News

ಮಾಂಡೌಸ್‌ ಚಂಡಮಾರುತ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌!

13 December, 2022 12:47 PM IST By: Hitesh

ಕೃಷಿಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ರೈತರಿಗೆ ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿ ನ್ಯೂಸ್‌ ಪರಿಚಯಿಸಿದೆ.
ಇಂದಿನ ಪ್ರಮುಖ ಸುದ್ದಿಗಳು ಹೀಗಿವೆ

1. ಚರ್ಮಗಂಟು ರೋಗದಿಂದ ಜಾನುವಾರು ಸಾವು: ಪರಿಹಾರಕ್ಕೆ 30ಕೋಟಿ  
2. ಅಡಿಕೆ ರೋಗ ನಿಯಂತ್ರಣಕ್ಕೆ 15 ಕೋಟಿ ರೂಪಾಯಿ ಬೇಡಿಕೆ: ಸಚಿವ ಮುನಿರತ್ನ
3. ರಾಯಚೂರಿನ ಬಾಲಕಿಗೆ ಜೀಕಾ ವೈರಸ್‌: ರಾಜ್ಯದಲ್ಲಿ ಮೊದಲ ಪ್ರಕರಣ!
4. ಆನೆ- ಮಾನವ ಸಂಘರ್ಷ: ಪರಿಹಾರ ಮೊತ್ತ ಎರಡು ಪಟ್ಟು ಹೆಚ್ಚಳ
5. ರಾಜ್ಯದಲ್ಲಿ ಅಕಾಲಿಕ ಮಳೆ: ಅಪಾರ ಪ್ರಮಾಣದ ಬೆಳೆಹಾನಿ
6. ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ: ಅಮಿತ್‌ ಶಾ ನೇತೃತ್ವದಲ್ಲಿ ಸಭೆ
7. 114 ನಮ್ಮ ಕ್ಲಿನಿಕ್‌; ಡಿ.14ರಂದು ಚಾಲನೆ: ಡಾ.ಕೆ ಸುಧಾಕರ್‌
8. ಮಾಂಡೌಸ್‌ ಚಂಡಮಾರುತ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌!
9. ಕಬ್ಬು ಬೆಳೆಗಾರರ ಪ್ರತಿಭಟನೆ ತಾರಕಕ್ಕೆ: ರೈತ ಮುಖಂಡರ ಬಂಧನ, ಆಕ್ರೋಶ  
10. ಬಿಇಎಎಂನಿಂದ ಆಹಾರ ಬೇಡಿಕೆ, ಪೂರೈಕೆ ಬಗ್ಗೆ ಸಂವಾದ
11. 2022ರ ಕೊರಿಯಾ ಅಗ್ರಿಟೆಕ್ ಟ್ರೇಡ್‌ಶೋ ಡಿಸೆಂಬರ್‌ 15ಕ್ಕೆ

ಮಾಂಡೌಸ್‌ ಚಂಡಮಾರುತ ಪ್ರಭಾವ: ರಾಜ್ಯದ ವಿವಿಧೆಡೆ ಧಾರಾಕಾರ ಮಳೆ! 

1.ರಾಜ್ಯದಲ್ಲಿ ಚರ್ಮಗಂಟು ರೋಗದಿಂದ ಮೃತಪಡುವ ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡಲು 30 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ತಿಳಿಸಿದ್ದಾರೆ.

ಮೃತಪಟ್ಟ ಜಾನುವಾರುಗಳ ಮಾಲೀಕರ ಆರ್ಥಿಕ ಸ್ಥಿತಿಯನ್ನು ಅರಿತು ಪರಿಹಾರ ಧನ ಬಿಡುಗಡೆ ಮಾಡಲಾಗಿದೆ. ಜಾನುವಾರುಗಳ  ಮಾಲೀಕರಿಗೆ ಉಂಟಾಗುವ ನಷ್ಟವನ್ನು ಭರಿಸಲು ಆಗಸ್ಟ್ 1ರಿಂದ ಅನ್ವಯ ಆಗುವಂತೆ ಪ್ರತಿ ರಾಸುಗಳಿಗೆ ಗರಿಷ್ಠ ₹ 20 ಸಾವಿರ, ಎತ್ತುಗಳಿಗೆ ₹ 30 ಸಾವಿರ, ಪ್ರತಿ ಕರುವಿಗೆ ₹ 5 ಸಾವಿರ ಪರಿಹಾರ ನೀಡಲಾಗುತ್ತಿದೆ ಎಂದಿದ್ದಾರೆ. ಈ ಹಿಂದೆ ₹ 2 ಕೋಟಿ ನೀಡಲಾಗಿತ್ತು. ಚರ್ಮಗಂಟು ರೋಗಕ್ಕೆ ರಾಜ್ಯದಲ್ಲಿ 17 ಸಾವಿರ ಜಾನುವಾರುಗಳು ಮೃತಪಟ್ಟಿವೆ. ಇನ್ನು ರಾಜ್ಯದಲ್ಲಿ 2 ಲಕ್ಷ ರಾಸುಗಳು ಚರ್ಮಗಂಟು ರೋಗದಿಂದ ಬಳಲುತ್ತಿದ್ದು, ಈ ಪೈಕಿ 1.50 ಲಕ್ಷ ರಾಸುಗಳು ಚೇತರಿಕೆಯಾಗಿವೆ. 53 ಲಕ್ಷಕ್ಕೂ ಹೆಚ್ಚಿನ ರಾಸುಗಳಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಿದರು.
Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ! 

