1. ಅಗ್ರಿಪಿಡಿಯಾ

ಮಲೆನಾಡು, ಅರೆ ಮಲೆನಾಡಿನ ಅಡಿಕೆ ತೋಟಗಳಲ್ಲಿ ಬಸವನ ಹುಳುಗಳ ನಿರ್ವಹಣೆ ಹೇಗೆ?

ಮಳೆಗಾಲ ರೈತರಿಗೆ ಹೇಗೆ ಪ್ರಿಯವೋ ಹಾಗೇ ಮಳೆ ದಿನಗಳು ಶುರುವಾದರೆ ರೈತರಿಗಿಂತಲೂ ಹೆಚ್ಚು ಖುಷಿ ಪಡುವ, ಸಂಭ್ರಮಿಸುವ ಜೀವಿಯೊಂದು ಇದೆ. ಅದುವೇ ಶಂಕು ಹುಳು ಅಥವಾ ಬಸವನ ಹುಳು. ಸಾಮಾನ್ಯವಾಗಿ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಾವಣಗೆರೆ ಜಿಲ್ಲೆಗಳಲ್ಲಿ ಹಾಗೂ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಬಸವನ ಹುಳುಗಳ ಹಾವಳಿ ಹೆಚ್ಚಾಗಿರುತ್ತದೆ. ಅದರಲ್ಲೂ ಮಲೆನಾಡು ಹಾಗೂ ಅರೆ ಮಲೆನಾಡು ಜಿಲ್ಲೆಗಳ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಈ ಹುಳುಗಳ ಹಾವಳಿ ಹೆಚ್ಚು.

ಮೇಲ್ನೋಟಕ್ಕೆ ಸೌಮ್ಯವಾಗಿ ಕಾಣುವ ಶಂಕು ಹುಳುಗಳು ಸ್ವಭಾವತಃ ಆಕ್ರಮಣಕಾರಿ ಗುಣ ಹೊಂದಿರುತ್ತವೆ. ಇವುಗಳ ಅಂಗರಚನೆ ಹಾಗೂ ಬಾಯಿಯು ಅತ್ಯಂತ ಮೃದುವಾಗಿದ್ದರೂ, ಇವು ಗಟ್ಟಿಯಾಗಿರುವ ಅಡಿಕೆ ಮರ, ತೆಂಗಿನ ಮರದ ಗರಿಗಳನ್ನು ಕೊರೆಯುವ ಸಾಮರ್ಥ್ಯ ಹೊಂದಿರುತ್ತವೆ. ಕೆಲವೊಮ್ಮೆ ತೆಂಗಿನ ಕಾಯಿಗಳ ಸಿಪ್ಪೆಯನ್ನೂ ಕೊರೆದು ಬಸವನ ಹುಳುಗಳು ಒಳ ಹೋಗುತ್ತವೆ. ಮುಖ್ಯವಾಗಿ ಮಳೆಗಾಲ ಆರಂಭವಾದರೆ ಅಡಿಕೆ ಗಿಡಗಳು ಇಂಗಾರು (ಹೂವು) ಬಿಡಲು ಆರಂಭಿಸುತ್ತವೆ. ಈ ಸಮಯದಲ್ಲೇ ಹೆಚ್ಚಾಗುವ ಶಂಕು ಹುಳುಗಳು ನೇರವಾಗಿ ಎಳೆಯ ಇಂಗಾರುಗಳ ಮೇಲೆ ದಾಳಿ ಮಾಡುತ್ತವೆ. ಈ ಇಂಗಾರು ಮೃದುವಾಗಿರುವ ಕಾರಣ ಶಂಕು ಹುಳುಗಳಿಗೆ ಸುಲಭ ತುತ್ತಾಗುತ್ತದೆ. ಒಂದೊಮ್ಮೆ ತೋಟದಲ್ಲಿ ಈ ಹುಳುಗಳ ಸಂಖ್ಯೆ ಅಧಿಕವಾಗಿದ್ದರೆ ರಾತ್ರೋ ರಾತ್ರಿ ಎಕರೆಗಟ್ಟಲೆ ತೋಟವನ್ನು ಹಾಳು ಮಾಡುವ ಶಂಕು ಹುಳುಗಳು ಅತ್ಯಂತ ಅಪಾಯಕಾರಿ ಜೀವಿಗಳಾಗಿವೆ.

ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬಸವನ ಹುಳು ಅಥವಾ ಶಂಖದ ಹುಳು ಅಡಿಕೆ ಹಾಗೂ ಇತರೆ ಬೆಳೆಗಳಿಗೆ ಹೆಚ್ಚು ಹಾನಿಯನ್ನು ಉಂಟುಮಾಡುತ್ತಿವೆ. ಈ ನಿಟ್ಟಿನಲ್ಲಿ ಈ ಹುಳುಗಳನ್ನು ನಿವಾರಿಸುವ ಕ್ರಮಗಳು ಅಥವಾ ನಿರ್ವಹಣಾ ಕ್ರಮಗಳ ಕುರಿತು ಶಿವಮೊಗ್ಗದ ನವಿಲೆಯಲ್ಲಿರುವ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥರಾಗಿರುವ ಡಾ. ನಾಗರಾಜಪ್ಪ ಅಡಿವಪ್ಪರ್ ಅವರು ಮಾಹಿತಿ ನೀಡಿದ್ದಾರೆ.

