1. ಅಗ್ರಿಪಿಡಿಯಾ

ತಾರಸಿ ಮೇಲೆ ತರಕಾರಿ ಬೆಳೆಸಿ ಆರೋಗ್ಯ ಹೆಚ್ಚಿಸಿಕೊಳ್ಳಿ

Home Gardening

ಹೋಮ್ ಗಾಡರ್ನಿಂಗ್ ಇತ್ತೀಚಿಗೆ ಪ್ರಸಿದ್ದಿ ಪಡಿತಾ ಇರೋದು ನಮ್ಮಗೆಲ್ಲ ಗೊತ್ತೆ ಇದೆ. ಇರೋ ಒಂದಿಷ್ಚು ಜಾಗದಲ್ಲೆ ಪಾಟ್‍ಗಳಲ್ಲಿ ಗಿಡ ನೆಟ್ಟು ಹೂ, ಹಣ್ಣು, ತರಕಾರಿ ಬೆಳೆದು ಖುಷಿ ಪಡುವವರ ಸಂಖ್ಯೆಯು ಹೆಚ್ಚಾಗಿದೆ.

ನಾವು ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಕನಿಷ್ಠ 285 ರಿಂದ 300 ಗ್ರಾಂ ತರಕಾರಿ (115-125 ಗ್ರಾಂ ಸೊಪ್ಪು ತರಕಾರಿ), 85 ಗ್ರಾಂ ಗೆಡ್ಡೆ ತರಕಾರಿ 85 ಗ್ರಾಂ ಇತರೆ ತರಕಾರಿ ಗಳು ಹಾಗೂ 85 ಗ್ರಾಂ ಹಣ್ಣು ಹಂಪಲಿನಿಂದ ಕೂಡಿದ ಸಮತೋಲನ ಆಹಾರ ಇರಬೇಕು. ಆದರೆ ಮಾರುಕಟ್ಟೆಯಲ್ಲಿ ಸಿಗುವ ತರಕಾರಿಗಳು ಅತಿ ಹೆಚ್ಚು ರಾಸಾಯನಿಕ ಬಳಸಿ ಬೆಳೆದಿರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಅದುದರಿಂದ ಪ್ರತಿ ಕುಟುಂಬವು ತಾವು ಸೇವಿಸುವ ತರಕಾರಿಗಳನ್ನು ತಾವೇ ಬೆಳೆದುಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಕೈತೋಟ ಮಾಡಲು ಸ್ಥಳ ಇಲ್ಲದ ಪಕ್ಷದಲ್ಲಿ ಮನೆಯ ತಾರಸಿ ಮೇಲೆ ಕುಂಡಗಳಲ್ಲಿ ಸುಲಭವಾಗಿ ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆಯಬಹುದು. ತಾರಸಿ ತೋಟದಲ್ಲಿ ಸಾವಯವ ಗೊಬ್ಬರ ಉಪಯೋಗಿಸಿ ತರಕಾರಿ ಬೆಳೆಯುವ ಅವಶ್ಯಕತೆ ಹಿಂದೆದಿಗಿಂತಲೂ ಈಗ ಹೆಚ್ಚಾಗಿದೆ.

ತಾರಸಿ ತೋಟದ ಉದ್ದೇಶ:

 1. ಸಾವಯವ ತ್ಯಾಜ್ಯಗಳನ್ನು ಬಳಸಿ ಎರೆಹುಳು ಗೊಬ್ಬರ, ಕಾಂಪೋಸ್ಟ್ ಇತ್ಯಾದಿಗಳನ್ನು ತಯಾರಿಸಿಕೊಂಡು ಮಳೆ ನೀರು ಕೊಯ್ಲು ಹಾಗು ಅಡುಗೆ ಮನೆಯಲ್ಲಿ ಬಳಕೆಯಾದ ನೀರನ್ನು ಮರುಬಳಕೆ ಮಾಡಿಕೊಂಡು ತಾಜಾ ತರಕಾರಿಗಳನ್ನು ಬೆಳೆಸುವುದು. ಯಾವ ಅಂಶಗಳನ್ನು ನೆನಪಿಟ್ಟುಕೊಳ್ಳಬೇಕು
 1. ಸ್ಥಳದ ಅಭಾವ ಹಾಗು ಜಾಗದ ಬೆಲೆಯು ಹೆಚ್ಚಿರುವುದರಿಂದ ನಗರಗಳಲ್ಲಿ ತರಕಾರಿಗಳನ್ನು ಬೆಳೆಯಲು ತಾರಸಿಯು ಉತ್ತಮ ಸ್ಥಳವಾಗಿದೆ.
 2. ಬಳಕೆ ಮಾಡುವ ಕುಂಡಗಳು ಮಣ್ಣು ಮತ್ತು ಗೊಬ್ಬರ ಕಡಿಮೆ ತೂಕದ್ದಾಗಿರಬೇಕು.
 3. ತಾರಸಿ ಮೇಲ್ಛಾವಣಿಯಲ್ಲಿ ನೀರು ಬಸಿದು ಹೋಗುವ ವ್ಯವಸ್ಥೆ ಮಾಡಬೇಕು ಹಾಗು ಪ್ಲಾಸ್ಟಿಕ್ ಶೀಟನ್ನು ಹರಡಬೇಕು.
 4. ಬಹುವಾರ್ಷಿಕ ಗಿಡಗಳಾದ ಅಂಜೂರ, ಸಪೋಟ, ನಿಂಬೆ, ಕರಿವೇವು, ನುಗ್ಗೆ, ದಾಳಿಂಬೆ ಇವುಗಳನ್ನು ದೊಡ್ಡ ಸಿಮೆಂಟ್ ಕುಂಡ ಅಥವಾ ಪ್ಲಾಸ್ಟಿಕ್ ಬ್ಯಾರಲ್ಗಳಲ್ಲಿ ಬೆಳೆಯಬೇಕು.

ವಿವಿಧ ರೀತಿಯ ಪಾಟ್‍ಗಳ ಬಳಕೆ

ಮಣ್ಣಿನ ಕುಂಡಗಳು/ ಪ್ಲಾಸ್ಟಿಕ್/ ಫೈಬರ್/ ಸಿಮೆಂಟ್/ ಪ್ಯಾರಫಿನ್/ ಗ್ರೋ ಬ್ಯಾಗ್ಸ್

ಕುಂಡ ಮಿಶ್ರಣ: 1:2:2 ಅನುಪಾತದಲ್ಲಿ ಮರಳು, ಕೆಮ್ಮಣ್ಣು ಮತ್ತು ಎಲೆ ಗೊಬ್ಬರ/ ಕೊಟ್ಟಿಗೆ ಗೊಬ್ಬರ/ ಎರೆಹುಳು ಗೊಬ್ಬರ/ ಕೋಕೋಪಿಟ್/ ಜೈವಿಕ ಗೊಬ್ಬರಗಳು/ ಬೇವಿನ ಹಿಂಡಿ/ ಆಯಿಲ್ ಕೇಕ್ಸ್

ಪಾಟಿಂಗ್ ವಿಧಾನ:

 1. ಪಾಟಿನ ನೀರು ಹೋಗುವ ರಂಧ್ರವನ್ನು ಮುರಿದ ಕುಂಡದ ಚೂರು/ ಜಲ್ಲಿಕಲ್ಲುಗಳಿಂದ ಮುಚ್ಚಬೇಕು.
 2. ಕುಂಡದ ಚೂರುಗಳನ್ನು ಮರಳಿನಿಂದ ಮುಚ್ಚಬೇಕು.
 3. ನಂತರ ಕುಂಡದಲ್ಲಿ ತುದಿಯವರೆಗೆ ಮಣ್ಣಿನ ಮಿಶ್ರಣವನ್ನು ತುಂಬಬೇಕು.
 4. ರಂಧ್ರದಿಂದ ನೀರು ಹೊರಬರುವವರೆಗೆ ನೀರನ್ನು ಹಾಕಬೇಕು.

ಕೆಲವು ಬೆಳೆಯಬಹುದಾದ ತರಕಾರಿಗಳು:

ಹಣ್ಣು: ಸಪೋಟ, ನಿಂಬೆ, ಪಪ್ಪಾಯ, ದಾಳಿಂಬೆ, ಅಂಜೂರ, ಸೀಬೆ, ನೆಲ್ಲಿ,     

ತರಕಾರಿಗಳು: ಕುಟುಂಬದ ಅಭಿರುಚಿಗೆ ತಕ್ಕಂತೆ ಎಲ್ಲಾ ಜಾತಿಯ ತರಕಾರಿಗಳನ್ನು ಬೆಳೆಯಬಹುದು.

ಹೂ: ಚೆಂಡು ಹೂ, ಗುಲಾಬಿ, ಮಲ್ಲಿಗೆ, ಕನಕಾಂಬರ, ದಾಸವಾಳ.