2.ರಾಜ್ಯದ ಏಳು ಜಿಲ್ಲೆಗಳಲ್ಲಿ ಅಡಿಕೆ ಮರಗಳಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದ್ದು, ಅಡಿಕೆ ಬೆಳೆಗಾರರಿಗೆ ಉಚಿತವಾಗಿ ಏಣಿ, ದೋಟಿ ವಿತರಣೆ ಹಾಗೂ ರಾಸಾಯನಿಕ ಸಿಂಪಡಿಸಲು 15 ಕೋಟಿ ಒದಗಿಸುವಂತೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಎನ್‌. ಮುನಿರತ್ನ ತಿಳಿಸಿದ್ದಾರೆ. ಅಡಿಕೆ ರೋಗವನ್ನು ತಡೆಯುವ ಉದ್ದೇಶದಿಂದ ಅಡಿಕೆ ಮರಗಳ ಒಣಗಿದ ಸೋಗೆಗಳನ್ನು ಕತ್ತರಿಸಿ, ರಾಸಾಯನಿಕ ಸಿಂಪಡಿಸಬೇಕಿದೆ. ರೋಗಪೀಡಿತ ಸೋಗೆಗಳನ್ನು ಸಮಗ್ರವಾಗಿ ಕತ್ತರಿಸಿ, ಬೆಂಕಿಯಲ್ಲಿ ಸುಟ್ಟು ನಾಶಪಡಿಸಿದರೆ ರೋಗ ನಿಯಂತ್ರಿಸಬಹುದು ಎಂದು ರೈತರೊಬ್ಬರು ಸಲಹೆ ನೀಡಿದ್ದಾರೆ. ಇದೇ ಕ್ರಮವನ್ನೇ ಅನುಸರಿಸಲಾಗುತ್ತಿದೆ ಎಂದಿದ್ದಾರೆ.

ಅಲ್ಲದೇ ರಾಜ್ಯದಲ್ಲಿ ಒಟ್ಟು 42 ಹೆಕ್ಟೇರ್‌ ಪ್ರದೇಶದ ಅಡಿಕೆ ಬೆಳೆ ಎಲೆ ಚುಕ್ಕಿ ರೋಗಬಾಧೆ ಎದುರಾಗಿದೆ. ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಜ್ಞಾನಿಗಳಿಂದಲೂ ಸಲಹೆ ಕೇಳಲಾಗಿದೆ. ಅಧಿಕಾರಿಗಳೊಂದಿಗೆ ಇಸ್ರೇಲ್‌ ಪ್ರವಾಸವನ್ನು ಮುಂದಿನ ತಿಂಗಳು ಕೈಗೊಳ್ಳಲಾಗುವುದು ಎಂದು ತಿಳಿಸಿದರು.  

Rain

3. ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಐದು ವರ್ಷದ ಬಾಲಕಿಗೆ ಜೀಕಾ ವೈರಸ್ ದೃಢಪಟ್ಟಿದೆ. ಇದು ರಾಜ್ಯದಲ್ಲೇ ದೃಢಪಟ್ಟ ಮೊದಲ ಜೀಕಾ ವೈರಸ್‌ ಪ್ರಕರಣವಾಗಿದೆ. ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಬಾಲಕಿಯನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿ.5ರಂದು ರೋಗಲಕ್ಷಣ ಹೊಂದಿದ್ದ ಮೂವರ ಮಾದರಿಯನ್ನು ಸಂಗ್ರಹಿಸಿ ಪುಣೆಯ ರಾಷ್ಟ್ರೀಯ ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಡಿ. 8ರಂದು ವರದಿ ಬಂದಿದ್ದು, ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಬಾಲಕಿಗೆ ಯಾವುದೇ ಪ್ರಯಾಣದ ಹಿನ್ನೆಲೆ ಇಲ್ಲ ಎಂದು ಆರೋಗ್ಯ ಸಚಿವ ಕೆ. ಸುಧಾಕರ್‌ ತಿಳಿಸಿದ್ದಾರೆ. 

