News

ಮಡಿಕೇರಿಯಲ್ಲಿ ಕಾರ್ಯಾಚರಣೆ ವೇಳೆ ಆನೆ ಸ್ಥಳದಲ್ಲೇ ಸಾವು

14 January, 2023 1:43 PM IST By: Hitesh
An elephant died on the spot during an operation in Madikeri

ಕೃಷಿಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ರೈತರಿಗೆ ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿ ನ್ಯೂಸ್‌ ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಹೀಗಿವೆ.

ಹುಬ್ಬಳ್ಳಿಗೆ ಮೋದಿ: ಬ್ಯಾರಿಕೇಡ್‌ ಹಾರಿ ಹೂ ಮಾಲೆ ಹಾಕಲು ಬಂದ ಬಾಲಕ

ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಚಿರತೆ ಕಾಣಿಸಿಕೊಂಡಿರುವುದು ವರದಿ ಆಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿಗೆ ಬೆಂಗಳೂರು ವಿಶ್ವವಿದ್ಯಾಲಯವು ಮುಂಜಾಗ್ರತಾ ಕ್ರಮ ವಹಿಸುವಂತೆ ಸೂಚನೆ ನೀಡಿದೆ. ಈ ಸಂಬಂಧ ಬೆಂಗಳೂರು ವಿವಿ ರಿಜಿಸ್ಟ್ರರ್ ಸುತ್ತೋಲೆ ಹೊರಡಿಸಿದ್ದು, ಚಿರತೆ ಸೆರೆ ಹಿಡಿಯುವಂತೆ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಇನ್ನು ಕ್ಯಾಂಪಸ್‌ನಲ್ಲಿ ಚಿರತೆ ಪ್ರತ್ಯಕ್ಷ ಕುರಿತು ವರದಿ ಆಗಿರುವ ಹಿನ್ನೆಲೆಯಲ್ಲಿ ವಿವಿಯ ಎಲ್ಲಾ ವಿದ್ಯಾರ್ಥಿಗಳು, ಹಾಸ್ಟೆಲ್‌ನಲ್ಲಿ ಇರುವವರು, ಬೋಧನಾ ಸಿಬ್ಬಂದಿ ಸೇರಿದಂತೆ ಎಲ್ಲರೂ ರಾತ್ರಿ ವೇಳೆಯಲ್ಲಿ ಸಂಚರಿಸುವುದನ್ನು ತಡೆಯಬೇಕು. ಚಿರತೆ ಕಂಡುಬಂದಿಲ್ಲ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಕಳೆದ ತಿಂಗಳು ಬೆಂಗಳೂರು ದಕ್ಷಿಣ ವಲಯ ಮತ್ತು ಕನಕಪುರ ರಸ್ತೆಯ ತುರಹಳ್ಳಿ ಅರಣ್ಯದ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿತ್ತು.

------------------

ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಚಿಕ್ಕಬಳ್ಳಾಪುರದ ರೈತರು ನೋಂದಣಿ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಗೆ ರಾಗಿ ಖರೀದಿಸಲು ಜಿಲ್ಲೆಯಲ್ಲಿ ನೋಂದಣಿ ಕೇಂದ್ರಗಳನ್ನು ತೆರೆದಿದ್ದು, ಈವರೆಗೆ 8,545 ರೈತರು ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ಕ್ವಿಂಟಲ್‍ಗೆ 3,578 ರೂಪಾಯಿನಂತೆ ಪ್ರತಿ ಹೆಕ್ಟೇರ್‌ಗೆ 10 ಕ್ವಿಂಟಲ್‍ನಂತೆ ಗರಿಷ್ಠ 20 ಕ್ವಿಂಟಲ್ ರಾಗಿ ಖರೀದಿಸಲು ಸರ್ಕಾರ ಆದೇಶಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಚಿಂತಾಮಣಿ, ಶಿಡ್ಲಘಟ್ಟ ಮತ್ತು ಗುಡಿಬಂಡೆ ತಾಲ್ಲೂಕು ಕೇಂದ್ರಗಳಲ್ಲಿ ರಾಗಿ ಮಾರಾಟಕ್ಕೆ ನೋಂದಣಿ ಪ್ರಕ್ರಿಯೆಗಳು ನಡೆಯುತ್ತಿವೆ.

