1. ಸುದ್ದಿಗಳು

ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಳಸಿ ಬೆಳೆ ವಿವರ ನಮೂದಿಸಲು ಮನವಿ

ದೇಶದ ಎಲ್ಲಾ ರೈತರು 2021-22ನೇ ಸಾಲಿನ ಬೆಳೆ ಸಮೀಕ್ಷೆ ಕೈಗೊಳ್ಳಲು ಕೇಂದ್ರ ಸರ್ಕಾರ ಆದೇಶಿಸಿದೆ. ಯೋಜನೆಯ ಅನ್ವಯ ಜಿಲ್ಲೆಯ ರೈತರು ತಮ್ಮ ಜಮೀನುಗಳ ಸರ್ವೇ ನಂಬರ್, ಹಿಸ್ಸಾ ನಂಬರ್‌ವಾರು ತಾವು ಬೆಳೆದ ಕೃಷಿ, ತೋಟಗಾರಿಕೆ, ಅರಣ್ಯ ಹಾಗೂ ಇನ್ನಿತರೆ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಸ್ವತಃ ತಾವೇ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ದಾಖಲಿಸಬಹುದು.

ಈಗ ಘೋಷಿಸಿರುವುದು ಮುಂಗಾರು ಹಂಗಾಮಿನ ಬೆಳೆಗಳ ಸಮೀಕ್ಷೆ ನಮೂದು ಪ್ರಕ್ರಿಯೆಯಾಗಿದ್ದು, ರೈತರು ತಮ್ಮ ಮೊಬೈಲ್‌ಗಳಲ್ಲಿ ‘ಖಾರಿಫ್ ಸೀಸನ್ ಫಾರ್ಮರ್ ಕ್ರಾಪ್ ಸರ್ವೆ 2021-22’ (Kharif Season Farmer Crop Survey 2021-22) ಎಂಬ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಅನ್ನು ತಮ್ಮ ಆಂಡ್ರಾಯ್ಡ್ ಮೊಬೈಲ್‌ನ ಗೂಗಲ್ ಪ್ಲೇಸ್ಟೋರ್‌ನಿಂದ ಅಥವಾ https://play.google.com/store/apps/detail ಲಿಂಕ್ ಬಳಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆ್ಯಪ್‌ನಲ್ಲಿ ಆರ್ಥಿಕ ವರ್ಷ (2021-22) ಹಾಗೂ ಋತು (ಮುಂಗಾರು) ಎಂದು ದಾಖಲಿಸಿ ಅಥವಾ ಆಯಕೆ ಮಾಡಿ ತಮ್ಮ ಆಧಾರ್ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸಬೇಕು. ಸರಿಯಾದ ಮಆಹಿತಿಯನ್ನು ಭರ್ತಿ ಮಾಡಿ ಸಕ್ರಿಯಗೊಳಿಸಿದ ಬಳಿಕ ರೈತರು ನಮೂದಿಸಿದ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸ್ವರ್ಡ್ (ಓಟಿಪಿ) ಬರುತ್ತದೆ. ಆ ಓಟಿಪಿ ಸಂಖ್ಯೆಯನ್ನು ದಾಖಲಿಸಿ ನೋಂದಣಿಗೆ ಸಲ್ಲಿಸಬೇಕು.

ಕಳೆದ ಮುಂಗಾರು ಹಂಗಾಮಿನ ಸಾಲಿನಲ್ಲಿ ಕೂಡ ಕೇಂದ್ರ ಸರ್ಕಾರವು ರೈತರು ತಾವು ಬೆಳೆದಿರುವ ಬೆಳೆಗಳ ಮಾಹಿತಿ ನಮೂದಿಸುವ ಕಾರ್ಯವನ್ನು ಸ್ವತಃ ರೈತರಿಂದಲೇ ಮಾಡಿಸಿತ್ತು. ಹೀಗಾಗಿ ಈಗಾಗಲೇ ಒಂದು ಬಾರಿ ತಮ್ಮ ಮೊಬೈಲ್ ಫೋನ್‌ಗಳ ಮೂಲಕ ಬೆಳೆ ಸಮೀಕ್ಷೆ ನಡೆಸಿರುವ ರೈತರು ಕಳೆದ ಬಾರಿ ಅನುಸರಿಸಿದ ಮಾರ್ಗದಲ್ಲೇ ಈ ಬಾರಿಯೂ ಸಮೀಕ್ಷೆ ನಡೆಸುವಂತೆ ಮನವಿ ಮಾಡಲಾಗಿದೆ.

ಮೊಬೈಲ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡ ಬಳಿಕ, ಮೊದಲು ರೈತರ ಜಮೀನು ಇರುವ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮದ ಹೆಸರನ್ನು ನಮೂದಿಸಬೇಕು. ಆ ನಂತರ, ಕೃಷಿ ಬೆಳೆ ಬೆಳೆದಿರುವ ಸರ್ವೇ ನಂಬರ್, ಹಿಸ್ಸಾ ಹಾಗೂ ಹೊಲದ ಮಾಲೀಕರ ಹೆಸರು ಆಯ್ಕೆ ಮಾಡಬೇಕು. ಬಳಿಕ ಅಲ್ಲಿ ನಮೂದಿಸಲಾಗಿರುವ ಸರ್ವೇ ನಂಬರ್‌ಗಳ ಗಡಿ ರೇಖೆಯೊಳಗೆ ನಿಂತು ಬೆಳೆ ಕ್ಷೇತ್ರವನ್ನು ನಮೂದಿಸಿ, ಬೆಳೆಯ ಫೋಟೊ ತೆಗೆದು ಮಾಹಿತಿಯನ್ನು ಅಪ್ ಲೋಡ್ ಮಾಡಬೇಕು.