ಡಾ.ಕೆ ಸುಧಾಕರ್‌

--------
4.ಆನೆ- ಮಾನವ ಸಂಘರ್ಷದಿಂದ ಸಂಭವಿಸುವ ಹಾನಿಗೆ ನೀಡುವ ಪರಿಹಾರ ಮೊತ್ತವನ್ನು ಎರಡುಪಟ್ಟು ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಸರ್ಕಾರದ ಈ ತೀರ್ಮಾನದಿಂದ ರಾಜ್ಯದಲ್ಲಿ ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬದವರಿಗೆ ನೀಡಲಾಗುತ್ತಿದ್ದ ಪರಿಹಾರ ಮೊತ್ತವು 7.5 ಲಕ್ಷ ರೂಪಾಯಿಗಳಿಂದ 15 ಲಕ್ಷ ರೂಪಾಯಿಗಳಿಗೆ ಹೆಚ್ಚಳವಾಗಲಿದೆ. ಇನ್ನು ಹಾಸನ, ಮಡಿಕೇರಿ, ಮೈಸೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆಗಳನ್ನು ರಚಿಸಲಾಗಿದೆ.
-------
5. ಮಾಂಡೌಸ್‌ ಚಂಡಮಾರುತದಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕಾಲಿಕ ಮಳೆ ಆಗುತ್ತಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ. ಅಕಾಲಿಕ ಮಳೆಯಿಂದಾಗಿ ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೊಯ್ಲಿಗೆ ಸಿದ್ಧವಾಗಿರುವ ಬೆಳೆಗಳು ನಾಶವಾಗಿವೆ. ಮುಖ್ಯವಾಗಿ ಟೊಮೆಟೊ ಮತ್ತು ರಾಗಿ ಬೆಳೆಗಳು ಹೆಚ್ಚು ಹಾನಿಯಾಗಿದ್ದು, ಇಳುವರಿಯ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಎದುರಾಗುವ ಆತಂಕ ಸೃಷ್ಟಿಯಾಗಿದೆ. 
-------
6. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಬುಧವಾರ ಸಭೆ ನಡೆಯಲಿದೆ. 
ಎರಡು ರಾಜ್ಯಗಳ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇದೇ ಮೊದಲ ಬಾರಿ ಮಧ್ಯ ಪ್ರವೇಶಿಸಿದೆ. ಬುಧವಾರ ಸಂಜೆ ದೆಹಲಿಯಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಂಬಂಧ ಪಟ್ಟ ಸಚಿವರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.    
-------
7. ರಾಜ್ಯದಲ್ಲಿ ಬಡವರಿಗೆ ಸುಲಭವಾಗಿ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ 438 ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಮುಂದಿನ ವರ್ಷ ಜನವರಿ ಅಂತ್ಯದ ಒಳಗೆ ರಾಜ್ಯದಾದ್ಯಂತ ನಮ್ಮ ಕ್ಲಿನಿಕ್‌ ಸೇವೆ ಆರಂಭವಾಗಲಿವೆ  ಎಂದು ಆರೋಗ್ಯ ಸಚಿವ ಕೆ. ಸುಧಾಕರ್‌ ತಿಳಿಸಿದ್ದಾರೆ.  
150 ಕೋಟಿ ಮೊತ್ತದ ಯೋಜನೆ ಇದಾಗಿದ್ದು, ಮೊದಲ ಹಂತವಾಗಿ ಡಿ.14ರಂದು 114 ಕ್ಲಿನಿಕ್‌ಗಳು ಏಕಕಾಲದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಉದ್ಘಾಟಿಸಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
-------
8.  ಮಾಂಡೌಸ್‌ ಚಂಡಮಾರುತದಿಂದಾಗಿ ಕಳೆದ ಒಂದು ವಾರದಿಂದ ರಾಜ್ಯದ ವಿವಿಧೆಡೆ ಅಕಾಲಿಕ ಮಳೆ ಆಗುತ್ತಿದೆ. ಮಂಗಳವಾರವೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಆಗಿದೆ. ಮಂಗಳವಾರ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮೈಸೂರು ಹಾಗೂ ಶಿವಮೊಗ್ಗದಲ್ಲಿ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಸೋಮವಾರ ಬಹುತೇಕ ಪ್ರದೇಶಗಳಲ್ಲಿ ಮಳೆ ಆಗಿರುವುದು ವರದಿ ಆಗಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.    
-------
9. ರಾಜ್ಯ ಕಬ್ಬು ಬೆಳೆಗಾರರ ಸಂಘ,ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಕಬ್ಬು ಬೆಳೆಗಾರ ರೈತರು ನಿರಂತರವಾಗಿ 22 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ಇದೀಗ ತಾರಕಕ್ಕೇರಿದೆ.

