1. ಅಗ್ರಿಪಿಡಿಯಾ

ಕೃಷಿಯಲ್ಲಿ ಬೀಜಾಮೃತ ಬಳಕೆ: ಬೀಜೋಪಚಾರ ಮಾಡಿ ಗುಣಮಟ್ಟದ ಇಳುವರಿ ಪಡೆಯಿರಿ

Kalmesh T
Kalmesh T
Use of Beejamrutha in agriculture: Treat seeds and get quality yield

Beejamrutha : ಅದಕ್ಕಾಗಿ ರಾಸಾಯನಿಕಗಳ ಬದಲಾಗಿ ನೈಸರ್ಗಿಕವಾಗಿ ದೊರಕುವ ಕೃಷಿ ಮತ್ತು ದನಕರುಗಳ ತ್ಯಾಜ್ಯವನ್ನು ಬಳಸಿ ವಿವಿಧ ಸಾವಯವ ಗೊಬ್ಬರ ಹಾಗೂ ಪೀಡೆನಾಶಕಗಳನ್ನು ಬಳಸಬೇಕು. ಪ್ರಮುಖವಾಗಿ ಬೀಜಾಮೃತ, ಜೀವಾಮೃತ, ಅಮೃತಪಾನಿ ಮತ್ತು ಪಂಚಗವ್ಯ ಇತ್ಯಾದಿಗಳನ್ನು ಬಳಸಿ ಕೃಷಿಯಲ್ಲಿ ಖರ್ಚು ಕಡಿಮೆ ಮಾಡುವುದು ಹಾಗೂ ಗುಣಮಟ್ಟದ ಆಹಾರೋತ್ಪನ್ನ ಪಡೆಯುವುದು.

Beejamrutha in agriculture: ಸಸ್ಯರೋಗಗಳ ನಿಯಂತ್ರಣದಲ್ಲಿ ಜೈವಿಕ ವಿಧಾನಗಳ ಅಳವಡಿಕೆಯು ಶತಮಾನದ ಇತಿಹಾಸವನ್ನು ಹೊಂದಿದೆ. ರಾಸಾಯನಿಕ ಪೀಡೆನಾಶಕಗಳ ದುಷ್ಪರಿಣಾಮಗಳಿಂದ ಪರಿಸರ ಹಾಗೂ ಆರೋಗ್ಯ ಪ್ರಜ್ಞೆಯಿಂದಾಗಿ ಜೈವಿಕ/ನೈಸರ್ಗಿಕ ಕ್ರಮಗಳು ಇತ್ತಿಚ್ಚಿಗೆ ಪ್ರವರ್ಧಮಾನಕ್ಕೆ ಬರುತ್ತಿವೆ.

ಅಲ್ಲದೇ ಸಾವಯವ ರೀತಿಯಿಂದ ಕೀಟರೋಗ ನಿರ್ವಹಣೆ ಹೆಚ್ಚುತ್ತಿದೆ ಹಾಗೂ ಜಾಗತಿಕ ಮಟ್ಟದಲ್ಲಿ ನೈಸರ್ಗಿಕವಾಗಿ ಬೆಳೆದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ತೀವೃವಾಗಿ ಏರುತ್ತಿರುವ ಹಿನ್ನೆಯಲ್ಲಿ ನೈಸರ್ಗಿಕ ವಿಧಾನಗಳನ್ನು ಕ್ರಮಬದ್ದವಾಗಿ ಅಳವಡಿಸಿ ರೋಗ ನಿರ್ವಹಣೆ ಮಾಡುವುದು ಅನಿವಾರ್ಯವಾಗಿದೆ.

ಸಾಮಾನ್ಯವಾಗಿ ಬೀಜದ ಹಾಗೂ ಮಣ್ಣಿನ ಮುಖಾಂತರ ಕೀಟ ಮತ್ತು ರೋಗಗಳು ಹರಡುತ್ತವೆ ಇದರಿಂದಾಗಿ ಇಳುವರಿಯಲ್ಲಿ ಕುಂಠಿತ ಕಾಣಬಹುದು. ಆದ್ದರಿಂದ ಮುಂಬರುವ ಬೆಳೆಯ ಹಂತದ ರೋಗ ಮತ್ತು ಕೀಟಗಳ ನಿರ್ವಹಣೆಗೆ ಬೀಜೋಪಚಾರದ ಅಗತ್ಯವಿರುವುದು.

