News

ಜೂನ್ 5 “ವಿಶ್ವ ಪರಿಸರ ದಿನ”; ಇರುವುದೊಂದೆ ಭೂಮಿ ಇದರ ರಕ್ಷಣೆ ನಮ್ಮೆಲ್ಲರ ಹೊಣೆ..!

05 June, 2022 10:26 AM IST By: Kalmesh T
World Environment day 2022: June 05

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕೃಷಿ ವಿಜ್ಞಾನ ಕೇಂದ್ರದ ಶ್ರೀಮತಿ. ಪ್ರೀತು, ಡಿ.ಸಿ., ಡಾ. ಸವಿತಾ, ಎಸ್.ಎಂ., ಡಾ. ರಾಜೇಂದ್ರ ಪ್ರಸಾದ್, ಬಿ.ಎಸ್. ಮತ್ತು ಡಾ. ದಿನೇಶ, ಎಂ.ಎಸ್. ಅವರು ಬರೆದ ಲೇಖನ ನಿಮಗಾಗಿ…

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಸಿರುಮನೆ ಪರಿಣಾಮದಿಂದಾಗಿ, ವಾತಾವರಣದ ತಾಪಮಾನದಲ್ಲಿ ಏರಿಕೆಯಾಗುತ್ತಿರುವುದು ಜಾಗತಿಕ ಕಳವಳಕ್ಕೆ ಕಾರಣವಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಜಗತ್ತಿನ ಅರ್ಧಕ್ಕಿಂತ ಹೆಚ್ಚು ಮಳೆಕಾಡುಗಳು ಈಗಾಗಲೇ ನಾಶವಾಗಿವೆ.

ಮರ-ಗಿಡ, ಪ್ರಾಣಿ-ಪಕ್ಷಿಗಳು ಅವನತಿಯತ್ತಾ ಸಾಗಿದ್ದು, ಅಂದಾಜು ಒಂದು ಮಿಲಿಯನ್ ಜಾತಿಗಳು ಅಳಿವಿನಂಚಿನಲ್ಲಿವೆ. ಮನುಷ್ಯ ತನ್ನ ವೈಯಕ್ತಿಕ ಪ್ರಯೋಜನಕ್ಕಾಗಿ ಭೂಮಿಯ ಮೇಲೆ ನಿರಂತರ ಒತ್ತಡ ಹೇರುತ್ತಿದ್ದಾನೆ.

ಆಧುನಿಕತೆಯ ಬೇಡಿಕೆಗಳನ್ನು ಪೂರೈಸುವುದಕ್ಕಾಗಿ ಹೆಚ್ಚಾಗುತ್ತಿರುವ ವಾಣಿಜ್ಯ ಉದ್ಯಮಗಳು, ವಾಹನಗಳ ಸಂಖ್ಯೆ ಮತ್ತು ಹೆಚ್ಚುತ್ತಿರುವ ಜನಸಂಖ್ಯೆ ಮುಂತಾದ ಚಟುವಟಿಕೆಗಳಿಂದ ಪರಿಸರ ಮಾಲಿನ್ಯವಾಗಿ ಗಾಳಿ, ಭೂಮಿ ಮತ್ತು ನೀರು ವಿಷಪೂರಿತವಾಗುತ್ತಿದೆ.

ಕೆ.ಜಿ ಜೇನು ತುಪ್ಪಕ್ಕೆ 8.8 ಲಕ್ಷ ಎಂದರೆ ನೀವು ನಂಬುತ್ತೀರಾ? ಹೌದು! ಇಲ್ಲಿದೆ “ಮೇ 20 - ವಿಶ್ವ ಜೇನು ದಿನ”ದ ನಿಮಿತ್ತ ಕುತೂಹಲಕಾರಿ ಲೇಖನ 

ಸಮಸ್ತ ಜೀವ ಕುಲಕ್ಕೂ ಆಸರೆ ನೀಡಿದ, ಅಡಿಗಡಿಗೆ ಮಾನವನ ಅಗತ್ಯ ವಸ್ತುಗಳನ್ನು ಪೂರೈಸುತ್ತಿರುವ ಭೂಮಿಯ ರಕ್ಷಣೆ ನಮ್ಮ ಇಂದಿನ ಆಧ್ಯತೆಯಾಗಿದೆ. ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಧರಿತ್ರಿಯ ಉಳಿವಿಗೆ ಸಹಾಯಕವಾಗುತ್ತದೆ.