------------------

ಕೇರಳದ ಪ್ರಖ್ಯಾತ ಶಬರಿಮಲೆ ದೇವಸ್ಥಾನದ ಪ್ರಸಾದ ಮಾರಾಟ ಹಾಗೂ ತಯಾರಿಕೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಪ್ರಸಾದದಲ್ಲಿ ಬಳಸಲಾಗುತ್ತಿರುವ ಏಲಕ್ಕಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಕೀಟನಾಶಕ ಪ್ರಮಾಣ ಕಂಡು ಬಂದ ಹಿನ್ನೆಲೆಯಲ್ಲಿ ಕಳವಳ ವ್ಯಕ್ತಪಡಿಸಿರುವ ನ್ಯಾಯಾಲಯವು, ಪ್ರಸಾದ ಮಾರಾಟವನ್ನು ತಡೆಹಿಡಿಯುವಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ ನಿರ್ದೇಶನ ನೀಡಿದೆ. ದೇವಸ್ಥಾನದ ಪ್ರಸಾದ ವಿತರಣೆಯ ಗುತ್ತಿಗೆಯನ್ನು ಪಡೆಯಲು ವಿಫಲವಾಗಿದ್ದ ಕಂಪನಿಯೊಂದು ಪ್ರಸಾದದ ಕುರಿತು ಪರಿಶೀಲನೆ ನಡೆಸುವಂತೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಪರಿಗಣಿಸಿದ್ದ ಹೈಕೋರ್ಟ್‌ ಪ್ರಸಾದವನ್ನು ಪರೀಕ್ಷೆ ಮಾಡುವಂತೆ ಸೂಚನೆ ನೀಡಿತ್ತು. ಕೇರಳ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಪರೀಕ್ಷೆಗಳನ್ನು ಕಳೆದ ವಾರ ನಡೆಸಲಾಗಿತ್ತು. ಇದರಂತೆ ತಿರುವನಂತಪುರದ ರಾಜ್ಯ ಆಹಾರ ಸುರಕ್ಷಾ ಪ್ರಾಧಿಕಾರದ ಲ್ಯಾಬ್‌ ಮತ್ತು ಕೊಚ್ಚಿಯಲ್ಲಿರುವ ಭಾರತದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ ಲ್ಯಾಬ್‌ಗಳಲ್ಲಿ ಅರವಣ ಪಾಯಸಂ ಅನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಮಿತಿ ಮೀರಿದ ಕೀಟನಾಶಕದ ಅಂಶ ಇರುವುದು ಸಾಬೀತಾಗಿದೆ. ಲ್ಯಾಬ್‌ಗಳ ಪರೀಕ್ಷಾ ಫಲಿತಾಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ವರದಿ ಪರಿಶೀಲಿಸಿದ ನ್ಯಾಯಾಲಯವು ಪರೀಕ್ಷೆಗೆ ಒಳಪಡಿಸಿದ ಬ್ಯಾಚ್‌ನ ಪ್ರಸಾದ ವಿತರಣೆ ಮಾಡಬಾರದು ಎಂದು ಕೋರ್ಟ್‌ ದೇವಸ್ವಂ ಬೋರ್ಡ್‌ಗೆ ಸೂಚನೆ ನೀಡಿದೆ. ಇದೀಗ ಈ ಬಗ್ಗೆ ನಿರ್ಧಾರ ಕೈಗೊಂಡಿರುವ ದೇವಸ್ವಂ ಮಂಡಳಿ, ಸದ್ಯಕ್ಕೆ ಎಲ್ಲಾ ಯಂತ್ರಗಳನ್ನು ಸ್ವಚ್ಛಗೊಳಿಸಿ ಏಲಕ್ಕಿ ಇಲ್ಲದೆ ಪಾಯಸ ತಯಾರಿಸುತ್ತೇವೆ. ಕೆಲವು ದಿನ ನಾವು ಏಲಕ್ಕಿ ರಹಿತ ಪಾಯಸ ವಿತರಿಸುತ್ತೇವೆ ಮತ್ತು ಸಾವಯವ ಏಲಕ್ಕಿಯನ್ನು ಸಂಗ್ರಹಿಸಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದೆ.

