1. ಸುದ್ದಿಗಳು

2 ತಿಂಗಳಲ್ಲಿ 3ನೇ ಬಾರಿಗೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಕಲ್ಲೆಸೆತ!

ನವದೆಹಲಿ: ಮೇಕ್ ಇನ್ ಇಂಡಿಯಾ ಯೋಜನೆ ಅಡಿ ತಯಾರಿಸಲಾಗಿದ್ದ ದೇಶದ ಮೊದಲ ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ ಪ್ರೆಸ್‍ಗೆ 2 ತಿಂಗಳಲ್ಲಿ 3ನೇ ಬಾರಿಗೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ.

ರೈಲು ಅಧಿಕೃತ ಓಡಾಟ ಆರಂಭಿಸಿದ ಕೆಲವೇ ದಿನಗಳಲ್ಲಿ ಮತ್ತೆ ಕಲ್ಲು ಎಸೆಯಲಾಗಿದ್ದು, ಇಂದು ತುಂಡ್ಲಾ ಜಂಕ್ಷನ್ ಬಳಿ ಕಲ್ಲು ತೂರಾಟ ನಡೆದಿದೆ. ಪರಿಣಾಮ ರೈಲಿನ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ರೈಲು ಪರೀಕ್ಷಾರ್ಥ ಓಡಾಟ ಆರಂಭ ನಡೆಸಿದ ಸಂದರ್ಭದಲ್ಲಿ 2 ಬಾರಿ ಕಲ್ಲೆಸೆದು ಹಾನಿ ಮಾಡಲಾಗಿತ್ತು.

ಫೆಬ್ರವರಿ ಮೊದಲ ವಾರದಲ್ಲಿ ಅಲಹಾಬಾದ್ ಪರೀಕ್ಷಾರ್ಥ ಓಡಾಟಕ್ಕಾಗಿ ಶಾಕೂರ್ ಬಸ್ತಿಯಿಂದ ದೆಹಲಿಗೆ ರೈಲು ಆಗಮಿಸುತ್ತಿದ್ದಾಗ ದೆಹಲಿಯ ಲಹೋರಿ ಗೇಟ್ ಬಳಿ ದುಷ್ಕರ್ಮಿಗಳು ಕಲ್ಲು ಎಸೆದಿದ್ದರು. ಎರಡನೇ ಬೋಗಿಗೆ ಕಲ್ಲು ಎಸೆದ ಪರಿಣಾಮ ಕಿಟಕಿಯ ಗ್ಲಾಸ್ ಒಡೆದು ಹೋಗಿದೆ. ಈ ಘಟನೆಯಲ್ಲಿ ಯಾರೂ ಗಾಯಗೊಳ್ಳದ ಕಾರಣ ದೂರು ದಾಖಲಿಸಿಕೊಂಡಿರಲಿಲ್ಲ. ಕಳೆದ ಡಿಸೆಂಬರ್ ನಲ್ಲಿ ದೆಹಲಿ ಮತ್ತು ಆಗ್ರಾ ನಡುವಿನ ಪರೀಕ್ಷಾರ್ಥ ಓಡಾಟದ ಸಮಯದಲ್ಲೂ ಕಲ್ಲು ತೂರಾಟ ನಡೆದಿತ್ತು.

ಪುಲ್ವಾಮಾ ಭಯೋತ್ಪಾದಕರ ದಾಳಿ ನಡೆದ ಮರುದಿನ ಪ್ರಧಾನಿ ನರೇಂದ್ರ ಮೋದಿ ಅವರು ಫೆ.15 ರಂದು ರೈಲಿಗೆ ಹಸಿರು ನಿಶಾನೆ ತೋರಿದ್ದರು. ಫೆ. 17 ರಿಂದ ರೈಲಿನ ವಾಣಿಜ್ಯ ಓಡಾಟ ಆರಂಭವಾಗಿತ್ತು. ಸಂಚಾರ ಆರಂಭಿಸಿದ ಮೊದಲ ದಿನವೇ 2 ವಾರಗಳ ಮುಂಗಡ ಟಿಕೆಟ್ ಬುಕ್ಕಿಂಗ್ ಆಗಿತ್ತು. ಈ ಕುರಿತು ಸಚಿವ ಪಿಯೂಷ್ ಗೋಯಲ್ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು.

