಪೋಷಕಾಂಶಗಳು ಬೆಳೆಗೆ ಲಭಿಸುತ್ತವೆ. ಬಿತ್ತುವುದಕ್ಕೆ ಮುಂಚೆ ಅಜೋಸ್ಪಿರಿಲ್ಲಂ ಮತ್ತು ರಂಜಕ ಕರಗಿಸುವ ಬ್ಯಾಕ್ಟೀರಿಯ (ಪಿ.ಎಸ್.ಬಿ) ದಿಂದ (200 ಗ್ರಾಂ. ಪ್ರತಿ ಕಿಲೋ ಬೀಜಕ್ಕೆ) ಬೀಜೋಪಚಾರ ಮಾಡುವುದರಿಂದ ಮತ್ತು ಸಸಿಗಳು ಬೇರುಗಳನ್ನು ನಾಟಿ ಮಾಡುವುದಕ್ಕೆ ಮುಂಚೆ ಅಜೋಸ್ಪಿರಿಲ್ಲಂ ಮತ್ತು ಪಿ.ಎಸ್.ಬಿ. ಅಣುಜೀವಿಯ ದ್ರಾವಣದಲ್ಲಿ (400 ಗ್ರಾಂ. ಪ್ರತಿ ಲೀಟರ್ ನೀರಿನಲ್ಲಿ) ಅದ್ದಿದರೆ ಶೇ. 25 ರಷ್ಟು ಸಾರಜನಕ ಗೊಬ್ಬರದ ಪ್ರಮಾಣವನ್ನು ಉಳಿತಾಯ ಮಾಡಬಹುದು ಮತ್ತು ಹೆಚ್ಚಿನ ಇಳುವರಿಯನ್ನು ಪಡೆಯಬಹುದು.

ಜೀವಾಮೃತ :

ಜೀವಾಮೃತ ಕೂಡ ಉತ್ತಮ ದ್ರವ ರೂಪದ ಗೊಬ್ಬರ. ಇದರಿಂದ ಬೆಳೆಗಳಿಗೆ ಅವಶ್ಯಕ ಪೋಷಕಾಂಶಗಳಲ್ಲದೇ, ಮಣ್ಣಿನಲ್ಲಿ ಜೈವಿಕ ಕ್ರಿಯೆ ಹೆಚ್ಚಿಸಿ ಮಣ್ಣಿನ ಫಲವತ್ತತೆ ವೃದ್ಧಿಯಾಗುತ್ತದೆ. ನಾಟಿ ಮತ್ತು ಹೂ ಬಿಡುವ ಸಮಯದಲ್ಲಿ ಇದನ್ನು ಪ್ರತಿ ಹೆಕ್ಟೇರಿಗೆ 550 ಲೀ. ಪ್ರಮಾಣದಲ್ಲಿ ಮಣ್ಣಿನಲ್ಲಿ ತೇವಾಂಶವಿರುವಾಗ ಸಸಿಗಳ ಬುಡಕ್ಕೆ ಸುರಿಯಬೇಕು.

ಮೆಣಸಿನಕಾಯಿ ಬೆಳೆಯಲ್ಲಿ ಪೋಷಕಾಂಶಗಳ ಕೊರತೆಯ ಲಕ್ಷಣಗಳು ಮತ್ತು ನಿರ್ವಹಣೆ :

ಸಾಮಾನ್ಯವಾಗಿ ಸಸ್ಯ ಬೆಳೆವಣಿಗೆಗೆ 16 ಪೋಷಕಾಂಶಗಳು ಅವಶ್ಯವಿದ್ದು ಅವುಗಳಲ್ಲಿ ಸಾರಜನಕ, ರಂಜಕ ಮತ್ತು ಪೊಟ್ಯಾಷಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ.

