News

ಹುಬ್ಬಳ್ಳಿಗೆ ಮೋದಿ: ಬ್ಯಾರಿಕೇಡ್‌ ಹಾರಿ ಹೂ ಮಾಲೆ ಹಾಕಲು ಬಂದ ಬಾಲಕ

13 January, 2023 3:45 PM IST By: Hitesh
Modi to Hubli: A boy who jumped the barricade and came to garland flowers

ಕೃಷಿಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ರೈತರಿಗೆ ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿ ನ್ಯೂಸ್‌ಪರಿಚಯಿಸಿದೆ. ಇಂದಿನ ಪ್ರಮುಖ ಕೃಷಿ ಸುದ್ದಿಗಳು ಈ ರೀತಿ ಇವೆ.

ಶಬರಿಮಲೆ ಪ್ರಸಾದ ಮಾರಾಟಕ್ಕೆ ಕೇರಳ ಹೈಕೋರ್ಟ್‌ ತಡೆ ಕಾರಣವೇನು?

  • ಕೃಷಿ ಜಾಗರಣದಿಂದ 12 ಭಾಷೆಗಳಲ್ಲಿ ಸಿರಿಧಾನ್ಯದ ವಿಶೇಷ ಮಾಸಪತ್ರಿಕೆ ಬಿಡುಗಡೆ - ಕೇಂದ್ರ ಸಚಿವ ಪರಶೋತ್ತಮ ರೂಪಾಲಾ ಮೆಚ್ಚುಗೆ
  • 18 ವರ್ಷದವರೂ ಇನ್ಮುಂದೆ ಮದ್ಯ ಖರೀದಿಸಬಹುದು: ಹೊಸ ಮದ್ಯದಂಗಡಿಗೂ ಅಸ್ತು!
  • ಹುಬ್ಬಳ್ಳಿಗೆ ಮೋದಿ: ಬ್ಯಾರಿಕೇಡ್‌ ಹಾರಿ ಹೂ ಮಾಲೆ ಹಾಕಲು ಬಂದ ಬಾಲಕ
  • 5 ಲಕ್ಷ ಜನರಿಗೆ ಸ್ವಯಂ ಉದ್ಯೋಗ ನೀಡಲು ಯೋಜನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
  • ಬೆಳೆ ರಕ್ಷಿಸಲು ನಾಯಿಗೆ ಹುಲಿ ಬಣ್ಣ: ಬೆಚ್ಚಿಬಿದ್ದ ಜನ
  • ಕೇರಳದಲ್ಲಿ ಹಕ್ಕಿ ಜ್ವರ: 1,800 ಕೋಳಿ ಸಾವು
  • ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಬಿಟ್ಟು ಹಾರಿದ ವಿಮಾನ
  • ರಾಜ್ಯದ 25 ತಾಲ್ಲೂಕುಗಳಲ್ಲಿ ಮಿನಿಟೆಕ್ಸ್‌ ಪಾರ್ಕ್‌: ಸಿ.ಎಂ ಬಸವರಾಜ ಬೊಮ್ಮಾಯಿ
  • ರಾಯಚೂರಿನಲ್ಲಿ ಕೃಷಿ ಇಲಾಖೆಯಿಂದ ಸಿರಿಧಾನ್ಯ ವಸ್ತು ಪ್ರದರ್ಶನ
  • ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ
  • Weather Updates| ಉತ್ತರ ಭಾರತದಲ್ಲಿ ತೀವ್ರ ಚಳಿ: ಕಾನ್ಪುರದಲ್ಲಿ 98 ಜನ ಸಾವು !  

