1. ಅಗ್ರಿಪಿಡಿಯಾ

ಜೂನ್-ಜುಲೈ ತಿಂಗಳ ಅವಧಿಯಲ್ಲಿ ಬಿತ್ತನೆ ಮಾಡಬಹುದಾದ ಬೆಳೆಗಳ ಮಾಹಿತಿ ಇಲ್ಲಿದೆ...

ಕೃಷಿ ಒಂದು ವಿಜ್ಞಾನ. ವಾತಾವರಣ, ಹವಾಗುಣ, ಮಣ್ಣು, ಮಳೆ, ಬಿಸಿಲು, ಮಂಜು ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ, ತಾಳೆಹಾಕಿದ ನಂತರವೇ ಯಾವ ಬೆಳೆ ಬೆಳೆಯಬೇಕು ಎಂದು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ಪ್ರತಿಯೊಂದು ಬೆಳವಣಿಗೆ, ಬದಲಾವಣೆಗಳನ್ನೂ ಲೆಕ್ಕಾಚಾರ ಹಾಕಿ ನೋಡಬೇಕು. ಜೊತೆಗೆ ಮಣ್ಣು, ಪ್ರಕೃತಿಯೊಂದಿಗೆ ರೈತ ಭಾವನಾತ್ಮಕ ಬೆಸುಗೆ ಹೊಂದಿರಬೇಕು. ಹವಾಮಾನ ವೈಪರೀತ್ಯ, ಬದಲಾವಣೆಯ ಲಕ್ಷಣಗಳು, ಸೂಚನೆಗಳನ್ನು ಅರಿತಿರಬೇಕು. ಹೀಗಿದ್ದಾಗ ಮಾತ್ರ ಪ್ರಕೃತಿಯ ಕೆಂಗಣ್ಣಿಗೆ ಗುರಿಯಾಗದೆ, ತಮ್ಮ ಭೂಮಿಗೆ ಮತ್ತು ಆಯಾ ತಿಂಗಳು ಹಾಗೂ ರುತುವಿಗೆ ಹೊಂದಿಕೊಳ್ಳುವ ಬೆಳೆಯಯನ್ನು ಬೆಳೆಯಲು ಸಾಧ್ಯವಾಗುತ್ತದೆ.

ಜಗತ್ತಿನಲ್ಲಿ ಬೆಳೆಯಲಾಗುವ ಬಹುತೇಕ ಎಲ್ಲ ಬೆಳೆಗಳನ್ನೂ ಭಾರತದಲ್ಲಿ ಬೆಳೆಯಲಾಗುತ್ತದೆ. ಇದಕ್ಕೆ ಕಾರಣ ಇಲ್ಲಿನ ಮಣ್ಣು ಹಾಗೂ ಹವಾಗುಣ. ಹೀಗಾಗಿ ನಮ್ಮಲ್ಲಿ ರೈತರಿಗೆ ಬಹಳಷ್ಟು ಬೆಳೆಗಳನ್ನು ಬೆಳೆಯಯಲು ಅವಕಾಶವಿದೆ. ಅಲ್ಲದೆ ಚಾಣಾಕ್ಷ ಕೃಷಿಕರು ಯಾವ ಸಮಯದಲ್ಲಿ ಯಾವ ಬೆಳೆ ಬಿತ್ತನೆ ಮಾಡಬೇಕು? ಯಾವ ತರಕಾರಿ ಬೆಳೆಯಬೇಕು ಎಂದು ಲೆಕ್ಕಾಚಾರ ಹಾಕಿದ ನಂತರವೇ ಬೆಳೆ ಬೆಳೆಯಲು ಸಿದ್ಧತೆ ಮಾಡಿಕೊಳ್ಳುತ್ತಾರೆ.