ಶಿಫಾರಸ್ಸು ಮಾಡಿದ ಕೊಟ್ಟಿಗೆ ಗೊಬ್ಬರವನ್ನು ಮೆಣಸಿನಕಾಯಿ ನಾಟಿ ಮಾಡುವ ಪೂರ್ವ ಭೂಮಿಯಲ್ಲಿ ಬೆರೆಸಬೇಕು. ರಸಾಯನಿಕ ಗೊಬ್ಬರವನ್ನು ನಾಟಿ ಮಾಡಿದ ಸಸಿಯಿಂದ 5 ರಿಂದ 6 ಸೆಂ. ಮೀ. ಅಂತರ ಹಾಗೂ ಆಳದಲ್ಲಿ ಹಾಕಬೇಕು. ಸಮತೋಲನ ಪೋಷಕಾಂಶ ಪೂರೈಕೆ ಹೆಚ್ಚು ಮಹತ್ವದ್ದಾಗಿರುತ್ತದೆ.,

  1. ಸಾರಜನಕ: ಅತೀ ಮುಖ್ಯವಾದ ಪೋಷಕಾಂಶವಾಗಿದ್ದು, ನೀರಾವರಿ ಬೆಳೆಯಾಗಿದ್ದಲ್ಲಿ 150 ಕಿ.ಗ್ರಾಂ. ಸಾರಜನಕವನ್ನು ಪ್ರತಿ ಹೆಕ್ಟೇರಿಗೆ ನೀಡಬೇಕಗುತ್ತದೆ. ಇದರಲ್ಲಿ ಕೇವಲ 50 ಕಿ.ಗ್ರಾಂ. ಸಾರಜನಕವನ್ನು ನಾಟಿಯಾದ 10 ರಿಂದ 12 ದಿವಸಗಳ ನಂತರ ಉಂಗುರಾಕರದಲ್ಲಿ ಹಾಕಬೇಕು. ಉಳಿದ 100 ಕಿ. ಗ್ರಾಂ. ಸಾರಜನಕವನ್ನು 30, 60 ಮತ್ತು 90 ದಿವಸಗಳ ಅಂತರದಲ್ಲಿ, ಸಮ ಪ್ರಮಾಣದಲ್ಲ್ಲಿ ಬೆಳೆಗೆ ಪೂರೈಸಬೇಕು. ಅದೇ ರೀತಿ ಮಳೆಯಾಶ್ರಿತವಾಗಿ ಬೆಳೆಯುವುದಾದರೆ 100 ಕಿ.ಗ್ರಾಂ. ಸಾರಜನಕದಲ್ಲಿ 50 ಕಿ. ಗ್ರಾಂ. ಸಾರಜನಕವನ್ನು ನಾಟಿ ಮಾಡಿದ 10 ರಿಂದ 12 ದಿವಸಗಳಲ್ಲಿ ಉಂಗುರಾಕಾರದಲ್ಲಿ ಕೊಡಬೇಕು. ಉಳಿದ 50 ಕೆ. ಜಿ. ಸಾರಜನಕವನ್ನು 30 ರಿಂದ 45 ದಿವಸಗಳಲ್ಲಿ ಬೆಳೆಗೆ ಪೂರೈಸಬೇಕು.

ಕೊರತೆಯ ಲಕ್ಷಣ: ಕುಂಠಿತ ಬೆಳವಣಿಗೆ, ಚಿಕ್ಕದಾದ ಎಲೆಗಳು ಮತ್ತು ಎಲೆಗಳ ಬಣ್ಣವು ತಿಳಿ ಹಸಿರು ಬಣ್ಣದಿಂದ ತಿಳಿ ಹಳದಿ ಅಥವಾ ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಾಯಿಗಳ ಗಾತ್ರ ಚಿಕ್ಕದಾಗಿ ಹಳದಿಯಾಗುತ್ತವೆ.

ನಿರ್ವಹಣಾ ಕ್ರಮ:

  • ಸಾರಜನಕದ ಗೊಬ್ಬರಗಳಾದ ಸಿ.ಎ.ಎನ್, ಯುರಿಯಾ ಮತ್ತು ಇತರೆ ಸಂಕೀರ್ಣ ಗೊಬ್ಬರಗಳ ಮೂಲಖ ಪೂರೈಸಬಹುದು. ಸಾರಜನಕವನ್ನು ಡಿ.ಎ.ಪಿ. ಮತ್ತು ಸಿ.ಎ.ಎನ್ ರೂಪದಲ್ಲಿ ಕೊಡುವುದರಿಂದ ಮೆಣಸಿನಕಾಯಿ ಮುಟುರು ರೋಗ ಕಡಿಮೆಯಗುವುದಲ್ಲದೆ ಗುಣಮಟ್ಟ ಹೆಚ್ಚಾಗುವುದು.
  • ಶೇ. 1 ರಷ್ಟು ಯೂರಿಯಾವನ್ನು ಹದಿನೈದು ದಿನಗಳಿಗೊಮ್ಮೆ ಎಲೆಗಳ ಮೇಲೆ ಸಿಂಪರಣೆ ಮಾಡುವುದು.