------------------

Self-Employment| 5 ಲಕ್ಷ ಜನರಿಗೆ ಸ್ವಯಂ ಉದ್ಯೋಗ ನೀಡಲು ಯೋಜನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

------------------

ರಾಜ್ಯದಲ್ಲಿ ಕೊಬ್ಬರಿ ಬೆಳೆಗಾರರ ಸಂಕಷ್ಟವನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಶೀಘ್ರ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ ಕೇಂದ್ರ ಆರಂಭಿಸಲಿದೆ ಎಂದು ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರದ ಪ್ರೋತ್ಸಾಹಧನ ಯೋಜನೆ ಅಡಿ ನಾಫೆಡ್‌ ಬೆಳೆಗಾರರಿಂದ ಕೊಬ್ಬರಿ ಖರೀದಿಸಲಿದೆ. ಕೆಲವು ವರ್ಷಗಳಿಂದ ಕ್ವಿಂಟಲ್‌ಗೆ 15 ಸಾವಿರ ರೂಪಾಯಿ ಅಸುಪಾಸಿನಲ್ಲಿದ್ದ ಕೊಬ್ಬರಿ ದರವು ಮೂರು ತಿಂಗಳಿನಿಂದ ಕುಸಿದಿದೆ. ಇದರಿಂದ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು. ಎರಡು ವರ್ಷದಿಂದ ಕೊಬ್ಬರಿ ಸಕಾಲದಲ್ಲಿ ಸಿಗದೆ ಹಸಿ ಅಂಶ ಉಳಿದುಕೊಂಡು ಬೆಳೆಗಾರರಿಗೆ ನಷ್ಟವಾಗುತ್ತಿದೆ. ಹೀಗಾಗಿ, ಆರ್ಥಿಕ ತಜ್ಞರೊಂದಿಗೆ ಅಧಿಕಾರಿಗಳು ಸಮಾಲೋಚನೆ ನಡೆಸಿದ ನಂತರ ಉಂಡೆ ಕೊಬ್ಬರಿ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 11,750 ಸಾವಿರಕ್ಕೆ ನಿಗದಿಪಡಿಸಲಾಗಿದೆ. ಇದರ ಜೊತೆಗೆ ರಾಜ್ಯ ಸರ್ಕಾರದ ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದರು.

------------------

ವಿವೇಕಾನಂದರ ಯೋಜನೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನ ಮಾಡುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸ್ವಾಮಿವಿವೇಕಾನಂದರ ಜಯಂತಿಯ ಪ್ರಯುಕ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಪ್ರತಿ ಪಂಚಾಯಿತಿಯಿಂದ ಎರಡು ಸಂಘದಂತೆ, 16 ಸಾವಿರ ಯುವ ಸಂಘಗಳಿಗೆ ಸರ್ಕಾರದಿಂದ  1 ಲಕ್ಷ ರೂಪಾಯಿ ಹಾಗೂ ಬ್ಯಾಂಕ್‌ಗಳಿಂದ 5 ಲಕ್ಷ ರೂಪಾಯಿ ನೀಡಿ ವಿವೇಕಾನಂದ ಯೋಜನೆ ಜಾರಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಇನ್ನು ಸ್ವಾಮಿ ವಿವೇಕಾನಂದರ ಯೋಜನೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನಕ್ಕೆ ತರಬೇಕು ಎಂಬ ದೃಷ್ಟಿಯಿಂದ ಗ್ರಾಮೀಣ ಪ್ರದೇಶದ 18 ವರ್ಷ ದಿಂದ 30 ವರ್ಷ ಇರುವಂತಹ ಯುವಕರ ತಂಡಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿ ಆ ಗ್ರಾಮಗಳನ್ನು ಮಾದರಿ ಗ್ರಾಮವಾಗಿ ಮಾಡಲಾಗುವುದು ಎಂದಿದ್ದಾರೆ. 