ಪ್ರತಿ ತಾಲೂಕುಗಳಲ್ಲಿ ತಹಶೀಲ್ದಾರರು ನೇಮಕ ಮಾಡಿರುವ ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಕಂದಾಯ ಇಲಾಖಾ ಅಧಿಕಾರಿಗಳು ಬೆಳೆ ಸಮೀಕ್ಷೆಯ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಲಿದ್ದು, ರೈತರು ಆ್ಯಪ್ ಮುಲಕ ದಾಖಲಿಸಿದ ಬೆಳೆ ವಿವರಗಳನ್ನು ಪರಿಶೀಲಿಸಿ ದೃಢೀಕರಿಸುವರು. ಬೆಳೆ ಸಮೀಕ್ಷೆ ಯೋಜನೆಯು ಕೃಷಿ ಇಲಾಖೆಯ ಮೂಲಕ ಜಿಲ್ಲಾಧಿಕಾರಿಗಳ ನೇರ ಉಸ್ತುವಾರಿಯಲ್ಲಿ ನಡೆಯುವುದು.

ಕೃಷಿ ವಲಯ ಹಾಗೂ ಕೃಷಿಕರಿಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೊಳಿಸುವ ವಿವಿಧ ಯೋಜನೆಗಳ ಅನುಷ್ಠಾನಗೊಳಿಸಲು ಪ್ರಮುಖ ಆಧಾರವಾಗಿ ಬೆಳೆ ಸಮೀಕ್ಷೆ ದತ್ತಾಂಶವನ್ನು ಬಳಸಲಾಗುವುದು. ಸಾಂಖ್ಯಿಕ ಇಲಾಖೆ, ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಬೆಳೆಗಳ ವಿಸ್ತೀರ್ಣವನ್ನು ಲೆಕ್ಕ ಹಾಕುವ ಕಾರ್ಯದಲ್ಲಿ, ಬೆಳೆ ವಿಮೆ ಯೋಜನೆಯ ತಾಕು ಹಂತದ ಬೆಳೆ ಪರಿಶೀಲನೆಗೆ, ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಹಾಗೂ ತಾಕಿನ ಸರ್ವೇ ನಂಬರ್ ಆಯ್ಕೆ ಮಾಡಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೆಲೆ ನಿಗದಿ ಮಾಡಲು ಹಾಗೂ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಆರ್‌ಟಿಸಿಯಲ್ಲಿ ಬೆಳೆ ವಿವರ ದಾಖಲಾತಿಗಾಗಿ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಫ್ ಅಡಿ ಸಹಾಯಧನ ನೀಡಲು, ಅಂದರೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ ಸಿದ್ಧಪಡಿಸಲು, ಹಾನಿಗೊಳಗಾದ ಬೆಳೆ ವಿಸ್ತೀರ್ಣದ ವಿವರ ಸಿದ್ಧಪಡಿಸಲು ಮತ್ತು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಲು ನೆರವಾಗುತ್ತದೆ. ಅಲ್ಲದೆ, ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವ ಸಂದರ್ಭದಲ್ಲಿ ಬೆಳೆ ಸಮೀಕ್ಷೆಯನ್ನೇ ಆಧಾರವಾಗಿ ಇರಿಸಿಕೊಳ್ಳುವ ಕಾರಣ, ರೈತರು ತಪ್ಪದೇ ತಮ್ಮ ಜಮೀನಿನಲ್ಲಿರುವ ಬೆಳೆಗಳ ವಿವರವನ್ನು ರೈತರ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ನಮೂದಿಸುವಂತೆ ಕೋರಲಾಗಿದೆ.

ನಿಗದಿತ ಸಮಯದೊಳಗೆ ರೈತರು ಬೆಳೆ ವಿವರ ನಮೂದಿಸಬೇಕಾಗಿದ್ದು, ತಹಶೀಲ್ದಾರರ ಅಧ್ಯಕ್ಷತೆಯ ತಾಲೂಕು ಮಟ್ಟದ ಸಮಿತಿಯು ನೇಮಿಸಿರುವ ಖಾಸಗಿ ನಿವಾಸಿಗಳ ಸಹಾಯದಿಂದ ರೈತರು ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ಛಾಯಾಚಿತ್ರ ಸಹಿತ ದಾಖಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ತಹಶೀಲ್ದಾರರ ಕಚೇರಿ ಅಥವಾ ಸಂಬಂಧಪಟ್ಟ ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.

Published On: 04 July 2021, 04:24 PM English Summary: request to enter crop profile using crop survey mobile app

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.