ಸೂಚನೆ: ಅತಿಯಾದ ಸಾರಜನಕದ ಬಳಕೆಯಿಂದ ಅಧಿಕ ಬಿಳಿಗಾಯಿ ಉಂಟಾಗಿ ಒಣ ಮೆಣಸಿನಕಾಯಿ ಗುಣಮಟ್ಟ ಕಡಿಮೆಯಾಗುವ ಸಾದ್ಯತೆ ಇರುತ್ತದೆ.

  1. ರಂಜಕ:

ರಂಜಕವು ಬೇರುಗಳ ಬೆಳೆವಣಿಗೆ, ಹೂ ಮತ್ತು ಕಾಯಿ ಪ್ರಮಾಣ ಹೆಚ್ಚಿಸಲು ಹಾಗೂ ಬೇಗನೆ ಮಾಗಲು ಅನುಕೂಲವಾಗುತ್ತದೆ.

ಕೊರತೆಯ ಲಕ್ಷಣ: ಕುಂಠಿತ ಬೆಳವಣಿಗೆ, ಆಂತರಿಕವಾಗಿ ಬಾಗಿದ ಸಣ್ಣ ಕಿರಿದಾದ ಎಲೆಗಳು, ಹಳದಿ ವರ್ಣ ಕೂಡಿದ ಗುಲಾಬಿ ಅಂಚಿನ ಹಳೆಯ ಎಲೆಗಳು, ಸಣ್ಣ ಮತ್ತು ವಿಕಾರ ರೂಪದ ಕಾಯಿಗಳು ಕಂಡು ಬರುತ್ತವೆ.

ನಿರ್ವಹಣಾ ಕ್ರಮ:

  • ರಂಜಕ ಪೂರೈಸುವ ಗೊಬ್ಬರಗಳೆಂದರೆ ಸಿಂಗಲ್ ಸೂಪರ್ ಫಾಸ್ಟೇಟ್, ಟ್ರಿಪಲ್ ಸೂಪರ್ ಫಾಸ್ಫೇಟ್ ಮತ್ತು ಡೈಅಮೋನಿಯಂ ಫಾಸ್ಫೇಟ್ ಮತ್ತು ಇನ್ನಿತರ ಕಾಂಪ್ಲೆಕ್ಸ್ ಗೊಬ್ಬರಗಳು.
  • ಶೇ. 2 ರಷ್ಟು ಡಿ.ಎ.ಪಿ ಗೊಬ್ಬರವನ್ನು ಹದಿನೈದು ದಿನಗಳಿಗೊಮ್ಮೆ ಎಲೆಗಳ ಮೇಲೆ ಸಿಂಪರಣೆ ಮಾಡಬೇಕು.
  1. ಪೊಟ್ಯಾಷ:

ಪೊಟ್ಯಾಷ ಗೊಬ್ಬರ ಪೂರೈಸುವುದರಿಂದ ಬೆಳೆಯ ಇಳುವರಿ ಮಟ್ಟ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಕೊರತೆಯ ಲಕ್ಷಣ:  ಬೆಳವಣಿಗೆ ಕಡಿಮೆಯಾದ ಎಲೆಗಳ ಸಂಖ್ಯೆ ಹೆಚ್ಚಾಗುತ್ತದೆ. ಸಣ್ಣ ಗಾತ್ರದ ಎಲೆಗಳು ತುದಿಯ ಕಡೆಯಿಂದ ಒಣಗಿದಂತೆ ಕಾಣುತ್ತದೆ.

ನಿರ್ವಹಣಾ ಕ್ರಮ: ಪೊಟ್ಯಾಷ ಪೂರೈಸುವ ಗೊಬ್ಬರಗಳೆಂದರೆ ಮ್ಯುರೇಟ್ ಆಫ್ ಪೊಟ್ಯಾಷ್, ಸಲ್ಪೇಟ್ ಆಫ್ ಪೊಟ್ಯಾಷ ಮತ್ತು ಇನ್ನಿತರ ಕಾಂಪ್ಲೆಕ್ಸ ಗೊಬ್ಬರಗಳು.

