News

ಫೆ. 11&12ರಂದು “ಗೆಡ್ಡೆ ಗೆಣಸು ಮೇಳ” ಆಯೋಜನೆ! ಇಲ್ಲಿದೆ ವಿಶಿಷ್ಟ ಬಗೆಯ ಗೆಡ್ಡೆ ಗೆಣಸು ಕಾಣುವ ಅವಕಾಶ

06 February, 2023 6:21 PM IST By: Kalmesh T
ಫೆ. 11&12ರಂದು “ಗೆಡ್ಡೆ ಗೆಣಸು ಮೇಳ” ಆಯೋಜನೆ

ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ವತಿಯಿಂದ ಮೈಸೂರಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಫೆಬ್ರುವರಿ 11 ಮತ್ತು 12ನೇ ದಿನಾಂಕದಂದು ಬೆಳಿಗ್ಗೆ 10:30 ರಿಂದ ಸಂಜೆ 8 ಗಂಟೆಯವರೆಗೆ “ಗೆಡ್ಡೆ ಗೆಣಸು ಮೇಳ” ವನ್ನ ಆಯೋಜನೆ ಮಾಡಲಾಗಿದೆ.

ಗೋಧಿ ಬೆಳೆಯನ್ನು ಬಾಧಿಸುವ ಪ್ರಮುಖ ಕೀಟಗಳು ಮತ್ತು ಅವುಗಳ ಹತೋಟಿ ಕ್ರಮಗಳು

ಗೆಡ್ಡೆ ಗೆಣಸು ಭೂತಾಯಿ ಮಡಿಲನ ಅದ್ಭುತ ಸೃಷ್ಟಿ. ಋಷಿ ಮುನಿಗಳು ಮತ್ತು ಆದಿವಾಸಿಗಳು ಗೆಡ್ಡೆ ಗೆಣಸು ತಿಂದು ರೋಗವಿಲ್ಲದೆ ಆರೋಗ್ಯವಂತರಾಗಿ ಜೀವಿಸುತ್ತಿದ್ದರು ಎಂಬುದನ್ನು ಕೇಳಿದ್ದೇವೆ. ಆಯುರ್ವೇದ ಮತ್ತು ಜನಪದ ವೈದ್ಯದಲ್ಲಿ ಗೆಡ್ಡೆ ಗೆಣಸನ್ನು ಔಷಧಿಯಾಗಿ ಬಳಸಲಾಗುತ್ತದೆ.

ನೈಸರ್ಗಿಕ ವಿಕೋಪ ಮತ್ತು ಬರಗಾಲದಲ್ಲಿ ಗೆಡ್ಡೆ ಗೆಣಸು ಜೀವ ಸಂಜೀವಿನಿಯಂತೆ ಕೆಲಸ ಮಾಡುತ್ತವೆ. ವಾತಾವರಣದ ವೈಪರೀತ್ಯವಿದ್ದಾಗ ಎಲ್ಲ ಬೆಳೆಗಳು ವಿಫಲವಾದಾಗ ಗೆಡ್ಡೆ ಗೆಣಸುಗಳು ರೈತನ ಕೈಹಿಡಿಯುತ್ತವೆ ಅಲ್ಲದೇ ಆದಾಯವನ್ನೂ ಸಹ ತರುತ್ತವೆ.

ಇದುವರೆಗೂ ನೋಡಿರದ ಅಪರೂಪದ ಗೆಡ್ಡೆ ಗೆಣಸುಗಳು ಇಲ್ಲಿ ಕಾಣಬಹುದು.

ಮೈಸೂರಿನಲ್ಲಿ ಆಯೋಜನೆ ಮಾಡಲಾದ ಈ ಗಡ್ಡೆ ಗೆಣಸು ಮೇಳದಲ್ಲಿ ನೀವು ಇದುವರೆಗೂ ನೋಡದ ಪೌಷ್ಟಿಕಾಂಶಗಳಿಂದ ಸಮೃದ್ಧವಾದ ಅಪರೂಪದ ಗೆಡ್ಡೆ ಗೆಣಸುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಬರಲಿವೆ.

ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿ ಕೊರಕ ಕೀಟದ ಸಮಗ್ರ ಹತೋಟಿ ಕ್ರಮಗಳು

ಬಳ್ಳ ಆಲೂಗೆಡ್ಡೆ, ಪರ್ಪಲ್ ಯಾಮ್ , ಕೂವೆ ಗೆಡ್ಡೆ, ಬಣ್ಣದ ಗೆಣಸು, ಮಾವಿನ ಶುಂಠಿ, ಹುತ್ತರಿ ಗೆಣಸು, ಮುಳ್ಳು ಗೆಣಸು, ಸುವರ್ಣ ಗೆಡ್ಡೆ ಮತ್ತು ಕೆಸುವಿನ ಬೀಜದ ಗೆಡ್ಡೆ ಮಾರಾಟಕ್ಕೆ ಸಿಗಲಿವೆ.

ಕರ್ನಾಟಕದ ವಿವಿಧ ಭಾಗಗಳಿಂದ ಬರುವ 25 ಕ್ಕೂ ಹೆಚ್ಚಿನ ಮಳಿಗೆಗಳು ಗೆಡ್ಡೆ ಗೆಣಸಿನ ಮೌಲ್ಯವರ್ಧಿತ ಪದಾರ್ಥ ಮತ್ತು ಬಗೆ ಬಗೆಯ ಅಡುಗೆಗಳನ್ನು ಸಾರ್ವಜನಿಕರಿಗೆ ಉಣಬಡಿಸಲಿದ್ದಾರೆ.

ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆ ಆಯೋಜನೆ!

ವಿವಿಧ ಜಾತಿಯ ಗೆಡ್ಡೆ ಗೆಣಸುಗಳನ್ನು ಬಳಸಿ ಮಾಡಿದ ಅಡುಗೆಯನ್ನು ಮನೆಯಲ್ಲೇ ತಯಾರಿಸಿ, ಗೆಡ್ಡೆ ಗೆಣಸು ಮೇಳಕ್ಕೆ ಫೆಬ್ರವರಿ 12ರ ಭಾನುವಾರ 12.00 ಗಂಟೆಗೆ ತರಬೇಕು.

ಅಪರೂಪದ ಅಡುಗೆ ತಯಾರಿಸಿದವರಿಗೆ ಬಹುಮಾನ ಮತ್ತು ಪ್ರಶಂಸಾ ಪತ್ರಗಳನ್ನು ಕೂಡ ನೀಡಲಾಗುವುದು.

ಕೇರಳದಿಂದ ಬರಲಿವೆ 200 ಬಗೆಯ ಗೆಡ್ಡೆ ಗೆಣಸು

ಹೌದು,  ಕೇರಳದಿಂದ ಶಾಜಿ ಎಂಬುವವರು 200 ಬಗೆಯ ಗೆಡ್ಡೆ ಗೆಣಸುಗಳನ್ನು ಈ ಮೇಳಕ್ಕೆ ತರುತ್ತಿದ್ದಾರೆ. ಬಳ್ಳಿ ಆಲೂಗೆಡ್ಡೆ ಸಾಕಷ್ಟು ಬಂದಿದೆ. ಪರ್ಪಲ್ ಯಾಮ್ ಕೂಡ ಇದೆ.

ಬಣ್ಣದ ಗೆಣಸಿನ ಬಳ್ಳಿ ಬಿತ್ತನೆಗೆ ಸಿಗಲಿದೆ. ಅಮೆಜಾನ್ ಕಾಡಿನ ಯಾಕೋನ್ ಬೀನ್ಸ ಮೊದಲ ಬಾರಿ ಮೇಳಕ್ಕೆ ಬಂದಿದೆ. ಮಾವಿನ ಶುಂಠಿ, ಕರಿ ಹರಿಷಿಣ, ಕೂವೆ ಗೆಡ್ಡೆ, ಹುತ್ತರಿ ಗೆಣಸು, ಮುಳ್ಳು ಗೆಣಸು,ನಾಟಿ ಶುಂಠಿ, ಕೆಸು, ಸುವರ್ಣ ಗೆಡ್ಡೆ ಇನ್ನೂ ಹಲವಾರು ಗೆಡ್ಡೆ ಗೆಣಸು ಮಾರಾಟಕ್ಕೆ ಬರಲಿವೆ.

ಗೆಣಸಿನ ಐಸ್ ಕ್ರೀಂ, ಪಾಯಸ, ರೊಟ್ಟಿ, ಚಿಪ್ಸ, ಪಲ್ಯ ಚಪ್ಪರಿಸಲು ಸಿಗಲಿವೆ.

ಮೇಳಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ; 70900 09944 / 98809 08608