1. ಸುದ್ದಿಗಳು

ನವೆಂಬರ್ 6 ರಿಂದ 8 ರವರೆಗೆ ಕೃಷಿಮೇಳ: ಕೃಷಿ ಮೇಳಕ್ಕೆ ಸಜ್ಜಾದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ

ಜಿಕೆವಿಕೆ ಪ್ರಾಂಗಣದಲ್ಲಿ ಸಿದ್ದವಾಗುತ್ತಿರುವ ಕೃಷಿ ಪ್ರಾತ್ಯಕ್ಷಿಕೆಗಳನ್ನು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್. ರಾಜೇಂದ್ರ ಪ್ರಸಾದ ಹಾಗೂ ಅಧಿಕಾರಿಗಳು ವೀಕ್ಷಿಸಿದರು

ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದರಿಂದ  ಈ ವರ್ಷ ಕೃಷಿ ಮೇಳ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದ್ದು ಕೃಷಿ ಮೇಳಕ್ಕೆ ದಿನಾಂಕ ನಿಗದಿಯಾಗಿದೆ. ನವೆಂಬರ್  6ರಿಂದ 8ರವರೆಗೆ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಸರಳವಾಗಿ ಕೃಷಿ ಮೇಳ ನಡೆಸಲು ತಯಾರಿ ನಡೆದಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎಂ. ಭೈರೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರಿಗೆ ಕೃಷಿ ತಂತ್ರಜ್ಞಾನಗಳನ್ನು ಸಕಾಲದಲ್ಲಿ ತಲುಪಿಸುವ ಉದ್ದೇಶದಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಜಿಕೆವಿಕೆ ಆವರಣದಲ್ಲಿ ಪ್ರತಿ ವರ್ಷ ಕೃಷಿ ಮೇಳ ಆಯೋಜಿಸುತ್ತಿದೆ. ಆದರೆ, ಈ ಬಾರಿ  ಕೊರೋನಾದಿಂದಾಗಿ ಮೇಳ ಆಯೋಜಿಸುವುದೋ, ಬೇಡವೋ ಎಂಬ ಗೊಂದಲದಲ್ಲಿ ವಿಶ್ವವಿದ್ಯಾಲಯ ಸಿಲುಕಿತ್ತು. ಕೊನೆಗೂ ಕೃಷಿ ಮೇಳ ಆಯೋಜಿಸಲು ಸಜ್ಜಾಗುವಂತೆ ಸರ್ಕಾರ ಸೂಚಿಸಿದ್ದರಿಂದ ತಯಾರಿ ನಡೆದಿದೆ. ರೈತರಿಗೆ ಆಧುನಿಕ ತಂತ್ರಜ್ಞಾನಗಳನ್ನು ಪರಿಚಯಿಸಲು ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗುವುದು. ಇದಕ್ಕಾಗಿ ಕೃಷಿ ವಿಶ್ವವಿದ್ಯಾಲಯದ 50 ಮಳಿಗೆಗಳು ಇರಲಿದ್ದು, ಈ ಸಲ ಖಾಸಗಿ ಮಳಿಗೆಗಳಿಗೆ ಅವಕಾಶ ನೀಡುವುದಿಲ್ಲ.

ಆನ್‍ಲೈನ್ ಮೂಲಕವೂ ಮೇಳ ವೀಕ್ಷಣೆ:

ಮೇಳದಲ್ಲಿ ಜನಸಂದಣಿಯಾಗದಂತೆ ತಡೆಯುವ ಉದ್ದೇಶದಿಂದ ಆನ್‍ಲೈನ್ ಮೂಲಕ ಮನೆಯಿಂದಲೇ ಕೃಷಿ ಮೇಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು. ವಿಶ್ವವಿದ್ಯಾಲಯದ ಯುಟ್ಯೂಬ್ ವಾಹಿನಿ ಮತ್ತು ಇನ್ನಿತರ ತಂತ್ರಜ್ಞಾನಗಳ ಸಹಾಯದಿಂದ ಮೇಳ ವೀಕ್ಷಿಸಬಹುದು. ಶೀಘ್ರವೇ ಅವುಗಳ ಲಿಂಕ್ ಹಾಗೂ ವಿವರ ಸಾರ್ವಜನಿಕರಿಗೆ ತಲುಪಿಸುತ್ತೇವೆ' ಎಂಬ ಮಾಹಿತಿ ಪ್ರಕಟಣೆಯಲ್ಲಿ ನೀಡಿದ್ದಾರೆ. 

'ಈ ವರ್ಷ ಮೂರು ನೂತನ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ನೆಲಗಡಲೆಯಲ್ಲಿ ಜಿಕೆವಿಕೆ 27, ಅಲಸಂದೆಯಲ್ಲಿ ಕೆ.ಸಿ.-8, ಮತ್ತು ಮೇವಿನ ಬೆಳೆಯಲ್ಲಿ ಅಲಸಂದೆ ಎಂ.ಎಫ್.ಸಿ.- 09-3 (ಎಂ.ಎಫ್.ಸಿ-3). ಮೂರು ಹೊಸ ತಳಿಗಳನ್ನು ಬಿಡುಗಡೆಗೆ ಶಿಫಾರಸ್ಸು ಮಾಡಲಾಗಿದೆ.