------------------

ಮಡಿಕೇರಿಯ ಕುಶಾಲನಗರ ತಾಲ್ಲೂಕಿನ ಅತ್ತೂರು ನಲ್ಲೂರು ಗ್ರಾಮದಲ್ಲಿ ಶುಕ್ರವಾರ ಕಾಡಾನೆಯೊಂದನ್ನು ಸೆರೆ ಹಿಡಿಯುವ ವೇಳೆ ಅದು 32 ಅಡಿ ಆಳದ ಹಳ್ಳಕ್ಕೆ ಬಿದ್ದು ಮೃತಪಟ್ಟಿದೆ. ಆನೆ ಕಾರ್ಯಪಡೆಯ ಡಿಸಿಎಫ್‌ ಪೂವಯ್ಯ ಅವರು ಮಾತನಾಡಿ, ಅರಿವಳಿಕೆ ಚುಚ್ಚುಮದ್ದು ನೀಡಿದ ನಂತರ ಆನೆಯು ಸ್ಥಳದಿಂದ ಓಡಿತು. ಸ್ವಲ್ಪ ದೂರ ಸಾಗಿದ ನಂತರ ಆಕಸ್ಮಿಕವಾಗಿ 32 ಅಡಿ ಆಳದ ಹಳ್ಳಕ್ಕೆ ಬಿದ್ದು, ತೀವ್ರವಾಗಿ ಗಾಯಗೊಂಡಿತು. ಬಿದ್ದ ರಭಸಕ್ಕೆ ಆನೆಯ ಅಂಗಾಂಗಗಳಿಗೆ ತೀವ್ರವಾದ ಹಾನಿಯಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದೆ. ಇದರ ಬಲಗಣ್ಣು ದೃಷ್ಟಿ ಕಳೆದುಕೊಂಡಿದ್ದರಿಂದ 32 ಅಡಿ ಆಳದ ಸಿಮೆಂಟ್‌ ಗುಂಡಿ ಬಹುಶಃ ಇದಕ್ಕೆ ಕಾಣಿಸದೆ ಇರುವ ಸಾಧ್ಯತೆ ಇದೆ ಎಂದಿದ್ದಾರೆ. ಸದ್ಯ, ಮೀನುಕೊಲ್ಲಿಯಲ್ಲಿ ಇದರ ಮರಣೋತ್ತರ ಪರೀಕ್ಷೆ ನಡೆಸಿ, ಅಂಗಾಂಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ
ಕೊಡಲಾಗುವುದು. 20 ವರ್ಷ ವಯಸ್ಸಿನ ಗಂಡಾನೆ ಇದಾಗಿದ್ದು, ಸುತ್ತ
ಮುತ್ತಲ ಪ್ರದೇಶದ ರೈತರ ಮೇಲೆ ದಾಳಿ ನಡೆಸುತ್ತಿತ್ತು. ವ್ಯಕ್ತಿಯೊಬ್ಬರು ಇದರ ದಾಳಿಯಿಂದ ಈಚೆಗೆ ಮೃತಪಟ್ಟಿದ್ದರು.

------------------ 

ಶಬರಿಮಲೆ ಪ್ರಸಾದ ಮಾರಾಟಕ್ಕೆ ಕೇರಳ ಹೈಕೋರ್ಟ್‌ ತಡೆ ಕಾರಣವೇನು?

