1. ಅಗ್ರಿಪಿಡಿಯಾ

ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿ ಕೊರಕ ಕೀಟದ ಸಮಗ್ರ ಹತೋಟಿ ಕ್ರಮಗಳು

Kalmesh T
Kalmesh T
Integrated control measures of rose boll borer in cotton crop

ಹತ್ತಿ ಬೆಳೆಯಲ್ಲಿ ಬರುವ ಗುಲಾಬಿ ಕಾಯಿಕೊರಕ ರೋಗ ಹಾಗೂ ಕೀಟದ ಸಮಗ್ರ ಹತೋಟಿ ಕ್ರಮಗಳನ್ನು ತಿಳಿಸಿಕೊಟ್ಟಿದ್ದಾರೆ ನಾಗಪುರ ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಚಿನ್ನಬಾಬು ನಾಯಕ್ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯ ಕೃಷಿ ಕೀಟಶಾಸ್ತ್ರ ವಿಭಾಗದ ಪಿಹೆಚ್. ಡಿ ವಿದ್ಯಾರ್ಥಿ ರಾಖೇಶ್. ಎಸ್., ಅವರು ಬರೆದ ಲೇಖನ ನಿಮಗಾಗಿ...

ಇದನ್ನೂ ಓದಿರಿ: “ಟೊಮೆಟೊ”ಗೆ ಅಂಗಮಾರಿ ರೋಗ, ತಡೆಯುವುದು ಹೇಗೆ ?

ಹತ್ತಿ ಬೆಳೆಯಲ್ಲಿ ಬರುವ ಗುಲಾಬಿ ಕಾಯಿಕೊರಕದ ಜೀವನ ಚಕ್ರದಲ್ಲಿ ಮೊಟ್ಟೆ, ಮರಿಹುಳು, ಕೋಶ ಹಾಗೂ ಪತಂಗ ಎಂಬ ನಾಲ್ಕು ಹಂತಗಳಿರುತ್ತದೆ. ಪತಂಗವು ಸಣ್ಣಗಾತ್ರದಲ್ಲಿದ್ದು, ಮೊದಲೆರಡು ರೆಕ್ಕೆಗಳು ಕಂದು ಬಣ್ಣದಿಂದ ಕೂಡಿದ್ದು, ರೆಕ್ಕೆಯ ಮಧ್ಯಬಾಗದಲ್ಲಿ ಕಪ್ಪು ಚುಕ್ಕೆಗಳು ಕಂಡುಬರುತ್ತವೆ ಹಾಗೂ ಹಿಂಭಾಗದ ರೆಕ್ಕೆಗಳು ಬಿಳಿ ಮಿಶ್ರಿತ ತಿಳಿ ಕಂದು ಬಣ್ಣದಲ್ಲಿದ್ದು ರೆಕ್ಕೆಯ ಅಂಚಿನಲ್ಲಿ ಸಣ್ಣ ಸಣ್ಣ ಗುಂಪಾದ ಕೂದಲುಗಳಿರುತ್ತವೆ. ಈ ಪತಂಗವು ಸುಮಾರು 6 ರಿಂದ 10 ದಿನಗಳಲ್ಲಿ ಬದುಕಿರುತ್ತದೆ.

ಹತ್ತಿಯ ಗುಲಾಬಿ ಕಾಯಿಕೊರಕ ಕೀಟ ಬಾಧೆ ಉಲ್ಬಣಗೊಳ್ಳಲು ಪ್ರಮುಖ ಕಾರಣಗಳು

ಭಾರತದಲ್ಲಿ 2022 ರಿಂದ ಬಿಟಿ ಹತ್ತಿ ಬೆಳೆಯಲು ಆರಂಭಿಸಲಾಯಿತು, ಆಗ ಅನುಮತಿ ನೀಡಿದಾಗಿಂದಲೂ ಇಲ್ಲಿಯವರೆಗೆ ನಾನ್ ಬಿಟಿ (ವಿಷರಹಿತ) ಹತ್ತಿಯನ್ನು ಬೆಳೆಯದಿರುವುದು ಅಥವಾ ಅತೀ ಕಡಿಮೆ ಬೆಳೆಯುತ್ತಿರುವುದು. ಹತ್ತಿ ಬೆಳೆಯ ಅವಧಿ ಮುಗಿದ ನಂತರವೂ ಬೆಳೆಯನ್ನು ಮುಂದುವರಿಸುವುದು. ಶಿಫಾರಸ್ಸು ಮಾಡಿರುವುದಕ್ಕಿಂತ ಅತೀ ಹೆಚ್ಚು ಕೀಟನಾಶಕಗಳ ಬಳಕೆ ಮಾಡುತ್ತಿರುವುದರಿಂದಾಗಿ, ಈ ಕೀಟವು ಹಲವು ಕೀಟನಾಶಕಗಳ ಜೊತೆಯಲ್ಲಿ ಬಿಟಿ ಹತ್ತಿಗೂ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿದೆ.