ಹುಳುಗಳು ಹೆಚ್ಚುವುದು ಹೇಗೆ

ಮಳೆಗಾಲ ಆರಂಭಕ್ಕೆ ಮೊದಲು ಶಂಕು ಹುಳುಗಳ ಸಂಖ್ಯೆ ಕಡಿಮೆ ಇರುವುದರಿಂದ ಅವುಗಳ ಹಾವಳಿ ಅಷ್ಟಾಗಿ ಕಾಣುವುದಿಲ್ಲ. ಆದರೆ ಮಳೆಗಾಲ ಆರಂಭವಾಗುತ್ತಿದ್ದಂತೆ ಈ ಹುಳುಗಳ ಸಂತತಿ ಏಕಾಏಕಿ ವೃದ್ಧಿಯಾಗಿ, ತೋಟದಲ್ಲಿನ ಮರಗಳು ಹಾಗೂ ನೆಲದ ಮೇಲೆ ಹರಿದಾಡುವುದು ಕಂಡುಬರುತ್ತದೆ. ಹೀಗಾಗಿ ಶಂಕು ಹುಳುಗಳ ಬಾಧೆಯನ್ನು ನಿವಾರಿಸುವ ಮೊದಲು ಅವುಗಳು ಹೆಚ್ಚಾಗಲು ಕಾರಣವೇನು ಎಂದು ತಿಳಿದುಕೊಳ್ಳುವುದು ಮುಖ್ಯ. ಸಾಮಾನ್ಯವಾಗಿ ತೋಟಗಳಲ್ಲಿ ಹೆಚ್ಚು ಕಳೆ ಬೆಳೆದಿದ್ದರೆ, ಕಿತ್ತ ಕಳೆಯನ್ನು ಒಂದೆಡೆ ಗುಂಪೆ ಹಾಕಿದ್ದರೆ ಅಂತಹ ಪ್ರದೇಶದಲ್ಲಿ ಶಂಕು ಹುಳುಗಳು ಹೆಚ್ಚಾಗುತ್ತವೆ. ಏಕೆಂದರೆ, ಕಸ, ಕಳೆಯ ಗುಂಪೆ ಹಾಗೂ ಒತ್ತಾಗಿ ಬೆಳೆದ ಕಳೆಯು ಶಂಕು ಹುಳುಗಳು ಅವಿತುಕೊಳ್ಳಲು ಹಾಗೂ ಸಂತಾನೋತ್ಪತ್ತಿ ಮಾಡಲು ಸೂಕ್ತ ವಾತಾವರಣವನ್ನು ಕಲ್ಪಿಸುತ್ತದೆ. ಹಣ್ಣಾಗಿ ಬಿದ್ದಿರುವ ಅಡಲೆ ಡೊಕಳೆ (ಅಡಿಕೆ ಎಲೆ) ಕೆಳಗೂ ಇವುಗಳು ಅವಿತು ಕುಳಿತುಕೊಳ್ಳುತ್ತವೆ. ಹೀಗಾಗಿ ಮೊದಲು ತೋಟದಲ್ಲಿ ಕಳೆ ಬೆಳೆಯದಂತೆ ಎಚ್ಚರ ವಹಿಸಬೇಕು. ಜೊತೆಗೆ ಕಿತ್ತ ಕಳೆಯನ್ನು ಅಲ್ಲಲ್ಲಿ ಗುಂಪೆ ಹಾಕದೆ ಹರಡಬೇಕು. ಇಲ್ಲವೇ, ತೋಟದಿಂದ ಹೊರಗೆ ಹಾಕಬೇಕು. ಒಟ್ಟಿನಲ್ಲಿ ತೋಟವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಈ ಹುಳುಗಳ ಹಾವಳಿ ತಡೆಯಲು ಇರುವ ಪ್ರಮುಖ ಕ್ರಮ.