ನಮ್ಮ ಪರಿಸರದ ಸಂರಕ್ಷಣೆಗೆ ಅದೆಷ್ಟು ಜಾಗೃತಿ ಕಾರ್ಯಕ್ರಮಗಳು, ಹೋರಾಟಗಳು ನಡೆಯುತ್ತಿವೆ. ಹಾಗೆಯೇ ಜೂನ್ 5 ರಂದು ಜಾಗೃತಿ ಕಾರ್ಯಕ್ರಮವಾಗಿ “ವಿಶ್ವಪರಿಸರ ದಿನಾಚರಣೆ”ಯನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಒಂದೊಂದು ಧ್ಯೇಯ ವಾಕ್ಯಗಳೊಂದಿಗೆ ಈ ದಿನ ಆಚರಣೆಗೊಳ್ಳುತ್ತದೆ. 2022ರ ವರ್ಷವನ್ನು “ಇರುವುದೊಂದೇ ಭೂಮಿ: ಇದರ ರಕ್ಷಣೆ ನಮ್ಮೆಲ್ಲರ ಹೊಣೆ” ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

ವಿಶ್ವ ಪರಿಸರ ದಿನದ ಇತಿಹಾಸ:-

1972ರ ವಿಶ್ವ ಸಂಸ್ಥೆ ಮಹಾಸಭೆಯಲ್ಲಿ ಪರಿಸರ ದಿನಾಚರಣೆ ಆಚರಿಸಬೇಕೆಂದು ನಿರ್ಧರಿಸಲಾಗಿದ್ದು, 1974 ರಿಂದ ಪ್ರತಿ ವರ್ಷ ಪ್ರಪಂಚದಾದ್ಯಂತ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. “ವೃಕ್ಷೋ ರಕ್ಷತಿ ರಕ್ಷಿತಃ” ಎಂಬಂತೆ ಪರಿಸರ ದಿನಾಚರಣೆಯ ಅಂಗವಾಗಿ ಪ್ರಪಂಚದಲ್ಲಿ ಹೆಚ್ಚಿನ ಜನರು ಗಿಡಗಳನ್ನು ನೆಡಲು ಪ್ರಾರಂಭಿಸಿರುತ್ತಾರೆ.

ಹೀಗೆ ನೆಟ್ಟ ಗಿಡಗಳಿಗೆ ನೀರು ಹಾಕುವುದು ಮತ್ತು ಅದಕ್ಕಾಗಿ ನೀರಿನ ಅಭಾವ ಉಂಟಾಗುವುದನ್ನು ಸರಿದೂಗಿಸಲು ಜೂನ್ 5 ರನ್ನು ಆಯ್ಕೆ ಮಾಡಲಾಗಿದೆ. ಏಕೆಂದರೆ ಜೂನ್ ತಿಂಗಳಿಂದ ಮಳೆ ಪ್ರಾರಂಭವಾಗಲಿದ್ದು, ನೆಟ್ಟ ಗಿಡಗಳು ಬೆಳೆಯಲು ಸಹಾಯವಾಗುತ್ತದೆ ಎಂಬ ಉದ್ದೇಶದಿಂದ, ಈ ದಿನವನ್ನು ಪರಿಸರ ದಿನಾಚರಣೆಗೆ ಮೀಸಲಿಡಲಾಗಿದೆ.

ಜೂನ್‌ 1 "ವಿಶ್ವ ಹಾಲು ದಿನ": ಹಾಲಿನ ಪ್ರಾಮುಖ್ಯತೆ ಮತ್ತು ಅದರ ವಿಶಿಷ್ಟ ಪ್ರಯೋಜನಗಳೇನು ಗೊತ್ತಾ?