ಈಗ ಜೂನ್ ತಿಂಗಳು ಅರ್ಥ ಕಳೆದಿದೆ. ಇನ್ನೇನು ಕೆಲ ದಿನಗಳಲ್ಲಿ ತಿಂಗಳ ಕೊನೆ ಬರುತ್ತದೆ. ಜೊತೆಗೆ ಜುಲೈ ತಿಂಗಳು ಆರಂಭವಾಗುತ್ತದೆ. ಇದು ಉತ್ತಮ ಮಳೆ ಬೀಳುವ ಸಮಯ. ಜೂನ್ ಅಂತ್ಯ ಮತ್ತು ಜುಲೈ ಆರಂಭದ ಎರಡು ವಾರಗಳ ಕಾಲ ದೊಡ್ಡ ಮಳೆಗಳು ಬಿದ್ದು, ಕೃಷಿಗೆ ಅನುಕುಲಕರ ವಾತಾವರಣ ನಿರ್ಮಿಸಿಕೊಡುತ್ತವೆ. ಹೀಗಾಗಿ ಈ ಅವಧಿಯಲ್ಲಿ ಮಳೆಗೆ ಹೊಂದಿಕೊAಡು, ಹೆಚ್ಚು ನೀರುಂಡರೂ ಸಹಿಸಿಕೊಂಡು ಬೆಳೆಯುವ ಸಾಮರ್ಥ್ಯವಿರುವ ತರಕಾರಿ ಬೆಳೆಗಳನ್ನು ಬೆಳೆಯಬೇಕು.

ಕರ್ನಾಟಕದಲ್ಲಿ ಜೂನ್ ಮತ್ತು ಜುಲೈ ಮಾಸಗಳಲ್ಲಿ ಸಾಮಾನ್ಯವಾಗಿ ಟೊಮೇಟೊ, ಬದನೆ, ಬೆಂಡೆಕಾಯಿ, ಹಸಿ ಮೆಣಸಿನಕಾಯಿ, ಕುಂಬಳಕಾಯಿ, ಸೋರೆಕಾಯಿ, ಸೌತೆಕಾಯಿ, ಈರುಳ್ಳಿ, ವಿವಿಧ ಸೊಪ್ಪು ಹಾಗೂ ಆಹಾರ ಧಾನ್ಯಗಳ ಪೈಕಿ ನವಣೆ ಮತ್ತು ಹಲಸಂದಿ ಬೆಳೆ ಬಿತ್ತನೆ ಮಾಡಲು ಸೂಕ್ತ ಸಮಯವಾಗಿದೆ. ಹೀಗಾಗಿ ಈ ಪೈಕೆ ಕೆಲವು ಬೆಳೆಗಳ ಬೇಸಾಯದ ಕುರಿತು ಕೃಷಿ ತಜ್ಞ ಡಾ.ರಮೇಶ ಹಿಪ್ಪರಗಿ ಅವರು ‘ಕೃಷಿ ಜಾಗರಣ’ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಟೊಮೇಟೊ

ಕರ್ನಾಟಕದಲ್ಲಿ ಅತಿ ಹೆಚ್ಚು ಬೆಳೆಯುವ ತರಕಾರಿ ಟೊಮೇಟೊ. ಹಾಗೇ ಹೆಚ್ಚು ಜನ ಸೇವಿಸುವ ಹಾಗೂ ಹೆಚ್ಚಿನ ರೈತರು ನಷ್ಟ ಅನುಭವಿಸುವಂತೆ ಮಾಡುವ ತರಕಾರಿ ಕೂಡ ಇದುವೇ. ಮಳೆ ಹಾಗೂ ಶೀತದ ವಾತಾವರಣದಲ್ಲಿ ಸೊಗಸಾಗಿ ಬೆಳೆಯಬಲ್ಲ ಟೊಮೇಟೊಗೆ ‘ಸೊಲ್ಯಾನಮ್ ಲೈಕೋಪರ್ಸಿಕಮ್’ ಎಂಬ ವೈಜ್ಞಾನಿಕ ಹೆಸರಿದೆ. ಕನ್ನಡದಲ್ಲಿ ಗೂರೆ ಹಣ್ಣು ಎಂದರೆ ಯಾರಿಗೂ ಅರ್ಥವಾಗುವುದಿಲ್ಲ. ಆದ್ದರಿಂದ ಕನ್ನಡದಲ್ಲೂ ಇದರ ಹೆಸರು ಟೊಮೇಟೊವೇ ಆಗಿದೆ. ಕನಿಷ್ಠ 25 ದಿನಗಳ ಕಾಲ ಬೆಳೆಸಿದ ಟೊಮೇಟೊ ಸಸಿಗಳನ್ನು ತಂದು ಸಾಲಿನಿಂದ ಸಾಲಿಗೆ ನಾಲ್ಕು ಅಡಿ ಹಾಗೂ ಗಿಡದಿಂದ ಗಿಡಕ್ಕೆ ಎರಡು ಅಡಿ ಅಂತರವಿರುವAತೆ ನಾಟಿ ಮಾಡಬೇಕು. ಹೀಗೆ ಮಾಡಿದಾಗ ಒಂದು ಎಕರೆಯಲ್ಲಿ ಅಂದಾಜು 6 ಸಾವಿರ ಗಿಡಗಳನ್ನು ನಾಟಿ ಮಾಡಬಹುದು. ಸಸಿ ನೆಟ್ಟ ನಂತರ ಕೃಷಿ ತಜ್ಞರು ಸಲಹೆ ಮಾಡಿದ ರೀತಿಯಲ್ಲಿ, ಶಿಫಾರಸು ಮಾಡಿದ ಅವಧಿಯಲ್ಲಿ ಗೊಬ್ಬರ, ಔಷಧ ನೀಡಬೇಕು (ಸಾಮಾನ್ಯವಾಗಿ ತಿಂಗಳಿಗೊಮ್ಮೆ).

ಬದನೆ ಕಾಯಿ

ಸೋಲನೆಸೆ ಕುಟುಂಬಕ್ಕೆ ಸೇರಿರುವ ಬದನೆ, ಸಾಮಾನ್ಯವಾಗಿ ಎಲ್ಲ ಹವಾಗುಣಗಳಲ್ಲಿ ಬೆಳೆಯುತ್ತದೆ. ಆದರೆ, ಇದು ಹಿಮವನ್ನು ಸಹಿಸಿಕೊಳ್ಳುವುದಿಲ್ಲ. ಆದ್ದರಿಂದ ಚಳಿಗಾಲ ಆರಂಭಕ್ಕೆ ಮುನ್ನವೇ ಬದನೆ ಬೆಳೆಯಬೇಕು. ಜೊತೆಗೆ ಜೌಗು ಮಣ್ಣು ಬಿಟ್ಟು ಬೇರೆ ವಿಧದ ಮಣ್ಣುಗಳಿಗೆ ಇದು ಸೂಕ್ತ ಬೆಳೆಯಾಗಿದೆ. ಒಟ್ಲುಪಾತಿಯಲ್ಲಿ ಬದನೆ ಬೀಜ ಚೆಲ್ಲಿ ಸಸಿಗಳನ್ನು ಬೆಳೆಸಿ, ನಂತರ ನಾಟಿ ಮಾಡಬೇಕು. ಎತ್ತರಿಸಿದ ಒಟ್ಲುಪಾತಿಗಳಲ್ಲಿ ಬಿತ್ತುವುದರಿಂದ ಗಿಡಗಳು ಹುಲುಸಾಗಿ ಬೆಳೆಯುತ್ತವೆ. ಸಸಿ ಮಡಿಯಲ್ಲಿ 6 ವಾರಗಳ ಕಾಲ ಬೆಳೆಸಿದ ಸಸಿಗಳು ನಾಟಿ ಮಾಡಲು ಯೋಗ್ಯವಾಗಿರುತ್ತವೆ. ಒಂಟಿ ಸಾಲು ವಿಧಾನದಲ್ಲಿ ಸಾಲಿನಿಂದ ಸಾಲಿಗೆ 1 ಮೀಟರ್, ಸಸ್ಯದಿಂದ ಸಸ್ಯಕ್ಕೆ 0.3 ಮೀ. ಅಂತರದಲ್ಲಿ ನಾಟಿ ಮಾಡಬೇಕು. ಗುಂಡಿ ವಿಧಾನದಲ್ಲಿ 1 ಮೀಟರ್ ಅಂತರದಲ್ಲಿ ಅಗಲವಾದ ಗುಂಡಿಗಳನ್ನು ತೆಗೆದು, 0.5 ಮೀಟರಿಗೆ ಒಂದರAತೆ ಬದನೆ ಸಸಿ ನೆಡಬೇಕು.