------------------ 

ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಶ್ರೀಲಂಕಾ 2030ರ ವೇಳೆಗೆ ತನ್ನ ಸೇನಾ ಸಾಮರ್ಥ್ಯವನ್ನು ಈಗ ಇರುವುದಕ್ಕಿಂತ ಅರ್ಧಕ್ಕೆ ಇಳಿಸುವುದಾಗಿ ತಿಳಿಸಿದೆ. 2023ರ ಬಜೆಟ್‌ನಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕಿಂತ ಹೆಚ್ಚಿನ ಅನುದಾನವನ್ನು ರಕ್ಷಣಾ ಕ್ಷೇತ್ರಕ್ಕೆ ಮೀಸಲಿರಿಸಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದೀಗ ಶ್ರೀಲಂಕಾದ ಸೇನಾ ಸಾಮರ್ಥ್ಯ 2 ಲಕ್ಷಕ್ಕೂ ಹೆಚ್ಚಾಗಿದ್ದು, ಇದನ್ನು ಮುಂದಿನ ವರ್ಷದ ವೇಳೆಗೆ 1.35 ಲಕ್ಷಕ್ಕೆ ಮತ್ತು 2030ರ ವೇಳೆ 1 ಲಕ್ಷಕ್ಕೆ ತಗ್ಗಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಇನ್ನು ಶ್ರೀಲಂಕಾ 2023ರ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ 539 ಬಿಲಿಯನ್‌ ರೂಪಾಯಿ ಮೀಸಲಿಟ್ಟಿದ್ದರೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ 300 ಬಿಲಿಯನ್‌ ರೂಪಾಯಿ ಅನುದಾನ ಮೀಸಲಿರಿಸಿದೆ.

---------------

ಸಂಸತ್ತಿನ ಬಜೆಟ್‌ ಅಧಿವೇಶನ ಈ ಬಾರಿ ಜನವರಿ 31ರಿಂದ ಆರಂಭವಾಗಲಿದೆ. ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಇನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆಬ್ರುವರಿ 1ರಂದು ಬಜೆಟ್‌ ಮಂಡಿಸಲಿದ್ದಾರೆ. ಏಪ್ರಿಲ್‌ 6ರ ವರೆಗೆ ಅಧಿವೇಶನ ನಡೆಯಲಿದ್ದು, ಅಧಿವೇಶನದ ಮೊದಲ ಭಾಗವು ಫೆಬ್ರುವರಿ 14ಕ್ಕೆ ಅಂತ್ಯಗೊಳ್ಳಲಿದೆ. ಮಾರ್ಚ್‌ 12ಕ್ಕೆ ಎರಡೇ ಭಾಗದ ಅಧಿವೇಶನವು ಪ್ರಾರಂಭವಾಗಲಿದೆ ಎಂದಿದ್ದಾರೆ.

--------------- 

ಅಂಟಾರ್ಕ್ಟಿಕಾ ವಲಯದ ಓಝೋನ್ ಪದರದಲ್ಲಿ ಉಂಟಾಗಿರುವ ರಂಧ್ರವು ತನ್ನಷ್ಟಕ್ಕೆ ತಾನೆ ಮುಚ್ಚಿಕೊಳ್ಳುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಓಝೋನ್ ಪದರದಲ್ಲಿನ ರಂಧ್ರ ಇದೀಗ ಕ್ರಮೇಣ ತಾನೇ ತಾನಾಗಿ ಮುಚ್ಚಿಕೊಳ್ಳುತ್ತಿದೆ ಎಂದು ಮನಿ ಕಂಟ್ರೋಲ್ ವೆಬ್‌ಸೈಟ್ ವರದಿ ಮಾಡಿದೆ. ಅಂಟಾರ್ಕ್ಟಿಕಾ ವಲಯದ ಓಝೋನ್ ಪದರದಲ್ಲಿ ಉಂಟಾಗಿರುವ ರಂಧ್ರವು ತನ್ನಷ್ಟಕ್ಕೆ ತಾನೆ ಮುಚ್ಚಿಕೊಳ್ಳುತ್ತಿದ್ದು, ಮುಂದಿನ 43 ವರ್ಷಗಳಲ್ಲಿ ಈ ರಂಧ್ರವು ಸಂಪೂರ್ಣ ಮುಚ್ಚಿಕೊಳ್ಳಲಿದೆ ಎನ್ನಲಾಗಿದೆ. ಜಾಗತಿಕ ತಾಪಮಾನ ಏರಿಕೆಯಂತಹ ಪರಿಸ್ಥಿತಿಯ ನಡುವೆಯೇ ವಿಜ್ಞಾನಿಗಳು ಸಮಾಧಾನಕರ ಮಾಹಿತಿಯನ್ನು ನೀಡಿದ್ದಾರೆ.