ಜಾನುವಾರುಗಳಲ್ಲಿ ಲಂಪಿ ಚರ್ಮ ರೋಗ; ಹತೋಟಿ ಕ್ರಮಗಳು

ಹಾನಿಯ ಮುಖ್ಯ ಗುಣಲಕ್ಷಣಗಳು

ಪ್ರೌಢ ಪತಂಗಗಳು ಸಂಯೋಗ ಹೊಂದಿ ಮೊಟ್ಟೆಗಳನ್ನು 10-15 ದಿನದ ಹತ್ತಿಯ ಕಾಯಿ, ಮೊಗ್ಗು, ಹೂವು, ಹತ್ತಿಯ ತೊಟ್ಟೆಲೆ ಅಥವಾ ಎಲೆಯ ತೊಟ್ಟುಗಳ ಮೇಲೆ ಇಡುತ್ತವೆ. ತದನಂತರ, 4-5 ದಿನಗಳ ಕಾವಿನ ನಂತರ ಮರಿಕೀಡೆಯು ಹೊರಬಂದು ಹೂವಿನಲ್ಲಿ ಪರಾಗರೇಣುವನ್ನು ತಿನ್ನುತ್ತಾ ಬೆಳೆದು ನಂತರ ತನ್ನ ಬಾಯಿಂದ ರೇಷ್ಮೆಯಂತಹ ಬಿಳಿ ಎಳೆಗಳನ್ನು ಬಿಟ್ಟು ಹೂವಿನ ದಳಗಳನ್ನು ಮುಚ್ಚುವಂತೆ ಮಾಡುತ್ತವೆ, ಇದನ್ನು ಹೂ ಮುಟುರು (Rosette) ಎನ್ನುತ್ತಾರೆ.

ಸಾಮಾನ್ಯವಾಗಿ ಮರಿ ಕೀಡೆಯು 10-12 ದಿನಗಳಿಗಿಂತ ಕಡಿಮೆ ಅವಧಿಯ ಮೊಗ್ಗುಗಳಿಗೆ ದಾಳಿ ಮಾಡುವುದರಿಂದ ಮೊಗ್ಗುಗಳ ಉದುರುವುದನ್ನು ಗಮನಿಸಬಹುದು. ಮರಿಹುಳುಗಳು ಸಣ್ಣ ಕಾಯಿಯ ಮೇಲ್ತುದಿಯ ಭಾಗದಲ್ಲಿ ಸಣ್ಣ ರಂಧ್ರಮಾಡಿ ಒಳಹೊಕ್ಕು ಬೆಳವಣಿಗೆಯಾಗುತ್ತಿರುವ ಬೀಜಗಳನ್ನು ತಿನ್ನುತ್ತ ಬೆಳೆಯುತ್ತದೆ. ಸಾಮಾನ್ಯವಾಗಿ ಹತ್ತಿ ಕಾಯಿಯಲ್ಲಿ ನಾಲ್ಕರಿಂದ ಐದು ತೊಳೆಗಳಿದ್ದು ಒಂದು ತೊಳೆಯಿಂದ ಮತ್ತೊಂದು ತೊಳೆಯ ಮಧ್ಯದಲ್ಲಿರುವ ತೊಳೆ ವಿಭಜಕದಲ್ಲಿ ದುಂಡಾಕಾರದ ರಂಧ್ರವನ್ನು ಕೊರೆದು ಮತ್ತೊಂದು ತೊಳೆಯ ಬೀಜಗಳನ್ನು ತಿನ್ನುತ್ತದೆ.

ಹಾನಿಗೆ ಒಳಗಾದ ಹಸಿರು ಕಾಯಿಯನ್ನು ಒಡೆದು ನೋಡಿದಾಗ ಈ ಎಲ್ಲಾ ಗುಣಲಕ್ಷಣಗಳನ್ನು ಗಮನಿಸಬಹುದು. ಅಂತಹ ಕಾಯಿಗಳಲ್ಲಿ ಶಿಲೀಂಧ್ರದ ಬೆಳೆವಣಿಗೆಯು ಅಧಿಕಗೊಂಡು, ಕಾಯಿಗಳು ಚೆನ್ನಾಗಿ ಒಡೆಯದೆ ಹತ್ತಿಯ ಗುಣಮಟ್ಟ ಹಾಗು ಇಳುವರಿ ಕಡಿಮೆಯಾಗುತ್ತವೆ.

