ದ್ರಾಕ್ಷಿ ಬೆಳೆಯುವ ರೈತರು ಚಳಿಗಾಲದಲ್ಲಿ ತೋಟಗಾರಿಕೆಯಿಂದ ನೀಡಲಾದ ಈ ಕೆಳಕಂಡ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು (ರಾ.ವ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ದ್ರಾಕ್ಷಿ ಬೆಳೆಯಲ್ಲಿ ಬೂದಿರೋಗ ಕಂಡು ಬಂದಿದ್ದು, ಇದು ಶಿಲಿಂದ್ರದಿಂದ ಬರುವ ಚಳಿಗಾಲದ ರೋಗವಾಗಿದೆ. ಎಲೆ, ಕಾಂಡ, ಹೂವು ಮತ್ತು ಹಣ್ಣುಗಳ ಮೇಲೆ ಕಂದುಬಣ್ಣದ ಮಚ್ಚೆಗಳು ಕಂಡು ಬಂದು ರೋಗಗ್ರಸ್ತ ಎಲೆಗಳು ಉದುರುವುದಲ್ಲದೇ, ಸಣ್ಣದ್ರಾಕ್ಷಿ ಹಣ್ಣುಗಳು ಬಿರುಸಾಗಿ ಒಣಗಿ ಸೀಳುತ್ತವೆ. ಹಣ್ಣುಗಳು ಸರಿಯಾಗಿ ಮಾಗದೆ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ. ಈ ರೋಗದ ಲಕ್ಷಣ ಕಂಡು ಬಂದಲ್ಲಿ ರೈತರು ತಕ್ಷಣವಾಗಿ ಮೊದಲು ಅಂತರವ್ಯಾಪ್ತಿ ಶಿಲಿಂದ್ರ ನಾಶಕಗಳಾದಂತ ಟ್ರೈಡಿಮಿಪಾನ (2 ಗ್ರಾಂ.) ಅಥವಾ ಮೈಕೋಬ್ಯುಟಾನಿಲ್ (1 ಗ್ರಾಂ.) ಅಥವಾ ಅಜೋಕ್ಸಿಸ್ಟ್ರೊಬಿನ್ (1 ಗ್ರಾಂ.) ನ್ನು ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪರಣೆ ಮಾಡಬೇಕು. ಆಮೇಲೆ ನಂತರದ ದಿನಗಳಲ್ಲಿ ಸಂಪರ್ಕ ಶಿಲಿಂಧ್ರ ನಾಶಕಗಳಾದ ಕರಗುವ ಗಂಧಕ (3 ಗ್ರಾಂ.) ಅಥವಾಥೈಯೋಫಿನೈಟ್ ಮಿಥೈಲ್ (1 ಗ್ರಾಂ.) ನ್ನು ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪರಣೆ ಮಾಡಬೇಕು.
ಶಲ್ಕ ಕೀಟ: ಸಾಮಾನ್ಯವಾಗಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಈ ಕೀಟಗಳು ಮೊಟ್ಟೆಯಿಂದ ಹೊರಬಂದು ಟೊಂಗೆಗಳ ಮೇಲೆ ಗುಂಪು-ಗುಂಪುಗಳಾಗಿ ರಸ ಹೀರುತ್ತಾ ಮೈಮೇಲೆ ಬಿಳಿ ಮೇಣವನ್ನು ಬೆಳೆಸಿಕೊಳ್ಳುತ್ತವೆ. ಈ ಕೀಟಗಳು ಎಲೆ, ಕಾಂಡ ಮತ್ತು ಟೊಂಗೆಗಳ ಮೇಲೆ ವಿಸರ್ಜಿಸಿದ ದ್ರವರೂಪದ ಅಂಟು ಪದಾರ್ಥದ ಮೇಲೆ ಕಪ್ಪು ಶಿಲಿಂದ್ರ ಬೆಳೆದು ಟೊಂಗೆಗಳು ಒಣಗುತ್ತವೆ ಹಾಗೂ ಹೂವು ಕಾಯಿಗಳು ಕೂಡಾ ಉದುರುತ್ತವೆ. ಇದರ ನಿರ್ವಹಣೆಗಾಗಿ ರೈತರು ಕೀಟಭಾದಿತ ಟೊಂಗೆಗಳನ್ನು ಕತ್ತರಿಸಿ ಕೀಟಗಳ ಸಮೇತ ಸುಡಬೇಕು. ಈ ಕೀಟಗಳ ನಿಯಂತ್ರಣಕ್ಕಾಗಿ ಡೈಕ್ಲೊರೋವಾಸ (2ಮೀ.ಲಿ.) ಅಥವಾ ಡೈಮಿಥೊಯೆಟ (1.7ಮೀ.ಲಿ.) ಅಥವಾ ಫಾಸ್ಪೊಮಿಡಾನ (0.5 ಮೀ.ಲಿ.) ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಯಿಸಿ ಹತ್ತು ದಿನಗಳ ಅಂತರದಲ್ಲಿ 3 ರಿಂದ 4 ಬಾರಿ ಸಿಂಪರಣೆ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ನಗರದ ಐವಾನ್ ಶಾಹಿ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆ ವಿಷಯ ತಜ್ಞರಾದ (ಹಾರ್ಟಿ ಕ್ಲಿನಿಕ್) ಮಂಜುನಾಥ ಪಾಟೀಲ ಇವರ ಮೊಬೈಲ್ ಸಂಖ್ಯೆ 7259984026ಗೆ ಸಂಪರ್ಕಿಸಲು ಕೋರಲಾಗಿದೆ.
Share your comments