1. ಅಗ್ರಿಪಿಡಿಯಾ

ಅಕ್ಕಡಿ ಬೆಳೆ ಪದ್ಧತಿ ಅನುಸಿರಿಸಿದರೆ ಇವೆ ಹಲವಾರು ಅನುಕೂಲಗಳು

ರೈತರ ಆತ್ಮಹತ್ಯೆಯು ಕೃಷಿ ಕ್ಷೇತ್ರದಲ್ಲಿನ ಅತ್ಯಂತ ಪ್ರಮುಖವಾದ ಸವಾಲಾಗಿದೆ. ಇದಕ್ಕೆಲ್ಲ ಕಾರಣ ಸಾಲ, ಸಾಲವೆಂಬ ವಿಷವರ್ತುಲ, ಅವೈಜ್ಞಾನಿಕ ಕೃಷಿ ಪದ್ಧತಿಗಳು, ಬದುಕಿನ ದೃಷ್ಟಿಕೋನ ಹೀಗೆ ಹೇಳುತ್ತಾ ಹೋದರೆ ಪುಟಗಳು ತುಂಬುತ್ತವೆ ಪೆನ್ನಿನ ಶಾಹಿ ಮುಗಿಯುತ್ತದೆ. ಹಾಗಾಗಿ ಮತ್ತೆ ನಾವೆಲ್ಲಾ ಹಿಂದಿನ ಕೃಷಿಗೆ ಮರಳಬೇಕಾದ ಅನಿವಾರ್ಯತೆ ಮತ್ತು ತುರ್ತಿದೆ. ಹಿಂದೆ ಬಹುತೇಕ ಮಳೆಯಾಶ್ರಿತ ಬೇಸಾಯವೇ ಪ್ರಮುಖವಾಗಿತ್ತು. ಮಳೆಯಾಶ್ರಿತ ಬೇಸಾಯದಲ್ಲಿ ಮುಖ್ಯ ಆಹಾರ ಬೆಳೆಗಳ ಜೊತೆ ಪೂರಕ ಆಹಾರ ಬೆಳೆಗಳನ್ನು ಬೆಳೆಯುವುದು ಸಂಪ್ರದಾಯಿಕ ಕೃಷಿಯ ಒಂದು ಭಾಗವಾಗಿದೆ. ಹೊಲದಲ್ಲಿ ಮುಖ್ಯ ಬೆಳೆಗಳ ಮಧ್ಯೆ ಅಕ್ಕಡಿ ಬೆಳೆಗಳನ್ನು ಸಹ ಬೆಳೆಯಲಾಗುತ್ತದೆ. ನಮ್ಮ ಭಾಗದಲ್ಲಿ, ಅಂದರೆ ತುಮಕೂರು-ಸಿರಾ ಭಾಗದಲ್ಲಿ ಶೇಂಗಾ, ರಾಗಿಯನ್ನು ಮುಖ್ಯ ಬೆಳೆಯಾಗಿ ಬೆಳೆಯುತ್ತಾರೆ.

ಹಲವು ವರ್ಷಗಳ ಹಿಂದೆ 9 ಅಥವ 10 ಸಾಲುಗಳಲ್ಲಿ ರಾಗಿ ಅಥವಾ ಶೇಂಗಾ ಬಿತ್ತನೆ ಮಾಡಿ, 10 ಅಥವ 11 ನೇ ಸಾಲಿನಲ್ಲಿ ಅಕ್ಕಡಿ ಬೆಳೆಗಳನ್ನು ಹಾಕಲಾಗುತ್ತಿತ್ತು. ಈಗ 8ರಿಂದ 9 ಸಾಲಿನ ಅಂತರದಲ್ಲಿ ಅಕ್ಕಡಿ ಸಾಲಿನ ಬೀಜಗಳನ್ನು ಬಿತ್ತನೆ ಮಾಡುತ್ತಿದ್ದಾರೆ. ಹಿಂದಿಗಿಂತ ಈಗ ಅಕ್ಕಡಿ ಸಾಲುಗಳ ಅಂತರ ಕಡಿಮೆಯಾಗಲು ಕಾರಣವೆಂದರೆ, ಹಿಂದೆ ಕಳೆ ತೆಗೆಯುವಾಗ, ಕೊಯ್ಲು ಮಾಡುವಾಗ ಇಬ್ಬರು, ಒಂದು ಅಕ್ಕಡಿಯಲ್ಲಿ ಕೆಲಸ ಮಾಡುತ್ತಿದ್ದರು. ಈಗ ಅಷ್ಟು ಶ್ರಮಪಟ್ಟು ಕೆಲಸ ಮಾಡಲು ಕಷ್ಟವಾಗಿರುವ ಕಾಲದಲ್ಲಿ ಸಣ್ಣ ಸಣ್ಣ ಸಾಲಗಳಲ್ಲಿ ಕಡಿಮೆ ಕೆಲಸ ಮಾಡುವ ಶಕ್ತಿ ಮಾತ್ರವಿದೆ.