ಭೂಮಿ:  

ಸೌರವ್ಯೂಹದ ಗ್ರಹಗಳಲ್ಲಿ ಭೂಮಿಯೂ ಒಂದು. ಇಡೀ ಸೌರವ್ಯೂಹದಲ್ಲಿ ಜೀವಿಗಳನ್ನು ಹೊಂದಿರುವ ಏಕೈಕ ಗೃಹ ಈ ಭೂಮಿ. ವಿಜ್ಞಾನಿಗಳ ಪ್ರಕಾರ ಭೂಮಿ 4.5 ಶತಕೋಟಿ ವರ್ಷಗಳಷ್ಟು ಹಳೆಯದಾಗಿದೆ. ಭೂಮಿಯ ಮೇಲ್ಮೈಯಲ್ಲಿ ಸುಮಾರು 73% ನೀರಿನಿಂದ ಆವೃತವಾಗಿದೆ ಮತ್ತು ಭೂಮಿಯು 21% ಆಮ್ಲಜನಕದಿಂದ ಕೂಡಿದೆ.

ಭೂಮಿಯು ನಮಗೆ ಗಾಳಿ, ನೀರು, ಆಹಾರ ನೀಡಿ ಜೀವಿಗಳಿಗೆ ಬದುಕಲು ಆಶ್ರಯ ಒದಗಿಸುತ್ತಿದೆ. ಭೂಮಿಯಲ್ಲಿನ ಖನಿಜಗಳು, ನೀರು, ಕಲ್ಲಿದ್ದಲುಗಳಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಮಾನವ ಉಪಯೋಗಿಸಿಕೊಂಡು ವೈಯಕ್ತಿಕ ಪ್ರಯೋಜನ ಪಡೆದುಕೊಳ್ಳುತ್ತಿದ್ದಾನೆ.

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಆವಿಷ್ಕಾರದಿಂದ ಇಂದಿನ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಇದರಿಂದ ಹೆಚ್ಚಿನ ಮನುಷ್ಯರು ಪ್ರಕೃತಿಯಿಂದ ದೂರವಾಗಿ ವಿವಿಧ ಅನೈಸರ್ಗಿಕ ಚಟುವಟಿಕೆಗಳಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಇತ್ತೀಚಿನ ವರ್ಷಗಳಲ್ಲಿ ಭೂಮಿಯ ಉಷ್ಣತೆ ಹೆಚ್ಚಾಗುತ್ತಿರುವುದರಿಂದ ಹವಾಮಾನ ವೈಪರೀತ್ಯ ಕಾಣಿಸುತ್ತಿದೆ. ಕೆಲವು ಕಡೆ ತೀರ ಹೆಚ್ಚು ಬಿಸಿಲಿದ್ದರೆ, ಮತ್ತೆ ಕೆಲವು ಕಡೆ ತೀವ್ರ ಚಳಿ, ವಿಪರೀತ ಮಳೆಯಾಗಿ ಪ್ರವಾಹ, ದೈತ್ಯ ಬಿರುಗಾಳಿ, ಸುಂಟರಗಾಳಿ ಇತ್ಯಾದಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವ ಪರಿಣಾಮದಿಂದ ಉಂಟಾಗುತ್ತಿದೆ.

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

ಇದರಿಂದ ಭೂಮಿಯ ಹಿಮ ಕರಗಿ ಸಮುದ್ರ ಸೇರಿ ಸಮುದ್ರದ ಮಟ್ಟ ಏರಿಕೆಯಾಗಿ ನಿಧಾನವಾಗಿ ಭೂಮಿ ಸಮುದ್ರದ ಪಾಲಾಗುತ್ತಿದೆ. ಅಂತರ್ಜಲ ಅತಿಯಾದ ಬಳಕೆಯಿಂದ ಭೂಮಿಯ ಆಳದಲ್ಲಿ ಅಡಗಿರುವ ಅಪಾರ ಪ್ರಮಾಣದ ನೀರನ್ನು ಹೊರ ಹಾಕುವುದು ಸಹ ಸಮುದ್ರದ ಮಟ್ಟ ಏರಿಕೆಯಾಗಲು ಕಾರಣವಾಗಿದೆ.

