ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬದಲಿಸುವ ಭೂ ಪರಿವರ್ತನಾ ವಿಧಾನವನ್ನು ಸರಳೀಕರಣಗೊಳಿಸಿ ಸರಕಾರ ಬುಧವಾರ ಆದೇಶ ಹೊರಡಿಸಿದೆ. ಅರ್ಜಿ ಸಲ್ಲಿಸಿದ 60 ದಿನದೊಳಗೆ ಭೂ ಪರಿವರ್ತನಾ ಆದೇಶ ನೀಡಲು ಸರಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಈ ಹಿಂದೆ ಬಹಳಷ್ಟು ಅಡೆತಡೆಗಳಿದ್ದವು.
ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಕಲಂ 95(2)ರಡಿ ಕೃಷಿ ಉದ್ದೇಶಕ್ಕೆ ಹೊಂದಿರುವ ಭೂಮಿಯ ಮಾಲೀಕನು ಅಂತಹ ಜಮೀನು ಅಥವಾ ಅದರ ಯಾವುದೇ ಭಾಗವನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಲು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
2008 ಅಕ್ಟೋಬರ್ 17ರಲ್ಲಿ ಸರಕಾರ ಸುತ್ತೋಲೆ ಹೊರಡಿಸಿ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯಿದೆ 1961 (ಕೆಟಿಪಿಪಿ) ಅನ್ವಯ ಕೃಷಿ ಜಮೀನನ್ನು ಭೂ ಪರಿವರ್ತಿಸಲಾದ ಯಾವುದೇ ಕಾನೂನಿನ ಉಪಬಂಧಗಳನ್ನು ಉಲ್ಲಂಘಿಸುತ್ತಿಲ್ಲ, ಭೂ ಉಪಭೋಗ ಬದಲಾವಣೆಗೆ ಸಂಬಂಧಿಸಿದ ಒಡಿಪಿ ಮತ್ತು ಸಿಡಿಪಿ ಅನ್ವಯ ಇದೆಯೇ ಎಂಬ ಬಗ್ಗೆ ದೃಢೀಕರಿಸಿಕೊಳ್ಳಲು ಬಿಡಿಎ, ಬಿಎಂಆರ್ಡಿಎ, ಸ್ಥಳೀಯ ಯೋಜನಾ ಪ್ರಾಧಿಕಾರಗಳ ಎನ್ಒಸಿ ಪಡೆಯಬೇಕಿತ್ತು.
2018 ಫೆಬ್ರವರಿ 2ರಂದು ಈ ಬಗ್ಗೆ ಆದೇಶ ನೀಡಿದ ಸರಕಾರ 2018 ಮಾರ್ಚ್ 1ರಿಂದ ಭೂ ಪರಿವರ್ತನಾ ಕೋರಿಕೆಗಳನ್ನು ಭೂ ಪರಿವರ್ತನಾ ತಂತ್ರಾಂಶದ ಮೂಲಕವೇ ನಿರ್ವಹಿಸಬೇಕು. ಭೂ ಪರಿವರ್ತನೆ ಕೋರಿಕೆಗಳ ಆದೇಶ, ನಿರ್ಧಾರಗಳನ್ನು ಜಿಲ್ಲಾಧಿಕಾರಿಗಳ ಡಿಜಿಟಲ್ ಸಹಿ ಕಾರ್ಡ್ ಮೂಲಕವೇ ಹೊರಡಿಸಬೇಕು ಎಂದು ಸೂಚಿಸಿತ್ತು.
ಕೈಗಾರಿಕೋದ್ಯಮ, ಸೌರ ವಿದ್ಯುತ್ ಮತ್ತಿತರ ಯೋಜನೆಗಳಿಗೆ ಪ್ರೋತ್ಸಾಹ ನೀಡಲು ಕರ್ನಾಟಕ ಭೂ ಸುಧಾರಣಾ ಕಾಯಿದೆ 1961ರ ಕಲಂ 109ಕ್ಕೆ ತಿದ್ದುಪಡಿ ತಂದಿದ್ದು, ಭೂ ಪರಿವರ್ತನೆಯ ವಿಧಾನವನ್ನು ಸಾಕಷ್ಟು ಸರಳೀಕರಣಗೊಳಿಸಲಾಗಿತ್ತು. ಪ್ರವಾಸೋದ್ಯಮ, ವಸತಿ ಮತ್ತಿತರ ಮೂಲಸೌಲಭ್ಯ ಅಭಿವೃದ್ಧಿ ದೃಷ್ಟಿಯಿಂದ ಭೂ ಪರಿವರ್ತನಾ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಣ ಮಾಡುವುದು ಅಗತ್ಯವಿದೆ ಎಂಬ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಲಾಗಿತ್ತು.