ಮಳೆಯಾಶ್ರಿತ ಕೃಷಿಯಲ್ಲಿ ರಾಗಿ ಜೊತೆ ಸಾಸಿವೆ, ಶೇಂಗಾ ಜೊತೆ ಹರಳು, ತೊಗರಿಯನ್ನು ಮಿಶ್ರಣ ಮಾಡಿ ಹಾಕುವುದು ವಾಡಿಕೆ. ನಮ್ಮಲ್ಲಿ ಶೇಂಗಾ, ರಾಗಿ ಬೆಳೆಗಳ  ಜೊತೆ ಈ ಕೆಳಗಿನ ಅಕ್ಕಡಿ ಸಾಲುಗಳಲ್ಲಿ ದ್ವಿದಳ, ಏಕದಳ ಬೆಳೆಗಳನ್ನು ಹಾಕುತ್ತಾರೆ. ಜೊತೆಗೆ ಬದುಗಳ ಮೇಲೆ ಹರಳು ಹಾಕುತ್ತಾರೆ. ಇದರಿಂದ ಪಕ್ಷಿಗಳು ಬೆಳೆಗಳಲ್ಲಿನ ಹುಳುಗಳನ್ನು ತಿನ್ನಲು ಬಂದಾಗ ಹರಳು ಗಿಡದ ಮೇಲೆ  ಕುಳಿತುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಅಲ್ಲದೆ ಪಕ್ಕದ ಹೊಲಗಳಿಂದ ಬರುವ ರೋಗರುಜಿನೆಗಳನ್ನು ನಿಯಂತ್ರಣ ಮಾಡುತ್ತದೆ. ಬದುವಿನ ಕಡೆ ಹುಚ್ಚಳ್ಳನ್ನು ಬಿತ್ತುತ್ತಾರೆ, ಇವುಗಳು ಹುಳುಗಳನ್ನು ಕೀಟಗಳನ್ನು ಆಕರ್ಷಣೆ ಮಾಡಲು ಸಹಾಯಕವಾಗಿದೆ.  ಹೆಚ್ಚು ಹೆಚ್ಚು ಜೇನುಹುಳುಗಳು ಬರುವುದರಿಂದ ಬೇರೆ ಬೆಳೆಗಳಲ್ಲಿ ಪರಾಗಸ್ಪರ್ಶವು ಸ್ವಾಭಾವಿಕವಾಗಿ ಆಗುವಂತೆ ಮಾಡುತ್ತದೆ ಈ ಹುಚ್ಚಳ್ಳು. (ಆದರೆ ಈ ಏಕಬೆಳೆ ಪದ್ಧತಿಯಿಂದ ಅಕ್ಕಡಿ ಬೆಳೆ ಪದ್ಧತಿಯನ್ನು ಹಾಳುಗೆಡವಿ ಹಳದಿ ಹೂವುಗಳ ಬದಲು ಹಳದಿ ಬೋರ್ಡ್ ನೆಡುವಂತೆ ಮಾಡಿದ್ದಾರೆ). ಈ ಎಣ್ಣೆಕಾಳುಗಳಿಂದ ತಲೆಗೆ ಹಚ್ಚಿಕೊಳ್ಳಲು, ಔಷಧಿಯಾಗಿ, ದೀಪಕ್ಕೆ ಎಣ್ಣೆಯಾಗಿ ಬಳಸಿಕೊಳ್ಳಬಹುದು. 