ಹವಾಮಾನ ವೈಪರೀತ್ಯದಿಂದ ಭೂಮಿಯಲ್ಲಿರುವ ಸ್ವಾಭಾವಿಕ ಬೆಳೆಗಳು ನಾಶವಾಗಿ, ತೀವ್ರವಾದ ಆಹಾರ ಕೊರತೆಯುಂಟಾಗುತ್ತಿದೆ. ಜೀವವೈವಿದ್ಯತೆಯಲ್ಲಿ ತೀವ್ರ ಬದಲಾವಣೆ, ಪಶು ಪ್ರಾಣಿಗಳ ಬೆಳವಣಿಗೆಯಲ್ಲಿ, ಸಂತಾನೋತ್ಪತ್ತಿಯಲ್ಲಿ ಕುಂಠಿತ ಹೀಗೆ ಅನೇಕ ಜೀವಿಗಳ ಅವನತಿಯುಂಟಾದರೆ, ಇನ್ನೂ ಅನೇಕ ಕ್ರಿಮಿ ಕೀಟಗಳ ಸಂಖ್ಯೆ ಅಸಮಾನ್ಯ ಬೆಳವಣಿಗೆಯಾಗುತ್ತದೆ.

ಈ ರೀತಿಯ ಏರುಪೇರುಗಳಿಂದ ಇದೇ ಮಾನವ ಕುಲ, ರೋಗರುಜಿನ ಮತ್ತು ಆಹಾರ ಕೊರತೆಯಿಂದ ಬಳಲಿ ಮಾನವ ಸಂಕುಲ ನಾಶದ ಹಾದಿ ಹಿಡಿದಿದೆ. ಪಟ್ಟಣಗಳಲ್ಲಿ, ಪ್ಲಾಸ್ಟಿಕ್, ನಿರುಪಯುಕ್ತ ವಸ್ತು, ಇತ್ಯಾದಿ, ದಿನೇ ದಿನೇ ಹೆಚ್ಚಾಗಿ ಸಂಗ್ರಹಣೆಯಾಗಿ, ಭೂಮಿಯಲ್ಲಿ ಸೇರಿಕೊಂಡು ಮಣ್ಣು ಮಲಿನಗೊಳ್ಳುತ್ತಿದೆ. ಇದರಿಂದ ಹೊರಬರುವ ವಿಷಕಾರಿ ವಸ್ತುಗಳಿಂದ ಪಾದರಸ, ಸೀಸ, ಕ್ಯಾಡ್ಮಿಯಂ, ಕ್ರೋಮಿಯಂ ಮುಂತಾದವುಗಳು ಜೀವಿ ಸಂಕುಲ ಮತ್ತು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಸರ್ಕಾರ ಮತ್ತು ಅನೇಕ ಸಂಸ್ಥೆಗಳು ಇವುಗಳನ್ನು ಉತ್ತಮ ರೀತಿಯ ವಿಲೇವಾರಿ ಮತ್ತು ಮರುಬಳಕೆ ಮಾಡಿ ಮನುಕುಲಕ್ಕೆ ತೊಂದರೆ ಬಾರದ ಹಾಗೆ ಕಸದಿಂದ ರಸ ಎಂಬಂತೆ ಉಪಯುಕ್ತ ವಸ್ತುಗಳನ್ನಾಗಿ ಮಾಡಲಾಗುತ್ತಿದೆ. ಇದರಿಂದ ಸ್ವಚ್ಚ ಭಾರತದ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.

ಹಳ್ಳಿಗಳಲ್ಲಿ ದಿನೇ ದಿನೇ ಕಾಡು ಕಡಿದು ಕಾಂಕ್ರೀಟ್ ರಸ್ತೆಯಾಗುತ್ತಿದೆ, ಹೊಲಗದ್ದೆ ಕೆರೆಗಳನ್ನು ಅಳಿಸಿ, ದೊಡ್ಡ ದೊಡ್ಡ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಪಟ್ಟಣಗಳಲ್ಲಿ ಹೆಚ್ಚು ಕಾರ್ಖಾನೆಗಳು, ಕಟ್ಟಡಗಳು ನಿರ್ಮಾಣವಾಗುತ್ತಿದೆ. ವಾತಾವರಣದಲ್ಲಿ ಹೆಚ್ಚುತ್ತಿರುವ ಬಿಸಿ, ನಿರಂತರ ವಾಯು ಮಾಲಿನ್ಯ, ಜಲಮಾಲಿನ್ಯ, ಭೂ ಮಾಲಿನ್ಯ ಎಲ್ಲಕ್ಕೂ ಬೆಲೆ ಕಟ್ಟುವ ಕಾಲ ಬಹಳ ದೂರವಿಲ್ಲ, ಇರುವ ಒಂದೇ ಒಂದು ಭೂಗ್ರಹವನ್ನು ಉಳಿಸಿಕೊಳ್ಳಬೇಕಾಗಿದೆ. ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರದ ಉಳಿವಿಗೆ ಸಹಾಯವಾಗುತ್ತದೆ.