ಬೆಂಡೆ ಕಾಯಿ

ಸಿ ಜೀವಸತ್ವದ ಆಕರವಾಗಿರುವ ಬೆಂಡೆ ಕಾಯಿ ಕರ್ನಾಟಕದ ಪ್ರಮುಖ ತರಕಾರಿ ಬೆಳೆಗಳಲ್ಲಿ ಒಂದು. ಬುದ್ಧಿ ಚುರುಕಾಗಿಸುವ ಬಬೆಂಡೆಕಾಯಿ ಬೆಳೆಯನ್ನು ಎಲ್ಲ ವಿಧದ ಮಣ್ಣಿನಲ್ಲೂ ಬೆಳೆಯಬಹುದು. ಬೆಂಡೆ ಕೃಷಿಯಲ್ಲಿ ಮೊದಲು ಬಿತ್ತನೆ ಮಾಡಲು ಭೂಮಿ ಸಿದ್ಧಮಾಡಿ 60 ಸೆಂ.ಮೀ. ಅಂತರದಲ್ಲಿ ತಗ್ಗು ಮತ್ತು ದಿನ್ನೆಗಳನ್ನು ಮಾಡಿ, ಸಾವಯವ ಗೊಬ್ಬರ ಮತ್ತು ಶೇ.50ರಷ್ಟು ಸಾರಜನಕ ಹಾಗೂ ಪೂರ್ಣ ಪ್ರಮಾಣದ ರಂಜಕ ಮತ್ತು ಪೊಟ್ಯಾಷ್ ಅನ್ನು ಮಣ್ಣಿನಲ್ಲಿ ಸೇರಿಸಬೇಕು. ಬಿತ್ತನೆಗೆ ಮುನ್ನ ಬೀಜವನ್ನು 15 ತಾಸು ನೀರಿನಲ್ಲಿ ನೆನೆಸಿಟ್ಟರೆ ಚೆನ್ನಾಗಿ ಮೊಳಕೆ ಬರುತ್ತದೆ. ಬಳಿಕ ಪರಸ್ಪರ 30 ಸೆಂ.ಮೀ. ಅಂತರದಲ್ಲಿ ಬೀಜ ಬಿತ್ತಬೇಕು. ಬಿತ್ತಿದ ನಾಲ್ಕು ವಾರಗಳ ನಂತರ ಉಳಿದ ಶೇ.50ರಷ್ಟು ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಡಬೇಕು.