ನಿರ್ವಹಣಾ ಕ್ರಮಗಳು

  • ಹುಳುಗಳ ಬೆಳವಣಿಗೆಗೆ ಅನುಕೂಲಕರವಾಗಿರುವ ವಾತಾವರಣವನ್ನು ಒದಗಿಸದೇ ಇರುವುದು. ಅಂದರೆ, ತೋಟಗಳ ಕಳೆಗಳನ್ನು ನಿರ್ಮೂಲನೆ ಮಾಡಿ ಆದಷ್ಟು ಶುಚಿಯಾಗಿಡಬೇಕು.
  • ಹೊಲದಲ್ಲಿ ಅಲ್ಲಲ್ಲಿ ನೆನೆಸಿದ ಗೋಣಿ ಚೀಲಗಳನ್ನು ಹರಡಿ ಅಥವಾ ಕಸವನ್ನು ಗುಂಪಾಗಿರಿಸಿ ಅದರ ಆಶ್ರಯವನ್ನು ಪಡೆಯಲು ಬರುವ ಹುಳುಗಳನ್ನು ಕೈಯಿಂದಲೇ ಆರಿಸಿ ನಾಶಪಡಿಸಬಹುದು.
  • ಕಸದ ಗುಂಪೆಯಲ್ಲಿ ಅಥವಾ ತೋಟದ ನಿರ್ದಿಷ್ಟ ಭಾಗಗಳಲ್ಲಿ ಹೆಚ್ಚು ಹುಳುಗಳು ಇದ್ದಾಗ 25-30 ಗ್ರಾಂ ಬ್ಲೀಚಿಂಗ್ ಪುಡಿ /ಸುಣ್ಣದ ಪುಡಿ / ತಂಬಾಕು ಮತ್ತು ಮೈಲುತುತ್ತದ ಮಿಶ್ರಣವನ್ನು ಸಿಂಪಡಣೆ ಮಾಡಿ ಹುಳುಗಳನ್ನು ನಾಶಮಾಡಬೇಕು.
  • ಬಾಧೆಯಿರುವ ತೋಟಗಳಲ್ಲಿ ಶೇ.2.5ರ ಮೆಟಾಲ್ಡಿಹೈಡ್ ತುಣುಕುಗಳನ್ನು 20 ಗ್ರಾಂ (5 ಕೆ.ಜಿ ಪ್ರತಿ ಎಕರೆಗೆ) ನಂತೆ, ಸಂಜೆ 6 ಗಂಟೆಯ ನಂತರ ತೋಟದ ಆಯ್ದ ಭಾಗಗಳಲ್ಲಿ ಧೂಳೀಕರಿಸಿದರೆ (ಉದುರಿಸಿದರೆ) ಹುಳುಗಳು ಈ ಪಾಷಾಣಕ್ಕೆ ಆಕರ್ಷಣೆಗೊಂಡು, ಪಾಷಾಣದ ತುಣುಕುಗಳನ್ನು ತಿಂದು ತಲೆಯ ಭಾಗವನ್ನು ಹೊರಗೆ ಚಾಚಿಕೊಂಡು ಲೋಳೆ ಸುರಿಸಿ ಮರುದಿನವೇ ಸಾವನ್ನಪ್ಪುತ್ತವೆ.
  • ಸ್ವಲ್ಪ ಬಲಿತ ಪರಂಗಿ ಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಹೊಲ/ ತೋಟದಲ್ಲಿ ಅಲ್ಲಲ್ಲಿ ಸಣ್ಣ ಗುಡ್ಡೆ ಮಾಡಿ ಸಂಜೆ 6ರಿಂದ 7 ಗಂಟೆ ಸಮಯದಲ್ಲಿ ಇಡಬೇಕು. ಅಂತಹ ಕಡೆಗೆ ಎಲ್ಲ ವಯಸ್ಸಿನ ಹಾಗೂ ಎಲ್ಲಾ ಗಾತ್ರದ ಬಸವನ ಹುಳುಗಳು ಆಕರ್ಷಿತವಾಗುತ್ತವೆ. ಒಂದೆರಡು ಗಂಟೆಗಳ ನಂತರ, ಈ ಎಲ್ಲ ಹುಳುಗಳನ್ನು ಆರಿಸಿ ನಾಶಪಡಿಸಬೇಕು.
  • ಗೋಧಿ ಅಥವಾ ಅಕ್ಕಿಯ ತೌಡು (10 ಕೆ.ಜಿ), ಬೆಲ್ಲ (1.5 ಕೆ.ಜಿ) ಮತ್ತು ತಕ್ಕ ಮಟ್ಟಿಗೆ ನೀರನ್ನು (3-4 ಲೀ) ಬೆರೆಸಿ 36 ಗಂಟೆಗಳ ಕಾಲ ನೆನೆಸಿ. ನಂತರ, ಮಿಥೋಮಿಲ್ 40 ಎಸ್.ಪಿ. ಕೀಟನಾಶಕವನ್ನು (150 ಗ್ರಾಂ) ಮಿಶ್ರಣ ಮಾಡಿ, ಸಂಜೆ 6 ಗಂಟೆಯ ನಂತರ ಹೊಲದ ಸುತ್ತ ಅಂಚಿನಲ್ಲಿ ಅಥವಾ ಸಾಲುಗಳಲ್ಲಿ ಚೆಲ್ಲಿ ಹುಳುಗಳನ್ನು ನಾಶಪಡಿಸಬಹುದು.
Published On: 02 July 2021, 02:04 PM English Summary: how to control snails in betel nut garden

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.