ಮೇಳಕ್ಕೆ ಬರುವವರಿಗೆ ಸವಲತ್ತುಗಳು:

ಮಕ್ಕಳಿಗಿಲ್ಲ ಪ್ರವೇಶ: ಕಳೆದ ಬಾರಿ 15 ಲಕ್ಷಕ್ಕೂ ಹೆಚ್ಚು ಮಂದಿ ಕೃಷಿ ಮೇಳಕ್ಕೆ ಭೇಟಿ ನೀಡಿದ್ದರು. ಈ ಬಾರಿ ಜನಸಂದಣಿಯಾಗದಂತೆ ಎಚ್ಚರವಹಿಸುವುದು ನಮ್ಮ ಕರ್ತವ್ಯ. ಕೊರೊನಾ ಸೋಂಕು ಹರಡುವಿಕೆ ತಡೆಯುವ ಉದ್ದೇಶದಿಂದ ಮಕ್ಕಳು ಹಾಗೂ 60 ಮೇಲ್ಪಟ್ಟವರಿಗೆ ಮೇಳಕ್ಕೆ ಪ್ರವೇಶ ನಿರಾಕರಿಸಲಾಗಿದ್ದು, ವಯಸ್ಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮುಖ ಕವಚ (ಮಾಸ್ಕ್) ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.

ಜಿ.ಕೆ.ವಿ.ಕೆ ಯ ಮಹಾದ್ವಾರದಿಂದ ಕೃಷಿ ಮೇಳದ ಸಭಾಂಗಣಕ್ಕೆ ತಲುಪಲು ಬಸ್ಸುಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಇರಲಿದೆ. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು.  ಉಚಿತ ಪ್ರವೇಶ ಇರಲಿದೆ. ರಿಯಾಯಿತಿ ದರದಲ್ಲಿ  ಪಂಕ್ತಿ ಊಟದ ಬದಲು ತಟ್ಟೆ ಊಟ (ಬಫೆಟ್) ಮಾದರಿಯಲ್ಲಿ ಲಘು ಉಪಹಾರದ ವ್ಯವಸ್ಥೆ ಇರಲಿದೆ.

ನೇಗಿಲ ಯೋಗಿಗೆ ಪುರಸ್ಕಾರ:

ರಾಜ್ಯ ಮಟ್ಟದ ಪ್ರಶಸ್ತಿಗಳು  

ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಗುವುದು, ಅವುಗಳೆಂದರೆ;

  1. ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ / ರೈತ ಮಹಿಳೆ ಪ್ರಶಸ್ತಿ
  2. ಶ್ರೀ ಸಿ. ಬೆರೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ / ರೈತ ಮಹಿಳೆ ಪ್ರಶಸ್ತಿ
  3. ಡಾ. ಎಂ.ಹೆಚ್. ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ
  4. ಕೆನರಾ ಬ್ಯಾಂಕ್ ಪ್ರಾಯೋಜಿತ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿ
  5. ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ / ರೈತ ಮಹಿಳೆ ಪ್ರಶಸ್ತಿ
  6. ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ

ಜಿಲ್ಲಾ ಮಟ್ಟದ ಪ್ರಶಸ್ತಿಗಳು:

ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ ಮತ್ತು ರೈತ ಮಹಿಳಾ ಪ್ರಶಸ್ತಿ; ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವ್ಯಾಪ್ತಿಗೆ ಒಳಪಡುವ 10 ಜಿಲ್ಲೆಗಳಲ್ಲಿ ಪ್ರಗತಿಪರ ರೈತ ಪ್ರಶಸ್ತಿ ಮತ್ತು ಪ್ರಗತಿಪರ ರೈತ ಮಹಿಳಾ ಪ್ರಶಸ್ತಿಗಳನ್ನು ಅರ್ಹ ಪ್ರಗತಿ ಪರ ರೈತ ಮತ್ತು ರೈತ ಮಹಿಳೆಯರಿಗೆ ನೀಡಲಾಗುವುದು.

ತಾಲ್ಲೂಕು ಮಟ್ಟದ ಪ್ರಶಸ್ತಿಗಳು:

ತಾಲ್ಲೂಕು ಮಟ್ಟದ ಪ್ರಗತಿಪರ ಯುವ ರೈತ ಪ್ರಶಸ್ತಿ ಮತ್ತು ಯುವ ರೈತ ಮಹಿಳಾ ಪ್ರಶಸ್ತಿ; ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವ್ಯಾಪ್ತಿಗೆ ಒಳಪಡುವ 60 ತಾಲ್ಲೂಕುಗಳಲ್ಲಿ ಪ್ರಗತಿಪರ ಯುವ ರೈತ ಪ್ರಶಸ್ತಿ ಮತ್ತು ಪ್ರಗತಿಪರ ಯುವ ರೈತ ಮಹಿಳಾ ಪ್ರಶಸ್ತಿಗಳನ್ನು ಅರ್ಹ ಪ್ರಗತಿಪರ ಯುವ ರೈತ ಮತ್ತು ಪ್ರಗತಿಪರ ಯುವ ರೈತ ಮಹಿಳೆಯರಿಗೆ  ನೀಡಲಾಗುವುದು.

Published On: 26 September 2020, 04:00 PM English Summary: simple agricultural fair will be held at gandhi agricultural science center from november 6 to 8

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.