ಮಣ್ಣು ಪರೀಕ್ಷೆ ಮಾಡಿ ದುಪ್ಪಟ್ಟು ಲಾಭ ಪಡೆಯಿರಿ!

1) ಜನಸಂಖ್ಯಾ ನಿಯಂತ್ರಣ: ಭಾರತದ ಜನಸಂಖ್ಯೆ 2020 ರಲ್ಲಿ 138 ಕೋಟಿ ಇದ್ದು, ಪ್ರಪಂಚದ ಜನಸಂಖ್ಯೆಯಲ್ಲಿ ಶೇಕಡಾ.17.7 ರಷ್ಟು ಹೊಂದಿದೆ, 2030 ರ ವೇಳೆಗೆ ಚೀನಾವನ್ನು ಬದಿಗಿಟ್ಟು ಜನಸಂಖ್ಯೆಯಲ್ಲಿ ಮೊದಲನೆ ಸ್ಥಾನ ಪಡೆಯಲಿದೆ. ಜನಸಂಖ್ಯೆಯ ಅಮಿತವಾದ ಬೆಳವಣಿಗೆಯಿಂದ ಜನರಿಗೆ ಅಗತ್ಯವಾದ ಗಾಳಿ, ನೀರು, ಆಹಾರ, ವಸತಿ ಮತ್ತು ಅತ್ಯಗತ್ಯ ವಸ್ತುಗಳ ಉತ್ಪಾದನೆಯಿಂದ ಪರಿಸರ ಕಲುಷಿತವಾಗುತ್ತಿದೆ.

ಒಂದು ಕುಟುಂಬ-ಒಂದು ಮಗು ನೀತಿ, ಜನಸಂಖ್ಯೆ ಸಮಸ್ಯೆ ಬಗ್ಗೆ ಶಿಕ್ಷಣ, ಕನಿಷ್ಟ ಮದುವೆ ವಯಸ್ಸು ಹೆಚ್ಚಳ, ಚಿಕ್ಕ ಕುಟುಂಬಕ್ಕೆ ಪ್ರೋತ್ಸಾಹಧನ, ಚಿಕ್ಕ ಸಂಸಾರ-ಚೊಕ್ಕ ಸಂಸಾರ ಘೋಷವಾಕ್ಯ ಪಾಲಿಸುವುದು, ಅರಿವು, ಜಾಗೃತಿ ಕಾರ್ಯಕ್ರಮದಿಂದ ಜನಸಂಖ್ಯೆ ಸಮಸ್ಯೆಯನ್ನು ನೀಗಿಸಬಹುದು.

2) ಕಡಿಮೆ ರಾಸಾಯನಿಕ ಬಳಕೆ: ಸಾಧ್ಯವಾದಾಗಲೆಲ್ಲಾ ರಾಸಾಯನಿಕ ಮುಕ್ತ, ಸಾವಯವ ಹಾಗೂ ಸಸ್ಯ ಮೂಲದ ಆಹಾರ ಪದಾರ್ಥಗಳನ್ನೇ ಖರೀದಿಸುವುದು. ಇದರಿಂದ ಪರಿಸರಕ್ಕೂ ನಿರಾಳ, ನಮ್ಮ ಆರೋಗ್ಯಕ್ಕೂ ವರದಾನ. ಸಾಧ್ಯವಾದಲ್ಲಿ ಸಾವಯವ ಆಹಾರ ಉತ್ಪಾದನೆ ಮತ್ತು ಬಳಕೆಗೆ ಪ್ರಾಮುಖ್ಯತೆ ನೀಡುವುದು.