-----------

2023ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ಎಂದು ಘೋಷಿಸಲಾಗಿದೆ. ಕೃಷಿ ಜಾಗರಣವು 2023ರ ಜನವರಿಯ ಮಾಸಪತ್ರಿಕೆಯನ್ನು ವಿಶೇಷವಾಗಿ ಸಿರಿಧಾನ್ಯದ ಜಾಗೃತಿ ಹಾಗೂ ಮಾಹಿತಿಗೆ ಮೀಸಲಿರಿಸಿದ್ದು, 12 ಭಾಷೆಗಳಲ್ಲಿ ಸಿರಿಧಾನ್ಯ ಮಾಸ ಪತ್ರಿಕೆಯ ವಿಶೇಷ ಆವೃತ್ತಿಯನ್ನು ಹೊರತಂದಿದೆ. ಕೃಷಿ ಜಾಗರಣ ಹೊರ ತಂದಿರುವ ಸಿರಿಧಾನ್ಯ ಮಾಸಪತ್ರಿಕೆಯನ್ನು ಗುರುವಾರ ಕೇಂದ್ರ ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಚಿವ ಪರುಶೋತ್ತಮ್‌ ರುಪಾಲಾ ಅವರು ನವದೆಹಲಿಯ ಕೃಷಿ ಜಾಗರಣ ಪ್ರಧಾನ ಕಚೇರಿಯಲ್ಲಿ ವರ್ಚ್ಯೂಲ್‌ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಿರಿಧಾನ್ಯದ ಜಾಗೃತಿ ಹಾಗೂ ಮಾಹಿತಿಗೆ ಕೃಷಿ ಜಾಗರಣ ಆದ್ಯತೆ ನೀಡುತ್ತಿರುವುದು ವಿಶೇಷವಾಗಿದೆ. ಕೃಷಿ ಕ್ಷೇತ್ರದಲ್ಲಿ ಕೃಷಿ ಜಾಗರಣದ ಪ್ರಯತ್ನ ಶ್ಲಾಘಿನೀಯ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ರೈತರ ಆದಾಯ ಹೆಚ್ಚಳಕ್ಕೆ ಕೃಷಿ ಜಾಗರಣ ಮಹತ್ವದ ಹೆಜ್ಜೆ ಇರಿಸಿದೆ. ರೈತರನ್ನು ಫಾರ್ಮರ್ ದಿ ಜರ್ನಲಿಸ್ಟ್ ಆಗಿ ಪರಿವರ್ತಿಸುವ ಯೋಜನೆಯಡಿ 900 ರೈತರಿಗೆ ತರಬೇತಿ ನೀಡಿದ ಕೃಷಿ ಜಾಗರಣದ ಕಾರ್ಯ ನಿಜಕ್ಕೂ ಅಭಿನಂದನೀಯ ಎಂದರು. ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ ಕೈಲಾಶ ಚೌದರಿ, ಉತ್ತರಾಖಂಡದ ಕೃಷಿ ಸಚಿವ ಗಣೇಶ್ ಜೋಶಿ, ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ ಸಿಇಒ ಅಶೋಕ್ ದಳವಾಯಿ, ICAR ಪ್ರಾಜೆಕ್ಟ್ ಮ್ಯಾನೇಜರ್ ಡಾ.ಎಸ್.ಕೆ. ಮಲ್ಹೋತ್ರಾ ಅವರು ಸೇರಿದಂತೆ ಕೃಷಿ ಜಾಗರಣ ತಂಡದ ಪ್ರಮುಖರು ಭಾಗವಹಿಸಿದ್ದರು.
-----------