ರೈತ ಮುಖಂಡರು ಜಿ20  ರಾಷ್ಟ್ರಗಳ ಶೃಂಗ ಸಭೆ ನಡೆಯುವ ದೇವನಹಳ್ಳಿಯ ಖಾಸಗಿ ಹೋಟೆಲ್‌ನ ಮುಂದೆ ಕಪ್ಪು ಬಾವುಟ ಪ್ರದರ್ಶಿಸಲು ಮಂಗಳವಾರ ಮುಂದಾಗಿದ್ದರು. ಈ ಸಂದರ್ಭದಲ್ಲಿ ಪೊಲೀಸರು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಸೇರಿದಂತೆ ಹಲವು ರೈತ ಮುಖಂಡರನ್ನು ಯಲಹಂಕ, ಹೆಬ್ಬಾಳ ಮೇಲ್ಸೇತುವೆ ಸೇರಿದಂತೆ ವಿವಿಧೆಡೆ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಕ್ರಮಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ರೈತರು ಕಳೆದ 22 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
-------
10. ನವದೆಹಲಿಯಲ್ಲಿರುವ ಕೃಷಿ ಜಾಗರಣದ ಕೇಂದ್ರ ಕಚೇರಿಯ ಚೌಪಾಲ್‌ನಲ್ಲಿ  ಸೋಮವಾರ BSE ಅಗ್ರಿಕಲ್ಚರಲ್ ಮಾರ್ಕೆಟ್ಸ್ ಲಿಮಿಟೆಡ್ನ BEAM ಸಂಸ್ಥೆಯ ಪ್ರಮುಖರೊಂದಿಗೆ ಸಂವಾದ ನಡೆಯಿತು. ಸಂವಾದದಲ್ಲಿ ದೇಶದಲ್ಲಿ ಆಹಾರ ಬೇಡಿಕೆ ಹಾಗೂ ಪೂರೈಕೆಯ ನಡುವೆ ಉಂಟಾಗಿರುವ ಕಂದಕದ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. BEAMನ ಸಿಇಒ ನೀಲತ್‌ಪಾಲ್ ಠಕ್ಕರ್, ಸುಮನ್ ದಾವಾಸ್ ಮತ್ತು ಸೌರಭ್ ಘೋಷ್ ಭಾಗವಹಿಸಿದ್ದರು. ಸಂಸ್ಥೆಯ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ ಎಂ.ಸಿ.ಡೊಮಿನಿಕ್  ಅವರು ಸ್ವಾಗತಿಸಿದರು. ನಿರ್ದೇಶಕಿ ಶೈನಿ ಡೊಮಿನಿಕ್‌, ಕೃಷಿ ಜಾಗರಣ ಸಿಒಒ ಡಾ.ಪಿ.ಕೆ.ಪಂತ್‌ ಉಪಸ್ಥಿತರಿದ್ದರು.  
-------    
11. 2022 ಕೊರಿಯಾ ಅಗ್ರಿಟೆಕ್ ಟ್ರೇಡ್‌ಶೋ (COMICO ಇಂಡಿಯಾ ಸೆಂಟರ್)  ಡಿಸೆಂಬರ್ 15ಕ್ಕೆ ನಡೆಯಲಿದೆ. ಇದು PJTSAU ಮತ್ತು AGHUBಸಹಯೋಗದಲ್ಲಿ ನಡೆಯುತ್ತಿದೆ. ಇದರಲ್ಲಿ ತಂತ್ರಜ್ಞಾನ, ಪ್ರಾತ್ಯಕ್ಷಿಕೆ ಹೂಡಿಕೆ, ವ್ಯಾಪಾರ ಅಭಿವೃದ್ಧಿ ಮತ್ತು ಉದ್ಯಮ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಹೈದರಾಬಾದ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.  
-------