ಬದುಗಳ ಕಡೆ ಜೋಳ ಹರಳನ್ನು ಹಾಕುವುದರಿಂದ ದನಕರುಗಳು ಸುಲಭವಾಗಿ ಹೊಲಕ್ಕೆ ನುಗ್ಗದಂತೆ ನಿಯಂತ್ರಣ ಮಾಡುವುದಕ್ಕೆ ಉಪಯುಕ್ತವಾಗಿದೆ. ಅಕ್ಕಡಿ ಸಾಲುಗಳಲ್ಲಿ ಜೋಳದ ವೈವಿಧ್ಯತೆ ತಳಿಗಳಾದ ಬಿಳಿಜೋಳ, ಹೊಂಬಾಳೆ ಜೋಳ, ಕೆಂಪು ಜೋಳ, ಸಿತ್ತೆಜೋಳಗಳನ್ನು ಹಾಕುತ್ತಾರೆ. ಅದರ ಜೊತೆ ಸಜ್ಜೆಯನ್ನು ಸಹ ಹಾಕುತ್ತಾರೆ. ಜೋಳದ ಕಡ್ಡಿಯು ದನಕರುಗಳಿಗೆ ಮೇವಾದರೆ ಮನುಷ್ಯರ ಆಹಾರಕ್ಕೆ ಕಾಳು ಆಗುತ್ತದೆ. ಅಕ್ಕಡಿ ಸಾಲಿನಲ್ಲಿ ಬಹಳ ಮುಖ್ಯವಾಗಿ ದ್ವಿದಳ ಧಾನ್ಯಗಳಾದ ಅಲಸಂದೆ, ತೊಗರಿ, ಅವರೆ, ಹೆಸರುಕಾಳು, ಉದ್ದು, ಬೆಂಡೆ, ಹುರುಳಿ ಕಾಳುಗಳನ್ನು ಸಹ ಬಿತ್ತನೆ ಮಾಡಲಾಗುತ್ತದೆ. ಇವುಗಳಿಂದ ಸಮತೋಲನ ಆಹಾರ ಪೂರೈಸುವ ಭಾಗವಾಗಿ ಕಾಳುಗಳು ಸಿಗುತ್ತವೆ. ಸಾರು, ಪಲ್ಯಕ್ಕೆ, ಹಪ್ಪಳ ಮಾಡುವುದಕ್ಕೆ, ಚಿಕ್ಕುಲಿ ಮಾಡುವುದಕ್ಕೆ ಈ ಕಾಳುಗಳ ಪಾತ್ರ ಬಹಳ ಮುಖ್ಯವಾಗಿದೆ. ಅಲ್ಲದೆ ಮುಖ್ಯ ಬೆಳೆಗಳಿಗೆ ಬೇಕಾದ ಸಾರಜನಕವನ್ನು ಒದಗಿಸುವುದಲ್ಲಿ ಅಕ್ಕಡಿ ಸಾಲಿನ ಕಾಳಿನ ಬೆಳೆಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಕೆಲವು ಭಾಗಗಳಲ್ಲಿ ಬೆಂಡೆ, ಪುಂಡಿ ಬೀಜಗಳನ್ನು ಸಹ ಬಿತ್ತನೆ ಮಾಡಲಾಗುತ್ತಿದೆ. ಇದರಿಂದ ಕೊಯ್ಲು ಸಮಯದಲ್ಲಿ ಒಂದಾದ ನಂತರ ಒಂದರಂತೆ ಕೊಯ್ಲು ಮಾಡುವ ಕೆಲಸವೂ ಸಹ ಸಿಕ್ಕಂತೆ ಆಗುತ್ತದೆ.