ಅದಕ್ಕಾಗಿ ರಾಸಾಯನಿಕಗಳ ಬದಲಾಗಿ ನೈಸರ್ಗಿಕವಾಗಿ ದೊರಕುವ ಕೃಷಿ ಮತ್ತು ದನಕರುಗಳ ತ್ಯಾಜ್ಯವನ್ನು ಬಳಸಿ ವಿವಿಧ ಸಾವಯವ ಗೊಬ್ಬರ ಹಾಗೂ ಪೀಡೆನಾಶಕಗಳನ್ನು ಬಳಸಬೇಕು.

ಪ್ರಮುಖವಾಗಿ ಬೀಜಾಮೃತ, ಜೀವಾಮೃತ, ಅಮೃತಪಾನಿ ಮತ್ತು ಪಂಚಗವ್ಯ ಇತ್ಯಾದಿಗಳನ್ನು ಬಳಸಿ ಕೃಷಿಯಲ್ಲಿ ಖರ್ಚು ಕಡಿಮೆ ಮಾಡುವುದು ಹಾಗೂ ಗುಣಮಟ್ಟದ ಆಹಾರೋತ್ಪನ್ನ ಪಡೆಯುವುದು.

ಜೊತೆಗೆ ವಾತಾವರಣ ಮತ್ತು ಮಣ್ಣಿನ ಪರಿಸರವನ್ನು ಕಾಪಾಡುವುದು ಮುಖ್ಯ ಉದ್ದೇಶವಾಗಿದೆ. ಸಾಮಾನ್ಯವಾಗಿ ಬೀಜೋಪಚಾರ ಮಾಡಲು ಬೀಜಾಮೃತವನ್ನು ತಯಾರಿಸಿಕೊಂಡು ಬಳಸಿದರೆ ಉತ್ತಮವಾದ ಗುಣಮಟ್ಟದ ಇಳುವರಿಯನ್ನು ಪಡೆಯಲು ಸಾದ್ಯವಾಗುವುದು.

ಬೀಜಾಮೃತ: ಇದೊಂದು ದ್ರವರೂಪದ ಸಾವಯವ ಗೊಬ್ಬರವಾಗಿದೆ. ಇದನ್ನು ಎಲ್ಲ ವಿಧದ ಬೆಳೆಗಳಿಗೆ ಬೀಜೋಪಚಾರ ಮಾಡಲು ಬಳಸಬಹುದು. ಇದು ಬೀಜವನ್ನು ಮಣ್ಣು ಮತ್ತು ಬೀಜದ ಮೂಲಕ ಹರಡುವ ಶಿಲೀಂದ್ರ ಮತ್ತು ಬ್ಯಾಕ್ಟೇರಿಯಾದಿಂದ ರಕ್ಷಿಸುತ್ತದೆ.

ಇದನ್ನು ಬಿತ್ತನೆ ಹಾಗೂ ನಾಟಿ ಮಾಡುವ ಮೊದಲು ಬೀಜಗಳಿಗೆ ಲೇಪಿಸುವುದು ಮತ್ತು ಸಸಿಗಳ ಬೇರುಗಳನ್ನು ಈ ದ್ರಾವಣದಲ್ಲಿ ಅದ್ದಿ ನಾಟಿ ಮಾಡಬೇಕು. ಹೀಗೆ ಮಾಡುವುದರಿಂದ ಕಡಿಮೆ ಖರ್ಚಿನಲ್ಲಿ ಸದೃಢವಾದ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮೊಳಕೆ ಪ್ರಮಾಣ ಪಡೆಯಬಹುದು.