ಜೌಷಧೀಯ ಬೆಳೆಗಳು: ಒಂದೆಲಗ, ಚಕ್ರಮುನಿ, ಹಿಪ್ಪಲಿ, ಅಮೃತ ಬಳ್ಳಿ, ದೊಡ್ಡ ಪತ್ರೆ, ನೆಲಬೇವು, ಮದುನಾಶಿನಿ, ಸ್ವೀವಿಯಾ.

ನೀರಿನ ಸಧ್ಬಳಕೆ:

ಹೆಚ್ಚುತ್ತಿರುವ ಜನಸಂಖ್ಯೆಗೆ ಅಥವಾ ಮುಂದಿನ ಪೀಗೆಗೆ ಅನುಕೂಲವಾಗುವಂತೆ ನೀರು ಪೋಲಾಗುವುದನ್ನು ತಡೆದು ಸದ್ಬಳಕೆ ಮಾಡುವುದು ಎಲ್ಲರ ಮುಖ್ಯ ಕರ್ತವ್ಯ ಈ ನಿಟ್ಟಿನಲ್ಲಿ ಅಡಿಗೆ ಮನೆಯಲ್ಲಿ ಬಳಕೆಯಾದ ನೀರನ್ನು ಸೂಕ್ತವಾದ ಫಿಲ್ಟರ್ ಮಾಡುವ ವಿಧಾನದಿಂದ ಮತ್ತು ಮನೆಯಲ್ಲಿ ಸಾವಯವ ಸೋಪ್‍ಗಳ ಉಪಯೋಗದಿಂದ ನೀರನ್ನು ಪುನರ್ ಬಳಕೆ ಮಾಡಿಕೊಳ್ಳುವುದು. ಮಳೆ ನೀರನ್ನು ಕೊಯ್ಲು ಮಾಡಿ ಟ್ಯಾಂಕ್‍ನಲ್ಲಿ ಸಂಗ್ರಹಿಸಿ ತರಕಾರಿ-ಹಣ್ಣುಗಳನ್ನು ಬೆಳೆಸಲು ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು.

ಜೈವಿಕ ತ್ಯಾಜ್ಯ ನಿರ್ವಹಣೆ:

ತಾರಸಿ ತೋಟಗಳಲ್ಲಿನ ಸಸಿಗಿಡಗಳ ತ್ಯಾಜ್ಯ/ ಅಡಿಗೆ ಮನೆ ತ್ಯಾಜ್ಯಗಳನ್ನು ಗೊಬ್ಬರ/ ಜೀವಾಮೃತ/ ಬಯೋಡೈಜಸ್ಟರ್ ರೂಪದಲ್ಲಿ ಪುನರ್ ಬಳಕೆ ವಸ್ತುಗಳಿಂದಾಗುವ ಮಾಲಿನ್ಯ ತಡೆದು, ತಾಜಾ ಹಣ್ಣು-ತರಕಾರಿಗಳನ್ನು ಬೆಳೆಸಲು ಗೊಬ್ಬರವಾಗಿ ಬಳಸಬಹುದು.

ಸಾವಯವವಾಗಿ ಕೀಟ ಮತ್ತು ರೋಗಗಳ ನಿರ್ವಹಣೆ:

 1. ತಾರಸಿ ತೋಟದ ಕುಂಡಗಳು ಸ್ವಚ್ಚವಾಗಿ ಮತ್ತು ಕಳೆ ಮುಕ್ತವಾಗಿರಬೇಕು.
 2. ತರಕಾರಿಗಳನ್ನು ಬೆಳೆಯುವಾಗ ಬೆಳೆ ಪರಿವರ್ತನೆಯನ್ನು ಅನುಸರಿಸಬೇಕು.
 3. ಚೆನ್ನಾಗಿ ಕಳಿತ ಕಾಂಪೋಸ್ಟ್/ ಎರೆಗೊಬ್ಬರಗಳನ್ನು ಉಪಯೋಗಿಸಬೇಕು.
 4. ತಾರಸಿ ತೋಟದಲ್ಲಿ ನೀರಾಯಿಸಿದಾಗ ನೀರು ವ್ಯವಸ್ಥಿವಾಗಿ ಬಸಿದು ಹೋಗುವಂತೆ ಇರಬೇಕು.
 5. ಬೆಳೆಗಳನ್ನು ತುಂಬಾ ಒತ್ತಾಗಿ ಬಿತ್ತನೆ/ ನಾಟಿ ಮಾಡದೆ ಬೆಳೆಗೆ ತಕ್ಕಂತೆ ಅಂತರವನ್ನು ನೀಡಬೇಕು.
 6. ತಾರಸಿ ತೋಟದಲ್ಲಿ ಉಪಯೋಗಿಸುವ ಮಣ್ಣನ್ನು ಬಿಸಿಲಿಗೆ ಹರಡಿ ಚೆನ್ನಾಗಿ ಒಣಗಿದ ನಂತರ ಉಪಯೋಗಿಸಬೇಕು.
 7. ನಾಟಿ ಮಾಡಿದ 20 ದಿನಗಳ ನಂತರ ಶೇ. 4 ರ ಬೇವಿನ ಬೀಜದ ರಸ ಅಥವ ಹೊಂಗೆ/ ಬೇವಿನ ಸೋಪ್ (1 ಲೀ. ನೀರಿಗೆ 10 ಗ್ರಾಂ ಹಾಕಿ) ಸಿಂಪಡಿಸಿದರೆ ಹೇನು ಹಾಗೂ ಇತರ ಪೀಡೆಗಳನ್ನು ನಿಯಂತ್ರಿಸಬಹುದು.
 8. ಗೆದ್ದಲು ಹುಳುಗಳು- ಎಕ್ಕದ ಎಲೆಗಳನ್ನು 24 ಗಂಟೆಗಳ ಕಾಲ ನೀರಿನಲ್ಲಿ ನೆನಸಿ ಶೋಧಿಸಿದ ಸಾರದಿಂದ ಗೆದ್ದಲು ಹುಳಗಳನ್ನು ನಿಯಂತ್ರಿಸಬಹುದು.
 9. ನುಸಿ ಮತ್ತು ಹೇನು- 100 ಗ್ರಾಂ ಕೊತ್ತಂಬರಿ ಬೀಜಗಳನ್ನು ಪುಡಿ ಮಾಡಿ ಅರ್ಧ ಲೀಟರ್ ನೀರಿನಲ್ಲಿ 10 ನಿಮಿಷಗಳ ಕಾಲ ಕಾಯಿಸಿ ಶೋಧಿಸಿದ ದ್ರಾವಣಕ್ಕೆ 1 ಲೀ. ನೀರನ್ನು ಬೆರಸಿ ಸಿಂಪಡಿಸಬೇಕು.

ಹೆಚ್ಚುತ್ತಿರುವ ನಗರೀಕರಣದಿಂದಾಗಿ ಹಸಿರಿನ ಪರ್ಯಾವರಣದ ಅಂಶ ಕಡಿಮೆಯಾಗುತ್ತಿದೆ. ಪ್ರತಿ ಮನೆಯಲ್ಲೂ ಪ್ರತಿಷ್ಠಾಪಿಸಿ, ಆಮ್ಲಜನಕದ ತಾಣಗಳನ್ನಾಗಿ ಮಾಡುವುದು ಇಂದಿನ ಅನಿವಾರ್ಯತೆಯಾಗಿದೆ. ಪ್ರತಿ ನಾಗರಿಕನೂ ತನ್ನ ಮನೆಯಲ್ಲಿ ಬೇಕಾಗುವ ಹೂ ಹಣ್ಣು ತರಕಾರಿಗಳನ್ನು ಮನೆಯ ತಾರಸಿಯ ಮೇಲೆ ಬೆಳಸಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬೇಕು.

ಲೇಖನ: 1. ಕವನ. ಜಿ. ಬಿ. - ಸಹಾಯಕ ಪ್ರಾಧ್ಯಪಕರು, ಪುಷ್ಪ ಕೃಷಿ ಮತ್ತು ಉದ್ಯಾನ ವಿನ್ಯಾಸ, ತೋಟಗಾರಿಕೆ ಕಾಲೇಜು, ಮೂಡಿಗೆರೆ

2.ಪವಿತ್ರ, ಎಸ್ - ಸಹಾಯಕ ಪ್ರಾಧ್ಯಪಕರು, ಹಣ್ಣಿನ ವಿಭಾಗ, ತೋಟಗಾರಿಕೆ ಕಾಲೇಜು, ಮೂಡಿಗೆರೆ

3.ಬೃಂದಾ ಕುಮಾರಿ, ಎಂ. ಎಸ್., ಕೀಟಶಾಸ್ತ್ರ ವಿಭಾಗ, ತೋಟಗಾರಿಕೆ ಕಾಲೇಜು, ಮೂಡಿಗೆರೆ

Published On: 03 January 2021, 08:54 PM English Summary: grow vegetable at home

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.