ಕೆಲವು ವರ್ಷಗಳ ಹಿಂದೆ ಅಂದರೆ ನಾವುಗಳು ಪ್ರಾಥಮಿಕ, ಪ್ರೌಢಶಾಲೆಗೆ ಹೋಗುವ ಸಮಯದಲ್ಲಿ ಮಹಾನವಮಿ ಹಬ್ಬ ಎಂದರೆ ನೆನಪಿಗೆ ಬರುತ್ತಿದೆ! ದಿಣ್ಣೆಯಲ್ಲಿ ಮೆಣಸಿನ ಸಸಿ ಸಾಲಿನ ನಡು ನಡುವೆ ಹಾಕಿದ್ದ ತರಕಾರಿಗಳು. ಆ ಹಬ್ಬದಲ್ಲಿ ಮಾಡುತ್ತಿದ್ದ ಪಲ್ಯ, ಸಾರಿನಲ್ಲಿ ದಿಣ್ಣೆಯಲ್ಲಿ ಬೆಳೆದ ಆ ತರಕಾರಿಗಳೇ ಹೆಚ್ಚು. ಗೋರಿಕಾಯಿ, ಹುಳುಬಸಳೆ ಸೊಪ್ಪು, ಕೆಂಡದAತ ಮೆಣಸಿನ ಕಾಯಿ ಬೆಳೆಯಲಾಗುತ್ತಿತ್ತು. ಕೃಷಿ ಎಂದರೆ ಮನಸ್ಸಿಗೆ ಬಂದಾಗ ಮಾಡುವುದಲ್ಲ, ಹದವರಿತು ಮಾಡುವುದೇ ಕೃಷಿ ಆಗ ಸಿಗುವುದು ಖುಷಿ.

ಮೊನ್ನೆ ಒರ್ವ ರೈತ ಮಹಿಳೆಯ ಜೊತೆ ಮಾತನಾಡುತ್ತಾ ಇದ್ದಾಗ "ಕೆಂಡದಂತ ಮೆಣಸಿನಕಾಯಿಯನ್ನು ಬೆಳೆಯುತ್ತಿದ್ದೆವು ಈ ಸುಡುಗಾಡು ಗೊಬ್ಬರದ ಜೊತೆ ಹೈಬ್ರೀಡ್ ಬೀಜಗಳು ಬಂದು ಮಣ್ಣು, ನೀರು ಮತ್ತು ದನಕರ ಮತ್ತು ಎಲ್ಲರ ಆರೋಗ್ಯವನ್ನು ಹಾಳು ಮಾಡಿಬಿಡ್ತು" ಅಂತಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಹಿಂದೆಲ್ಲಾ ನಾಟಿ ಬೀಜಗಳಿಂದ ಯಾವುದೇ ಸಮಸ್ಯೆಗಳು ಬರುತ್ತಿರಲಿಲ್ಲ. ಈಗಿನ ಹೈಬ್ರೀಡ್ ಬೀಜಗಳನ್ನು ಹಾಕಿದರೆ ಹೆಚ್ಚು ಹುಳುಗಳು, ಕಾಯಿ ಕೊರಕ, ಎಲೆ ತಿನ್ನುವ ಹುಳು, ರಸ ಹೀರುವ ಹುಳುಗಳು ಉಲ್ಬಣವಾಗುತ್ತವೆ. ಆಗ ಔಷಧಿ ಸಿಂಪಡಣೆ ಕಡ್ಡಾಯ. ಇದರಿಂದ  ಬೀಜ ಕಂಪನಿ, ಔಷಧಿ ಕಂಪನಿಗಳಿಗೆ ಲಾಭವಾಗುತ್ತದೆ. ಸಿಂಪಡಣೆ ಮಾಡದಿದ್ದರೆ ಬೆಳೆ ಬಾರದೇ ರೈತರಿಗೆ ನಾಮವೇ ಕಡ್ಡಾಯವಾಗಿದೆ. ಒಟ್ಟಾರೆ ಬದುಕಿನಲ್ಲಿ ಉತ್ತಮ ಆರೋಗ್ಯಕ್ಕಾಗಿ ಹಿಂತಿರುಗಿ ಹೋಗಬೇಕಿದೆ. ನಾಟಿ ಬೀಜಗಳ ಸಂರಕ್ಷಣೆ ಮಾಡುವುದರ ಜೊತೆ ಅಕ್ಕಡಿ ಪದ್ಧತಿಯ ಮಹತ್ವವನ್ನು ಅರಿಯಬೇಕಿದೆ.

ಲೇಖಕರು: ಮಂಜುನಾಥ್ ಅಮಲಗೊಂದಿ, ಪರಿಸರ-ಸಮಾಜ ಕಾರ್ಯಕರ್ತರು

Published On: 22 July 2021, 01:59 PM English Summary: benefits of mixed crop system

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.