  • ಶೇ. 1 ರಷ್ಟು ಪೊಟ್ಯಾಸಿಯಂ ಸಲ್ಪೈಟ್‍ನ್ನು (ಏ2So4) ಹದಿನೈದು ದಿನಗಳಿಗೊಮ್ಮೆ ಎಲೆಗಳ ಮೇಲೆ ಸಿಂಪರಣೆ ಮಾಡಬೇಕು.
  1. ಸುಣ್ಣ (ಕ್ಯಾಲ್ಸಿಯಂ)

ಕೊರತೆಯ ಲಕ್ಷಣ: ಬೆಳವಣಿಗೆ ಕುಂಠಿತವಾದ ಲಕ್ಷಣಗಳು ಕುಡಿಗಳಲ್ಲಿ ಮೊದಲು ಕಂಡು ಬರುತ್ತದೆ. ಎಲೆಯ ಅಂಚಿನ ಬಾಗದಲ್ಲಿ ಪತ್ರ ಹರಿತ್ತು ಇಲ್ಲದಾಗಿ ಎಲೆಗಳು ಕ್ರಮೇಣ ಒಣಗುತ್ತವೆ. ಕುಡಿಯ ಭಾಗವು ಒಣಗಿತಂತಾಗಿ ಸಾಯುತ್ತದೆ. ಹೂವಿನ ಮೊಗ್ಗುಗಳು ಅಭಿವೃದ್ಧಿಯಾಗುವುದಿಲ್ಲ. ಹಣ್ಣುಗಳು ತುದಿಯ ಭಾಗದಲ್ಲಿ ಕೊಳೆತ ಕಂಡು ಬರುತ್ತದೆ. 

ನಿರ್ವಹಣಾ ಕ್ರಮ:

  • ಪ್ರತಿ ಹೆಕ್ಟೇರಿಗೆ 25 ಕೆ.ಜಿ. ಜಿಪ್ಸಂ ಅಥವಾ ಶೇ. 1 ರಷ್ಟು ಕ್ಯಾಲ್ಸಿಯಂ ಸಲ್ಪೈಟ್ (ಅಚಿSo4) ಸಿಂಪರಣೆ ಹಾಕಬೇಕು.
  1. ಮ್ಯಾಗ್ನೆಸಿಯಂ

ಕೊರತೆಯ ಲಕ್ಷಣ : ಲಕ್ಷಣಗಳು ಮೊದಲು ಹಳೆಯ ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಎಲೆಗಳ ನರಗಳ ಮಧ್ಯಭಾಗವು ಬಿಳಿಚಿಕೆ ಹೊಂದುತ್ತದೆ ಮತ್ತು ಈ ಕೊರತೆ ಮುಂದುವರೆದಂತೆ ಎಲೆಗಳ ದೊಡ್ಡ ನರಗಳು ಹಸಿರಾಗಿದ್ದು ಉಳಿದ ಭಾಗವು ಬಿಳಿಚಿಕೊಂಡು ಸಾಯುತ್ತವೆ.

ನಿರ್ವಹಣಾ ಕ್ರಮ: ಶೇ. 1 ರಷ್ಟು ಮ್ಯಾಗ್ನೆಸಿಯಂ ಸಲ್ಪೈಟ್ (ಒgSo4) ಅಥವಾ ಶೇ. 1 ರಷ್ಟು ಯೂರಿಯಾವನ್ನು ಸಿಂಪರಣೆ ಮಾಡಬೇಕು.

  1. ಗಂಧಕ

ಕೊರತೆಯ ಲಕ್ಷಣ : ಚಿಗುರು ಎಲೆಗಳಲ್ಲಿ ಬಿಳಿಚಿಕೆ ಕಂಡು ಬರುತ್ತದೆ ಮತ್ತು ಎಲೆಗಳ ಆಕಾರ ಚಿಕ್ಕದಾಗುತ್ತದೆ.

ನಿರ್ವಹಣಾ ಕ್ರಮ: ಶೇ. 0.5 ರಿಂದ 1.0 ರಷ್ಟು ಕ್ಯಾಲ್ಸಿಯಂ ಸಲ್ಪೈಟ್ (ಅಚಿSo4) ಸಿಂಪರಣೆ ಮಾಡಬೇಕು.