ಬೇಕಾಗುವ ಸಾಮಗ್ರಿಗಳು ಮತ್ತು ತಯಾರಿಸುವ ವಿಧಾನ

* 100 ಕಿ.ಗ್ರಾಂ ಬೀಜ ಉಪಚಾರ ಮಾಡಲು

* ದೇಶಿ ಆಕಳ ತಾಜಾ ಸಗಣಿ: 5.0 ಕೆ.ಜಿ

*  ದೇಶಿ ಆಕಳ ಗಂಜಲು: 5.0 ಲೀಟರ್

* ನೀರು : 20 ಲೀಟರ್

* ಸುಣ್ಣ: 50 ಗ್ರಾಂ

ತಯಾರಿಸುವ ವಿಧಾನ: ಬೀಜ ಬಿತ್ತುವ ಹಿಂದಿನ ದಿನ, ದೇಶಿ ಆಕಳ ತಾಜಾ ಸಗಣಿಯನ್ನು ಮಂಜರಪಟ್ಟಿ ಅಥವಾ ಮಲ್ ಮಲ್ ಬಟ್ಟೆಯಲ್ಲಿ ಕಟ್ಟಿ ಚಿಕ್ಕದಾದ ಡ್ರಂನಲ್ಲಿ ಮೇಲೆ ತಿಳಿಸಿದ ಪ್ರಮಾಣದ ಆಕಳ ಗಂಜಲು ಮತ್ತು ನೀರನ್ನು ಮಿಶ್ರಣ ಮಾಡಿದ ದ್ರಾವಣದಲ್ಲಿ ಮುಳುಗುವಂತೆ ಆದರೆ ಬಕೇಟ್‌ನ ತಳಕ್ಕೆ ತಾಗಲಾರದಂತೆ ಕಟ್ಟಿಗೆ ಸಹಾಯದಿಂದ ತೂಗು ಬಿಡಬೇಕು.

ಮತ್ತೊಂದು ಲೀಟರ್ ಪ್ರಮಾಣದ ಬಟ್ಟಲಿನಲ್ಲಿ 50 ಗ್ರಾಂ ಸುಣ್ಣ ಅಥವಾ ಕ್ಯಾಲ್ಸಿಯಮ್ ಕ್ಲೋರೈಯಡ್‌ನ್ನು ಒಂದು ಲೀಟರ್ ನೀರಿನಲ್ಲಿ ಕರಿಗಿಸಿ ಇಡಬೇಕು. ಮಾರನೇ ದಿನ ಸಗಣಿಯನ್ನು ಕಿವುಚಿ ಘನ ಪದಾರ್ಥವನ್ನು ಹೊರಗೆ ತೆಗೆದು ಸಗಣಿಯ ರಸವನ್ನು ಮಾತ್ರ ಸೇರಿಸಬೇಕು.

ನಂತರ ಸುಣ್ಣದ ತಳಿ ನೀರನ್ನು ಈ ದ್ರಾವಣಕ್ಕೆ ಸೇರಿಸಬೇಕು. ಹೀಗೆ ತಯಾರಾದ ಬೀಜಾಮ್ರತದಿಂದ ಬೀಜೋಪಚಾರ ಮಾಡಬೇಕು.

ಬಳಸುವ ವಿಧಾನ: ಸಸಿಗಳ ಬೇರುಗಳನ್ನು ಉಪಚರಿಸಲು ಸಗಣಿಯನ್ನು ನೇರವಾಗಿ ಗೋಮೂತ್ರದೊಡನೆ ಸೇರಿಸಿ ತಯಾರು ಮಾಡಿ ಬಳಸಬಹುದು. ತೆಳು ಪದರಿನ ಸೋಯಾ, ಅವರೆ ಮತ್ತು ಶೇಂಗಾ ಬೀಜವನ್ನು ಹೊರತು ಪಡಿಸಿ ಉಳಿದ ಎಲ್ಲಾ ಬೀಜಗಳನ್ನು ಬೀಜಾಮೃತದಲ್ಲಿ 5 ನಿಮಿಷ ನೆನೆಸಿ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು. ಬೀಜೋಪಚಾರದ ನಂತರ ನೆರಳಿನಲ್ಲಿ ಒಣಗಿಸಲು ಗೋಣಿ ಚೀಲವನ್ನು ಬಳಸುವುದು ಉತ್ತಮ.