3) ಜನರು, ಸಂಘ ಸಂಸ್ಥೆಗಳಿಂದ ಪರಿಸರ ಸಂರಕ್ಷಣೆ ಯೋಜನೆಯಲ್ಲಿ ಕೈಜೋಡಿಸುವುದು: ನಮ್ಮ ಜನಪ್ರತಿನಿಧಿಗಳನ್ನು ಪರಿಸರ ಪ್ರೇಮಿಗಳಾಗಲು ಒತ್ತಾಯಿಸಿ ಸ್ಥಳೀಯ ಯೋಜನೆಗಳ ಬಗ್ಗೆ ಜಾಗೃತರಾಗಿಸುವುದು, ಅಗತ್ಯಬಿದ್ದಲ್ಲಿ ಕೈಜೋಡಿಸಿ ಪರಿಸರ ಸಂರಕ್ಷಣೆಗಾಗಿ ಹೋರಾಡುವುದು. ಪರಿಸರಕ್ಕೆ ಪೂರಕವಾಗಿ ಕೆಲಸ ಮಾಡುವ ಸಂಘ-ಸಂಸ್ಥೆ ಅಥವಾ ವ್ಯಕ್ತಿಗಳನ್ನು ಎತ್ತಿಹಿಡಿಯುವುದು.

4) ತ್ಯಾಜ್ಯ ಸಂಸ್ಕರಣೆ, ವಿಲೇವಾರಿ, ಪ್ರಾಣಿ, ಸಸ್ಯತ್ಯಾಜ್ಯದಿಂದ ಇಂಧನ, ಗೊಬ್ಬರ ತಯಾರಿಕೆ: ಮನೆಯಲ್ಲಿಯೇ ಜೈವಿಕ, ಹಸಿ ತ್ಯಾಜ್ಯಗಳು (ಉದಾ: ಅಡುಗೆ ಮನೆಯ ಆಹಾರ ತ್ಯಾಜ್ಯ, ಉದ್ಯಾನವನದ ಹಸಿರು ತ್ಯಾಜ್ಯ) ಮತ್ತು ಹೊಲದಲ್ಲಿ ದೊರೆಯುವ ಬೆಳೆ ಉಳಿಕೆ, ಕಳೆ, ಪ್ರಾಣಿ ತ್ಯಾಜ್ಯಗಳನ್ನು ಬಳಸಿ ಮನೆಯಲ್ಲಿಯೇ ಪರ್ಯಾಯ ಗೊಬ್ಬರ, ಎರೆಗೊಬ್ಬರ ಅಥವಾ ಇಂಧನ ತಯಾರಿಸಿ ತ್ಯಾಜ್ಯಗಳ ಮರುಬಳಕೆ ಮಾಡಬಹುದು.

5) ಅಪಾಯಕಾರಿ ತ್ಯಾಜ್ಯಗಳಾದ ಇಲೆಕ್ಟ್ರಾನಿಕ್ ಉಪಕರಣ, ಗಾಜು, ಪ್ಲಾಸ್ಟಿಕ್‍ಗಳ ಜಾಗೃತಿ ವಿಲೇವಾರಿ ಮತ್ತು ತ್ಯಾಜ್ಯಗಳ ಸಂಗ್ರಹಣೆ, ವಿಂಗಡಣೆ, ವಿಲೇವಾರಿ: ಅಪಾಯಕಾರಿ ತ್ಯಾಜ್ಯಗಳನ್ನು ಮಕ್ಕಳ ಕೈಗೆ ಸಿಗದಂತೆ ಸಂಗ್ರಹಿಸಿ ಜಾಗ್ರತೆಯಾಗಿ ವಿಲೇವಾರಿ ಮಾಡಬೇಕು.  

ಉದಾ: ಟ್ಯೂಬ್‍ಲೈಟುಗಳು, ಸಿ.ಎಫ್.ಎಲ್. ಬಲ್ಬುಗಳು, ಇಲೆಕ್ಟ್ರಾನಿಕ್ ಉಪಕರಣಗಳು ಅಥವಾ ಬಿಡಿಭಾಗಗಳ ವಿಂಗಡಣೆ ಮಾಡಿ ವಿಲೇವಾರಿ ಮಾಡುವ ಪ್ರಬುದ್ಧ ವ್ಯವಸ್ಥೆ ಇಲ್ಲದಿದ್ದಲ್ಲಿ ಅದಕ್ಕೋಸ್ಕರ ಒತ್ತಾಯಿಸಿ ವಿಂಗಡಣೆ ಮಾಡುವುದು ನಮ್ಮ ಜವಾಬ್ದಾರಿ. ಇದರಿಂದ ಬೀದಿಯಲ್ಲಿರುವ ದನಗಳು, ನಾಯಿಗಳು ಪ್ಲಾಸ್ಟಿಕ್ ಮತ್ತು ಅಪಾಯಕಾರಿ ತ್ಯಾಜ್ಯಗಳನ್ನು ತಿನ್ನುವುದನ್ನೂ ತಪ್ಪಿಸಬಹುದು.