  1. ಬೋರಾನ್

ಕೊರತೆಯ ಲಕ್ಷಣ : . ಅಪೂರ್ಣ ಎಲೆ ರಚನೆ ಹಾಗೂ ಹೊಸದಾಗಿ ಉದಯಿಸಿದ ಎಲೆಗಳು ಬಹಳ ಚಿಕ್ಕದಾಗಿದ್ದು, ಎಲೆಗಳ ಮೇಲೆ ಬಿಳಿಚಿಕೆ ಪಟ್ಟಿಗಳು ಎಲೆ ನರಗಳಿಗೆ ಲಂಭವಾಗಿ ಗೊಚರಿಸಿ ಬೆಳವಣಿಗೆ ಕುಂಠಿತವಾಗುತ್ತದೆ. ಹೂ ಮತ್ತು ಕಾಯಿಯ ರಚನೆಯೂ ಅಪೂರ್ಣವಾಗುತ್ತದೆ. ಬೋರಾನ್ ಕೊರತೆಯಿಂದ ಹಣ್ಣಿನ ಗಾತ್ರ ಮತ್ತು ತೂಕ ಕೂಡ ಕಡಿಮೆಯಾಗುವುದು.

ನಿರ್ವಹಣಾ ಕ್ರಮ: ಶೇ. 0.2 ರಷ್ಟು ಬೋರ್ಯಾಕ್ಸ್ ಸಿಂಪರಣೆ ಮಾಡಬೇಕು..

  1. ತಾಮ್ರ

ಕೊರತೆಯ ಲಕ್ಷಣ : ಗಿಡದ ಲಕ್ಷಣವು ಒಟ್ಟಾರೆಯಾಗಿ ಗಿಡ್ಡದಾಗಿ ಕಾಣಿಸುತ್ತದೆ. ಎಲೆಗಳ ತೊಟ್ಟು ಮತ್ತು ನರಗಳ ನಡುವಿನ ಅಂತರ ಕ್ಷೀಣಿಸಿದಂತೆ ಗೋಚರವಾಗುತ್ತದೆ ಹಾಗೂ ಎಲೆಗಳ ಗಾತ್ರ ಕಡಿಮೆಯಾಗುತ್ತದೆ.  

ನಿರ್ವಹಣಾ ಕ್ರಮ: ಶೇ. 2 ರಷ್ಟು ಕಾಪರ್ ಸಲ್ಪೈಟ್ (ಅuSo4)ಸಿಂಪರಣೆ ಮಾಡಬೇಕು.

  1. ಕಬ್ಬಿಣ

ಕೊರತೆಯ ಲಕ್ಷಣ : . ಲಕ್ಷಣಗಳು ಮೊದಲು ಕಿರಿಯ ಎಲೆಗಳಲ್ಲಿ ಕಂಡು ಬರುತ್ತವೆ. ಆರಂಭದಲ್ಲಿ ಚಿಕ್ಕ ಎಲೆ ನರಗಳು ಹಸಿರಾಗಿದ್ದು ತಹನಂತರ ಹಳದಿ ಎಲೆಯ ಮೇಲೆ ಒಂದು ದರ್ಜೆಯ ಹಸಿರು ನಾಳಗಳು ಗೊಚರಿಸಿದಂತೆ ಕಂಡು ಬರುತ್ತದೆ. ಎಲೆಗಳು ಸಂಪೂರ್ಣವಾಗಿ ಬಿಳಿಚಿಗೊಳ್ಳುತ್ತದೆ. ಮತ್ತು ತುದಿಯ ಬಾಗ ಒಣಗಿದಂತೆ ಕಾಣುತ್ತದೆ.       

ನಿರ್ವಹಣಾ ಕ್ರಮ: ಶೇ. 0.5 ರಷ್ಟು ಫೇರಸ್ಸ್ ಸಲ್ಪೈಟ್ (ಈeSo4) ಹದಿನೈದು ದಿನಗಳಿಗೊಮ್ಮೆ ಸಿಂಪರಣೆ ಮಾಡಬೇಕು.

10.ಮ್ಯಾಂಗನೀಸ್

ಕೊರತೆಯ ಲಕ್ಷಣ : ಚಿಗುರು ಎಲೆಗಳಲ್ಲಿ ಅಂಚುಗುಂಟ ಬಿಳಿಚಿಕೆ ಕಂಡುಬರುತ್ತದೆ. ತದ ನಂತರ ಕಂದು ಬಣ್ಣಕ್ಕೆ ತಿರುಗುತ್ತದೆ. ಹಣ್ಣಿನ ಮೇಲೆ ಕಪ್ಪು ಕಂದು ಬಣ್ಣದ ಉಬ್ಬಿದ ಕಲೆಗಳು ಕಂಡು ಬರುತ್ತವೆ. 