ಮತ್ತಷ್ಟು ಸರಳೀಕರಣ : ಕೃಷಿಯೇತರ ಉದ್ದೇಶಗಳಿಗೆ ಭೂ ಪರಿವರ್ತನೆಯ ಕೋರಿಕೆಗಳನ್ನು ಆನ್ಲೈನ್ ಮೂಲಕ ಪಡೆದು, ತಂತ್ರಾಂಶದ ಮೂಲಕ ನಿರ್ವಹಿಸಲು ಕ್ರಮ ವಹಿಸಲಾಗಿದೆ. ತಂತ್ರಾಂಶದ ಮೂಲಕ ಭೂ ಪರಿವರ್ತನೆಯ ಕೋರಿಕೆಗಳನ್ನು ನಿರ್ವಹಿಸಲು ಸೌಲಭ್ಯ ಕಲ್ಪಿಸಿದ್ದರೂ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ಮ್ಯಾನ್ಯುಯಲ್ ವಿಧಾನದಲ್ಲೇ ಅರ್ಜಿ ಸಲ್ಲಿಸಲಾಗುತ್ತಿದೆ. ಈ ಪ್ರಕ್ರಿಯೆಯ ಸಂಭಾವ್ಯ ವಿಳಂಬ ತಪ್ಪಿಸಿ ಮತ್ತಷ್ಟು ಪಾರದರ್ಶಕತೆ ತರಲು ಕಾಲಮಿತಿಯೊಳಗೆ ಭೂ ಪರಿವರ್ತನೆ ಆದೇಶ ನೀಡುವುದನ್ನು ಖಚಿತಪಡಿಸಿಕೊಳ್ಳಲು ಮತ್ತಷ್ಟು ಸರಳಗೊಳಿಸಲು ಸರಕಾರ ಕ್ರಮ ಕೈಗೊಂಡಿದೆ.
ಮೊದಲ ಹಂತದಲ್ಲಿ ಅರ್ಜಿದಾರರು ನಾಡಕಚೇರಿ, ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಆನ್ಲೈನ್ ಮೂಲಕ ಜಿಲ್ಲಾಧಿಕಾರಿಗೆ ಯಾವುದೇ ನಿರಾಕ್ಷೇಪಣಾ ಪತ್ರಗಳಿಲ್ಲದೆ ಪ್ರಮಾಣಪತ್ರ, ಕನಿಷ್ಠ ದಾಖಲೆಗಳೊಂದಿಗೆ ಅರ್ಜಿ ಸಲಿಸಬಹುದು. ತಕ್ಷಣ ಇತರೆ ಇಲಾಖೆಗಳು, ಪ್ರಾಧಿಕಾರಗಳ ಅಭಿಪ್ರಾಯಕ್ಕೆ ಅರ್ಜಿಯನ್ನು ಆನ್ಲೈನ್ ಮೂಲಕ ಏಕಕಾಲಕ್ಕೆ ಕಳಿಸಲಾಗುತ್ತದೆ. ಇದರಿಂದ ಅರ್ಜಿದಾರರು ವಿವಿಧ ಇಲಾಖೆ, ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ.
ಅರ್ಜಿದಾರರು ಚಾಲ್ತಿ ವರ್ಷದ ಪಹಣಿ, ಹಕ್ಕು ಬದಲಾವಣೆ ದಾಖಲಾತಿ ಪ್ರತಿ (ಮ್ಯೂಟೇಷನ್), 11-ಇ ನಕ್ಷೆ (ಒಂದು ಸರ್ವೆ ನಂಬರಿನಲ್ಲಿ ಭಾಗಶಃ ಭೂ ಪರಿವರ್ತನೆಗೆ ಮನವಿ ಮಾಡಿದಾಗ ಮಾತ್ರ 11-ಇ ನಕ್ಷೆ ಹಾಜರುಪಡಿಸಬೇಕು), ಅಫಿಡವಿಟ್ ಸಲ್ಲಿಸಬೇಕು. ಆನ್ಲೈನ್ ಮೂಲಕ ಅಭಿಪ್ರಾಯಕ್ಕಾಗಿ ಇತರೆ ಇಲಾಖೆ, ಪ್ರಾಧಿಕಾರಗಳಿಗೆ ಕಳಿಸಿದ ತಕ್ಷಣ ಒಂದು ತಿಂಗಳೊಳಗೆ ಅಭಿಪ್ರಾಯ, ವರದಿ ಬಾರದಿದ್ದರೆ ಭೂ ಪರಿವರ್ತನೆಗೆ ಅವರಿಂದ ಯಾವುದೇ ಆಕ್ಷೇಪಣೆ ಇಲ್ಲವೆಂದು ಪರಿಗಣಿಸಿ ಮುಂದಿನ ಕ್ರಮ ವಹಿಸಲು ಅವಕಾಶ ಕಲ್ಪಿಸಲಾಗಿದೆ.