ಮುಂದಿನ ದಿನಗಳಲ್ಲಿ 18 ವರ್ಷದವರೂ ಸಹ ಮದ್ಯ ಖರೀದಿ ಮಾಡಬಹುದು. ಹೌದು, ಈಗ ಇರುವ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ನಿರ್ಬಂಧಕ್ಕೆ ಸರ್ಕಾರ ತಿದ್ದುಪಡಿ ತರುತ್ತಿದೆ. ಮದ್ಯ ಖರೀದಿ ವಯಸ್ಸಿನ ಮಿತಿಯನ್ನು 18 ವರ್ಷಗಳಿಗೆ ಇಳಿಸುವ ನಿಟ್ಟಿನಲ್ಲಿ ಕರ್ನಾಟಕ ಅಬಕಾರಿ ಪರವಾನಿಗೆ ನಿಯಮಗಳಿಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ನಿಯಮ ಈಗ ಜಾರಿಯಲಿದೆ. ಅದನ್ನು ಬದಲಿಸಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಹೊಸದಾಗಿ ಪ್ರಸ್ತಾವನೆಯನ್ನು ಸೇರಿಸಲಾಗಿದೆ. ಅಬಕಾರಿ ನಿಯಮಗಳಿಗೆ ತಿದ್ದುಪಡಿ ತರಲು ಇಲಾಖೆ ಸಿದ್ಧಪಡಿಸಿರುವ ಕರಡು ಪ್ರತಿಯನ್ನು ಈಚೆಗೆ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಇನ್ನು ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು 5 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ, ಇನ್ನುಳಿದ ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳ ಅಂಚಿನಿಂದ 500 ಮೀಟರ್‌ವರೆಗಿನ ಪ್ರದೇಶದಲ್ಲಿ ಹೊಸ ಮದ್ಯದಂಗಡಿ ತೆರೆಯುವುದನ್ನು ನಿರ್ಬಂಧಿಸಿರುವುದನ್ನು ಅಬಕಾರಿ ನಿಯಮಗಳ ವ್ಯಾಪ್ತಿಗೆ ತರಲಾಗುತ್ತಿದೆ. 20 ಸಾವಿರ ಅಥವಾ ಅದಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೆದ್ದಾರಿಯ ಅಂಚಿನಿಂದ 220 ಮೀಟರ್‌ ನಂತರದಲ್ಲಿ ಮದ್ಯದಂಗಡಿಗಳಿಗೆ ಪರವಾನಿಗೆ ಪಡೆಯಲು ಅರ್ಹವಾಗಿದೆ. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ 2011ರ ಜನಗಣತಿ ಪ್ರಕಾರ 5 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳ ವ್ಯಾಪ್ತಿಗೆ 500 ಮೀಟರ್‌ ನಿರ್ಬಂಧ ಅನ್ವಯವಾಗುವುದಿಲ್ಲ ಎನ್ನುವ ಅಂಶವನ್ನು ಉದ್ದೇಶಿತ ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ.

-----------------

ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ 26ನೇ ರಾಷ್ಟ್ರೀಯ ಯುವ
ಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಚಾಲನೆ ನೀಡಿದರು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ನಡೆಸಿದ ರೋಡ್‌ ಶೋ ವೇಳೆ ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆಯೇ ಬಾಲಕನೊಬ್ಬ ಬ್ಯಾರಿಕೇಡ್ ದಾಟಿ ಪ್ರಧಾನ ಮಂತ್ರಿಗೆ ಹೂವಿನ ಹಾರ ಹಾಕಲು ಓಡಿ ಬಂದ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ನಡೆದಿದೆ. ಈ ಘಟನೆ ಇದೀಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಮೋದಿ ಅವರಿಗೆ ನೀಡಲಾಗಿರುವ ಭದ್ರತೆಯಲ್ಲಿ ಲೋಪವಾಗಿರುವ ಬಗ್ಗೆಯೂ ಚರ್ಚೆ ನಡೆದಿದೆ. ಈ ಪ್ರಕರಣದ ಕುರಿತು ಮಾತನಾಡಿದ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ರಮಣ್ ಗುಪ್ತಾ ಅವರು, ರೋಡ್ ಶೋ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಹೂಮಾಲೆ ಹಾಕಲು ಬಾಲಕ ಮುಂದಾಗಿದ್ದಾನೆ. ಆದರೆ,ಇದು ಭದ್ರತಾ ಲೋಪ ಅಲ್ಲ. ರೋಡ್‌ ಶೋ ವೇಳೆ ಲಕ್ಷಾಂತರ ಜನರು ಸೇರಿದ್ದರು. ಇಂತಹ ಸಂದರ್ಭದಲ್ಲಿ ಬಾಲಕ ಬ್ಯಾರಿಕೇಡ್ ಹಾರಿ ಬಂದಿದ್ದಾನೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದಿದ್ದಾರೆ.