ನಿರ್ವಹಣಾ ಕ್ರಮ: ಶೇ. 1.2 ರಷ್ಟು ಮ್ಯಾಂಗನೀಸ್ ಸಲ್ಪೈಟ್ (ಒಟಿSo4) ಸಿಂಪರಣೆ ಮಾಡಬೇಕು.

  1. ಸತು

ಕೊರತೆಯ ಲಕ್ಷಣ : ಎಲೆಗಳು ಸಣ್ಣದಾಗಿ ಚಿಗುರೆಲೆಗಳ ಮೇಲೆ ಬಿಳಿಚಿಕೆ ಕಂಡುಬರುತ್ತದೆ.

ನಿರ್ವಹಣಾ ಕ್ರಮ: ಶೇ. 0.5 ರಷ್ಟು ಸತುವಿನ ಸಲ್ಪೈಟ್ (ZಟಿSo4) ಸಿಂಪರಣೆ ಮಾಡಬೇಕು.

ಸಮರ್ಥ ರಸಗೊಬ್ಬರ ಬಳಕೆಗೆ ಉತ್ತಮ ಸಲಹೆಗಳು

  1. ಮಣ್ಣು ಪರೀಕ್ಷೆಯನ್ನು ಆಧರಿಸಿ ರಸಗೊಬ್ಬರ ನೀಡುವುದು.
  2. ಮಣ್ಣಿನ ಪ್ರತಿಕ್ರಿಯೆ ಆಧಾರದ ಮೇಲೆ ರಾಸಾಯನಿಕ ಗೊಬ್ಬರಗಳನ್ನು ಆಯ್ಕೆ ಮಾಡಿಕೊಳ್ಳುವುದು. ಉದಾ: ಕ್ಷಾರೀಯ ಮಣ್ಣುಗಳಿಗೆ ಆಮ್ಲೀಯ ಗೊಬ್ಬರದ ಉಪಯೋಗ
  3. ಮಣ್ಣಿನ ಮೇಲ್ಮೈ ಮೇಲೆ ಗೊಬ್ಬರವನ್ನು ಚೆಲ್ಲದೇ ಸುಮಾರು 3 ರಿಂದ 4 ಸೆಂ. ಮೀ. ಆಳದಲ್ಲಿ ಬೀಜ ಅಥವಾ ಸಸಿಗಳ ಪಕ್ಕದಲ್ಲಿ ಗೊಬ್ಬರವನ್ನು ಹಾಕಬೇಕು.
  4. ಸಾರಜನಕದ ಸಮರ್ಥ ಬಳಕೆಗಾಗಿ ಹಂತ ಹಂತವಾಗಿ ಬೆಳೆಗಳಿಗೆ ನೀಡುವುದು ಮತ್ತು ನಿಧಾನವಾಗಿ ಕರಗುವ ಸಾರಜನಕದ ಗೊಬ್ಬರಗಳನ್ನು ಬಳಸುವುದು.
  5. ಸಾವಯವ ಗೊಬ್ಬರ ಅಥವಾ ಹಸಿರೆಲೆ ಗೊಬ್ಬರವನ್ನು ಪ್ರತಿ 3 ರಿಂದ 5 ವರ್ಷಗಳಿಗೊಮ್ಮೆ ಹಾಕಲೇಬೇಕು.
  6. ಎಲೆಗಳ ಮೂಲಕ ಪೊಷಕಾಂಶಗಳನ್ನು ನೀಡುವುದಾದರೆ ಸಿಂಪರಣೆ ದ್ರಾವಣ ಶೇ. 2 ಕ್ಕಿಂತ ಹೆಚ್ಚಾಗಿರಬಾರದು

ಲೇಖಕರು: ಡಾ. ಕೃಷ್ಣಾ ಡಿ. ಕುರುಬೆಟ್ಟ ಮತ್ತು ಡಾ. ಅಬ್ದುಲ್ ಕರೀಂ ಎಮ್.

Published On: 11 November 2020, 09:44 PM English Summary: Integrated nutrient management of chilli

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.