--------------- 

ಯುವಜನೋತ್ಸವ ಸಮಾರಂಭದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ರೋಡ್‌ ಶೋನ ವೇಳೆ ಭದ್ರತೆ ಉಲ್ಲಂಘನೆ ಆಗಿರುವುದು ವರದಿ ಆಗಿತ್ತು. ಬ್ಯಾರಿಕೇಡ್‌ಗಳನ್ನು ದಾಟಿ ಬಂದ ಬಾಲಕ ಹೂವಿನ ಹಾರವನ್ನು ನೀಡಿದ್ದ, ಇದೀಗ ಬಾಲಕ ನೀಡಿದ ಹೂವಿನ ಹಾರವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮೋದಿ ಹಾದು ಹೋಗುತ್ತಿದ್ದಾಗ ಬೆಂಗಾವಲು ಪಡೆಯಿದ್ದರೂ ಪ್ರಧಾನಿ ಮೋದಿ ಸಮೀಪಕ್ಕೆ ಬಂದಿದ್ದ ಬಾಲಕ, ಭದ್ರತಾ ಪಡೆಗಳು ಆತನನ್ನು ಹಿಡಿದು ದೂರ ಸರಿಯುವ ಮುನ್ನವೇ ಪ್ರಧಾನಿಗೆ ಹಾರ ನೀಡುವಲ್ಲಿ ಯಶಸ್ವಿಯಾಗಿದ್ದ. ನಿಯಮಾವಳಿ ಪ್ರಕಾರ, ವಿವರವಾದ ವಿಶ್ಲೇಷಣೆಗಾಗಿ ಹಾರವನ್ನು ಎಫ್‌ಎಸ್‌ಎಲ್ ಹುಬ್ಬಳ್ಳಿಗೆ ಕಳುಹಿಸಲಾಗಿದೆ. ಆದರೆ, ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎಂದು ವರದಿ ಸಲ್ಲಿಸಲಾಗಿದೆ. ಹೂವಿನ ಹಾರದಲ್ಲಿ ಹಾನಿಕಾರಕ ರಾಸಾಯನಿಕಗಳು ಮತ್ತು ವಿಷದ ಅಂಶಗಳು ಕೂಡಿವೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಲು ಮಾಲೆಯನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಒಳಪಡಿಸಲಾಗಿದೆ. ಅನೇಕ ವಿವಿಐಪಿ ದಾಳಿ ಪ್ರಕರಣಗಳಲ್ಲಿ ಮಕ್ಕಳನ್ನು ಆಮಿಷವಾಗಿ ಬಳಸಿಕೊಳ್ಳಲಾಗಿದೆ. ಪ್ರಧಾನಿ ಮತ್ತು ಇತರ ವಿವಿಐಪಿಗಳನ್ನು ರಕ್ಷಿಸುವ ಭದ್ರತಾ ಏಜೆನ್ಸಿಗಳು ಯಾವುದೇ ಬೆದರಿಕೆ ಅಥವಾ ಯಾರಾದರೂ ರೆಡ್ ಝೋನ್‌ಗೆ ಬಂದರೆ ಶೂಟ್ ಮಾಡುವ ಆದೇಶವನ್ನು ಹೊಂದಿವೆ.     
ಇನ್ನು ಬಾಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೂವಿನ ಹಾರ ನೀಡಿರುವ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಲಕ ಈ ರೀತಿ ನಿಯಮ ಉಲ್ಲಂಘಿಸಬಾರದೆಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಮೋದಿ ಮೇಲಿನ ಅಭಿಮಾನದಿಂದ ಬಾಲಕ ಈ ರೀತಿ ಮಾಡಿದ್ದಾನೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಚಿನ್ನದ ದರದಲ್ಲಿ ಮತ್ತೆ ಏರಿಕೆ, ಎಷ್ಟಿದೆ ಇಂದಿನ ಚಿನ್ನದ ದರ ?