-----------------

ರಾಜ್ಯದ 5 ಲಕ್ಷ ಜನರಿಗೆ ಸ್ವಯಂ ಉದ್ಯೋಗ ನೀಡುವ ಸ್ವಾಮಿ ವಿವೇಕಾನಂದ ಯೋಜ‌ನೆಯನ್ನು ಕರ್ನಾಟಕದಲ್ಲಿ ಅನುಷ್ಠಾನ
ಗೊಳಿಸಲಾಗುತ್ತಿದೆ. ದೇಶದಲ್ಲಿಯೇ ಮೊಟ್ಟ ಮೊದಲು ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದ ಕೀರ್ತಿ ನಮ್ಮ ರಾಜ್ಯದ್ದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಮುಂದಿನ ಓಲಂಪಿಕ್ ಕ್ರೀಡಾಕೂಟಕ್ಕಾಗಿ ರಾಜ್ಯವು 75 ಜನ ಕ್ರೀಡಾಪಟುಗಳನ್ನು ಅಣಿಗೊಳಿಸಲು ಪ್ರತಿಭಾವಂತರನ್ನು ದತ್ತು ಪಡೆದು ತರಬೇತಿ ನೀಡಲಾಗುವುದು ಎಂದಿದ್ದಾರೆ. ಯುವಜನರನ್ನು ಸ್ವಯಂ ಉದ್ಯೋಗಿಗಳನ್ನಾಗಿಸಲು ರಾಜ್ಯ ಸರ್ಕಾರವು ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಯೋಜನೆ ಜಾರಿಗೊಳಿಸಲಿದೆ. ಸ್ವಾಮಿ ವಿವೇಕಾನಂದರು ಯುವಕರಿಗೆ ಪ್ರೇರಣೆಕೊಟ್ಟ ಧೀಮಂತ ಯೋಗಿಯಾಗಿದ್ದಾರೆ. ಧ್ಯಾನ ಮತ್ತು ಜ್ಞಾನವನ್ನು ಯುವಜನರಿಗೆ ಬೋಧಿಸಿದ ಮಹಾನ್ ಚೇತನರಾಗಿದ್ದಾರೆ ಎಂದು ಹೇಳಿದ್ದಾರೆ.

 -----------------

ಚಿನ್ನದ ದರದಲ್ಲಿ ಮತ್ತೆ ಏರಿಕೆ, ಎಷ್ಟಿದೆ ಇಂದಿನ ಚಿನ್ನದ ದರ ? 

ಕೋತಿಗಳ ಉಪಟಳದಿಂದ ಬೆಳೆಗಳನ್ನು ರಕ್ಷಿಸಲು ಚಾಮರಾಜನಗರದ ಅಜ್ಜೀಪುರದ ರೈತ ಮಂಜು ಎಂಬವರು ಸಾಕು ನಾಯಿಗೆ ಹುಲಿಯ ಬಣ್ಣ ಬಳಿದು ಕೋತಿಗಳ ಹಾವಳಿಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಅವರು ಅನುಸರಿಸಿದ ಹುಲಿಯ ವೇಷದ ನಾಯಿಯ ಚಿತ್ರ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತಾಲ್ಲೂಕಿನ ಅಜ್ಜೀಪುರದ ಹೊರವಲಯದಲ್ಲಿರುವ ತೋಟಗಳಿಗೆ ಕೋತಿಗಳ ಉಪಟಳ ವಿಪರೀತವಾಗಿದ್ದು, ಅವುಗಳನ್ನು ಕಾಯುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು. ಕೋತಿಗಳನ್ನು ಓಡಿಸಲು ಮಂಜು ಕಂಡುಕೊಂಡ ಉಪಾಯ ಫಲ ನೀಡುತ್ತಿದೆ. ಜಮೀನಿನಲ್ಲಿ ಬೆಳೆದಿದ್ದ ಬೆಳೆ, ತೆಂಗಿನ ಕಾಯಿಗಳನ್ನು ಹಾಳು ಮಾಡುತ್ತಿದ್ದ ಕೋತಿಗಳು ಈಗ ನಾಯಿ ನೋಡಿ ಹೆದರಿ ದೂರ ಸರಿದಿವೆ. ಬೆಳೆ ರೈತನ ಕೈ ಸೇರುತ್ತಿದೆ. ಕಾಡಿನ ಸಮೀಪದ ಜಮೀನುಗಳಲ್ಲಿ ನಾಯಿ ಓಡಾಡುತ್ತಿದ್ದು, ಹುಲಿ ವೇಷದ ನಾಯಿ ಕಂಡು ಬೆಚ್ಚಿಬಿದಿದ್ದಾರೆ. ನಂತರ ನಾಯಿಗೆ ಬಣ್ಣ ಬಳಿದಿರುವುದು ತಿಳಿದ ಮೇಲೆ ನಿಟ್ಟುಸಿರು ಬಿಟ್ಟಿದ್ದಾರೆ.