ಹಸಿ ಮೆಣಸಿನಕಾಯಿ

ನೀರು ನಿಲ್ಲದೆ ಸರಾಗವಾಗಿ ಹರಿದು ಹೋಗುವ ಗೋಡು ಮಣ್ಣಿನಲ್ಲಿ ಸಮೃದ್ಧವಾಗಿ ಬೆಳೆಯುವ ಮೆಣಸಿನಕಾಯಿ, ಸಮಶೀತೋಷ್ಣ ವಲಯಗಳಲ್ಲಿ ಬೆಳೆಯುವ ಬೆಳೆಯಾಗಿದೆ. ಮಳೆಯಾಶ್ರಿತ ಭೂಮಿಗಳಲ್ಲಿ ಬಿತ್ತನೆ ಮಾಡಲು ಮೇ-ಜೂನ್ ಸೂಕ್ತ ಸಮಯವಾಗಿದೆ. ಒಂದು ಎಕರೆಗೆ 1250 ಗ್ರಾಂ. ಮೆಣಸಿನ ಬೀಜಗಳು ಬೇಕಾಗಲಿದ್ದು, 20 ಟನ್ ಕೊಟ್ಟಿಗೆ ಗೊಬ್ಬರ, 100-150 ಕೆ.ಜಿ ಸಾರಜನಕ, 50-75 ಕೆ.ಜಿ ರಂಜಕ ಮತ್ತು 50-75 ಕೆ.ಜಿ ಪೊಟ್ಯಾಷ್ ಅಗತ್ಯ ಬೀಳುತ್ತದೆ. ಸಮತಟ್ಟಾದ ಸ್ಥಳದಲ್ಲಿ ಸಸಿ ಮಡಿ ಸಿದ್ಧಪಡಿಸಿ, ಬೀಜಗಳನ್ನು ಚೆಲ್ಲಿ, 4ರಿಂದ 6 ವಾರ ಬೆಳೆಸಿದ ಸಸಿಗಳನ್ನು ನಾಟಿ ಮಾಡಬಹುದು.

ಈರುಳ್ಳಿ

ಈರುಳ್ಳಿಯು ವರ್ಷದ ಎಲ್ಲ ಅವಧಿಯಲ್ಲೂ ಬೆಳೆಯಬಹುದ ಬೆಳೆ. ಸಾಮಾನ್ಯವಾಗಿ ಬೆಳೆ ಪ್ರಾರಂಭಿಸಲು ಜೂನ್-ಜುಲೈ ಸೂಕ್ತ ಕಾಲ ಎಂಬುದು ತಜ್ಞರ ಸಲಹೆ. ವಿವಿಧ ಬಗೆಯ ಮಣ್ಣುಗಳಲ್ಲಿ ಈರುಳ್ಳಿಯನ್ನು ಬೆಳೆಯಬಹುದಾಗಿದ್ದು, ನಿರು ಬಸಿದು ಹೋಗಲು ಅವಕಾಶ ನೀಡುವ ಮರಳು ಮಿಶ್ರಿತ ಗೋಡು ಮಣ್ಣು ಸೂಕ್ತ. ಸೂಕ್ತ ಮಣ್ಣಿರುವ ಸ್ಥಳದಲ್ಲಿ ನೀವು ಬೆಳೆಯುವ ಪ್ರದೇಶಕ್ಕೆ ಅನುಗುಣವಾಗಿ ಸಸಿ ಮಡಿ ಸಿದ್ಧಪಡಿಸಿ, ಅಗತ್ಯ ಪ್ರಮಾಣದ ಕೊಟ್ಟಿಗೆ ಗೊಬ್ಬರ ಮತ್ತು 15:15:15 ಸಂಯುಕ್ತ ರಾಸಾಯನಿಕ ಗೊಬ್ಬರವನ್ನು ಮಣ್ಣಿನಲ್ಲಿ ಬೆರೆಸಬೇಕು. ನಂತರ ಬಿತ್ತನೆ ಬೀಜವನ್ನು 7.5 ಸೆಂ.ಮೀ. ಅಂತರದ ಸಾಲುಗಳಲ್ಲಿ ಬಿತ್ತಿ, ತಕ್ಷಣ ಮಡಿಗಳಿಗೆ ನೀರುಣಿಸಬೇಕು. ಹೀಗೆ ಮಾಡಿದ ಸಸಿಗಳು 6-8 ವಾರಗಳಲ್ಲಿ ನಾಟಿ ಮಾಡಲು ಸಿದ್ಧವಾಗುತ್ತವೆ.

Published On: 19 June 2021, 09:26 PM English Summary: crops to grow in the month of june-july

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.