World Environment day 2022: June 05

6)  ನೀರಿನ ಮಿತಬಳಕೆ, ಮಳೆ ನೀರುಕೊಯ್ಲು, ಇಂಗು ಗುಂಡಿ: ಇಂಗು ಗುಂಡಿಗಳನ್ನು ಸ್ಥಾಪಿಸಿ, ಮನೆಯ ಸುತ್ತಮುತ್ತಲೂ ಹರಿದು ಪೋಲಾಗಿ ಹೋಗುವ ಮಳೆ ನೀರನ್ನು ಇಂಗಿಸಲು ಇಂಗು ಗುಂಡಿಯ ವ್ಯವಸ್ಥೆ ಕಲ್ಪಿಸುವುದರಿಂದ ನೀರಿನ ಸಂರಕ್ಷಣೆ ಮತ್ತು ಮರುಬಳಕೆ ಮಾಡಬಹುದು.

7) ಅರಣ್ಯೀಕರಣ, ಸುತ್ತಮುತ್ತಲು ಮರ ಗಿಡಗಳನ್ನು ನೆಡುವುದು: ಸುತ್ತಮುತ್ತಲೂ ಹಸಿರು ಹೆಚ್ಚುವಂತೆ ರಸ್ತೆ, ಹೊಲಗಳ ಬದುಗಳಲ್ಲಿ, ಕೃಷಿಗೆ ಸೂಕ್ತವಿಲ್ಲದ ಜಾಗಗಳಲ್ಲಿ ಗಿಡಗಳನ್ನು ನೆಡಬೇಕು. ನಮ್ಮ ನಮ್ಮ ಹುಟ್ಟುಹಬ್ಬದಂದು, ಇತರ ವಿಶೇಷ ದಿನಗಳಂದು ಗಿಡ ನೆಡುವ ಕಾರ್ಯ ಕೈಗೊಂಡು, ಅದನ್ನು ನೀರೆರೆದು ಪೋಷಿಸುವ ಕಾರ್ಯಕ್ಕೆ ಮುಂದಾಗಬೇಕು.

8) ಪ್ಲಾಸ್ಟಿಕ್, ಲೋಹಗಳ ಬದಲು ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆ: ಪುನರ್ ಬಳಕೆಯಂತ ವಸ್ತುಗಳನ್ನು ಸುಮ್ಮನೆ ಬಿಸಾಡದೇ, ಮರುಬಳಕೆ ಮಾಡಬೇಕು. ಪ್ರತಿದಿನದ ಜೀವನದಲ್ಲಿ ಅಥವಾ ಸಮಾರಂಭಗಳ ಸಂದರ್ಭದಲ್ಲಿ ಸುಲಭದಲ್ಲಿ ಮಣ್ಣಾಗಿ ಹೋಗುವ ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವುದು.

ಉದಾ: ಪ್ಲಾಸ್ಟಿಕ್ ಚೀಲದ ಬದಲು ಕಾಗದ ಅಥವಾ ಬಟ್ಟೆಯ ಚೀಲ, ಪ್ಲಾಸ್ಟರ್ ಆಫ್ ಪ್ಯಾರಿಸ್ ಬದಲು ಮಣ್ಣಿನ ಗಣೇಶ, ಪ್ಲಾಸ್ಟಿಕ್ ಗೋಣಿಗಳ ಬದಲು ಸೆಣಬಿನ ನಾರಿನ ಗೋಣಿ ಬಳಸಬಹುದು.