ಇದನ್ನೂ ಓದಿರಿ: ರಾಗಿ ಬೆಳೆಯ ವೈಜ್ಞಾನಿಕ ಉತ್ಪಾದನಾ ತಾಂತ್ರಿಕತೆಗಳು

ಗುಲಾಬಿ ಕಾಯಿ ಕೊರಕ ಬಾಧೆಯ ಆರ್ಥಿಕ ನಷ್ಟದ ಸಮೀಕ್ಷಾ ವಿಧಾನ

ಪ್ರತಿ ಎಕರೆಗೆ 2 ರಂತೆ ಲಿಂಗಾಕರ್ಷಕ/ಮೋಹಕ ಬಲೆಗಳನ್ನು ನೆಡುವುದರಿಂದ ಗುಲಾಬಿಕಾಯಿ ಕೊರಕದ ಸಮೀಕ್ಷೆ ಮಾಡಬಹುದು. ಈ ಮೋಹಕ ಬಲೆಗಳು ಬೆಳೆಯ ಮಟ್ಟದಿಂದ 30 ಸೆಂ. ಮೀ ಎತ್ತರದಲ್ಲಿರಬೇಕು. ಪ್ರತಿ ಮೋಹಕ ಬಲೆಗೆ 8 ರಿಂದ 10 ಪತಂಗಗಳು ಮೂರು ದಿನಗಳು ಬಿದ್ದರೆ, ಅದು ಕೀಟದ ಆರ್ಥಿಕ ಮಟ್ಟ ಮೀರುತ್ತಿರುವ ಸೂಚನೆ ನೀಡುತ್ತದೆ.

ಹತ್ತಿಯ ಕಾಯಿ ಬಿಟ್ಟ ನಂತರ, 20 ಕಾಯಿಗಳನ್ನು ಹೊಲದ ಬೇರೆ ಬೇರೆ ತಾಕುಗಳಲ್ಲಿ ಕಿತ್ತು ಚಾಕುವಿನಿಂದ ಹರಿದು ಗುಲಾಬಿ ಕಾಯಿಕೊರಕ ಬಾಧೆಯನ್ನು ಗಮನಿಸಬೇಕು. ಹಾಗೇನಾದರು ಎರಡು ಅಥವಾ ಎರಡಕ್ಕಿಂತ ಹೆಚ್ಚು ಕಾಯಿ ಬಾಧೆಗೊಳಗಾಗಿದ್ದಲ್ಲಿ ಆರ್ಥಿಕ ನಷ್ಟ ಶೇ. 10 ಕ್ಕಿಂತ ಮೀರಿದೆ ಎಂದು ಸಮೀಕ್ಷೆ ಮಾಡಬಹುದು. ಹೀಗೆ ಆರ್ಥಿಕ ನಷ್ಟ ಶೇ. 10 ಕ್ಕಿಂತ ಮೀರಿದ್ದರೆ ಮಾತ್ರ ಕೀಟನಾಶಕಗಳ ಸಿಂಪಡಣೆ ಮಾಡಬೇಕು.

ಹೊಸ ತಳಿಯ ಕಬ್ಬು ಯಶಸ್ವಿ ಪ್ರಯೋಗ: ಕಡಿಮೆ ವೆಚ್ಚದಲ್ಲಿ 1 ಎಕರೆಗೆ 55 ಟನ್‌ ಇಳುವರಿ!

ಗುಲಾಬಿ ಕಾಯಿ ಕೊರಕ ಹುಳು ಮತ್ತು ರೋಗ ಪೀಡಿತ ಹತ್ತಿ ತೊಳೆ

ಬಿ. ಟಿ ಹತ್ತಿಯಲ್ಲಿ ಗುಲಾಬಿ ಕಾಯಿಕೊರಕ ಕೀಟದ ಸಮಗ್ರ ಹತೋಟಿ ಕ್ರಮಗಳು:

  • ಗುಲಾಬಿ ಕಾಯಿಕೊರಕ ಹೆಚ್ಚಾಗಿ ಬಾಧಿಸುವ ಪ್ರದೇಶಗಳಲ್ಲಿ ಬೆಳೆ ಪರಿವರ್ತನೆ ಮಾಡುವುದು ಸೂಕ್ತ.
  • ಜಿನ್ನಿಂಗ್ ಮಾಡಿದ ನಂತರ ಬಾಧೆಗೊಳಗಾದ ಹತ್ತಿ ಬೀಜಗಳನ್ನು ನಾಶಪಡಿಸಬೇಕು.
  • ಅವಧಿ ಮುಗಿದ ನಂತರ (ಫೆಬ್ರವರಿ-ಮಾರ್ಚ್) ಹತ್ತಿ ಗಿಡಗಳನ್ನು ಕತ್ತರಿಸಿ ಎರೆ ಗೊಬ್ಬರ ಸಲುವಾಗಿ ಉಪಯೋಗಿಸುವುದು ಸೂಕ್ತ.
  • ಭೂಮಿಯಲ್ಲಿ ಬಿದ್ದ ಕಾಯಿಕೊರಕ ಬಾಧೆಗೀಡಾದ ಕಾಯಿಗಳನ್ನು ಆರಿಸಿ ನಾಶಪಡಿಸಬೇಕು.
  • ಸರಿಪ್ರಮಾಣದಲ್ಲಿ ಗೊಬ್ಬರ ಮತ್ತು ನೀರನ್ನು ಕೊಟ್ಟು ಭೂಮಿಯ ಫಲವತ್ತತೆಯನ್ನು ಕಾಯ್ದುಕೊಳ್ಳಬೇಕು ಇದರಿಂದ ಬಿಟಿ ಹತ್ತಿಯು ಎಂಡೋಟಾಕ್ಸಿನ್ ಎಂಬ ವಿಷವನ್ನು ಹತ್ತಿ ಗಿಡದಲ್ಲಿ ಬಿಡಲು ಸಹಾಯ ಮಾಡುತ್ತದೆ.
  • ಗಂಡು ಪತಂಗಗಳನ್ನು ಸಾಮೂಹಿಕವಾಗಿ ಆಕರ್ಷಿಸಿ ನಾಶಪಡಿಸಲು ಮೋಹಕ ಬಲೆಗಳನ್ನು ಪ್ರತಿ ಎಕರೆಗೆ 10-12 ರಂತೆ ಸಮಾನಾಂತರವಾಗಿ ಅಳವಡಿಸಬೇಕು. ನಂತರ ಬಲೆಗೆ ಬಿದ್ದ ಪತಂಗಗಳನ್ನು ಸಾಯಿಸಬೇಕು.

ಹತ್ತಿಯ ಹೂಗಳು ಗುಲಾಬಿ ಹೂವು (ರೊಸೆಟ್ಟೆ) ಮುದುಡಿಕೊಂಡಿದ್ದರೆ (ಆರ್ಥಿಕನಷ್ಟ ಶೇ. 4 ರಷ್ಟು), ಶೇ. 5ರ ಬೇವಿನ ಕಷಾಯ ಅಥವಾ ಬೇವಿನ ಮೂಲದ ಕೀಟನಾಶಕ 3 ಮಿ.ಲೀ ಅಥವಾ 1 ಗ್ರಾಂ. ಥಯೋಡಿಕಾರ್ಬ್ 70 ಡಬ್ಲೂ.ಪಿ ಅಥವಾ 1 ಮಿ.ಲೀ ಲ್ಯಾಮ್ಡಾಸಹೆಲೋಥ್ರಿನ್ 5 ಇ.ಸಿ ಅಥವಾ 2 ಮೀ. ಲೀ. ಪ್ರೋಫೆನೋಫಾಸ್ 50 ಇಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಕೀಟನಾಶಕವನ್ನು ಸಿಂಪಡಿಸಬೇಕು.

ಹತ್ತಿ ಗಿಡ ಮತ್ತು ಅದರ ಹೂವು

ಜೈವಿಕ ನಿಯಂತ್ರಣ:

ಗುಲಾಬಿ ಕಾಯಿಕೊರಕದ ತತ್ತಿಗಳನ್ನು ನಾಶಪಡಿಸಲು ಟ್ರೆಕೋಗ್ರಾಮ ಬ್ಯಾಕ್ಟೆ ಎಂಬ ಪರತಂತ್ರ ಜೀವಿಯನ್ನು ಎಕೆರೆಗೆ 60000 ರಂತೆ ಬೆಳೆಯ 70-75 ಹಾಗೂ 80-85 ರ ಅವಧಿಯಲ್ಲಿ ಬಿಡಬೇಕು.