---------------------------

ಕೇರಳದಲ್ಲಿ ಹಕ್ಕಿ ಜ್ವರ ಮತ್ತೆ ಹೆಚ್ಚಾಗಿದ್ದು, ಕೋಯಿಕ್ಕೋಡ್‌‌ ಜಿಲ್ಲೆಯ ಫಾರ್ಮ್‌ವೊಂದರಲ್ಲಿ ಸುಮಾರು 1,800 ಕೋಳಿಗಳು ಸಾವನ್ನಪ್ಪಿವೆ. ಜಿಲ್ಲಾ ಪಂಚಾಯತಿ ನಿರ್ವಹಣೆಯಲ್ಲಿರುವ ಸ್ಥಳೀಯ ಫಾರಂನ ಕೋಳಿಗಳಲ್ಲಿ ಎಚ್‌5ಎನ್1 ಸೋಂಕು ಇರುವುದು ದೃಢಪಟ್ಟಿವೆ. ಕೇಂದ್ರ ಮಾರ್ಗಸೂಚಿಯಂತೆ ಹಕ್ಕಿ ಜ್ವರ ತಡೆಗಟ್ಟಲು ತುರ್ತಾಗಿ ಕ್ರಮ ಕೈಗೊಳ್ಳುವಂತೆ ಕೇರಳದ ಪಶುಸಂಗೋಪನಾ ಇಲಾಖೆ ಸಚಿವೆ ಜೆ. ಚಿಂಚುರಾಣಿ ನಿರ್ದೇಶನ ನೀಡಿದ್ದಾರೆ.

---------------------------
 ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ವಿಮಾನವೊಂದು ಶಟಲ್ ಬಸ್‌ನಲ್ಲಿ ಕಾಯುತ್ತಿದ್ದ  50ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು ದೆಹಲಿಗೆ ಹಾರಿದ ಘಟನೆ ನಡೆದಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು,  ಪ್ರಯಾಣಿಕರ ಕುರಿತು ನಿರ್ಲಕ್ಷ್ಯ ಧೋರಣೆ ಅನುಸರಿಸಿದ ಗೋ ಫಸ್ಟ್‌ ವಿಮಾನಯಾನ ಸಂಸ್ಥೆಗೆ ಘಟನೆ ಕುರಿತು ವರದಿ ನೀಡುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಕಾರಣ ಕೇಳಿದೆ. ಒಟ್ಟು 55 ಪ್ರಯಾಣಿಕರು ಜನವರಿ 9ರಂದು ದೆಹಲಿಗೆ ಹೊರಟ ಗೋ ಫಸ್ಟ್‌ ವಿಮಾನ ಏರಲು ಶಟಲ್‌ ಬಸ್‌ನಲ್ಲಿ ಕಾಯುತ್ತಿದ್ದರು. ಆದರೆ,  ವಿಮಾನಯಾನ ಸಂಸ್ಥೆ ಈ ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು ಹಾರಿದೆ. ಬಳಿಕ 53 ಪ್ರಯಾಣಿಕರನ್ನು ಮತ್ತೊಂದು ವಿಮಾನದಲ್ಲಿ ದೆಹಲಿಗೆ ಕಳುಹಿಸಲಾಗಿದೆ.  ಇಬ್ಬರು ಪ್ರಯಾಣಿಕರು ಮತ್ತೊಂದು ವಿಮಾನದಲ್ಲಿ ಹೋಗಲು  ನಿರಾಕರಿಸಿದ್ದು, ತಮ್ಮ ಟಿಕೆಟ್‌ ಹಣ ಮರುಪಾವತಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. 