ಪರಿವರ್ತನೆ ಪ್ರಕ್ರಿಯೆ ಹೇಗೆ? : ಅರ್ಜಿದಾರರು ಭೂ ಪರಿವರ್ತನೆಗೆ ತಾಲೂಕು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಆನ್ಲೈನ್ ಮೂಲಕ ಅಥವಾ ವೆಬ್ಸೈಟ್ನ ಲ್ಲಿ ಲಾಗಿನ್ ಆಗುವ ಮೂಲಕ ಕ್ರಿಯೇಟ್ ಅಕೌಂಟ್ನಲ್ಲಿ ಲಾಗಿನ್ ಐಡಿಯನ್ನು ಕ್ರಿಯೇಟ್ ಮಾಡಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿದಾರರಿಂದ ಭೂ ಪರಿವರ್ತನೆ ಕೋರಿಕೆಯೊಂದಿಗೆ 200ರೂ. ಮೌಲ್ಯದ ಅಫಿಡವಿಟ್ ನಮೂನೆ-ಎಯನ್ನು ಪಡೆಯಬೇಕು. ್ನೋಟರಿಯವರಿಂದ ಪ್ರಮಾಣೀಕರಿಸಿದ ಅಫಿಡವಿಟ್ನ ಮೂಲ ಪ್ರತಿಯನ್ನು ಆನ್ಲೈನ್ನಲಿ ಅರ್ಜಿ ಸಲ್ಲಿಸಿದ 7 ದಿನದೊಳಗೆ ಜಿಲ್ಲಾಧಿಕಾರಿ, ತಹಸೀಲ್ದಾರ್ ಕಚೇರಿಯ ಅರ್ಜಿ ಸ್ವೀಕೃತಿ ಕೇಂದ್ರದಲ್ಲಿ ಭೂ ಪರಿವರ್ತನೆ ಕೋರಿಕೆ ಸಂಖ್ಯೆಯ ಮಾಹಿತಿಯೊಂದಿಗೆ ಹಸ್ತಾಂತರಿಸಿ ಅದಕ್ಕೆ ಸ್ವೀಕೃತಿ ಪಡೆದು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬೇಕು. ತಹಸೀಲ್ದಾರ್ ಕಚೇರಿಯ ಅರ್ಜಿ ಸ್ವೀಕೃತ ಕೇಂದ್ರದಲ್ಲಿ ಸ್ವೀಕೃತವಾದ ಅಫಿಡವಿಟ್ನ ಮೂಲ ಪ್ರತಿಯನ್ನು ಸ್ವೀಕರಿಸಿದ 48 ಗಂಟೆಯೊಳಗೆ ಜಿಲ್ಲಾಧಿಕಾರಿಗೆ ಹಸ್ತಾಂತರಿಸಬೇಕು. ವರ್ಗಾಯಿಸಲ್ಪಟ್ಟ ಇಲಾಖೆ, ಪ್ರಾಧಿಕಾರಗಳಿಂದ ಒಂದು ತಿಂಗಳ ಕಾಲಮಿತಿಯೊಳಗೆ ಅಭಿಪ್ರಾಯ, ವರದಿ ನೀಡದಿದ್ದರೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರು. ಭೂ ಪರಿವರ್ತನೆಗೆ ಆನ್ಲೈನ್ ಅರ್ಜಿ ಸ್ವೀಕರಿಸಿದ ದಿನದಿಂದ ಮುಂದಿನ 60 ದಿನದೊಳಗೆ ಭೂ ಪರಿವರ್ತನಾ ಆದೇಶ ಅಥವಾ ಹಿಂಬರಹ ಹೊರಡಿಸಬೇಕು.
ಕೃಷಿಯೇತರ ಭೂ ಪರಿವರ್ತನೆ ಮತ್ತಷ್ಟು ಸರಳ
ನಿಮ್ಮ ಬೆಂಬಲ ಸದಾ ಇರಲಿ
ನಮ್ಮ ಪತ್ರಿಕೆಯ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಭಾರತದ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಅಲ್ಪ ಕೊಡುಗೆಯೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ಕೊಡುಗೆ ನೀಡಿ (Contribute now)
Share your comments