9) ಪೆಟ್ರೋಲ್, ಡೀಸೆಲ್ ಬದಲಾಗಿ ನವೀಕರಣ ಮೂಲ ಸೌರಶಕ್ತಿ, ಜೈವಿಕ ಇಂಧನ ಶಕ್ತಿ ಮತ್ತು ಕಡಿಮೆ ವಿದ್ಯುತ್ ಶಕ್ತಿಯ ಬಳಕೆ: ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಹೆಚ್ಚಾಗಿ ಬಳಸಲು ಪ್ರಯತ್ನ ಮಾಡಬೇಕು. ಇದರಿಂದ ಪರಿಸರವೂ ಉಳಿಯುತ್ತದೆ. ದೇಶದ ಪೆಟ್ರೋಲಿಯಂ ಆಮದಿನ ಹೊರೆಯೂ ಕಮ್ಮಿಯಾಗುತ್ತದೆ.

ನಮ್ಮ ಮನೆಯೊಳಗೆ ಉತ್ತಮ ಗಾಳಿ, ಬೆಳಕು ಇರುವಂತೆ ನೋಡಿಕೊಂಡು, ಹಗಲು ಹೊತ್ತನ್ನು ಚೆನ್ನಾಗಿ ಉಪಯೋಗಿಸಿದ್ದಲ್ಲಿ, ಫ್ಯಾನ್, ವಾತಾನುಕೂಲಿ, ವಿದ್ಯುತ್ ದೀಪಗಳಿಂದ ವಿದ್ಯುತ್ ಶಕ್ತಿಯನ್ನು ಉಳಿಸಬಹುದು. ನವೀಕರಿಸಲು ಸಾಧ್ಯವಿರುವ ಸೌರಶಕಿ ಮೂಲಗಳಾದ ಸೋಲಾರ್ ನೀರಿನ ಹೀಟರ್, ಸೋಲಾರ್ ದೀಪ ಮತ್ತು ಜೈವಿಕ ಇಂಧನ ಶಕ್ತಿಗಳನ್ನು ಬಳಸಬೇಕು.

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

10) ಸರಳ ಜೀವನ ಶೈಲಿ: ಶಾಂತಿ, ನೆಮ್ಮದಿ ಮತ್ತು ಸಂತಸದ ಜೀವನ ನಮ್ಮದಾಗಿಸಿಕೊಳ್ಳಲು, ಅಂತಹ ಮನಸ್ಥಿತಿಗೊಳಿಸಿಕೊಳ್ಳುವುದು ಮುಖ್ಯ. ಇದರಿಂದ ಸುಸ್ಥಿರ ಜೀವನ ಸಾಗಿಸಲು ಸಾಧ್ಯ

11) ಜೀವ ವೈವಿದ್ಯತೆಗೆ ಆದ್ಯತೆ: ನೈಸರ್ಗಿಕ ಸಂಪನ್ಮೂಲಗಳ ನಿಯಮಿತ ಬಳಕೆ, ಸಂರಕ್ಷಣೆ ಮತ್ತು ಸುಸ್ಥಿರ ನಿರ್ವಹಣೆಯಿಂದ ಪರಿಸರ ಸಂರಕ್ಷಣೆ ಸಾಧ್ಯ.

ಮನುಷ್ಯನ ಉದಾಸೀನತೆ, ತಿಳಿಗೇಡಿತನದಿಂದ ನಿಸರ್ಗ ಬಸವಳಿಯುತ್ತಾ ಸಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗೀದಾರರು ಎಂಬುದು ಕೂಡ ನಮಗೆಲ್ಲರಿಗೂ ಈಗ ಚೆನ್ನಾಗಿ ಗೊತ್ತಾಗಿರುವ ಸತ್ಯ. ಪ್ರತಿಯೊಬ್ಬ ಮನುಷ್ಯನ ಬದುಕೂ ಪಂಚ ಮಹಾಭೂತಗಳಲ್ಲಿ ಒಂದಾದ ಭೂಮಿಯೊಂದಿಗೆ ಬೆಸೆದುಕೊಂಡಿದೆ. ಭೂಮಿಯಿಲ್ಲದೆ ಬದುಕಿಲ್ಲ ಎಂಬುದನ್ನು ಒಪ್ಪುವುದಾದರೆ ಕನಿಷ್ಠಪಕ್ಷ ನಮ್ಮ ಉಳಿವಿಗಾದರೂ ನಾವು ಭೂಮಿಯನ್ನು ಉಳಿಸಲೇಬೇಕಾಗುತ್ತದೆ!