---------------------------

ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ರಾಜ್ಯದ 25 ತಾಲ್ಲೂಕುಗಳಲ್ಲಿ ಮಿನಿ ಟೆಕ್ಸ್‌ಟೈಲ್‌ ಪಾರ್ಕ್ ಸ್ಥಾಪನೆ ಮಾಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ದೇಶನ ನೀಡಿದ್ದಾರೆ. ವಿದ್ಯುತ್ ಮಗ್ಗ ನೇಕಾರರು ಮತ್ತು ಕಾರ್ಮಿಕರಿಗೆ ಡಿಬಿಟಿ ಮೂಲಕ ನೇಕಾರ್ ಸಮ್ಮಾನ್ ಯೋಜನೆಯ ಸಹಾಯಧನ ವರ್ಗಾವಣೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಹತ್ತಿ ಸಂಸ್ಕರಣೆಯಿಂದ ವಸ್ತ್ರ, ಸಿದ್ಧ ಉಡುಪು ತಯಾರಿಕೆ ಮತ್ತಿತರ ಹಂತಗಳನ್ನು ಒಳಗೊಂಡ ಟೆಕ್ಸ್‌ಟೈಲ್‌ ಪಾರ್ಕ್ ಸ್ಥಾಪಿಸುವ ಮೂಲಕ ನೇಕಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಲಾಗಿದೆ ಎಂದರು. ಅಲ್ಲದೇ, ಡಿಜಿಟಲ್ ವೇದಿಕೆಯ ಮೂಲಕ ಮಾರುಕಟ್ಟೆ ವಿಸ್ತರಿಸಬೇಕು. ಉತ್ಪನ್ನಗಳ ಗುಣಮಟ್ಟ ವೃದ್ಧಿಯಾದರೆ ರಫ್ತಿಗೂ ಅನುಕೂಲವಾಗುತ್ತದೆ. ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತಿತರ ಆನ್‌ಲೈನ್‌ ವ್ಯಾಪಾರಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕೈಮಗ್ಗ ಮತ್ತು ಜವಳಿ ಇಲಾಖೆ ಸಹಕಾರ ನೀಡಲಿದೆ ಎಂದು ತಿಳಿಸಿದರು.

---------------------------

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಕೃಷಿಮೇಳದಲ್ಲಿ ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹಿಸುವ ಮತ್ತು ಜಲಾನಯನ ಅಭಿವೃದ್ಧಿ ಮೂಲಕ ಬರಗಾಲ ತಡೆಯುವಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ರೈತರಿಗೆ ಪರಿಚಯಿಸಲಾಯಿತು. ವಿಶ್ವಸಂಸ್ಥೆಯು 2023ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿದೆ. ಸಿರಿಧಾನ್ಯಗಳನ್ನು ಬೆಳೆಯುವುದು, ಬಳಸುವುದಕ್ಕೆ ಜನರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಮಾದರಿ ನಿರ್ಮಿಸಲಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಆರ್‌.ದೇವಿಕಾ ತಿಳಿಸಿದರು.

ರಾಯಚೂರು ಜಿಲ್ಲೆಯಲ್ಲಿ ಈ ವರ್ಷ 500ಹೆಕ್ಟೇರ್‌ನಲ್ಲಿ ಸಿರಿಧಾನ್ಯಗಳನ್ನು ರೈತರು ಬೆಳೆದಿದ್ದಾರೆ. ಮುಖ್ಯವಾಗಿ ಲಿಂಗಸುಗೂರು ಮತ್ತು ಸಿರವಾರ ತಾಲ್ಲೂಕುಗಳಲ್ಲಿ ಸಿರಿಧಾನ್ಯ ಬೆಳೆಯುತ್ತಿದ್ದಾರೆ. ನವಣೆ ಹೆಚ್ಚಿನ ಪ್ರಮಾಣದಲ್ಲಿದೆ. ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ 6 ಸಾವಿರ ರೂಪಾಯಿ ಪ್ರೋತ್ಸಾಹಧನವನ್ನು ಸರ್ಕಾರ ನೀಡುತ್ತಿದೆ. ಮಳೆನೀರನ್ನು ಸಂರಕ್ಷಣೆ ಮಾಡಿಕೊಂಡು ಸುಸ್ಥಿರ ಕೃಷಿ ಮಾಡುವ ವಿಧಾನವನ್ನು ಕಲಾಕೃತಿ ರೂಪದಲ್ಲಿ ನಿರ್ಮಿಸಲಾಗಿದೆ. ಗುಡ್ಡಗಾಡುಗಳಿಂದ ಮಳೆ ನೀರು ಕೆಳಭಾಗಕ್ಕೆ ಹರಿಯುವಾಗ ಮಣ್ಣು ಸಂರಕ್ಷಣೆ ಹೇಗೆ ಮಾಡಿಕೊಳ್ಳುವುದು, ಮಳೆ ನೀರು ಸಂಗ್ರಹಿಸುವ ವಿಧಾನಗಳನ್ನು ಈ ಮಾದರಿ ಮೂಲಕ ಮನವರಿಕೆ ಆಗುವಂತೆ ವ್ಯವಸ್ಥೆ ಮಾಡಲಾಗಿದೆ. ಚೆಕ್‌ಡ್ಯಾಂ ನಿರ್ಮಾಣ ಮಾಡುವುದು, ನಾಲಾ ಬದುಗಳನ್ನು ನಿರ್ಮಿಸುವುದು, ಕೃಷಿ ಹೊಂಡ ಮಾಡುವುದರಿಂದ ನೀರನ್ನು ಸಂರಕ್ಷಿಸಬಹುದು ಎಂಬ ಪ್ರಾತ್ಯಕ್ಷಿಕೆಗಳನ್ನು ತೋರಿಸಲಾಗಿದೆ.   ಬರಡು ಭೂಮಿಯನ್ನು ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತಿಸುವುದು ಸೇರಿದಂತೆ ಒಟ್ಟಾರೆ ಮಳೆನೀರನ್ನು ಸಮರ್ಪಕವಾಗಿ ಬಳಸಿಕೊಂಡು ಆದಾಯ ಹೆಚ್ಚಿಸಿಕೊಳ್ಳುವುದು ಮತ್ತು ಭೂಮಿಯನ್ನು ದೀರ್ಘಕಾಲ ಕಾಪಾಡಿಕೊಳ್ಳುವ ಅಂಶಗಳನ್ನು ಈ ಜಲಾನಯನ ಮಾದರಿಯಲ್ಲಿ ತೋರಿಸಲಾಗಿದೆ. 