Use of Beejamrutha in agriculture: Treat seeds and get quality yield

ಉಪಯೋಗ: ಬೀಜಾಮೃತದಲ್ಲಿರುವ ಸಗಣಿ ಶಿಲೀಂದ್ರನಾಶಕವಾಗಿಯೂ ಹಾಗೂ ಗೋಮೂತ್ರ ದುಂಡಾಣುನಾಶಕವಾಗಿ ಕೆಲಸ ನಿರ್ವಹಿಸುತ್ತವೆ. ಸುಣ್ಣ ಆಮ್ಲೀಯವಾಗಿರುವ ಬೀಜಾಮೃತವನ್ನು ತಟಸ್ತಗೊಳಿಸುತ್ತದೆ. ಇದು ಬೀಜದಿಂದ ಹಾಗೂ ಮಣ್ಣಿನಿಂದ ಉತ್ಪತ್ತಿಯಾಗುವ ರೋಗಗಳನ್ನು ನಿಯಂತ್ರಿಸುತ್ತದೆ ಹಾಗೂ ಬೆಳೆ ಪ್ರಚೋದಕವಾಗಿ ಕೆಲಸ ಮಾಡಿ ಮೊಳಕೆಯು ಶೀಘ್ರವಾಗಿ ಬರುವಂತೆ ಮಾಡುತ್ತದೆ.

ಅಮೃತಪಾಣಿ: ಇದೊಂದು ದ್ರವರೂಪದ ಸಾವಯವ ಗೊಬ್ಬರ. ಇದನ್ನು ಆಕಳ ತುಪ್ಪ, ಜೇನುತುಪ್ಪ, ಸಗಣಿ ಮತ್ತು ಗೋಮೂತ್ರದಿಂದ ತಯಾರಿಸಲಾಗುವುದು.

ತಯಾರಿಸುವ ವಿಧಾನ

* 10 ಕೆ.ಜಿ ಆಕಳ ಸಗಣಿಗೆ 250 ಗ್ರಾಂ ತುಪ್ಪ ಮತ್ತು 500 ಗ್ರಾಂ ಜೇನು ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.

* ನಂತರ ಈ ಮಿಶ್ರಣವನ್ನು 200 ಲೀಟರ್ ನೀರಿನಲ್ಲಿ ಸೇರಿಸಿ, ಚೆನ್ನಾಗಿ ಕಲಕಬೇಕು. ಈಗ ಅಮೃತಪಾಣಿ ಬಳಸಲು ಸಿದ್ದವಾಗಿದೆ.

* ತಯಾರಾದ ದ್ರಾವಣವನ್ನು ನೇರವಾಗಿ ಒಂದು ಎಕರೆಗೆ ಮಣ್ಣಿಗೆ ಹಾಕಬಹುದು (ಡ್ರೆಂಚಿಂಗ್‌) ಅಥವಾ ಹರಿನೀರಿನೊಂದಿಗೆ ಬಿಡಬಹುದು ಹಾಗೂ ನಾಟಿ ಮಾಡುವ ಸಮಯದಲ್ಲಿ ಸಸಿಗಳ ಬೇರುಗಳನ್ನು ಅದ್ದಿ ನಾಟಿ ಮಾಡುವುದರಿಂದ ಬೆಳೆಗಳಲ್ಲಿ ರೋಗ ನಿರೋಧಕತೆ ಹೆಚ್ಚಿಸಬಹುದು.

ಉಪಯೋಗಗಳು:

  • ಬೆಳೆಗಳು ಸದೃಢವಾಗಿ ಬೆಳೆದು ಗುಣಮಟ್ಟದ ಹಾಗೂ ಹೆಚ್ಚಿನ ಇಳುವರಿ ಪಡೆಯಬಹುದು
  • ತಯಾರಿಸಲು ಇದು ಅತ್ಯಂತ ಸುಲಭ ಹಾಗೂ ಮನೆಯಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸುವುದರಿಂದಾಗುವ ಖರ್ಚು ಕೂಡಾ ಕಡಿಮೆ.

ಲೇಖಕರ ಹೆಸರು ಮತ್ತು ವಿಳಾಸ: ರೇಣುಕಾ ಬಿರಾದಾರ, ಡಾ. ವಾಣಿಶ್ರೀ ಎಸ್. ಮತ್ತು ಅರವಿಂದ ರಾಥೋಡ್, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಲಿಂಗಸುಗೂರು

Published On: 12 May 2023, 01:53 PM English Summary: Beejamrutha in agriculture: Treat seeds and get quality yield

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.