ಬೆಳೆಯ 100 ದಿನಗಳ ನಂತರದಲ್ಲಿ ಅವಶ್ಯಕತೆಗನುಸಾರವಾಗಿ ಅದರಲ್ಲೂ ಬಿಳಿ ನೊಣದ ಬಾಧೆ ಇಲ್ಲದಿದ್ದಲ್ಲಿ 0.5 ಮಿ.ಲೀ ಲ್ಯಾಮ್ಡಾಸೈಲೋಥ್ರಿನ್ 10 ಇ.ಸಿ ಅಥವಾ 1.0 ಮಿ.ಲೀ ಸಯ್ಪರ್‌ಮೇಥ್ರಿನ್ 10 ಇ.ಸಿ ಅಥವಾ 1.0 ಮಿ.ಲೀ ಫೆನ್‌ವೆಲರೇಟ್ 20 ಇಸಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಪ್ರತಿ ಎಕೆರೆಗೆ 400-500 ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು.

ನೂತನ ತಂತ್ರಜ್ಞಾನಗಳು:

ಫೆರಮೊನ್ ಮಿಶ್ರಿತ ದಾರದ ರೀತಿಯ ಪಿ.ಬಿ ರೋಪೆಲ್‌ನ್ನು ಒಂದು ಎಕರೆಗೆ 150 ರಂತೆ ಅಥವಾ 1 ರೋಪೆಲ್ ಪ್ರತಿ 50 ಚದರ ಮಿ.ಗೆ ಹತ್ತಿ ಬೆಳೆಯ ಕಾಂಡದ ಮಧ್ಯ ಭಾಗಕ್ಕೆ 40 ರಿಂದ 50 ದಿನದ ಗಿಡಗಳಿಗೆ ಕಟ್ಟಬೇಕು.

ಸ್ಪೆಷಲೈಝಡ್ ಫೆರಮೊನ್ ಲ್ಯೂರ್ ಅಪ್ಲಿಕೇಷನ್ ಟೆಕ್ನೋಲಾಜಿ-ಈ ತಂತ್ರಜ್ಞಾನದಲ್ಲಿ, ಪೇಸ್ಟ್ ಅಥವಾ ಜೆಲ್ ರೀತಿಯ ಎಸ್.ಪಿ.ಲ್.ಎ.ಟಿ ಲ್ಯೂರ್ ಅನ್ನು ಗಿಡದ ರೆಂಬೆ/ಕೊAಬೆಯ ಮೇಲೆ ಬಟಾಣಿ ಗಾತ್ರದಷ್ಟು ಪೇಸ್ಟ್ ಹಚ್ಚಬೇಕು. ಒಂದು ಗಿಡಕ್ಕೆ 0.5 ಗ್ರಾಂ ನಂತೆ ಪ್ರತಿ ಎಕರೆಗೆ ಸಮಾನಾಂತರವಾಗಿ 400 ಸ್ಥಳಗಳಲ್ಲಿ ಗಿಡದ ಭಾಗಕ್ಕೆ ಪೇಸ್ಟ್ ಹಚ್ಚಬೇಕು.

ಇದನ್ನು ಒಂದು ಬಾರಿ ಒಂದು ಎಕರೆಗೆ ಹಚ್ಚಲು 125 ಗ್ರಾಂನ, ಒಂದು ಟ್ಯೂಬ್ ಬೇಕು. ಅದೇ ರೀತಿ 35 ರಿಂದ 45 ದಿನದ ಹಂತ, 65 ರಿಂದ 70 ದಿನದ ಹಂತ, 95 ರಿಂದ 100 ದಿನದ ಹಂತ ಮತ್ತು 125 ರಿಂದ 130 ದಿನದ ಹಂತದಲ್ಲಿ 4 ಬಾರಿ ಹಚ್ಚುವುದರಿಂದ ಪ್ರೌಢ ಪತಂಗಗಳ ಸಂಯೋಗ ಕ್ರಿಯೆಗೆ ಅಡಚಣೆಯುಂಟಾಗಿ ಹೆಣ್ಣು ಪತಂಗಗಳು ಮೊಟ್ಟೆಯಿಡುವುದಿಲ್ಲ ಹಾಗೂ ದರಿಂದ ಮರಿ ಕೀಡೆಯ ಬಾಧೆ ಕಡಿತಗೊಳ್ಳುತ್ತದೆ.

Published On: 15 January 2023, 11:20 AM English Summary: Integrated control measures of rose boll borer in cotton crop

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.