---------------------------

Aadhaar Card| ಆಧಾರ್ ಕಾರ್ಡ್ ನವೀಕರಣ: UIDAI ಟೋಲ್ ಫ್ರೀ ಸಂಖ್ಯೆ ಪರಿಚಯ  

CM Basavaraja Bommai
  • ದೆಹಲಿಯಲ್ಲಿ ನಡೆಯುವ ಗಣರೋಜ್ಯೋತ್ಸವದ ಪರೇಡ್‌ಗೆ ಕೊನೆಗೂ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡಲಾಗಿದೆ. ಈಚೆಗೆ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಪದ್ಮಶ್ರಿ ಪ್ರಶಸ್ತಿ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ, ಸಾಲುಮರದ ತಿಮ್ಮಕ್ಕ ಮತ್ತು ತುಳಸಿಗೌಡ ಹಾಲಕ್ಕಿ ಅವರ ಸಾಧನೆಗಳನ್ನು ಬಿಂಬಿಸುವ ಕರ್ನಾಟಕದ ನಾರಿ ಶಕ್ತಿ ವಿಷಯದ ಸ್ತಬ್ಧ ಚಿತ್ರವನ್ನು ಅಂತಿಮ ಹಂತದಲ್ಲಿ ಕೇಂದ್ರ ಸರ್ಕಾರ ಕೈ ಬಿಟ್ಟಿತ್ತು. ಈ ನಡೆಗೆ ರಾಜ್ಯದ ಜನತೆ ಹಾಗೂ ವಿರೋಧ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ನಡೆದ ನಾಲ್ಕು ಸಭೆಗಳಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಸಂಬಂಧ ಒಪ್ಪಿಗೆ ಸೂಚಿಸಿದ ಕೇಂದ್ರ ಸರ್ಕಾರ, ಐದನೇ ಸಭೆಯಲ್ಲಿ ಕರ್ನಾಟಕವನ್ನು ಕೈಬಿಟ್ಟಿತ್ತು. ಇತರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದ ಕರ್ನಾಟಕವನ್ನು ಕೈ ಬಿಡಲಾಗಿದೆ ಎಂದು ಹೇಳಲಾಗಿತ್ತು. ಕರ್ನಾಟಕದ ಸ್ತಬ್ಧಚಿತ್ರ ಕೈಬಿಟ್ಟ ನಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿತ್ತು. ಟೀಕೆಯ ನಂತರ ಇದೀಗ ಕೊನೆ ಕ್ಷಣ ಕ್ಷಣದಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ನೀಡಲಾಗಿದೆ. 
  • pm kisan update| ಪಿ.ಎಂ ಕಿಸಾನ್‌ 13ನೇ ಕಂತಿಗೆ ಮೊದಲು ಈ ಅಪ್ಡೇಟ್‌ ಮಾಡಿ