ದೆಹಲಿ ಮತ್ತು ವಾರಣಾಸಿ ಮಧ್ಯೆ ಈ ರೈಲು ಸಂಚರಿಸುತ್ತಿದೆ. 850 ಕಿ.ಮೀ ದೂರದ ಪ್ರಯಾಣಕ್ಕೆ ಈ ಮೊದಲು 14 ಗಂಟೆ ಬೇಕಿದ್ದರೆ ಈ ರೈಲಿನಲ್ಲಿ ಕೇವಲ 8 ಗಂಟೆಯಲ್ಲಿ ಕ್ರಮಿಸಬಹುದು. ಸೋಮವಾರ ಮತ್ತು ಗುರುವಾರ ಹೊರತುಪಡಿಸಿ ವಾರದ 5 ದಿನ ಈ ರೈಲು ಸಂಚರಿಸುತ್ತದೆ.
ರೈಲಿನ ವಿಶೇಷತೆ ಏನು?
ಭಾರತೀಯ ರೈಲ್ವೇ ವ್ಯವಸ್ಥೆ ಹಳೆ ಕಾಲದ್ದು ಎನ್ನುವ ಟೀಕೆಗೆ ಉತ್ತರ ಎನ್ನುವಂತೆ ಚೆನ್ನೈ ಮೂಲದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ(ಐಸಿಎಫ್) ಟಿ-18 ರೈಲನ್ನು ಅಭಿವೃದ್ಧಿ ಪಡಿಸಿದೆ. ವಿದೇಶಿ ರೈಲುಗಳಲ್ಲಿ ಇರುವಂತೆ ಇದು ಸಂಪೂರ್ಣ ಹವಾ ನಿಯಂತ್ರಣ ಹಾಗೂ ಸಿಸಿಟಿವಿ ವ್ಯವಸ್ಥೆ ಹೊಂದಿದೆ. ರೈಲಿನಲ್ಲಿ 78 ಆಸನಗಳ ಸಾಮಾನ್ಯ ಬೋಗಿಗಳಿದ್ದರೆ, ಮಧ್ಯದಲ್ಲಿ ತಲಾ 52 ಆಸನಗಳ ಎರಡು ಎಕ್ಸಿಕ್ಯುಟಿವ್ ಬೋಗಿಯನ್ನು ನೀಡಲಾಗಿದೆ.

2018 ರಲ್ಲಿ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಈ ರೈಲುಗಳಿಗೆ `ಟ್ರೈನ್ 18′ ಎಂದು ಆರಂಭದಲ್ಲಿ ಹೆಸರಿಡಲಾಗಿತ್ತು. ಈಗಿನ ರೈಲುಗಳಂತೆ ಈ ರೈಲು ಪ್ರತ್ಯೇಕ ಎಂಜಿನ್ ಹೊಂದಿರುವುದಿಲ್ಲ. ಬದಲಿಗೆ ಮೆಟ್ರೋ ರೈಲುಗಳಂತೆ ವಿದ್ಯುತ್ ಶಕ್ತಿ ಪ್ರತಿ ಚಕ್ರಕ್ಕೂ ಮೋಟಾರುಗಳ (ಟ್ರಾಕ್ಷನ್ ಮೋಟಾರ್) ಮೂಲಕ ವರ್ಗಾವಣೆಯಾಗುತ್ತದೆ. ಇದನ್ನು ವಿಮಾನದಲ್ಲಿರುವಂತೆ ಕಾಕ್‍ಪಿಟ್‍ನಲ್ಲಿ ನಿಯಂತ್ರಿಸಲಾಗುತ್ತದೆ. ಇದರಿಂದಾಗಿ ವೇಗವಾಗಿ ರೈಲು ಸಂಚರಿಸುತ್ತದೆ.

ಅಲ್ಯುಮೀನಿಯಂ ಬಾಡಿ ಇರುವ ಕಾರಣ ಕಡಿಮೆ ಭಾರ ಹೊಂದಿದ್ದರಿಂದ ಹೆಚ್ಚಿನ ವೇಗದಲ್ಲಿ ಹೋಗುತ್ತದೆ. ಇದು ಸೆಮಿ ಹೈ ಸ್ಪೀಡ್ ರೈಲಾಗಿರುವ ಕಾರಣ ಗಂಟೆಗೆ 220 ಕಿ.ಮೀ. ವೇಗದವರೆಗೆ ಸಂಚರಿಸುವ ಸಾಮಥ್ರ್ಯವನ್ನು ಪಡೆದಿದೆ. ವಿದೇಶದ ರೈಲುಗಳಲ್ಲಿರುವಂತೆ ವೈಫೈ ಸೌಲಭ್ಯ, ಜಿಪಿಎಸ್ ಆಧರಿತ ಮಾಹಿತಿ ವ್ಯವಸ್ಥೆ, ತಿರುಗಿಸಬಹುದಾದ ಸೀಟುಗಳು, ಚಾರ್ಜರ್ ವ್ಯವಸ್ಥೆ, ವೃದ್ಧರಿಗೆ, ಅಂಗವಿಕಲರಿಗೆ ಅನುಕೂಲವಾಗುವಂತೆ ಮಡಚುವ ಮೆಟ್ಟಿಲುಗಳು ಈ ರೈಲಿನಲ್ಲಿದೆ.
Published On: 20 February 2019, 08:48 PM English Summary: 2 ತಿಂಗಳಲ್ಲಿ 3ನೇ ಬಾರಿಗೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಕಲ್ಲೆಸೆತ!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.